ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಮಾಲ್‌ನಲ್ಲಿ ಡಾನ್ ದರ್ಬಾರ್

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

ವಾರಾಂತ್ಯದ ರಜೆಯ ಖುಷಿಯಲ್ಲಿದ್ದ ಬಹುತೇಕ ಮಂದಿ ಅದ್ಯಾಕೋ ಮಂತ್ರಿ ಮಾಲ್‌ನಲ್ಲಿ ನೃತ್ಯವೊಂದಕ್ಕೆ ಹೆಜ್ಜೆ ಹಾಕುತ್ತಿದ್ದರು. `ಫ್ಲ್ಯಾಶ್ ಮಾಬ್~ನಲ್ಲಿ ಕನ್ನಡ ಗೀತೆಗೆ ಐದು ನಿಮಿಷ ಕುಣಿದು ಕುಪ್ಪಳಿಸಿದರು.

ಇದೆಲ್ಲಾ ಕೇವಲ ಖುಷಿಗಾಗಿ ಮಾಡಿದ್ದಲ್ಲ `ನಮ್ಮಣ್ಣ ಡಾನ್~ ಚಿತ್ರದ ಗೀತೆ ಚಿತ್ರೀಕರಣಕ್ಕಾಗಿ ಆಯೋಜಿಸಿದ್ದ `ಫ್ಲ್ಯಾಶ್ ಮಾಬ್~ ಅದು. ಮಕ್ಕಳು, ಯುವಕರಷ್ಟೇ ಅಲ್ಲದೇ ಚಿತ್ರದ ನಟ ರಮೇಶ್ ಅರವಿಂದ್ ಕೂಡ ನೃತ್ಯ ಮಾಡಿದ್ದು, ವಿಶೇಷವಾಗಿತ್ತು.
ಶನಿವಾರ `ಜುಂಬಲಕ ಜುಂಬಲಕ~ ಹಾಡಿನ ಚಿತ್ರೀಕರಣವನ್ನು ಮಂತ್ರಿಮಾಲ್‌ನಲ್ಲಿ ಆಯೋಜಿಸಲಾಗಿತ್ತು. ನಟ ರಮೇಶ್‌ಗಾಗಿ ಮಧ್ಯಾಹ್ನ 4ರಿಂದ ಕಾಯುತ್ತಿದ್ದ ಮಕ್ಕಳು, ಅಭಿಮಾನಿಗಳು ತಡವಾಗಿ ಚಿತ್ರತಂಡ ಬರುತ್ತಿದ್ದಂತೆ ಸಂತೋಷದಿಂದ ಕೂಗಿ ಹರ್ಷ ವ್ಯಕ್ತಪಡಿಸಿದರು.

ಮಕ್ಕಳು ಹಾಗೂ ಯುವಕರ ಜೊತೆ ಐದು ನಿಮಿಷಗಳ `ಫ್ಲ್ಯಾಶ್ ಮಾಬ್~ಗೆ ಹೆಜ್ಜೆ ಹಾಕುವ ಮೂಲಕ `ನಮ್ಮಣ್ಣ ಡಾನ್~ ಮಿಂಚಿದರು. ಚಿತ್ರ ತಂಡದೊಂದಿಗೆ ಮಾಲ್‌ಗೆ ಬಂದಿದ್ದ ಮಂದಿಯು ಸೇರಿಕೊಂಡು ಹಾಡಿನ ಚಿತ್ರೀಕರಣಕ್ಕೆ ಜೊತೆಯಾದರು.

ನಂತರ ಪತ್ರಕರ್ತರೊಂದಿಗೆ ಮಾತಿಗಿಳಿದ ರಮೇಶ್ ಅರವಿಂದ್ ಚಿತ್ರೀಕರಣದ ಅನುಭವಗಳನ್ನು ಬಿಚ್ಚಿಟ್ಟರು.  `ಗುಲ್ಬರ್ಗದಿಂದ ಆರಂಭಿಸಿ ಸವದತ್ತಿ, ಬಾದಾಮಿ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು~. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಇನ್ನೆರಡು ವಾರಗಳಲ್ಲಿ `ನಮ್ಮಣ್ಣ ಡಾನ್~ ನಿಮ್ಮೆದುರಿಗೆ ಬರಲಿದೆ  ಎಂದು ಮುಗುಳ್ನಗುತ್ತಾ ಹೇಳಿದರು ರಮೇಶ್.

ಇದೊಂದು ಹೊಸ ಕಥಾವಸ್ತುವಿನ ಚಿತ್ರವಾಗಿದ್ದು, `ರಾಮಾ ಶಾಮಾ ಭಾಮ~, `ಸತ್ಯವಾನ್ ಸಾವಿತ್ರಿ~  ರೀತಿಯಲ್ಲಿ ಹಾಸ್ಯಭರಿತವಾಗಿ ಸಂಪೂರ್ಣ ಮನರಂಜನೆ ನೀಡಲಿದೆ ಎನ್ನುತ್ತಾರೆ ಅವರು. ಚಿತ್ರದಲ್ಲಿ `ನಾನು ಡಾಕ್ಟರ್ ಆಗಿ ನಟಿಸಿದ್ದು, ಸಮಾಜದ ಅಂಕು ಡೊಂಕುಗಳನ್ನು ಹೇಗೆ ತಿದ್ದಬೇಕು ಎಂಬುದರ ಬಗ್ಗೆ ಚಿಂತಿಸುತ್ತೇನೆ. ಇಂದು ಬಹುತೇಕ ಬಡವರು ಸೂಕ್ತ ವೈದ್ಯಕೀಯ ಚಿಕಿತ್ಸೆ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ. ಎಲ್ಲರಿಗೂ ವೈದ್ಯಕೀಯ ಸೌಲಭ್ಯ ಲಭ್ಯವಾಗಬೇಕು ಎಂಬ ಸಂದೇಶ ಚಿತ್ರದಲ್ಲಿದೆ~ ಎಂದು `ಡಾನ್~ ಕುರಿತು ಹೇಳಿಕೊಂಡರು.

ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಿರಾ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ರಮೇಶ್ ಚಿತ್ರ ತೆರೆಕಾಣುವ ವರೆಗೆ ಕಾದು ನೋಡಿ ಎಂದು ಕುತೂಹಲ ಮೂಡಿಸಿದರು.
`ಮೊದಲ ಬಾರಿ ನಟಿಯಾಗಿ ನಟಿಸಿದ್ದರಿಂದ ಒಳ್ಳೆಯ ಅನುಭವವಾಯ್ತು. ರಮೇಶ್ ಸರ್ ಜೊತೆ ಅಭಿನಯಿಸಿದ್ದರಿಂದ ಒಳ್ಳೆ ನಟನಾ ಕೌಶಲಗಳನ್ನು ಕಲಿತೆ~ ಎಂದು ಹೇಳುತ್ತಾರೆ ನಟಿ ಮೊನಾ ಪರ್ವೇಜ್.

ಇದರಲ್ಲಿ ನನ್ನದು ಕಾಲೇಜು ವಿದ್ಯಾರ್ಥಿನಿ ಪಾತ್ರ. ಯಾವಾಗಲೂ ಚೇಷ್ಟೆ ಮಾಡ್ತಾ ಇರ‌್ತಿನಿ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಿದ ಡುಯೆಟ್ ಸಾಂಗ್ ಚೆನ್ನಾಗಿ ಮೂಡಿಬಂದಿದೆ ಎಂದು ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಡುತ್ತಾರೆ.

22ಮಕ್ಕಳು ಸೇರಿದಂತೆ ರಾಜು ತಾಳಿಕೋಟೆ, ರಾಜೇಂದ್ರ ಕಾರಂತ, ಸನಾತನಿ, ಸಂಜಯ ಸಾರಥಿ ಮತ್ತಿತರ ಕಲಾವಿದರು ಚಿತ್ರದಲ್ಲಿದ್ದಾರೆ.

ರಮೇಶ್ ಅರವಿಂದ್ ಅವರೇ ನಿರ್ದೇಶಿಸಿ ನಟಿಸಿರುವ `ನಮ್ಮಣ್ಣ ಡಾನ್~ ಚಿತ್ರದ ಗೀತೆಗಳನ್ನು ಮೊಬೈಲ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಹಾಡುಗಳನ್ನು ಆಲಿಸಬಹುದಾದ ನೂತನ ಪ್ರಯೋಗ ಮಾಡಿದ್ದಾರೆ.

ಹೊಸ ಹೊಸ ಪ್ರಯೋಗಗಳ ಬೆನ್ನಟ್ಟುವ ರಮೇಶ್ `ಫ್ಲ್ಯಾಶ್ ಮಾಬ್~ ಸಂಸ್ಕೃತಿಯನ್ನು ತಮ್ಮ ಚಿತ್ರದಲ್ಲಿ ಸೇರಿಸಿಕೊಂಡಿದ್ದಾರೆ. ತೆರೆ ಕಾಣಲು ಸಿದ್ಧವಾಗಿರುವ `ನಮ್ಮಣ್ಣ ಡಾನ್~ ಚಿತ್ರಕ್ಕೆ ಈ ಮೂಲಕ ವಿಶೇಷ ಪ್ರಚಾರ ನೀಡಿದ ರಮೇಶ್ ಅರವಿಂದ್ ಮಂತ್ರಿಮಾಲ್‌ನಲ್ಲಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡರು.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT