ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರದ ಬದಲು ಶೌಚಾಲಯ ಕಟ್ಟಿಸಿ

Last Updated 3 ಅಕ್ಟೋಬರ್ 2011, 8:10 IST
ಅಕ್ಷರ ಗಾತ್ರ

ವಿಜಾಪುರ: `ದೇವಸ್ಥಾನ, ಸಮುದಾಯ ಭವನಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸುವ ಅಗತ್ಯವಿದೆ. ಜನತೆ ಮಂದಿರಗಳಿಗೆ ಹಣ ಕೇಳುವ ಬದಲು ಶೌಚಾಲಯ- ಚರಂಡಿಗಳನ್ನು ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕು~ ಎಂದು ಸಂಸದ ರಮೇಶ ಜಿಗಜಿಣಗಿ ಸಲಹೆ ನೀಡಿದರು.

ತಾಲ್ಲೂಕಿನ ಬಾಬಾನಗರದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಪೂರ್ಣ ಸ್ವಚ್ಛತಾ ಮಾಸಾಚರಣೆಯ ಆರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

`ಬಯಲು ಮಲ ವಿಸರ್ಜನೆ ಭಾರತ ಬಿಟ್ಟರೆ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲ. ಆರೋಗ್ಯ, ಪರಿಸರದ ದೃಷ್ಟಿಯಿಂದ ಬಯಲು ಶೌಚಾಯ ಅತ್ಯಂತ ಅಪಾಯಕಾರಿ~ ಎಂದರು.

ಮುಖ್ಯ ಅತಿಥಿಯಾಗಿದ್ದ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, `ಗ್ರಾಮಗಳಲ್ಲಿ ಮೊದಲು ಶೌಚಾಲಯ ನಿರ್ಮಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಜನರು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ಕೆ ಮುಂದೆ ಬರಬೇಕು~ ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಗಾಂಧೀಜಿ ಹೇಳಿದ್ದಾರೆ. ಅವರ ಮಾತನ್ನು ನಾವೆಲ್ಲ ಪಾಲಿಸಬೇಕಿದೆ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ, ಜಿ.ಪಂ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಗ್ರಾ.ಪಂ ಅಧ್ಯಕ್ಷ ರುದ್ರಗೌಡ ಮಾತನಾಡಿದರು. ಜಿಲ್ಲಾಧಿಕಾರಿ ಜಿ.ಎಸ್ .ಜಿದ್ದಿಮನಿ, ವಿಜಾಪುರ ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ತಾ.ಪಂ. ಅಧ್ಯಕ್ಷ ಕಸ್ತೂರಿ ಕಾಖಂಡಕಿ, ಜಿ.ಪಂ. ಸದಸ್ಯರಾದ ರತ್ನಾಬಾಯಿ, ತಮ್ಮಣ್ಣ ಹಂಗರಗಿ, ಮಲ್ಲಿಕಾರ್ಜುನ ಕನ್ನೂರ,  ತಾ.ಪಂ. ಸದಸ್ಯೆ ಸರೋಜಿನಿ ಬಿರಾದಾರ, ಜಿ.ಪಂ. ಉಪ ಕಾರ್ಯದರ್ಶಿ ಅಮರೇಶ ನಾಯಕ ಇತರರು ವೇದಿಕೆಯಲ್ಲಿದ್ದರು.

`ಉತ್ತಮ ಕೆಲಸಕ್ಕೆ ಪ್ರಶಸ್ತಿ~
ಸಿಂದಗಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರೀ ಅವರ ಜಯಂತಿ ದಿನದಂದು ಭಾನುವಾರ ತಾಲ್ಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಸ್ವಚ್ಛತಾ ಮಾಸಾಚರಣೆ ಪ್ರಾರಂಭೋತ್ಸವ ಸಮಾರಂಭ ನಡೆಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಮಾರ್ಸನಳ್ಳಿ, ಕನ್ನೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ಲಿಂಗಪ್ಪ ಸಿಂದಗಿ, ತಾಪಂ ಉಪಾಧ್ಯಕ್ಷ ಸಿದ್ದನಗೌಡ ಹರನಾಳ, ಸದಸ್ಯ ಸುರೇಶ ಬೇನಾಳ, ಬಿಜೆಪಿ ಧುರೀಣ ಶಿವಾನಂದ ಮಾರ್ಸನಳ್ಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎ.ಕಗ್ಗೋಡ, ಸಿಂಧೂ ಬಡಿಗೇರ ಮುಂತಾದವರು ಪೊರಕೆ ಹಿಡಿದು ಗ್ರಾಮದಲ್ಲಿ ಕಸ ಗೂಡಿಸುವ ಮೂಲಕ ಸ್ವಚ್ಛತಾ ಮಾಸಾಚರಣೆ ಚಾಲನೆ ನೀಡಿದರು.

ಸ್ವಚ್ಛತಾ ಆಂದೋಲನ ಜಾಥಾದಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು. ಕನ್ನೊಳ್ಳಿ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ತಾಪಂ ಇಒವೈಎ ಕಗ್ಗೋಡ ಮಾತನಾಡಿ, ಗ್ರಾಮಗಳಲ್ಲಿ ಬಯಲು ಶೌಚಾಲಯಗಳಿದ್ದು ಇವುಗಳ ಮೂಲಕ ಹಲವಾರು ರೋಗ-ರುಜಿನಗಳು ಹರಡುತ್ತವೆ. ಹೀಗಾಗಿ ಮನೆಗೊಂದು ಶೌಚಾಲಯ ನಿರ್ಮಾಣಗೊಳ್ಳಬೇಕು. ಇದಕ್ಕಾಗಿ ಸರ್ಕಾರ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಎಂದರು.

ಒಂದು ತಿಂಗಳ ಕಾಲ ನಡೆಯುವ ಈ ಆಂದೋಲನ ಎಲ್ಲ ಗ್ರಾಮಗಳಲ್ಲೂ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಸೇವಾ ಗುಂಪುಗಳಿಗೆ ಪ್ರಶಸ್ತಿ ಕೊಡಲಾಗುವುದು ಎಂದು ಘೋಷಿಸಿದರು.
ಬಿಜೆಪಿ ಧುರೀಣ ಶಿವಾನಂದ ಮಾರ್ಸನಳ್ಳಿ, ಎಂ.ಎಸ್.ಗಂಗನಳ್ಳಿ ಮಾತನಾಡಿದರು.

ಜಯರಾಮ ಚವ್ಹಾಣ, ಪ್ರವೀಣ ಲಮಾಣಿ, ಗ್ರಾಪಂ ಉಪಾಧ್ಯಕ್ಷ ನಿಂಗಣ್ಣ ಭ್ಯೆರವಾಡಗಿ, ಶಂಕರ ಬಗಲಿ, ಶಿವಪ್ಪ ಕಡಿಮನಿ, ಸಂಗಣ್ಣ ನಂದಗಿರಿ, ಬಸವರಾಜ ಮಾಗಣಗೇರಿ, ಶರಣು ಬ್ಯಾಡಗಿಹಾಳ, ಸೈಫನ್ ನದಾಫ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿಂಧೂ ಬಡಿಗೇರ ಉಪಸ್ಥಿತರಿದ್ದರು.

`ಗ್ರಾಮ ಅಭಿವೃದ್ಧಿ ಅಗತ್ಯ~
ತಾಳಿಕೋಟೆ: ಗ್ರಾಮ ಸ್ವರಾಜ್ಯದ ಕನಸು ಕಂಡ ರಾಷ್ಟ್ರಪಿತ ಮಹಾತ್ಮ  ಗಾಂಧೀಜಿ ಕನಸು ನನಸಾಗಲು ಗ್ರಾಮಗಳು ಅಭಿವೃದ್ಧಿಯಾಗಬೇಕು. ಆರೋಗ್ಯ, ಶಿಕ್ಷಣ ವೃದ್ಧಿಯಾಗಿ ಸ್ವಯಂ ಉದ್ಯೋಗಗಳು ಸೃಷ್ಟಿಯಾಗಬೇಕು ಎಂದು ಜಿ.ಪಂ. ಸದಸ್ಯ ಸಾಯಬಣ್ಣ ಆಲ್ಯಾಳ ಹೇಳಿದರು.

 ಅವರು ಸಮೀಪದ  ಕೊಣ್ಣೂರ ಗ್ರಾಮದಲ್ಲಿ ರವಿವಾರ ಗಾಂಧಿ ಜಯಂತಿ ಅಂಗವಾಗಿ  ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಸ್ವಚ್ಛತಾ ಮಾಸಾಚರಣೆ ಪ್ರಾರಂಭೋತ್ಸವ ಹಾಗೂ ಗ್ರಾಮಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶೌಚಾಲಯ ಇಂದಿನ ಅವಶ್ಯಕತೆಯಾಗಿದೆ, ದೇವರಿಗೆ ಜಗಲಿ ಇಲ್ಲದಿದ್ದರೂ ಚಿಂತೆಯಿಲ್ಲ, ಶೌಚಾಲಯಕ್ಕೆ ಜಾಗ ಬಿಡಿ. ಅದಿಲ್ಲದ ಮನೆಗೆ ಹೆಣ್ಣು ಕೊಡಬೇಡಿ ಎಂದು ಮನವಿ ಮಾಡಿದರು.ಸ್ಥಳೀಯ ಪ್ರೌಢಶಾಲಾ ಮುಖ್ಯಗುರು ಜಿ.ಎಸ್.ಐನಾಪುರ ಮಾತನಾಡಿ, ಕೊಣ್ಣೂರ ಗ್ರಾಮ ಪಂಚಾತಿಗೆ ನಿರ್ಮಲ ಗ್ರಾಮ ಪ್ರಶಸ್ತಿ ಪುರಸ್ಕಾರ ದೊರೆಯಬೇಕಾದರೆ ಜನರ ಸಹಕಾರ ಅವಶ್ಯಕ ಎಂದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಕಕ್ಕಳಮೇಲಿ, ಸದಸ್ಯೆ ಅನ್ನಪೂರ್ಣಾ ದ್ಯಾಪುರ,  ಸ್ಥಳೀಯ ವೈದ್ಯಾಧಿಕಾರಿ ಡಾ.ತಿವಾರಿ ಮಾತನಾಡಿ ಸ್ವಚ್ಛತಾ ಆಂದೋಲನದ ಮಹತ್ವ ಕುರಿತು ಮಾಹಿತಿ ನೀಡಿದರು. ಪಿಡಿಒ ಸಿ.ಸಿ.ಕುಲಕರ್ಣಿ, ಗ್ರಾಮಸಭೆಯ ಮಹತ್ವ ಕುರಿತು ಮಾತನಾಡಿದರು.

ತಾ.ಪಂ.ಅಧ್ಯಕ್ಷೆ ಮಹಾದೇವಿ ಸುತಗುಂಡರ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷೆ ಗೂಡುಮಾ ಮಕಾನದಾರ, ಉಪಾಧ್ಯಕ್ಷೆ ಮಾತಂಗಮ್ಮ ಮಾದರ ಹಾಗೂ ಸದಸ್ಯರು ಇದ್ದರು.

 ಮಹಾವೀರ ಹೂಗಾರ, ವ್ಹಿ.ಎಸ್.ದ್ಯಾಪುರ, ಆರ್.ಸಿ.ಪಾಟೀಲ, ಗುರಣ್ಣ ಹತ್ತೂರ, ಬಸವರಾಜ ನಾಯ್ಕ್‌ಡಿ ಮೊದಲಾದವರಿದ್ದರು. ಸಭೆಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಸ್ವಚ್ಛತಾ ಆಂದೋಲನದಂಗವಾಗಿ ಸಭೆಯಲ್ಲಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಕಸಪೊರಕೆ ಹಿಡಿದು ಬೀದಿಗೆ ಬಂದು ಕಸ ಗೂಡಿಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಐ.ಹಿರೇಮಠ ನಿರ್ವಹಿಸಿದರು. ಶಿವು ಹೊಕ್ರಾಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT