ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕ ಳ ಕೂಟಕ್ಕೆ ಬಂತು ‘ಪಟ್ಟೆ ಹುಲಿ’!

ಚಿಣ್ಣರ ಕಲ್ಪನಾ ಲೋಕದಲ್ಲಿ ಹೂವು ಅರಳಿಸಿದ ‘ಕಥಾವನ’
Last Updated 12 ಡಿಸೆಂಬರ್ 2013, 19:38 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಅರಳಿನಿಂತಿದ್ದ  ‘ಕಥಾವನ’ ಅಕ್ಷರಶಃ ಮಕ್ಕಳ ಸಾಹಿತ್ಯ ಲೋಕವನ್ನೇ ಅನಾವರಣ­ಗೊಳಿಸಿತ್ತು.

ಮಕ್ಕಳ ಕಲ್ಪನೆಯನ್ನು ತೀಡಿ, ಅವರೊ­ಳಗೆ ಕಥಾ ಲೋಕವನ್ನು ಸೃಷ್ಟಿಸುವ ಕಾರ್ಯಕ್ಕೆ ಅಜೀಂ ಪ್ರೇಮ್‌ಜೀ ವಿಶ್ವ­ವಿದ್ಯಾಲಯ ಗುರುವಾರ ಚಾಲನೆ ನೀಡಿತ್ತು. ಇದಕ್ಕೆ ವೇದಿಕೆಯಾಗಿದ್ದ  ಕೂಟದ ಮೈದಾನದಲ್ಲಿ ಚಿಣ್ಣರ ಸೃಜನ­ಶೀಲ ಚಿಲಿಪಿಲಿ ಕರ್ಣಾನಂದವನ್ನು ತಂದಿತ್ತು.

ನಗರದ ಸುತ್ತಮುತ್ತ ಇರುವ 40ಕ್ಕೂ ಹೆಚ್ಚು ಬಿಬಿಎಂಪಿ, ಖಾಸಗಿ  ಹಾಗೂ ಅನುದಾನಿತ ಶಾಲೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೇ  ಕೊಡತಿ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಾಲಾ ಮಕ್ಕಳು ಸಹ ಇದ್ದರು.

ಕತೆ ಕೇಳಲು ಸೈ, ಚಿತ್ರ ಬಿಡಿಸಲು ಜೈ:  ಒಂದೆಡೆ ಮಕ್ಕಳು ಹಸ್ತದ ಚಿತ್ರವನ್ನು ಬಿಡಿಸಿ, ಅದಕ್ಕೆ ಬಣ್ಣ ತುಂಬುತ್ತಿದ್ದರು.  ಬಣ್ಣ ಹಚ್ಚಿದ ಹಸ್ತದ ಚಿತ್ರ­ವನ್ನು ಕತ್ತರಿಸಿ, ಮರದ ಆಕೃತಿಗೆ ಅಂಟಿಸುತ್ತಿದ್ದರು. ನೂರಾರು ಹಸ್ತಗಳು ಮರದಲ್ಲಿಯೇ ಫಲ­ಬಿಟ್ಟಂತೆ ನೋಡುಗರಿಗೆ ಭಾಸವಾಗುತ್ತಿತ್ತು.

ಇನ್ನೊಂದೆಡೆ  ಸೂಜಿ ಬಿದ್ದರೂ ಕೇಳಿ­ಸು­ವಷ್ಟು ನೀರವ ಮೌನ.  ಶಿಕ್ಷಕ­ರೊಬ್ಬರು ಹೇಳುತ್ತಿದ್ದ ‘ಹುಲಿ–ನರಿ’ಯ ಕತೆಯನ್ನು ಮಕ್ಕಳೆಲ್ಲರೂ ಬಹಳ ಕುತೂಹಲ­ದಿಂದ ಕೇಳುತ್ತಿದ್ದರು.  ಒಂದಾದ ಮೇಲೆ ಒಂದರಂತೆ ಶಿಕ್ಷಕರು ಕತೆ ಹೇಳುತ್ತಿದ್ದರೆ, ಕುತೂಹಲ ತಣಿಯದ ಮಕ್ಕಳಿಂದ  ‘ಇನ್ನಷ್ಟು ಕತೆ ಹೇಳಿ ’ ಎಂಬ ಮಾತು ಕೇಳಿಬಂತು.

ಭಾಷೆ ಅಡ್ಡಿಯಾಗಲಿಲ್ಲ: ಕತೆ ಹೇಳುವ­ವರು ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಕತೆಯನ್ನು ಸೊಗಸಾಗಿ ನಿರೂಪಿಸುತ್ತಿದ್ದರು. ಕನ್ನಡ  ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿ­ದ್ದರೂ, ಕತೆ ಅರ್ಥೈಸಿಕೊಳ್ಳಲು ಮಕ್ಕಳಿಗೆ ಭಾಷೆ ಅಡ್ಡಿ­ಯಾಗಲಿಲ್ಲ. ‘ನೆರೆಮನೆಯ ಕಿಟ್ಟು’, ‘ಬಾನೂರಿನ ಹಕ್ಕಿ ಮತ್ತು ಚಂದಮಾಮಾ’, ‘ಪಟ್ಟೆ ಹುಲಿ ಹಾಗೂ ಕಂತ್ರಿ ನರಿ’ ಹೀಗೆ ಹಲವು ಪಾತ್ರಗಳ ಮೂಲಕ ಮಕ್ಕಳು ಕಥಾ­ಲೋಕಕ್ಕೆ ಪ್ರವೇಶಿಸುತ್ತಿದ್ದರು. ನೋಡಲು ಬಂದಿದ್ದ ಪೋಷಕ­ರಿಗೂ ಕಥಾ ಸಮಯದ ಬಗ್ಗೆ ಆಸಕ್ತಿ  ಮೂಡಿತ್ತು.

ಸೂತ್ರ ಹಿಡಿದ ಮಕ್ಕಳು: ನವಿಲು, ಕಾಗೆ, ಬೆಕ್ಕು ಸೇರಿದಂತೆ ಪುಟ್ಟ ಗೊಂಬೆ­ಗಳನ್ನು ತಯಾರಿ­ಸಿದ ಮಕ್ಕಳು ಅದರ ಸೂತ್ರ ಹಿಡಿದು ಕತೆ ಹೇಳಲು ಆರಂಭಿಸಿದ್ದರು.

‘ಕಥಾವನ’ವನ್ನು ಉದ್ಘಾಟಿಸಿದ ಚಿತ್ರ­ನಿರ್ದೇಶಕ ಟಿ.ಎಸ್.ನಾಗಾಭರಣ, ‘ಸೃಜನ­ಶೀಲ ಬೆಳವಣಿಗೆಗೆ ಪೂರಕವಾಗಿ­ರುವ ಕಲೆ, ಸಾಹಿತ್ಯ, ಸಿನಿಮಾ ಕ್ಷೇತ­ಗಳಲ್ಲಿ ಮಕ್ಕಳಿಗಾಗಿಯೇ  ಒಂದಷ್ಟು ಅವಕಾಶಗಳನ್ನು ಸೃಷ್ಟಿಸುವ ತುರ್ತು ಎದ್ದುಕಾಣು­ತ್ತಿದೆ’ ಎಂದರು.

‘ಒಳಗಿರುವ ಸಹಜ ಹಿಂಸಾಪ್ರವೃತ್ತಿ­ಪ್ರಚೋದಿ­ಸಲು ಎಲ್ಲ  ಮಾಧ್ಯಮ­­ಗಳು ಹಾತೊರೆಯುತ್ತಿವೆ. ಇವನ್ನು ಬದಿಗೊತ್ತಿ ಮಾನವೀಯ ನೆಲೆಯನ್ನು ಒಳಗೊಂಡ ಕತೆಗಳು ಮಕ್ಕಳನ್ನು ತಲುಪಬೇಕಿವೆ’ ಎಂದು ತಿಳಿಸಿದರು.

ಮಕ್ಕಳ ಆಸಕ್ತಿ, ಕುತೂಹಲವನ್ನು ಹೆಚ್ಚಿಸಿ, ಅವರನ್ನು ಸೃಜನಶೀಲ ವ್ಯಕ್ತಿಗ­ಳಾಗಿ ಮಾಡಲು ಯಾವುದಾದರೊಂದು ವಾಹಿನಿ ರೂಪುಗೊಂಡಿ­ದೆಯೇ?’ ಎಂದು ಪ್ರಶ್ನಿಸಿದರು.

ಶಿಶು ಸಾಹಿತ್ಯದ ಚಿಂತನ– ಮಂಥನ:  ವಿಮ­ರ್ಶಕ ಡಾ.ಸಿ.ಎನ್. ರಾಮ­ಚಂದ್ರನ್, ‘ಮಕ್ಕಳ ಮುಗ್ಧತೆ­ಯನ್ನು ಕೇಂದ್ರೀ­ಕರಿಸಿ ರವೀಂದ್ರ ನಾಥ್ ಟ್ಯಾಗೋರ್ ಅವರು ರಚಿಸಿರುವ ‘ಕ್ರೆಸೆಂಟ್ ಮೂನ್’ ಕೃತಿಯು ಮಕ್ಕಳನ್ನು ತಲುಪುವುದು ಕಷ್ಟ. ಹಾಗಾಗಿ ಮಕ್ಕಳ ಕಲ್ಪನಾವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಜನಪದ ಸಂಸ್ಕೃತಿಯಲ್ಲಿ ಹರಳು­ಗಟ್ಟಿರುವ ಕತೆಗಳನ್ನು ಮಕ್ಕಳಿಗೆ ಇಷ್ಟವಾ­ಗುವ ಮಾರ್ಗದಲ್ಲಿ ತಿಳಿಸಬೇಕಿದೆ. ಮಕ್ಕಳನ್ನು ಅಕ್ಷರ ಲೋಕಕ್ಕೆ ಕರೆತರುವ ಪ್ರಯತ್ನ ಮಾಡಬೇಕಿದೆ’ ಎಂದರು.

ವಿಮರ್ಶಕ ಡಾ.ಎಚ್.ಎಸ್‌. ರಾಘ­ವೇಂದ್ರ­ರಾವ್, ‘ಮನರಂಜನೆಗಾಗಿ ಇರುವ ಕಾರ್ಟೂನ್ ನೆಟ್‌ವರ್ಕ್ ಮಕ್ಕಳನ್ನು ಒಂದು ಬಗೆಯ ಕಾರ್ಟೂನ್‌­­ದಾಸರನ್ನಾಗಿ ಮಾಡುತ್ತದೆ.  ಅಲ್ಲದೇ ಕಾರ್ಟೂನ್‌ಗಳು ಮಕ್ಕಳಲ್ಲಿ ಏಕತಾನತೆ­ಯನ್ನು ಮೂಡಿಸುವುದರಿಂದ, ಕಲ್ಪನಾ ಶಕ್ತಿ ಕುಂಠಿತ­ಗೊಳ್ಳುತ್ತದೆ’ ಎಂದರು.

ಅಭಿನವ,  ಸಪ್ನ ಬುಕ್ ಹೌಸ್, ನವ­ಕರ್ನಾಟಕ, ಫಂಕಿ ರೇನ್‌ಬೋ ಸೇರಿದಂತೆ ವಿವಿಧ ಪುಸ್ತಕ ಮಳಿಗೆಗಳು ಶಿಶು ಸಾಹಿತ್ಯ ಸೇರಿದಂತೆ ಹಲವು ಪುಸ್ತಕಗಳನ್ನು ಪ್ರದರ್ಶಿಸಿದವು. ಮೇಳವು ಡಿ. 14, ಶನಿವಾರದವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT