ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಕ್ಕಳ ಅಭಿವೃದ್ಧಿಗೆ ಆರು ಅಂಶದ ಸೂತ್ರ'

ಮನೆ ಬಾಗಿಲಿಗೆ ಬಾಲವಿಕಾಸ ಅಕಾಡೆಮಿ
Last Updated 18 ಫೆಬ್ರುವರಿ 2013, 8:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದ ಎಲ್ಲ 67 ವಾರ್ಡುಗಳಲ್ಲಿಯ ಮಕ್ಕಳನ್ನು ತಲುಪುವ ಸಲುವಾಗಿ `ಮನೆ ಬಾಗಿಲಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ' ಎಂಬ ಯೋಜನೆ ಬರುವ ಶನಿವಾರದಿಂದ ಆರಂಭಗೊಳ್ಳಲಿದೆ.

ಅವಳಿನಗರದ ಎರಡು ವಾರ್ಡುಗಳಲ್ಲಿ ಪ್ರತಿ ಶನಿವಾರ ಏಕಕಾಲಕ್ಕೆ ಕಾರ್ಯಕ್ರಮಗಳು ನಡೆಯಲಿವೆ. ಇದು ಸುಮಾರು 4-5 ತಿಂಗಳವರೆಗೆ ಮುಂದುವರಿಯಲಿದೆ. ಈಮೂಲಕ ಮನೆ ಮನೆಗೆ ತಲುಪಬೇಕೆಂಬ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಅವರ ಕನಸು ನನಸಾದಂತಾಗುತ್ತದೆ.

5ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿಯವರೆಗೆ ಓದುವ ಮಕ್ಕಳು ಈ ಯೋಜನೆಯಲ್ಲಿ ಭಾಗವಹಿಸಲಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳುವಿಕೆ, ಶುಚಿತ್ವದ ಅರಿವು, ಮಾನಸಿಕ ಒತ್ತಡ ಎದುರಿಸುವುದು ಹೇಗೆ ಎಂಬುದನ್ನು ಮಕ್ಕಳೊಂದಿಗೆ ಮಾನಸಿಕ ತಜ್ಞರು, ಶೈಕ್ಷಣಿಕ ತಜ್ಞರು ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಚರ್ಚಿಸಲಿದ್ದಾರೆ. ಇದು ಈ ಯೋಜನೆಯ ಮೊದಲ ಆದ್ಯತೆ.

ಎರಡನೆಯ ಅಂಶ; ಜಂಕ್ ಫುಡ್ ತಿನ್ನದೆ ದೇಸಿ ಆಹಾರ ಸೇವಿಸಿ ಎಂಬ ತಿಳಿವಳಿಕೆ ನೀಡಲಾಗುತ್ತದೆ. ದೇಸಿ ಆಹಾರದಿಂದ ಸಿಗುವ ಸತ್ವಯುತ ಆಹಾರ, ಅದರ ಮಹತ್ವ ಕುರಿತ ಮಾಹಿತಿಯನ್ನು ಒದಗಿಸಲಾಗುತ್ತದೆ.

ಮೂರನೆಯ ಅಂಶ ಎಂದರೆ; ಕಲಿಕೆಯಲ್ಲಿ ಹಿಂದುಳಿಯಲು ಕಾರಣಗಳೇನು? ಗುಂಪಾಗಿ ಓದುವುದು, ಚರ್ಚಿಸುವುದು, ಎಲ್ಲರೊಂದಿಗೆ ಬೆರೆಯುವುದು, ಕೀಳರಿಮೆ ತೊರೆಯುವ ಕುರಿತು ಮಕ್ಕಳೊಂದಿಗೆ ತಜ್ಞರು ಸಂವಾದ ನಡೆಸಲಿದ್ದಾರೆ.

ನಾಲ್ಕನೆಯ ಅಂಶ; ಮೂಢನಂಬಿಕೆ ಹಾಗೂ ಪವಾಡ ಬಯಲು ಕಾರ್ಯಕ್ರಮ. ಬೆಕ್ಕು ಅಡ್ಡ ಬಂದರೆ ಅಪಶಕುನ ಎನ್ನುವುದು, ಕಾಗೆ ಒದರಿದರೆ ಸಂಬಂಧಿಕರು ಬರುತ್ತಾರೆಂದು ತಿಳಿಯುವುದು ಮೊದಲಾದ ಮೂಢನಂಬಿಕೆಗಳನ್ನು ಹೋಗಲಾಡಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿರೆಂದು ಒತ್ತಿ ಹೇಳಲಾಗುತ್ತದೆ.

ಐದನೆಯ ಅಂಶ; ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಆರನೆಯ ಅಂಶವೆಂದರೆ; ನನ್ನ ನಗರ ಹಾಗೂ ನನ್ನ ದೇಶ ಎನ್ನುವ ಪ್ರಜ್ಞೆ ಬೆಳೆಸುವುದು. ನಮ್ಮ ಮನೆ ಮುಂದಿನ ಗಟಾರ ಅಥವಾ ರಸ್ತೆಯಲ್ಲಿ ಮನೆಯ ಕಸ ಚೆಲ್ಲದೆ ಇರುವುದು, ನೀರು ಪೋಲು ಮಾಡಬಾರದು ಎನ್ನುವುದನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ.

ಹೀಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಜೊತೆಗೆ ಪಾಲಕರು ಕೂಡ ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ. ಇದಕ್ಕೂ ಮೊದಲು ಕೇವಲ ಓದು ಎಂಬ ಒತ್ತಡ ಹೇರದೆ ಮಕ್ಕಳನ್ನು ಹೇಗೆ ಬೆಳೆಸಬೇಕೆಂದು ಪಾಲಕರೊಂದಿಗೆ ಚರ್ಚಿಸಲಾಗುತ್ತದೆ.

`ಎಲ್ಲ ಮಕ್ಕಳು ಬಾಲವಿಕಾಸ ಅಕಾಡೆಮಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸದಿರಬಹುದು. ಆದರೆ ಅವರಿರುವ ಸ್ಥಳದಲ್ಲೇ ಕಾರ್ಯಕ್ರಮ ಹಮ್ಮಿಕೊಂಡರೆ ಸಂವಾದದಲ್ಲಿ ಭಾಗವಹಿಸಬಹುದು ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಪ್ರೇಕ್ಷಕರಾಗಿ ಭಾಗವಹಿಸಲಿ ಎನ್ನುವ ಉದ್ದೇಶವಿದೆ. ಪ್ರತಿ ಕಾರ್ಯಕ್ರಮದಲ್ಲಿ 500-600 ಮಕ್ಕಳು ಭಾಗವಹಿಸುತ್ತಾರೆ. ಹೀಗೆ ಅವಳಿನಗರದ ಸುಮಾರು 40,000 ಮಕ್ಕಳನ್ನು ತಲುಪುವ ಗುರಿಯಿದೆ' ಎನ್ನುತ್ತಾರೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ.

`ಪಾಲಿಕೆಯ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಆಯಾ ವಾರ್ಡಿನ ಸಮುದಾಯ ಭವನದಲ್ಲಿ ಆಯೋಜಿಸಲಾಗುತ್ತದೆ. ಇದಕ್ಕೂ ಮೊದಲು ಈ ಯೋಜನೆಯ ಜಾರಿಗಾಗಿ ಮಾಸ್ಟರ್ ಟೀಮ್ ಎಂದು ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳಲ್ಲಿಯ ವಿಷಯ ತಜ್ಞರು 24 ವ್ಯಕ್ತಿಗಳಿಗೆ ತರಬೇತಿ ನೀಡಿದ್ದಾರೆ.

ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ನಿಗದಿತ ದಿನಗಳಂದು ಮಕ್ಕಳೊಂದಿಗೆ ಚರ್ಚಿಸಲಿದ್ದಾರೆ. ಸಂವಾದದ ನಂತರ ಆಯಾ ವಾರ್ಡಿನ ಮಕ್ಕಳೇ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಾರೆ' ಎನ್ನುತ್ತಾರೆ ಅವರು.

`ಇಡೀ ಕಾರ್ಯಕ್ರಮದಲ್ಲಿ ಮಕ್ಕಳು ಆಗಾಗ ದೇಸಿ ಆಟಗಳನ್ನು ಆಡುತ್ತಾರೆ. ಇದರಿಂದ ಮಕ್ಕಳಿಗೆ ಮರೆತುಹೋಗುತ್ತಿರುವ ಆಟಗಳ ಪರಿಚಯ ಆಗುತ್ತದೆ. ಇದರಿಂದ ಶಾಲೆ, ಹೋಂ ವರ್ಕ್ ಎಂದು ಉಳಿದುಕೊಂಡಿರುವ ಮಕ್ಕಳನ್ನು ಮನೆಯಿಂದ ಅಂಗಳಕ್ಕೆ ತರಲಾಗುತ್ತದೆ' ಎಂದು ಖುಷಿಪಡುತ್ತಾರೆ ಟೆಂಗಿನಕಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT