ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಲೆದಾಟ ತಪ್ಪಿಸಿ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಮಾಜ ಕಲ್ಯಾಣ ಇಲಾಖೆಯಿಂದ ಈ ವರ್ಷ ರಾಜ್ಯದಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ  ಓದುತ್ತಿರುವ ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಸ್ಕಾಲರ್‌ಶಿಪ್ ಹಣದ ಮೊತ್ತವನ್ನು ಹೆಚ್ಚಿನ ಪ್ರಮಾಣಕ್ಕೆ ಏರಿಸಿರುವುದು ಸಮಾಧಾನ ತಂದಿದೆ.

ಇದರಿಂದ ಆ ಮಕ್ಕಳಿಗೆ ಒಂದಿಷ್ಟು ಉಪಯೋಗವಾಗಬಹುದೆಂಬುದು ನಿಜವಾದರೂ ಅದನ್ನು ಪಡೆಯಲು  ನೆಮ್ಮದಿ ಕೇಂದ್ರಗಳಲ್ಲಿ ಪಡೆಯಬೇಕಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಅಧಿಕಾರಿಗಳ-ಗುಮಾಸ್ತರ  `ಕೈ ಬಿಸಿ~ ಮಾಡಿ ಉದ್ದಾನು ಉದ್ದ ಕ್ಯೂಗಳಲ್ಲಿ  ನಿಂತು ಹರಸಾಹಸ ಪಡುತ್ತಿರುವ ಪೋಷಕರು ಹಾಗೂ ವಿದ್ಯಾರ್ಥಿಗಳ ಗೋಳನ್ನು ಕೇಳುವವರಿಲ್ಲದಾಗಿದೆ.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಂದೊಂದು ರೀತಿಯಂತೆ, ಈ ಪ್ರಮಾಣ ಪತ್ರ ಪಡೆಯಲು ಕನಿಷ್ಠ 40 ರೂಪಾಯಿಯಿಂದ 100 ರೂಪಾಯಿವರೆಗೂ  `ಲಂಚ~ ನೀಡಬೇಕಾಗಿದೆ. ಅದನ್ನು ಪಡೆಯಲು ದಿನಗೂಲಿ ಮಾಡಿ ಜೀವನ ನಡೆಸುವ ಪೋಷಕರು ತಮ್ಮ ಕೆಲಸ ಬಿಟ್ಟು, ಮಧ್ಯಂತರ ಪರೀಕ್ಷೆಯ ಗಡಿಬಿಡಿಯಲ್ಲಿರುವ ಮಕ್ಕಳು ಶಾಲೆ ಬಿಟ್ಟು, ದಿನಗಟ್ಟಲೆ ನೆಮ್ಮದಿ ಕೇಂದ್ರಕ್ಕೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಲು ಇದೇ ತಿಂಗಳ 30 ಕೊನೆಯ ದಿವಾಗಿದ್ದು, ಪ್ರಮಾಣಪತ್ರ ಪಡೆಯಲೆಂದೇ ಅಮೂಲ್ಯ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ.

ಈ ಹಿಂದೆ ಅಲ್ಪ ಮೊತ್ತದ ಸ್ಕಾಲರ್‌ಶಿಪ್ ಪಡೆಯಲು ಮಕ್ಕಳು ಓದುತ್ತಿರುವ ಆಯಾ ಶಾಲೆಗಳಲ್ಲಿ ಇಂತಹ ಅರ್ಹ ಮಕ್ಕಳ ಪಟ್ಟಿ ಸಿದ್ಧಗೊಳಿಸಿ ಅವುಗಳನ್ನು ಮುಖ್ಯೋಪಾಧ್ಯಾಯರ ದೃಢೀಕರಣದೊಂದಿಗೆ, ತಹಶೀಲ್ದಾರ್ ಅವರ ಸಹಿ ಪಡೆದು, ಒಟ್ಟಾಗಿ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಿಕೊಡಲಾಗುತ್ತಿತ್ತು. ಭ್ರಷ್ಟಾಚಾರಕ್ಕೆ ಅವಕಾಶವಿರದ ಆ ವ್ಯವಸ್ಥೆ ಎಲ್ಲ ರೀತಿಯಲ್ಲೂ ಸಮಂಜಸವೂ ಆಗಿತ್ತು. ಈ ಹೊಸ ವ್ಯವಸ್ಥೆಯ ಮೂಲಕ ಫಲಾನುಭವಿ ಮಕ್ಕಳಿಗೆ ತೊಂದರೆಯ ಜೊತೆಗೆ ಹೆಚ್ಚಿನ ಪ್ರಮಾಣದ ಪೂರ್ತಿ ಹಣವೂ ಕೈ ಸೇರಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ತಕ್ಷಣವೇ ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸಮಾಲೋಚಿಸಿ ಹಿಂದಿನ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು. ಇಲ್ಲವೇ ಈಗಿನ ವ್ಯವಸ್ಥೆಯನ್ನೇ ಸರಳೀಕರಿಸುವ ಮೂಲಕ ಮಕ್ಕಳ ಅಲೆದಾಟವನ್ನು ತಪ್ಪಿಸ ಬೇಕು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT