ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲಿಕೆಯ ವಸ್ತು ಪಾಠಗಳು

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಆರ್.ನರಸಿಂಹಾಚಾರ್ ಅವರ ‘ವಸ್ತು ಪಾಠಗಳು’ ಎನ್ನುವ ಕೃತಿ 1920ರಲ್ಲಿ ಮೂರನೇ ಬಾರಿಗೆ ಮುದ್ರಣವನ್ನು ಕಂಡಿದೆ. ಮೂರನೇ ಮುದ್ರಣದಲ್ಲಿ ಮೂರು ಸಾವಿರ ಪ್ರತಿಗಳು ಹೊರಬಂದಿದ್ದು, ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಪಡಿಸಿರುವ ಈ ಕೃತಿ ಬೆಂಗಳೂರಿನ caxton press ನಲ್ಲಿ ಮುದ್ರಣಗೊಂಡಿದೆ.

ಒಟ್ಟು 222 ಪುಟಗಳ ಈ ಕೃತಿಯಲ್ಲಿ 2 ಅಧಿಕರಣಗಳು, 25 ಪಾಠಗಳು ಇವೆ. ಕೃತಿಕಾರರು ಸಂಗ್ರಹವಾದ ಪೀಠಿಕೆ ಹಾಗೂ ದೀರ್ಘವಾದ ಅವತರಣಿಕೆಯಲ್ಲಿ ಈ ಕೃತಿಯ ಉದ್ದೇಶ, ಸ್ವರೂಪ ಸ್ಪಷ್ಟಪಡಿಸಿರುತ್ತಾರೆ. ಈ ಕೃತಿಯು ಒಂದನೆಯ ಸಂಪುಟವಾಗಿದ್ದು, ಈ ಸಂಪುಟದ ಮೊದಲೆರಡು ಮುದ್ರಣಗಳು ಯಾವಾಗ ಬಂದವು ಎನ್ನುವ ಬಗ್ಗೆ ಮಾಹಿತಿಯಿಲ್ಲ.

ಇದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ವಸ್ತುಪಾಠ’ಗಳನ್ನು ಬೋಧಿಸುವ ಹಾಗೂ ಶಿಕ್ಷಕರಿಗೆ ಬೋಧನೆಯ ವಿಧಾನವನ್ನು ನಿರೂಪಿಸುವ ಕೃತಿ. ಕೃತಿಕಾರರೇ ಹೇಳಿರುವಂತೆ:

‘ಹುಡುಗರ ಇದಿರಿಗೆ ಯಾವುದಾದರೂ ಒಂದು ವಸ್ತುವನ್ನು ತಂದಿಟ್ಟು, ಅವರು ಅದರ ಸ್ವಭಾವವನ್ನೂ ಉಪಯೋಗವನ್ನೂ ಸಾಧ್ಯವಾದ ಮಟ್ಟಿಗೆ ಪರೀಕ್ಷಿಸಿ ತಿಳಿದುಕೊಳ್ಳುವುದಕ್ಕೆ ಅನುಕೂಲವನ್ನು ಉಂಟು ಮಾಡುವ ಪಾಠಗಳು. ಹುಡುಗರು ತಮ್ಮ ಇಂದ್ರಿಯಗಳನ್ನು ತಾವೇಉಪಯೋಗಿಸುವುದರ ಮೂಲಕ ಅವರ ಪ್ರಪಂಚ ಜ್ಞಾನವನ್ನು ಹೆಚ್ಚಿಸುವ ಪಾಠಗಳಿಗೆಲ್ಲಾ ‘ವಸ್ತುಪಾಠ’ವೆಂದು ಹೇಳಬಹುದು’.

ವಸ್ತುಪಾಠಗಳ ಮುಖ್ಯ ಉದ್ದೇಶಗಳು ಮೂರು. ಮೊದಲನೆಯದು, ಇಂದ್ರಿಯಗಳ ಮೂಲಕ ಮನಸ್ಸಿಗೆ ಉತ್ತೇಜನವನ್ನು ಉಂಟು ಮಾಡಿ ಬುದ್ಧಿಯನ್ನು ಕುದುರಿಸುವುದು. ಇಂದ್ರಿಯಗಳ ಮೂಲಕ ಮನಸ್ಸನ್ನು ಉದ್ಭೋದಿಸುವುದು ಹಾಗೂ ಜ್ಞಾನವೃದ್ಧಿ ಎರಡನೇ ಉದ್ದೇಶ. ಭಾಷೆಯನ್ನು ಕಲಿಯುವುದಕ್ಕೆ ಸಹಕಾರಿಯಾಗುವುದು ಮತ್ತೊಂದು ಉದ್ದೇಶ. ಉಚಿತವಾದ ಪ್ರಶ್ನೆಗಳನ್ನು ಕೇಳಿ ಪಾಠವನ್ನು ಬೋಧಿಸುವುದಕ್ಕೆ ಕೃತಿಕಾರರೇ ನೀಡಿರುವ ಒಂದು ಉದಾಹರಣೆ ಹೀಗಿದೆ:

ಪಾಠದ ವಿಷಯ: ಗಾಜು. ಒಂದು ಚೂರು ಗಾಜನ್ನು ಉಪಾಧ್ಯಾಯನು ಹುಡುಗರ ಕೈಯಲ್ಲಿ ಕೊಟ್ಟು, ವರ್ಗದ ಹುಡುಗರೆಲ್ಲಾ ನೋಡುವಂತೆ ಮಾಡಿದ ಮೇಲೆ-
ಉ: ನನ್ನ ಕೈಯಲ್ಲಿರುವುದೇನು?
ಹು: ಒಂದು ಚೂರು ಗಾಜು
ಉ: ಈ ಗಾಜನ್ನು ನೀವೆಲ್ಲಾ ನೋಡಿದಿರಲ್ಲಾ; ಇದು ಹೇಗಿದೆ?
ಹು: ಹೊಳಪಾಗಿದೆ.
ಉ: ಕೈಯಲ್ಲಿ ತೆಗೆದುಕೊಂಡು ಮುಟ್ಟಿ ನೋಡು. ಹೇಗಿದೆ?
ಹು: ನುಣುಪಾಗಿದೆ.
ಉ: ನಿನ್ನ ಬಟ್ಟೆಯೊಂದಿಗೆ ಹೋಲಿಸಿ ನೋಡು; ಎರಡನ್ನೂ ಅಮುಕಿ ನೋಡು. ಹೇಗಿದೆ?
ಹು: ಗಟ್ಟಿಯಾಗಿದೆ
ಉ: ಈ ಕೊಠಡಿಯಲ್ಲಿ ಬೇರೆ ಏನಾದರೂ ಗಾಜಿದೆಯೇ?
ಹು: ಇದೆ, ಕಿಟಕಿಯ ಕದದಲ್ಲಿದೆ. 
ಉ: (ಗಾಜಿನ ಕದವನ್ನು ಮುಚ್ಚಿ) ಕಿಟಕಿಯ ಹೊರಗೆ ನೋಡು. ಏನು ಕಾಣುತ್ತದೆ? 
ಹು: ತೋಟ ಕಾಣುತ್ತದೆ. 
ಉ: (ಕಿಟಕಿಯ ಮರದ ಕದವನ್ನು ಮುಚ್ಚಿ) ಈಗ ಹೊರಗೆ ನೋಡು, ಏನು ಕಾಣುತ್ತದೆ?
ಹು: ಏನೂ ಕಾಣುವುದಿಲ್ಲ.
ಉ: ಏಕೆ? 
ಹು: ಮರದ ಕದ ಮುಚ್ಚಿಕೊಂಡಿದೆ. 
ಉ: ಹಾಗಾದರೆ ಮರದ ಕದಕ್ಕೂ ಗಾಜಿನ ಕದಕ್ಕೂ ಏನು ವ್ಯತ್ಯಾಸ ಕಂಡುಬರುತ್ತದೆ? 
ಹು: ಮರದ ಕದದ ಆಚೆ ಕಾಣುವುದಿಲ್ಲ. ಗಾಜಿನ ಕದದ ಆಚೆ ಕಾಣುತ್ತದೆ.
ಉ: ಗಾಜಿನಲ್ಲಿರುವ ಈ ಗುಣಕ್ಕೆ ಹೆಸರೇನು ಬಲ್ಲೆಯಾ? 
ಹು: ತಿಳಿಯದು.  
ಉ: ಹೇಳುತ್ತೇನೆ ಕೇಳು- ಆ ಗುಣ ‘ಪಾರದರ್ಶಕ’. ಜ್ಞಾಪಕವಿಟ್ಟುಕೋ. ಈಗ ಒಂದು ವಸ್ತುವು ಪಾರದರ್ಶಕವೆಂದರೆ ಏನು ತಿಳಿದುಕೊಳ್ಳುತ್ತೀಯೆ?  
ಸಂಭಾಷಣೆ ಮುಂದುವರಿಯುತ್ತದೆ. ವಸ್ತುವೊಂದನ್ನು ಮಕ್ಕಳಿಗೆ ಪರಿಚಯಿಸುವ ಈ ವಿಧಾನ ಆಪ್ತವೂ ಪರಿಣಾಮಕಾರಿಯೂ ಆಗಿದೆ. ಆ ಶತಮಾನದ ಆರಂಭದಲ್ಲಿ ಬೋಧನಾವಿಧಾನ ಹೇಗಿತ್ತು ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ. ಶಾಸನ ಸಂಗ್ರಹ, ಸಾಹಿತ್ಯ ಚರಿತ್ರೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಆಳವಾದ ಪಾಂಡಿತ್ಯವಿದ್ದ ಆಚಾರ್ಯರು ಪುಟ್ಟ ಹುಡುಗರ ವಿದ್ಯಾಭ್ಯಾಸದ ಬಗ್ಗೆ ಹೇಗೆ ಕಾಳಜಿಯನ್ನು ಇಟ್ಟುಕೊಂಡಿದ್ದರು ಎಂಬುದನ್ನು ಈ ಕೃತಿ ತಿಳಿಸುತ್ತದೆ.

ವಸ್ತು ಪಾಠಗಳನ್ನು ಹುಡುಗರಿಗೆ ಬೋಧಿಸುವಾಗ ಆ ವಸ್ತುವನ್ನು ಹುಡುಗರ ಇದಿರಿಗೆ ಇಡಬೇಕೆಂದು ಕೃತಿಕಾರರು ಹೇಳುತ್ತಾರೆ. ಮುಂದೆ ಅವರ ಮಾತುಗಳನ್ನು ಗಮನಿಸಿ:

‘ಕೆಲವು ವೇಳೆ ವಸ್ತು ದೊರೆಯುವುದಿಲ್ಲ, ಅಥವಾ ಅವುಗಳನ್ನು ತರುವುದು ಅಸಾಧ್ಯವಾಗುತ್ತದೆ. ಹುಲಿಯನ್ನು ತಂದು ಹುಡುಗರ ಮುಂದೆ ನಿಲ್ಲಿಸುವುದಕ್ಕಾದೀತೇ? ಇಂಥ ಸಂದರ್ಭದಲ್ಲಿ ವಸ್ತುಗಳ ಚಿತ್ರವನ್ನಾದರೂ ತಂದಿಡಬೇಕು’.

ವಸ್ತುಪಾಠಗಳನ್ನು ಬೋಧಿಸುವಾಗ ಶಿಕ್ಷಕರಿಗೆ ಆಚಾರ್ಯರು ಒಂಬತ್ತು ಸೂಚನೆಗಳನ್ನು ನೀಡಿರುತ್ತಾರೆ. 1.ಅಧ್ಯಾಪಕನಿಗೆ ತಾನು ತಿಳಿಸುವ ವಿಷಯದ ಬಗ್ಗೆ ತಿಳಿವಳಿಕೆ ಇರಬೇಕು. 2.ವಿದ್ಯಾರ್ಥಿಗಳು ತಮ್ಮ ಇಂದ್ರಿಯಗಳನ್ನು ಉಪಯೋಗಿಸುವಂತೆ ಮಾಡಬೇಕು. 3.ಮನೋರಂಜಕ ಹಾಗೂ ಉಚಿತ ಪ್ರಶ್ನೆಗಳನ್ನು ಕೇಳಬೇಕು. 4.ಸಂವಾದ ಏರ್ಪಡಿಸಬೇಕು. 5.ಪ್ರಾಯೋಗಿಕತೆ ತಿಳಿಸಿಕೊಡಬೇಕು. ಉದಾ: ಉಪ್ಪನ್ನು ನೀರಿನಲ್ಲಿ ಹಾಕಿ ‘ಕರಗು’ವ ಬಗ್ಗೆ ತಿಳಿಸಬಹುದು. 6.ಸುಲಭವಾದ ಭಾಷೆ ಬಳಸಬೇಕು. 7.ಅಗತ್ಯಬಿದ್ದರೆ ಉಚಿತ ಕಥೆಗಳನ್ನು ಹೇಳಬಹುದು. 8.ಕಾಡುಹರಟೆ ಹೊಡೆಯತಕ್ಕದ್ದಲ್ಲ. 9.ಬೇಸರವಾಗದಂತೆ ಪಾಠಗಳನ್ನು ಅನೇಕಾವೃತ್ತಿ ಬೋಧಿಸುವುದು.

ಬೋಧನಾ ವಿಧಾನಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಬಂದ ಮೊದಲ ಪುಸ್ತಕಗಳಲ್ಲಿ ನರಸಿಂಹಾಚಾರ್ ಅವರ ‘ವಸ್ತು ಪಾಠಗಳು’ ಮುಖ್ಯವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT