ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೌಶಲಕ್ಕೆ ವೇದಿಕೆಯಾದ ವಸ್ತು ಪ್ರದರ್ಶನ

Last Updated 23 ಡಿಸೆಂಬರ್ 2013, 7:06 IST
ಅಕ್ಷರ ಗಾತ್ರ

ಯಾದಗಿರಿ: ತಾಂತ್ರಿಕವಾಗಿ ಬೆಳೆ­ಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗವೆಂದೇ ಕರೆಯಲಾಗು­ತ್ತದೆ. ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಕಾಗಾದು. ಜೊತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ವೃತ್ತಿ ಶಿಕ್ಷಣದ ಬಗ್ಗೆಯೂ ಅಭಿರುಚಿ ಬೆಳೆಸುವುದು ಅತ್ಯವಶ್ಯಕ­ವಾಗುತ್ತದೆ. ಇದಕ್ಕಾಗಿಯೇ ಸರ್ಕಾರದ ವತಿಯಿಂದ ಪ್ರೌಢಶಾಲಾ ಹಂತದ ಮಕ್ಕಳಿಗಾಗಿ ವೃತ್ತಿಶಿಕ್ಷಣವನ್ನೂ ಕಲಿಸಲಾಗುತ್ತದೆ.

ಶಾಲೆಗಳಲ್ಲಿ ವೃತ್ತಿ ಶಿಕ್ಷಣದ ಮೂಲಕ ಕಲಿತ ಹಲವಾರು ಕೌಶಲ­ಗಳನ್ನು ಪ್ರದರ್ಶಿಸಲು ವೇದಿಕೆಯೊಂದು ಇತ್ತೀಚೆಗೆ ನಗರದಲ್ಲಿ ಸಿದ್ಧವಾಗಿತ್ತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನವನ್ನು ಇಲ್ಲಿಯ ಸ್ಟೇಶನ್‌ ಬಜಾರ್‌ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳ 25 ಸರ್ಕಾರಿ ಪ್ರೌಢ­ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ವಸ್ತು ಪ್ರದರ್ಶನ­ದಲ್ಲಿ ನಾನಾ ಬಗೆಯ ಸಿದ್ಧ ವಸ್ತುಗಳು ಗಮನ ಸೆಳೆದವು. ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಮರದ ಕೆತ್ತನೆಗಳು, ಕರಕುಶಲ ವಸ್ತುಗಳು, ಹೆಣ್ಣು ಮಕ್ಕಳು ತಯಾರಿಸಿದ ಸ್ವೇಟರ್‌, ಉಲನ್‌ ಬಟ್ಟೆಗಳು, ಹಲವಾರು ಬಗೆಯ ಉಡುಪುಗಳು, ಆರೋಗ್ಯಕರ ತಿಂಡಿಗಳು ಸೇರಿದಂತೆ ಅನೇಕ ವಸ್ತುಗಳು ಗಮನ ಸೆಳೆದವು.

ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿರುವ ಅನೇಕ ಬಗೆಯ ಕೌಶಲಗಳು ಇಲ್ಲಿ ಪ್ರದರ್ಶಿತವಾದವು. ಸುರಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಕಟ್ಟಿಗೆ ಸಾಮಗ್ರಿಗಳು, ಕಕ್ಕೇರಾ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಬಟ್ಟೆ ಹಾಗೂ ಉಲನ್‌ ಸಾಮಗ್ರಿಗಳು ನೋಡುಗರನ್ನು ಆಕರ್ಷಿಸಿದವು. ಇದರ ಜೊತೆಗೆ ಮಕ್ಕಳು ತಯಾರಿಸಿದ ಪಪ್ಪಾಯಿ ಕಾಯಿಯ ಟೂಟಿ ಫ್ರೂಟಿಯನ್ನು ಆಸ್ವಾದಿಸುವ ಅವಕಾಶ ದೊರೆಯಿತು.

ಮಕ್ಕಳಿಗೆ ಕೇವಲ ಅಕ್ಷರ ಕಲಿಸುವುದಷ್ಟೇ ಶಿಕ್ಷಣವಾಗಿ ಉಳಿದಿಲ್ಲ. ಇದರ ಜೊತೆಗೆ ವೃತ್ತಿಪರ ಶಿಕ್ಷಣದ ತರಬೇತಿಯನ್ನೂ ನೀಡುವುದು ಇಂದಿನ ಅಗತ್ಯವಾಗಿದೆ. ಇದಕ್ಕಾಗಿಯೇ ಸರ್ಕಾರ ಇಂತಹ ಯೋಜನೆಯನ್ನು ಜಾರಿ­ಗೊಳಿಸಿದೆ. ಇಲ್ಲಿ ಪಠ್ಯದ ಜೊತೆಗೆ ವೃತ್ತಿಶಿಕ್ಷಣಕ್ಕಾಗಿಯೇ ಒಂದು ಅವಧಿ­ಯನ್ನು ಮೀಸಲಿಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯ ಪ್ರೌಢಶಾಲೆಗಳಲ್ಲಿರುವ ಹೆಣ್ಣು ಮಕ್ಕಳಿಗಂತೂ ವಿಶೇಷ ಯೋಜನೆಯೇ ಇದ್ದು, ಇದರಡಿ ಹೆಣ್ಣು ಮಕ್ಕಳಿಗೆ ಹೊಲಿಗೆ, ಕಸೂತಿ, ಸ್ವೇಟರ್‌ ಹೆಣೆಯುವುದು ಸೇರಿದಂತೆ ವಿವಿಧ ತರಬೇತಿ ನೀಡಲಾಗುತ್ತದೆ. ಇನ್ನು ಬಾಲಕರಿಗೂ ಅವರ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡುವ ಮೂಲಕ ವೃತ್ತಿ ಶಿಕ್ಷಣವನ್ನು ಕಲಿಸಲಾಗುತ್ತದೆ ಎಂದು ಹೇಳುತ್ತಾರೆ.

ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಮಕ್ಕಳು ಪ್ರದರ್ಶಿಸಿದ್ದ ವಸ್ತುಗಳು, ಉದ್ಘಾಟಕರೂ ಸೇರಿದಂತೆ ಸಮಾರಂಭದಲ್ಲಿ ಹಾಜರಿದ್ದ ಗಣ್ಯರ ಗಮನ ಸೆಳೆದವು.

ಸುಮಾರು 25 ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಸಾಮಗ್ರಿಗಳನ್ನು ಪ್ರದರ್ಶಿಸಲಾಗಿತ್ತು.

‘ಶಾಲೆಗಳಲ್ಲಿ ವೃತ್ತಿ ಶಿಕ್ಷಣ ತರಬೇತಿ’
‘ಜಿಲ್ಲೆಯ ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ವೃತ್ತಿ ಶಿಕ್ಷಣದ ತರಬೇತಿ ನೀಡಲಾಗುತ್ತಿದೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗೆ ವೇದಿಕೆ ಕಲ್ಪಿಸಿದರೆ, ವೃತ್ತಿ ಶಿಕ್ಷಣ ವಸ್ತು ಪ್ರದರ್ಶನದ ಮೂಲಕ ಮಕ್ಕಳ ಸೃಜನಾತ್ಮಕ ಕಲೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ’.

–ಸಾಹೇಬಗೌಡ ಬಿರಾದಾರ
ಬಿಆರ್‌ಪಿ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT