ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಚಿತ್ರೋತ್ಸವ ವಾಸ್ತವ

Last Updated 2 ಜನವರಿ 2013, 19:59 IST
ಅಕ್ಷರ ಗಾತ್ರ

ನಗರದಲ್ಲಿ 8ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದಲ್ಲಿ ಈ ತಿಂಗಳ 9ರಿಂದ ಆರಂಭವಾಗುವುದಾಗಿ ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿತ್ತು. ಆದರೆ ಈ ಕುರಿತ ಯಾವ ಪ್ರಸ್ತಾವವೂ ತನ್ನ ಮುಂದೆ ಇಲ್ಲ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಹೇಳುವ ಮೂಲಕ ಹೊಸತೊಂದು ವಿವಾದ ಶುರುವಾಗಿದೆ.

ಸರ್ಕಾರದ ಅನುದಾನ ಪಡೆದು ನಡೆಸಲಾಗುವ ಯಾವುದೇ ಚಿತ್ರೋತ್ಸವ ಅದು ರಚಿಸಿರುವ ಅಕಾಡೆಮಿಗಳ ಮೂಲಕವೇ ಆಗಬೇಕೆಂಬ ನಿಯಮವಿದೆ. ಅದು ಜಾರಿಗೆ ಬಂದ ಮೇಲೆ ರಾಜ್ಯದಲ್ಲಿ ನಡೆಸಲಾಗುವ ಚಿತ್ರೋತ್ಸವಗಳು ಕರ್ನಾಟಕ ಚಲನಚಿತ್ರ ಅಕಾಡೆಮಿ ಮೂಲಕವೇ ಆಯೋಜಿತವಾಗಬೇಕು. ಆದರೆ ಮಕ್ಕಳ ಚಿತ್ರೋತ್ಸವ ಆಯೋಜಿಸುವುದಾಗಿ ಈಗಾಗಲೇ ಮಾಧ್ಯಮಗಳಿಗೆ ತಿಳಿಸಿರುವ ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ, ಸರ್ಕಾರ ಹಾಗೂ ಅಕಾಡೆಮಿ ನೆರವು ತನಗೇ ಸಿಗಬೇಕು ಎಂದು ಹಟ ಹಿಡಿದಿದೆ. ಹಾಗಾಗಿ ಈ ಬಾರಿಯ ಮಕ್ಕಳ ಚಿತ್ರೋತ್ಸವ ಸುದ್ದಿಯಲ್ಲಿದೆ.

ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸಿತು. ಸರ್ಕಾರದಿಂದ ಅನುದಾನ ಪಡೆದು ನಡೆಸಲಾಗುವ ಯಾವುದೇ ಚಿತ್ರೋತ್ಸವ ಈ ಅಕಾಡೆಮಿಯ ಮೂಲಕವೇ ನಡೆಯಬೇಕೆಂದು ನಿಯಮಾವಳಿಯಲ್ಲಿದೆ. ಈ ಕುರಿತು ಸರ್ಕಾರ ಆದೇಶವನ್ನೂ (ಕಸಂವಾಪ್ರ: 120:ಪಿಐಎಫ್:2012 ಬೆಂಗಳೂರು, ದಿನಾಂಕ: 5.11.2012) ಹೊರಡಿಸಿತ್ತು. ಬರಗಾಲ ಇರುವುದರಿಂದ ಸರಳವಾಗಿ, ಜಾರಿಯಲ್ಲಿರುವ ಮಾರ್ಗಸೂಚಿಗಳಂತೆ ಟೆಂಡರ್ ಪ್ರಕ್ರಿಯೆ ಕೈಗೊಂಡು ವೆಚ್ಚ ಭರಿಸುವಂತೆ ಹೇಳಿದ ಸರ್ಕಾರ ಇತರೆ ಷರತ್ತುಗಳಿಗೆ ತಕ್ಕಂತೆ ಹಣ ಬಿಡುಗಡೆ ಮಾಡಿತು.

ಕೇರಳ ಹಾಗೂ ಪಶ್ಚಿಮ ಬಂಗಳಾದಲ್ಲಿ ಕೂಡ ಚಿತ್ರೋತ್ಸವಗಳು ಅಕಾಡೆಮಿ ಮೂಲಕವೇ ಆಯೋಜಿತವಾಗುತ್ತಿವೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿತವಾದದ್ದೂ ಹಾಗೆಯೇ. ಅದೇ ನಿಯಮಾನುಸಾರ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲು ಸರ್ಕಾರವು ಅಕಾಡೆಮಿಗೆ ಐವತ್ತು ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ಇದಕ್ಕೆ ಪೂರಕವಾಗಿ ಅಕಾಡೆಮಿಯು ಚಲನಚಿತ್ರೋತ್ಸವ ನಡೆಸಲು ಕೈಗೊಂಡ ಅಗತ್ಯ ಕ್ರಮಗಳ ಕುರಿತ ಕ್ರಿಯಾ ಯೋಜನೆಯ ಪ್ರತಿಯನ್ನು ಸರ್ಕಾರ ಹಾಗೂ ವಾರ್ತಾ ಇಲಾಖೆಗೆ ಕಳುಹಿಸಿದ್ದು ಬಿಡುಗಡೆಯಾಗಿರುವ ಹಣವನ್ನು ಬ್ಯಾಂಕ್‌ನಲ್ಲಿ ಭದ್ರವಾಗಿ ಇಡಲಾಗಿದೆ ಎಂದು ಅಕಾಡೆಮಿಯ ಅಧಿಕಾರಿಗಳು ತಿಳಿಸುತ್ತಾರೆ.

ಈ ನಡುವೆ, ಪ್ರತಿವರ್ಷದಂತೆ ತಾನು ಆಯೋಜಿಸಿರುವ ಚಿತ್ರೋತ್ಸವಕ್ಕೆ ಹಣ ಬಿಡುಗಡೆ ಮಾಡುವಂತೆ ಚಿಲ್ಡ್ರನ್ಸ್ ಇಂಡಿಯಾ ಪತ್ರಗಳ ಮೂಲಕ ಪದೇಪದೇ ಚಲನಚಿತ್ರ ಅಕಾಡೆಮಿಯನ್ನು ಒತ್ತಾಯಿಸುತ್ತಿದೆ. ಅಕಾಡೆಮಿ ಕೂಡ ಪತ್ರದ ಮೂಲಕ ಹಣ ಮಂಜೂರು ಮಾಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಸಂಬಂಧ ಇಬ್ಬರ ನಡುವೆ ನಡೆದ ಪತ್ರಗಳ ಪ್ರತಿಗಳು `ಮೆಟ್ರೊ'ಗೆ ಲಭ್ಯವಾಗಿವೆ.

`ವೈಯಕ್ತಿಕವಾಗಿ ಬೆಂಬಲಿಸುತ್ತೇನೆ'

`ಚಿತ್ರೋತ್ಸವಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು ಪಾಲ್ಗೊಂಡು ಸಹಕರಿಸುವುದನ್ನು ಚಲನಚಿತ್ರ ಅಕಾಡೆಮಿ ಸ್ವಾಗತಿಸುತ್ತದೆ. ಆದರೆ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅಕಾಡೆಮಿಯ ಸಹಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದನ್ನು ಈಗಾಗಲೇ ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಗೆ ಪತ್ರ ಮೂಲಕ ಸ್ಪಷ್ಟಪಡಿಸಲಾಗಿದೆ. ಜತೆಗೆ ಚಿಲ್ಡ್ರನ್ಸ್ ಇಂಡಿಯಾ ಆಯೋಜಿಸಿರುವ 8ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಅಕಾಡೆಮಿಯು ಸಹಯೋಗ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆದರೆ ವೈಯಕ್ತಿಕವಾಗಿ ನಾನು ಈ ಚಿತ್ರೋತ್ಸವಕ್ಕೆ ಬೆಂಬಲ ನೀಡುತ್ತೇನೆ' ಎಂದು ಅಕಾಡೆಮಿಯ ಅಧ್ಯಕ್ಷೆ ತಾರಾ ಅನುರಾಧ ಪ್ರತಿಕ್ರಿಯಿಸಿದರು.

ಎರಡು ದೋಣಿಯ ಪಯಣ

`ಯಾವುದೇ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರದ ವಿರೋಧ ಇರುವುದಿಲ್ಲ. ಆದರೆ ಅದು ರಚಿಸಿರುವ ಅಕಾಡೆಮಿಗಳು ತಮ್ಮ ಏಕಸ್ವಾಮ್ಯ ಸಾಧಿಸಲು ಬೈಲಾಗಳನ್ನು ರಚಿಸಿವೆ. ನಾನು ಸರ್ಕಾರ ಅಥವಾ ಅಕಾಡೆಮಿಯ ವಿರೋಧಿ ಅಲ್ಲ. ಆದರೆ ಅಕಾಡೆಮಿ ಏಕೆ ಹಟ ಮಾಡುತ್ತಿದೆ ಎಂಬುದು ಗೊತ್ತಿಲ್ಲ. ಈಗ ಸರ್ಕಾರದ ಮೊರೆಹೋಗುವುದು ಅನಿವಾರ್ಯವಾಗಿದೆ. ಎರಡು ದೋಣಿಯ ಮೇಲೆ ಪ್ರಯಾಣಿಸುವ ಕೆಲಸ ಮಾಡಬೇಕಾಗಿದೆ. ಅಕಾಡೆಮಿಗೆ ಮಕ್ಕಳ ಕುರಿತ ಕಾರ್ಯಕ್ರಮ ಆಯೋಜಿಸುವಲ್ಲಿ ಏನು ಅನುಭವವಿದೆ' ಎಂಬುದು ಚಿಲ್ಡ್ರನ್ಸ್ ಇಂಡಿಯಾದ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡ ಅವರ ಪ್ರಶ್ನೆ.

ಬಾಲಭವನದ ಜತೆಗೂಡಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸತತವಾಗಿ ಒಂದೂವರೆ ವರ್ಷ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಬಹುತೇಕ ಕನ್ನಡ ಭಾಷೆಯಲ್ಲಿ ಸಿದ್ಧಗೊಂಡ ಮಕ್ಕಳ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಜತೆಗೆ ಎರಡು ವರ್ಷ ರಾಜ್ಯದ ಆರು ಜಿಲ್ಲೆಗಳಲ್ಲಿ ಮಕ್ಕಳ ಚಿಣ್ಣರ ಚಿತ್ರೋತ್ಸವಗಳನ್ನು ಆಯೋಜಿಸಿದ ಅನುಭವವೂ ಅಕಾಡೆಮಿಗೆ ಇದೆ. ಈ ಬಾರಿಯ ಮಕ್ಕಳ ಚಿತ್ರೋತ್ಸವಕ್ಕೆ ಅಕಾಡೆಮಿ ಈಗಾಗಲೇ ಸಿದ್ಧತೆಯನ್ನು ಪ್ರಾರಂಭಿಸಿದೆ.

ಬರಲಿರುವ ಏಪ್ರಿಲ್-ಮೇ ತಿಂಗಳಿನಲ್ಲಿ ಚಿತ್ರೋತ್ಸವ ಆಯೋಜಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನ ಕಾರ್ಯಕ್ರಮ ಆಯೋಜಿಸಿ ಜಿಲ್ಲಾ ಮಟ್ಟದಲ್ಲಿ ಏಕಕಾಲದಲ್ಲಿ ಚಿತ್ರಗಳ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂಬುದು ಈ ಬಾರಿಯ ಯೋಜನೆ ಎಂಬುದು ಅಕಾಡೆಮಿಯ ಅಧಿಕಾರಿಗಳ ಸ್ಪಷ್ಟನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT