ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಆನೇಕಲ್: `ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಬೆಳೆಸುವ ದಿಸೆಯಲ್ಲಿ ಶಿಕ್ಷಕರು ಶ್ರಮಿಸಬೇಕು~ ಎಂದು ಅಂಕಣಕಾರ ಡಾ.ಗುರುರಾಜ ಕರ್ಜಗಿ ನುಡಿದರು.

ಅವರು ಪಟ್ಟಣದ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಿರುವ 38ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪೋಷಕರು ಮಕ್ಕಳಲ್ಲಿ ಶಿಸ್ತು ಸಂಸ್ಕಾರಗಳನ್ನು ಬೆಳೆಸಲು ಶ್ರಮಿಸಬೇಕು. ಅವರ ವರ್ತನೆಗಳೂ ಸಹ ಆದರ್ಶವಾಗಿರಬೇಕು. ನುಡಿಯಲ್ಲೊಂದು ನಡೆಯಲ್ಲೊಂದು ವರ್ತನೆ ಇದ್ದರೆ ಮಕ್ಕಳು ಪೋಷಕರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಹಾಗಾಗಿ ಪೋಷಕರು ಸದಾ ಎಚ್ಚರಿಕೆಯಿಂದಿರಬೇಕು ಎಂದು ನುಡಿದರು. ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಶಾಲೆಗಳಲ್ಲಿ ಶಿಕ್ಷಕರು ರೂಪಿಸಬೇಕು ಎಂದರು.

ಗ್ರಾಮಾಂತರ ಪ್ರದೇಶದ ಶಾಲೆಗಳೂ ಸಹ ನಗರ ಪ್ರದೇಶದ ಶಾಲೆಗಳಿಗೆ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿವೆ.

ಇದಕ್ಕೆ ಸೂಕ್ತ ವಾತಾವರಣ ಹಾಗೂ ಅವಕಾಶಗಳನ್ನು ಕಲ್ಪಿಸಬೇಕು ಎಂದರು.
ಜಯಶ್ರೀ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಪಿ.ಶಂಕರ್ ಕುಮಾರ್, ಲೋಕನಾಥ್, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಎನ್.ಮೂರ್ತಿ ಕುಮಾರ್, ಪುರಸಭಾ ಮಾಜಿ ಸದಸ್ಯೆ ಜಯಶ್ರೀ ನಂಜುಂಡಪ್ಪ, ಮತ್ತಿತರರು ಹಾಜರಿದ್ದರು.

ಕಾರ್ಮಿಕನ ಸಾವು: ಪ್ರತಿಭಟನೆ
ದೊಡ್ಡಬಳ್ಳಾಪುರ: ಒಳಚರಂಡಿ ಕಾಮಗಾರಿ ವೇಳೆ ಬಂಡೆಯೊಂದನ್ನು ಸಿಡಿಸಲು ಇಟ್ಟ ಸಿಡಿಮದ್ದಿನಿಂದಾಗಿ ಮಣ್ಣು ಕುಸಿದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ತಿಪ್ಪಾಪುರ ರಸ್ತೆಯಲ್ಲಿ ಶುಕ್ರವಾರ ಮಧ್ಯ ರಾತ್ರಿ ನಡೆದಿದೆ.

ಮೃತಪಟ್ಟವರನ್ನು ನಗರದ ಶಾಂತಿ ನಗರದ ನಿವಾಸಿ ಉಗ್ರಪ್ಪ(25) ಎಂದು ಗುರುತಿಸಲಾಗಿದೆ. ಒಳಚರಂಡಿ ಕಾಲುವೆಯಲ್ಲಿ ಬಂಡೆ ಕಲ್ಲಿಗೆ ಸ್ಫೋಟಕ ಇಟ್ಟು ಹೊರಬರುವ ಸಂದರ್ಭ ಕ್ಷಣಾರ್ಧದಲ್ಲಿ ಮಣ್ಣು ಕುಸಿದು, ಆತ ಹೊರಬರಲಾರದೇ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

ನಿಯಮಬಾಹಿರವಾಗಿ ಸ್ಫೋಟಕ ಬಳಕೆ ರಾತ್ರಿ ವೇಳೆ ಕಾರ್ಮಿಕರ ಕೆಲಸ ಮಾಡಿಸಿರುವುದು, ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ ಇರುವುದು ಘಟನೆಗೆ ಕಾರಣವಾಗಿದೆ. ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮೃತನ ಸಂಬಂಧಿಗಳು ಆಗ್ರಹಿಸಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರತಿಭಟನೆ: ಉಗ್ರಪ್ಪನ ಸಾವಿಗೆ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣವಾಗಿದ್ದು, ಕೂಡಲೇ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಕಂಪನಿ ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಿ ಮೃತರ ಸಂಬಂಧಿಗಳು ಹಾಗೂ ಸಾರ್ವಜನಿಕರು ನಗರದ ಸೋಮೇಶ್ವರ ಬಡಾವಣೆಯಲ್ಲಿರುವ ಕಂಪೆನಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಉಗ್ರಪ್ಪನಿಗೆ ಪತ್ನಿ ಹಾಗೂ ಹೆಣ್ಣು ಮಗುವಿದ್ದು, ತನ್ನ ಮಾವನ ಮನೆಯಲ್ಲಿ ವಾಸ ಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದ. ಈಗ ಈತನ ಹೆಂಡತಿ ಮತ್ತು ಮಗುವಿನ ಭವಿಷ್ಯಕ್ಕಾಗಿ ಕಂಪನಿಯವರು ಪರಿಹಾರ ನೀಡಬೇಕು. ಅಲ್ಲಿಯವರೆಗೂ ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದು ಮೃತನ ಸಂಬಂಧಿಗಳು ಶವ ಪರೀಕ್ಷೆ ಕಟ್ಟಡದ ಬಳಿ ಬಂದು ಪಟ್ಟು ಹಿಡಿದರು. ರಾತ್ರಿ ವೇಳೆ ಕೆಲಸ ಮಾಡಿಸಿಕೊಂಡು ಕಾರ್ಮಿಕನ ಸಾವಿಗೆ ಕಾರಣರಾದ ಗುತ್ತಿಗೆದಾರರು, ಮೇಲ್ವಿಚಾರಕರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT