ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪ್ರಾಣಕ್ಕೆ ಎರವಾದ ತಪ್ಪು ಚಿಕಿತ್ಸೆ

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಪಟ್ನಾ: ಬಿಸಿಯೂಟ ಸೇವಿಸಿದ ನಂತರ ವಾಂತಿ ಮತ್ತು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಿಹಾರದ ಸರನ್ ಜಿಲ್ಲೆಯ ಮಸರ್‌ಖಾ ಶಾಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಅಚಾತುರ್ಯದಿಂದ ತಪ್ಪು ಚಿಕಿತ್ಸೆ ನೀಡಿದ್ದೇ ಸಾವಿಗೆ ಕಾರಣವಾಯಿತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಕೀಟನಾಶಕ ಬೆರೆತಿದ್ದ ಆಹಾರ ಸೇವಿಸಿ ಅಸ್ವಸ್ಥರಾದ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದಾಗ ಅಲ್ಲಿಯ ವೈದ್ಯರು ಮಕ್ಕಳು ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ತಪ್ಪಾಗಿ ಗ್ರಹಿಸಿ ತಪ್ಪು ಚಿಕಿತ್ಸೆ ನೀಡಿದ್ದಾರೆ. ಇದು ಮಕ್ಕಳ ಪ್ರಾಣಕ್ಕೆ ಎರವಾಯಿತು ಎನ್ನಲಾಗಿದೆ.

ವಿಷಯುಕ್ತ ಆಹಾರ ಸೇವಿಸಿದ್ದ ಮಕ್ಕಳಿಗೆ ವೈದ್ಯರು ವಾಂತಿ ಮಾಡಿಸುವ ಔಷಧಿ ನೀಡುವ ಬದಲು ವಾಂತಿ, ಭೇದಿ ನಿಲ್ಲುವ ಔಷಧಿ ನೀಡಿದ್ದಾರೆ. ಇದರಿಂದ ವಿಷ ಹೊಟ್ಟೆಯಲ್ಲಿಯೇ ಉಳಿದು ಆರೋಗ್ಯ ಉಲ್ಬಣಿಸಿದೆ. ಒಂದು ವೇಳೆ ಮಕ್ಕಳಿಗೆ ವಾಂತಿ ಮಾಡಿಸಿದ್ದರೆ ವಿಷ ಹೊರ ಹೋಗಿ ಅವರು ಬದುಕುಳಿಯುವ ಸಾಧ್ಯತೆ ಇತ್ತು ಎಂದು ಹೆಸರು ಹೇಳಲು ಇಚ್ಛಿಸದ ಮಕ್ಕಳ ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

`ಆ್ಯಂಟಿಎಮೆಟಿಕ್' ವಾಂತಿ ಮತ್ತು ಭೇದಿಗೆ ಪ್ರಭಾವಕಾರಿ ಔಷಧ. ಆದರೆ, ಇದನ್ನು ವಿಷಯುಕ್ತ ಆಹಾರ ಸೇವಿಸಿದ ಮಕ್ಕಳಿಗೆ ನೀಡಲಾಗಿದೆ. ಈ ಅಚಾತುರ್ಯ ತಡವಾಗಿ ವೈದ್ಯರ ಗಮನಕ್ಕೆ ಬಂದಿದೆ. ತಕ್ಷಣ ಅಡ್ಡ ಪರಿಣಾಮ ತಡೆಯಲು `ಅಟ್ರೋಪಿನ್' ಎಂಬ ಮದ್ದು ನೀಡಲಾಯಿತು ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ಒಪ್ಪಿಕೊಂಡಿದ್ದಾರೆ. ಆದರೆ, ಆ ವೇಳೆಗಾಗಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ವಿಷ ರಕ್ತದ ಮೂಲಕ ಮೈತುಂಬಾ ಹರಡಿ ಹೋಗಿತ್ತು. ಹೀಗಾಗಿ ಮದ್ದು ಯಾವುದೇ ಪರಿಣಾಮ ಬೀರಲಿಲ್ಲ. ಮಕ್ಕಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು ಎಂದು ಆ ದಿನ ನಡೆದ ವಾಸ್ತವ ಸ್ಥಿತಿಯನ್ನು ವೈದ್ಯರು ಬಿಚ್ಚಿಟ್ಟಿದ್ದಾರೆ.

ಅಮಾನತು: ಈ ನಡುವೆ ಬಿಹಾರ್ ಸರ್ಕಾರ ಭಾನುವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿಸಿಯೂಟ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದ ಸತ್ಯೇಂದ್ರ ಕುಮಾರ್ ಸಿಂಗ್ ಅವರನ್ನು ಅಮಾನತುಗೊಳಿಸಿದೆ.

ಆಸ್ತಿ ಮುಟ್ಟುಗೋಲು?: ಮಧ್ಯಾಹ್ನದ ಬಿಸಿಯೂಟ ಸೇವಿಸಿ 23 ಮಕ್ಕಳು ಸಾವನ್ನಪ್ಪಿರುವ ಪ್ರಕರಣ ನಡೆದು ಆರು ದಿನಗಳಾದರೂ ಶಾಲೆ ಮುಖ್ಯ ಶಿಕ್ಷಕಿ ಮತ್ತು ಆತನ ಪತಿ ಇನ್ನೂ ನಾಪತ್ರೆಯಾಗಿದ್ದಾರೆ. ಆದರೆ, ಕಣ್ಮರೆಯಾಗಿರುವ ಈ ಇಬ್ಬರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಸೋಮವಾರ ನ್ಯಾಯಾಲಯದ ಅನುಮತಿ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.

`ಮಾಹಿತಿ ಮೇರೆಗೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದರೂ ತಲೆಮರೆಸಿಕೊಂಡಿರುವ ಶಾಲೆ ಮುಖ್ಯ ಶಿಕ್ಷಕಿ ಮೀನಾ ದೇವಿ ಮತ್ತು ಆತನ ಪತಿ ಅರ್ಜುನ್ ರಾಯ್‌ನನ್ನು ಬಂಧಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸೋಮವಾರ ನ್ಯಾಯಾಲಯದ ಅನುಮತಿ ಕೋರಲಾಗುವುದು' ಎಂದು ಸರನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜೀತ್ ಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT