ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮನಸೆಳೆದ ಲಲಿತ ಕಲಾ ಶಿಬಿರ

Last Updated 15 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ಶಿವಮೊಗ್ಗ: ಕುಂಚದಲ್ಲಿ ಅರಳಿದ ಕತ್ತಲಾದ ಕರ್ನಾಟಕದ ಚಿತ್ರಣ, ಸ್ವಚ್ಛಂದವಾಗಿ ವಿಹರಿಸುತ್ತಿರುವ ಜಿಂಕೆ, ಪೇಪರ್ ಬ್ಯಾಗ್‌ಗಳಲ್ಲಿನ ಪರಿಸರ ಸ್ನೇಹಿ ಘೋಷಣೆ, ಗ್ರಾಮೀಣ ಜನಪದರ ಜೀವನಶೈಲಿ ನೆನಪಿಸುವ ಮಣ್ಣಿನ ಪಿಂಗಾಣಿ, ಅದರಲ್ಲಿ ಅರಳಿದ ಹಳ್ಳಿಹೈದರು, ದೇವರ ಚಿತ್ರಣ. ತೂಗು ಹಾಕಿದ ಬಾಗಿಲ ತೋರಣ.

ನಗರದ ಕಸ್ತೂರ ಬಾ ಬಾಲಿಕಾ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ಅ. 10ರಿಂದ 15ರವರೆಗೆ ಹಮ್ಮಿಕೊಂಡಿರುವ `ದಸರಾ ಲಲಿತ ಕಲಾ ಶಿಬಿರ~ದಲ್ಲಿ ವಿವಿಧ ಕಲಾವಿದರ ಕಲ್ಪನೆಯಲ್ಲಿ ಅರಳಿದ ಚಿತ್ರವಸ್ತುಗಳಿವು.

ಮಕ್ಕಳಲ್ಲಿನ ಪ್ರತಿಭೆಯನ್ನು ಅಭಿವ್ಯಕ್ತಿಸುವ, ಕಲಾಸಕ್ತಿ ಬೆಳೆಸುವ, ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷದಂತೆ ಈ ವರ್ಷವು ಎನ್‌ಇಎಸ್ ಸಂಸ್ಥೆ ಆಶ್ರಯದ  ವಿವಿಧ ಪ್ರೌಢಶಾಲೆಗಳ 65 ವಿದ್ಯಾರ್ಥಿ ಕಲಾವಿದರೂ ಈ ದಸರಾ ಲಲಿತಕಲಾ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಇಲ್ಲಿ ಮಕ್ಕಳಿಗಾಗಿ ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ, ಬೊಂಬೆ ತಯಾರಿಕೆ, ಮಂಟಪ ತಯಾರಿಕೆ, ಹಾರಗಳ ತಯಾರಿಕೆ, ಸಂಗೀತ ಕಲೆ ಹಾಗೂ ನಾಟಕ ಕಲೆಗಳ ಬಗ್ಗೆ ತರಬೇತಿ ನೀಡುವುದರ ಜತೆಗೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಬೆಳೆಸುವ ಕೆಲಸ ಕೂಡ ನಡೆದಿದೆ ಎನ್ನುತ್ತಾರೆ ಎನ್‌ಇಎಸ್‌ನ ಕರಕುಶಲ ಶಿಕ್ಷಕ ಬಸವರಾಜ್.

ಆಧುನಿಕ ಯುಗದಲ್ಲಿಯೂ ಮಣ್ಣಿನಲ್ಲಿ ಮೂಡಿದ ಗೃಹಬಳಕೆಯ ಅಲಂಕಾರಿಕ ಮಡಿಕೆ, ಪಿಂಗಾಣಿಗಳಲ್ಲಿ ಮೂಡಿದ ಗ್ರಾಮೀಣ ಭಾಗದ ಜನತೆಯ ದೇವರು, ಜೀವನಶೈಲಿಯ ಚಿತ್ರಗಳು, ನಿರುಪಯುಕ್ತ ವಸ್ತುಗಳಲ್ಲಿ ಅರಳಿದ ಬಾಗಿಲ ತೋರಣ, ಹತ್ತಿಯಿಂದ ತಯಾರಾದ ವಿವಿಧ ಪ್ರಾಣಿಪಕ್ಷಿಗಳು, ಕೈಗಾರಿಕಾ ಕಾರ್ಖಾನೆಗಳಿಂದ ಆಗುವ ದುಷ್ಪರಿಣಾಮ ತಿಳಿಸುವ ಚಿತ್ರ ಘೋಷಣೆಗಳು ಮಕ್ಕಳ ಕುಶಲತೆಗೆ ಹಿಡಿದ ಕೈಗನ್ನಡಿಯಾಗಿದ್ದವು.

ಲಲಿತ ಕಲಾ ಶಿಬಿರದಲ್ಲಿ ಚಿತ್ರಕಲೆ ಬಗ್ಗೆ ಟಿ.ವಿ. ಸುರೇಶ್, ಕರಕುಶಲ ಕಲೆ ಬಗ್ಗೆ ವಾಸವಿ ಪ್ರಕಾಶ್, ಕಲ್ಪನಾ ಆರ್.ಪ್ರಸಾದ್, ಶೈಲಜಾ ಸಿ. ಕುಬ್ಸದ್, ಕಾತ್ಯಾಯಿನಿ ರಂಗನಾಥ್, ಸಬೀನಾ ಕ್ಲಾರಬ್ರಿಟೋ, ಉಷಾ, ಶಂಕರಗೌಡ್ರು, ಎ.ಸಿ. ಹರೀಶ್ ಕುಮಾರ್ ಹಾಗೂ ಜೇಡಿ ಮಣ್ಣಿನ ಕಲೆ ಬಗ್ಗೆ ಪರಮೇಶ್ವರಪ್ಪ, ಎಸ್.ಬಿ. ರಾಜೇಶ್ವರಿ. ಸಂಗೀತ ಕಲೆ ಬಗ್ಗೆ ಕೆ. ಗಾನಸರಸ್ವತಿ, ದಾಕ್ಷಾಯಣಿ, ಎನ್. ವಿಜೇಂದ್ರ ಮತ್ತು ನಾಟಕ ಕಲೆ ಬಿ.ಆರ್. ರೇಣುಕಪ್ಪ, ಎನ್.ಎಸ್. ಸುಧೀಂದ್ರರಾವ್ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿದರು ಎನ್ನುತ್ತಾರೆ ಶಿಬಿರದ ಸಂಚಾಲಕ ಪ್ರದೀಪ್‌ಕುಮಾರ್ ರಾಯ್ಕರ್.

ಶಿಬಿರಕ್ಕೆ ಜಿಲ್ಲೆಯ ಕೋಣಂದೂರು, ಭದ್ರಾವತಿ, ಕುಂಸಿ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಲೆಗಳಿಂದ ಆಯ್ದ ಆಸಕ್ತ ಮಕ್ಕಳು ಇಲ್ಲಿ ಪಾಲ್ಗೊಂಡಿದ್ದಾರೆ ಎಂಬ ವಿವರಣೆ ಕಸ್ತೂರ ಬಾ ಕಾಲೇಜಿನ ಉಪಪ್ರಾಂಶುಪಾರಾದ ವಾಣಿ ಅವರದ್ದು.


ಶಿಬಿರದ ಸಮಾರೋಪ ಅ. 15ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಈ ಅವಧಿಯಲ್ಲಿ ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳು ತಯಾರಿಸಿದ ವಿವಿಧ ಕರಕುಶಲ ವಸ್ತುಗಳ ಹಾಗೂ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT