ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮುಂದೆ ಬಯಲಾದ ಪವಾಡ ರಹಸ್ಯ

Last Updated 22 ಜನವರಿ 2013, 10:32 IST
ಅಕ್ಷರ ಗಾತ್ರ

ಕುಶಾಲನಗರ: ಇಲ್ಲಿನ ರೈತ ಭವನದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಎನ್.ಮಹಾದೇವಪ್ಪ ಹಾಗೂ ವೈಜಯಂತಿ ಅವರು `ಪವಾಡ ರಹಸ್ಯ ಬಯಲು' ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯಾರ್ಥಿಗಳು ಸಾಕಷ್ಟು ಕುತೂಹಲದಿಂದ ವೀಕ್ಷಿಸಿ, ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ನೀರಿನಲ್ಲಿ ದೀಪ ಉರಿಸುವುದು, ಮೈಗೆ ಬೆಂಕಿ ತಗುಲಿಸಿಕೊಳ್ಳುವುದು, ತೆಂಗಿನಕಾಯಿ ಮೇಲೆ ನೀರು ಸುರಿಯುವ ಮೂಲಕ ಬೆಂಕಿ ಹಚ್ಚುವುದು, ಹೀಗೆ ವಿವಿಧ `ಆಟ'ಗಳನ್ನು ತೋರಿಸಿ ಹಳ್ಳಿಗಾಡಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತದೆ. ಆದರೆ, ಇಂತಹ ಹುಚ್ಚಾಟಗಳ ಹಿಂದೆ ವಿಜ್ಞಾನ ಅಡಗಿದೆ ಎನ್ನುವುದನ್ನು ಪಾಂಡವಪುರದ ವಿಜ್ಞಾನ ಕೇಂದ್ರದ ತಂಡವು ಬಯಲು ಮಾಡಿತು.

ಇಲ್ಲಿನ ರೈತ ಭವನದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಎನ್. ಮಹಾದೇವಪ್ಪ, ಕೃಷ್ಣೇಗೌಡ ಹಾಗೂ ವೈಜಯಂತಿ ಅವರು ಇಂತಹ ಹಲವು ಪ್ರಯೋಗಗಳನ್ನು ತೋರಿಸಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಮಹತ್ವವನ್ನು ಸಾರಿದರು.

ಪ್ರಯೋಗ 1: ನೀರಿನಲ್ಲಿ ಬೆಳಗಿದ ದೀಪ !
ಇದರ ಹಿಂದಿರುವ ವಿಜ್ಞಾನದ ಅಂಶ ಮೇಣದ ಬತ್ತಿಯನ್ನು ದ್ರವರೂಪಕ್ಕೆ ತಂದು ಅದರೊಳಗೆ ದಾರಹಾಕಿ ಒಣಗಿಸಿ ಇಟ್ಟುಕೊಳ್ಳುವುದು. ನಂತರ ನೀರಿನಲ್ಲಿ ಹಾಕಿ ಈ ದಾರಕ್ಕೆ ಬೆಂಕಿ ಹಚ್ಚುವುದು. ದಾರದಲ್ಲಿರುವ ಮೇಣದ ಸಹಾಯದಿಂದ ಬೆಂಕಿ ಉರಿಯುತ್ತದೆ. ಆದರೆ, ನೋಡುಗರಿಗೆ ನೀರಿನಿಂದಲೇ ಬೆಂಕಿ ಉರಿದಂತೆ ಭಾಸವಾಗುತ್ತದೆ.

ಪ್ರಯೋಗ 2: ಬೆಂಕಿ ಹಚ್ಚಿದರೂ ಸುಡದ ಮೈ !
ಇದರ ಹಿಂದಿರುವ ವಿಜ್ಞಾನ- ಕನಿಷ್ಠ 3 ಸೆಕೆಂಡ್‌ವರೆಗೆ ಸತತವಾಗಿ ಚರ್ಮದೊಂದಿಗೆ ಬೆಂಕಿ ಸಂಪರ್ಕವಿದ್ದರೆ ಮಾತ್ರ ಚರ್ಮ ಸುಡುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು `ಪವಾಡ ಪುರುಷರು' ಬೆಂಕಿಯನ್ನು ಆಚೀಚೆ ಸತತವಾಗಿ ಚಲಿಸುವಂತೆ ನೋಡಿಕೊಳ್ಳುತ್ತಾರೆ. ಇದರಿಂದ ಚರ್ಮ ಸುಡುವುದಿಲ್ಲ. ಆದರೆ, ನೋಡುಗರು ಇವರು ಪವಾಡ ಪುರುಷ ಇರುವುದರಿಂದಲೇ ಬೆಂಕಿ ಸುಡುತ್ತಿಲ್ಲ ಎಂದು ನಂಬಿ ಬಿಡುತ್ತಾರೆ.

ಪ್ರಯೋಗ 3: ನೀರಿನಿಂದ ಸುಟ್ಟ ತೆಂಗಿನಕಾಯಿ !
ವೈಜ್ಞಾನಿಕ ಸತ್ಯ- ತೆಂಗಿನಕಾಯಿ ಚಿಪ್ಪಿನೊಳಗೆ ಸೋಡಿಯಂ ಅನ್ನು ಹುದುಗಿಸಿಟ್ಟು ಅದರ ಮೇಲೆ ನೀರು ಹಾಕಿದರೆ ಅದು ರಾಸಾಯನಿಕ ಬದಲಾವಣೆಗೊಳಗಾಗಿ ಬೆಂಕಿಗೆ ಆಹುತಿಯಾಗುತ್ತದೆ.

ಪ್ರಯೋಗ 4: ನೀರಿನಿಂದಲೇ ಹೊತ್ತಿದ ಬೆಂಕಿ !
ವಿಜ್ಞಾನ ಹೇಳುವುದು- ಕಾಗದದಲ್ಲಿ ಪೊಟ್ಯಾಷಿಯಂ ಪರ್ಮಾಂಗನೆಟ್ ಎನ್ನುವ ರಾಸಾಯನಿಕವನ್ನು ಇರಿಸಲಾಗುತ್ತದೆ. ನಂತರ ಅದರ ಮೇಲೆ ಗ್ಲಿಸರಿನ್ (ನೀರಿನ ಆಕಾರದಲ್ಲಿರುತ್ತದೆ) ಸುರಿದಾಗ, ಇವೆರಡೂ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗಿ ಬೆಂಕಿ ಹತ್ತಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT