ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲೆ ದೌರ್ಜನ್ಯ ತಡೆಗೆ ಅಭಿಯಾನ

Last Updated 17 ಸೆಪ್ಟೆಂಬರ್ 2014, 20:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದರೂ ಸುದ್ದಿಯಾಗದೆ ಮುಚ್ಚಿ­ಹೋಗುತ್ತಿರು­ವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಲು ಯೋಜನೆ ರೂಪಿಸಿದೆ.

ಸಭ್ಯ ಸ್ಪರ್ಶ ಮತ್ತು ಅಸಭ್ಯ ಸ್ಪರ್ಶದ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುವ ಜೊತೆಗೆ ಅಂತಹ ಅನುಭವವಾದ ಸಂದರ್ಭದಲ್ಲಿ ಖುದ್ದಾಗಿ ಹೇಳಿಕೊಳ್ಳ­ಲಾಗದಿದ್ದರೆ ಲಿಖಿತ ರೂಪದಲ್ಲಾದರೂ ಅದನ್ನು ದಾಖಲಿಸುವುದಕ್ಕೆ ಅವಕಾಶ ಒದಗಿಸಲು ಚಿಂತಿಸಲಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಾನವ ಸಂಪನ್ಮೂಲ ಇಲಾಖೆಯ ಸಹ­ಯೋಗ­ದಲ್ಲಿ ಈ ಯೋಜನೆಯನ್ನು ದೇಶದಾ­ದ್ಯಂತ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲಿದೆ.

‘ಸಭ್ಯ ಮತ್ತು ಅಸಭ್ಯ ಸ್ಪರ್ಶದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸ­ಲಾಗು­ವುದು. ಸರ್ಕಾರೇತರ ಸಂಘ ಸಂಸ್ಥೆಗಳ (ಎನ್‌ಜಿಒ) ಸಹಕಾರದಲ್ಲಿ ಈ ಯೋಜ­ನೆ­ಯನ್ನು ಜಾರಿಗೊಳಿಸ­ಲಾಗುವುದು. ಈ ಸಂಬಂಧ ಒಂದು ಎನ್‌ಜಿಒ ಜತೆ ಮಾತುಕತೆ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಬುಧವಾರ ತಿಳಿಸಿದರು.

ಭಾರತದಲ್ಲಿ ಮಕ್ಕಳ ದೌರ್ಜನ್ಯದ ಬಹುಪಾಲು ಪ್ರಕರಣಗಳು ಸುದ್ದಿ­ಯಾಗುವುದೇ ಇಲ್ಲ. ಸಾಮಾಜಿಕ ಕಳಂಕದ ಆತಂಕ ಹಾಗೂ ಸರ್ಕಾರಿ ಸಂಸ್ಥೆಗಳ ಮೇಲಿನ ಅಪನಂಬಿಕೆ ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.

ವರ್ಷಕ್ಕೆ 7200 ಪ್ರಕರಣ: ಯುನಿಸೆಫ್‌ ಪ್ರಕಾರ, ಭಾರತದಲ್ಲಿ ವರದಿಯಾಗುವ ತಲಾ ಮೂರು ಅತ್ಯಾಚಾರ ಪ್ರಕರಣ­ಗಳಲ್ಲಿ ಒಂದು ಮಕ್ಕಳ ಮೇಲೆ ನಡೆ­ದಿರುತ್ತದೆ. ಪ್ರತಿ­ವರ್ಷ ದೇಶದಲ್ಲಿ ಹಸುಳೆಗಳೂ ಸೇರಿ­ದಂತೆ 7,200ಕ್ಕೂ ಹೆಚ್ಚು ಮಕ್ಕಳು ಅತ್ಯಾಚಾರಕ್ಕೊಳ­ಗಾಗುತ್ತಾರೆ.

ಹೆಚ್ಚಿನ ಮಕ್ಕಳಿಗೆ ಸಭ್ಯ ಮತ್ತು ಅಸಭ್ಯ ಸ್ಪರ್ಶದ ಬಗ್ಗೆ ಜ್ಞಾನವೇ ಇಲ್ಲ. ಹೀಗಾಗಿ ಮಕ್ಕಳಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿ­ಸುವ ಪ್ರಯತ್ನ ಆಗಬೇಕಿದೆ.  ಯೋಜನೆ­ಯನ್ನು ಕಾರ್ಯಗತ­ಗೊಳಿಸಲು ಶಾಲೆಗಳನ್ನು  ತಲುಪುವ ಬಗೆ ಹೇಗೆ ಎಂಬ ಬಗ್ಗೆ ಮಾನವ ಸಂಪನ್ಮೂಲ ಇಲಾಖೆಯ ಸಹಯೋಗದಲ್ಲಿ ಚಿಂತನೆ ನಡೆಸಲಾಗುವುದು ಎಂದು ಮೇನಕಾ ಗಾಂಧಿ ತಿಳಿಸಿದರು.

ತಮಗಾದ ಕೆಟ್ಟ ಅನುಭವವನ್ನು ಬಾಯಿಬಿಟ್ಟು ಹೇಳಿಕೊಳ್ಳಲಾಗದ ಮಕ್ಕಳು ಲಿಖಿತ ರೂಪದಲ್ಲಿ ಮಾಹಿತಿ ನೀಡುವ ಅವಕಾಶ ಈ ಯೋಜನೆ­ಯಲ್ಲಿರುತ್ತದೆ. ಬಹುತೇಕ ದೈಹಿಕ ದೌರ್ಜನ್ಯ ಘಟನೆಗಳು ದಾಖಲಾಗು­ವುದೇ ಇಲ್ಲ. ಒಟ್ಟಿನಲ್ಲಿ ತಮ್ಮ ಮೇಲಾ­ಗುವ ಅಸಭ್ಯ ನಡವಳಿಕೆಯ ಬಗ್ಗೆ ಮಕ್ಕಳು ಹೇಳಿಕೊಳ್ಳುವಂತಾಗಬೇಕು ಎಂಬುದೇ ಅಭಿಯಾನದ ಉದ್ದೇಶ ಎಂದು ಮೇನಕಾ ವಿವರಿಸಿದರು.

ಜಾಗೃತಿ ಅಭಿಯಾನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ನಾಟಕ ಹಾಗೂ ಚಲನಚಿತ್ರಗಳನ್ನು ಪ್ರದರ್ಶಿಸಿ  ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಜನರಲ್ಲಿ  ತಿಳಿವಳಿಕೆ ಮೂಡಿಸಲಾಗುವುದು. ಅಲ್ಲದೆ ಪ್ರತಿ ಮನೆಗೂ ಭೇಟಿ ನೀಡಿ ಮಕ್ಕಳಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆಯೇ ಹಾಗೂ ಆರೋಗ್ಯಕರ ವಾತಾವರಣದಲ್ಲಿ ಅವರು ಬೆಳೆಯುತ್ತಿದ್ದಾರೆಯೇ ಎಂಬು­ದನ್ನು ತಪಾಸಣೆ ನಡೆಸಲು ತಮ್ಮ ಸಚಿವಾ­ಲಯದಿಂದ ಸಮಿತಿಗಳನ್ನು ರಚಿಸ­ಲಾಗುವುದು ಎಂದೂ ಅವರು ಹೇಳಿದರು.

ಮೂರರಲ್ಲೊಂದು ಮಗುವಿಗೆ ದೌರ್ಜನ್ಯ!
ದೇಶದಲ್ಲಿ ಪ್ರತಿ ಮೂರರಲ್ಲಿ ಒಂದು ಮಗುವಿನ ಮೇಲೆ ದೈಹಿಕ ದೌರ್ಜನ್ಯ ನಡೆಯುತ್ತದೆ ಎಂಬ ಆಘಾತಕಾರಿ ಅಂಶವನ್ನು 2007ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಿದ್ಧಪಡಿಸಿದ ವರದಿ ಬಹಿರಂಗಪಡಿಸಿತ್ತು.

ಸಮೀಕ್ಷೆ ನಡೆಸಲಾದ 13  ರಾಜ್ಯಗಳಲ್ಲಿ ಶೇ 69 ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆದಿತ್ತು. ಈ ಪೈಕಿ ಶೇ 54.68 ಮಕ್ಕಳು ಬಾಲಕರು! ಇಷ್ಟೂ ರಾಜ್ಯಗಳಲ್ಲಿ ಮಕ್ಕಳು ಒಂದಿಲ್ಲೊಂದು ರೀತಿಯ ದೈಹಿಕ ಹಿಂಸೆಗೊಳಗಾಗಿದ್ದರು. ಪ್ರತಿಶತ 53.22 ಮಕ್ಕಳ ಮೇಲೆ ಲೈಂಗಿಕ ಹಿಂಸೆ ನಡೆದಿತ್ತು.

ಆಂಧ್ರಪ್ರದೇಶ, ಅಸ್ಸಾಂ, ಬಿಹಾರ ಮತ್ತು ದೆಹಲಿಯಲ್ಲಿ ಅತ್ಯಧಿಕ ಪ್ರಮಾಣ­ದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬ ಅಂಶವೂ ಈ ವರದಿಯಲ್ಲಿ ದಾಖಲಾಗಿದೆ. ಅಲ್ಲದೆ, ಶೇಕಡ 21.90  ಮಕ್ಕಳು ತೀವ್ರ ಪ್ರಮಾಣದಲ್ಲಿಯೂ, ಶೇಕಡ 50.76 ಮಕ್ಕಳು ಸಾಮಾನ್ಯ ಪ್ರಮಾಣದಲ್ಲಿ ಲೈಂಗಿಕ ಹಿಂಸೆ ಅನುಭವಿಸಿರುವುದೂ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT