ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಂಗಭೂಮಿ

ಆ ಮುಖ... ಈ ಮುಖ
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಬೀದಿಗೊಂದು ಬೇಸಿಗೆ ಶಿಬಿರ'ದ ಪರಿಪಾಠ ಶುರುವಾಗಿರುವ ಉದ್ಯಾನ ನಗರಿಯಲ್ಲಿ ಮಕ್ಕಳ ರಂಗಭೂಮಿಯ ಕಾಳಜಿಯನ್ನಿಟ್ಟುಕೊಂಡು ನಡೆಸುವ ಶಿಬಿರಗಳೂ ಹಲವು. ಮಕ್ಕಳ ಮನೋವಿಕಾಸಕ್ಕಾಗಿ ಶುರುವಾದ ಬೇಸಿಗೆ ಶಿಬಿರಗಳಲ್ಲಿ ಇದೀಗ ರಂಗಭೂಮಿಯ ಕುರಿತು ಒಂದಿಷ್ಟು ಪಾಠವೂ ಇರುತ್ತದೆ.

ಬೇಸಿಗೆ ಶಿಬಿರಗಳು ಪೋಷಕರ ಒತ್ತಡ ಕಡಿಮೆಗೊಳಿಸುವ ಸುಲಭ ದಾರಿಗಳಾಗಿ ತೋರುತ್ತಿವೆ ಎನ್ನುವ ವಾದ ಇದೆ. ಅದೇನೇ ಇದ್ದರೂ ರಂಗಭೂಮಿಯ ಕಡೆಗೆ ಪೋಷಕರ, ಮಕ್ಕಳ ಒಲವು ದಟ್ಟವಾಗುತ್ತಿದೆ. `ಜಗತ್ತಿನ ಅತ್ಯಂತ ದೊಡ್ಡ ಮನೋವಿಕಾಸ ಶಿಬಿರ ಮಕ್ಕಳ ರಂಗಭೂಮಿ' ಎನ್ನುತ್ತಾರೆ ರಂಗತಜ್ಞರು. ಈ ಇಂಗಿತವನ್ನು ಶಿಬಿರಗಳು ಸಾಕಾರಗೊಳಿಸಲು ಸೂಕ್ತ ಸಿದ್ಧತೆಯೂ ಬೇಕು.

ಮಕ್ಕಳ ರಂಗಭೂಮಿಗೂ ಉದ್ಯಾನನಗರಿಗೂ ಅಪಾರ ನಂಟು. ಈ ನಂಟನ್ನು ಬೆಸೆಯುವ ಕೊಂಡಿಯಾಗಿ ತಲೆಯೆತ್ತುತ್ತಿವೆ ಬೇಸಿಗೆ ಶಿಬಿರಗಳು.
ಶಿಬಿರವಾಗಿ ರೂಪುತಳೆದಿದ್ದು

ಎಪ್ಪತ್ತರ ದಶಕವದು. ರಂಗದ ಮೇಲೆ ಪ್ರಾಣಿಗಳ ವೇಷ ಧರಿಸಿ, ಕೈಯಲ್ಲಿ ತಮಟೆ ಹಿಡಿದು `ನಾಟ್ಯ ನೋಡ ಬನ್ನಿ' ಎಂದು ಮಕ್ಕಳನ್ನು ಓಲೈಸಿ ರಂಗಭೂಮಿಯ ನಂಟು ಬೆಳೆಸಲು ಅನೇಕ ರಂಗಾಸಕ್ತರು ಶ್ರಮಿಸಿದ ಆ ದಿನಗಳು ಮಕ್ಕಳ ರಂಗಭೂಮಿ ಉದಯಕ್ಕೆ ಭದ್ರ ಬುನಾದಿ ಹಾಕಿದವು.

ಎಪ್ಪತ್ತರ ದಶಕದಲ್ಲಿ ಲಂಡನ್‌ನ ಡೇವಿಡ್ ಹಾರ್ಸ್ ಬ್ರೂ ದಂಪತಿ ಭಾರತದಲ್ಲಿ ಮಕ್ಕಳ ರಂಗ ಚಟುವಟಿಕೆಗಳಿಗೆ ಅಡಿಪಾಯ ಹಾಕಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ಬಾರಿಗೆ ಬಹುದೊಡ್ಡ ಸೆಟ್ ಹಾಕಿ `ಅನ್‌ಗ್ರೇಟ್‌ಫುಲ್ ಮ್ಯಾನ್' ಇಂಗ್ಲಿಷ್ ನಾಟಕವನ್ನು ಮಕ್ಕಳಿಂದ ಅಭಿನಯಿಸುವ ಮೂಲಕ ಹೊಸ ಸಂಚಲನ ಉಂಟುಮಾಡಿದರು.

`ನ್ಯಾಷನಲ್ ಮಿಡ್ಲ್ ಸ್ಕೂಲ್'ನಲ್ಲಿ ಮಕ್ಕಳಿಗಾಗಿ ನಾಟಕವಾಡಿಸಿದ್ದನ್ನು ಬಿಟ್ಟರೆ ಬೇರಾವ ರಂಗ ಚಟವಟಿಕೆಗಳೂ ಮಕ್ಕಳಿಗಾಗಿ ಮೀಸಲಿರಲಿಲ್ಲ. ಬಹುಶಃ ಮಕ್ಕಳ ರಂಗಭೂಮಿಯನ್ನು ವಿಸ್ತರಿಸಿದ್ದು ಹಾರ್ಸ್ ಬ್ರೂ ಅವರ ಪರಿಶ್ರಮದಿಂದ.

1972ರಲ್ಲಿ ವಿಮಲಾ ರಂಗಾಚಾರ್ ಮಕ್ಕಳ ರಂಗಭೂಮಿ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿ, ಸರ್ಕಾರಿ ಕಚೇರಿಯನ್ನೇ `ಬಾಲಭವನ'ವಾಗಿ ಪರಿವರ್ತಿಸಿದರು. ಆನಂತರ ಮಕ್ಕಳ ರಂಗಭೂಮಿಗೆ ಅರ್ಥಪೂರ್ಣ ಆಯಾಮ ದೊರೆಯಿತು.

ಎನ್.ಎಸ್.ವೆಂಕಟರಾಮ್ ಬಾಲಭವನದ ನಿರ್ದೇಶಕರಾಗಿದ್ದ ಸಮಯದಲ್ಲಿ `ಅನ್‌ಗ್ರೇಟ್‌ಫುಲ್ ಮ್ಯಾನ್' ನಾಟಕವನ್ನು ಕನ್ನಡಕ್ಕೆ ತಂದು (ಅನುವಾದ- ಬಿ. ಚಂದ್ರಶೇಖರ್) `ಅಪಕಾರಿಯ ಕತೆ'ಯಲ್ಲಿ ನೂರು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಂಡು ಮಕ್ಕಳಲ್ಲಿ ರಂಗಭೂಮಿಯತ್ತ ಒಲವು ಮೂಡಿಸಲಾಯಿತು.

ಈ ಹೊತ್ತಿಗಾಗಲೇ ಬಿ.ವಿ.ಕಾರಂತರು ಇವರ ಜೊತೆಗೂಡಿ ಮಕ್ಕಳ ನಾಟಕಗಳಲ್ಲಿ ಸಂಗೀತವನ್ನು ಪರಿಚಯಿಸುವ ಮೂಲಕ ಹೊಸ ಗಾಳಿ ಬೀಸಿದರು.1974ರಲ್ಲಿ `ಬೆನಕ' ಮಕ್ಕಳ ನಾಟಕ ಕೇಂದ್ರ ಆರಂಭಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದರು. ಮಕ್ಕಳ ರಂಗಭೂಮಿಯ ಮಿಂಚು ಹರಿಸಿದ ಕಾರಂತರ ಕನಸುಗಳಿಗೆ ಪತ್ನಿ ಪ್ರೇಮಾ ಕಾರಂತರು ನೀರೆರೆದರು.

ಪ್ರತಿವರ್ಷವೂ ಮಕ್ಕಳು ರಂಗಭೂಮಿಯಲ್ಲಿ ತೊಡಗುವಂತೆ ಮಾಡುವ ಆಲೋಚನೆ ಶುರುವಾಯಿತು. ಅಂದಿನಿಂದಲೇ ಮಕ್ಕಳ ರಂಗಭೂಮಿ ಶಿಬಿರವಾಗಿ ರೂಪು ತಳೆಯಿತು. `ಅಳಿಲು ರಾಮಾಯಣ', `ಆಲಿಬಾಬಾ ಮತ್ತು 40 ಕಳ್ಳರು', `ನಕ್ಕಳಾ ರಾಜಕುಮಾರಿ', `ತಿರುಕನ ಕನಸು', `ತೆನಾಲಿ ರಾಮಕೃಷ್ಣ', `ಕಾಡಿನಲ್ಲಿ ಕತೆ', `ಅಂಚೆ ಮನೆ', `ಪಂಜರ ಶಾಲೆ', `ಚಿರಂಜೀವಿ ಅಶ್ವತ್ಥಾಮ', `ಹಿಮಾನಿ ಮತ್ತು ಏಳು ಜನ ಕುಳ್ಳರು' ಮೊದಲಾದ ನಾಟಕಗಳೆಲ್ಲಾ ಮಕ್ಕಳನ್ನು ಆಕರ್ಷಿಸಿ, ರಂಗಭೂಮಿಯತ್ತ ಎಳೆದುತಂದವು.

ಮಿತಿ-ಸಾಧ್ಯತೆಗಳ ಅನಾವರಣ
ಮಕ್ಕಳಲ್ಲಿರುವ ಮಿತಿ ಮತ್ತು ಸಾಧ್ಯತೆಗಳನ್ನು ಅರ್ಥಮಾಡಿಸಲು ಇರುವ ಅತ್ಯುತ್ತಮ ಅವಕಾಶ ರಂಗಭೂಮಿ. ಧ್ವನಿ, ದೇಹದ ಸಾಮರ್ಥ್ಯ, ಕನ್ನಡ ಭಾಷೆ ಪರಂಪರೆ, ಗಾದೆ, ನುಡಿಗಟ್ಟು ಇವೆಲ್ಲವನ್ನೂ ಸ್ಪಷ್ಟವಾಗಿ ಮಕ್ಕಳು ಮಾತಾಡುವಂತಾಗಬೇಕು. ಆಗ ಮಾತ್ರ ನಾಟಕದ ಸಾರ ಅರಿಯಲು ಸಾಧ್ಯ.

ಮುಂದಿನ ತಲೆಮಾರಿಗೆ ದೇಸಿ ಶಕ್ತಿಯಿಂದ ಸ್ಫೂರ್ತಿ ನೀಡುವ ಕೆಲಸವಾಗಬೇಕಿದೆ. ಯಾವುದೇ ರಂಗಭೂಮಿ ಶಿಬಿರಕ್ಕೆ ಮಕ್ಕಳನ್ನು ಕಳುಹಿಸುವಾಗ ಪೋಷಕರು ಮೊದಲು ಗಮನಿಸಬೇಕಾದುದು `ಗುರು' ಯಾರು ಎಂಬುದನ್ನು. ರಂಗಭೂಮಿ ಮಕ್ಕಳಾಟಿಕೆಯಲ್ಲ, ಬಹಳ ಗಂಭೀರ ಆಲೋಚನೆ ಉಳ್ಳದ್ದು.

ಜಗತ್ತಿನ ಅತಿ ದೊಡ್ಡ ಮನೋವಿಕಾಸ ಶಿಬಿರ. ಬಾಲ್ಯದಿಂದ ರಂಗಭೂಮಿಯಲ್ಲಿ ತೊಡಗಿಕೊಂಡರೆ ಮುಂದೆ ಬಹುದೊಡ್ಡ ಕಲಾವಿದನಾಗಿ ಬೆಳೆಯಲು ಸಾಧ್ಯ. ದೊಡ್ಡವರಾದ ಮೇಲೆ ರಂಗಭೂಮಿಯ ಸೆಳೆತ ಹೊರಟು ಹೋಗುತ್ತದೆ ಎಂದು ಅನೇಕ ರಂಗಕರ್ಮಿಗಳು ಹೇಳುತ್ತಾರೆ.

ನಗರದಲ್ಲಿ ಈಗಲೂ ಮಕ್ಕಳಿಗಾಗಿ ರಂಗಶಿಬಿರಗಳು ನಡೆಯುತ್ತಿವೆ. ಅವುಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಎಂಬುದನ್ನು ಸಾಕಷ್ಟು ವಿವೇಚಿಸಿ ತಂದೆ-ತಾಯಿಯರು ನಿರ್ಧರಿಸಬೇಕು.

ಮನಸ್ಸು ಸದೃಢವಾಗಿರಬೇಕು

ಶೇ 70ರಷ್ಟು ಪೋಷಕರು ತಮ್ಮ ಒತ್ತಡದ ಕಾರಣಕ್ಕೆ ಮಕ್ಕಳನ್ನು ಶಿಬಿರಗಳಿಗೆ ಬಿಟ್ಟು ಹೋಗುತ್ತಾರೆ. ರಂಗಭೂಮಿಯತ್ತ ಒಲವು ಇಲ್ಲದ ಮಕ್ಕಳಲ್ಲೂ ಕೆಲವೊಮ್ಮೆ ನಾವು ಆಸಕ್ತಿ ಮೂಡಿಸಿ ಅದರಲ್ಲೇ ಸಕ್ರಿಯವಾಗಿ ತೊಡಗುವಂತೆ ಮಾಡಿರುವ ಉದಾಹರಣೆಗಳಿವೆ. ಏನೇ ಕಲಿಯಬೇಕೆಂದರೂ ಮನಸ್ಸು ಸದೃಢವಾಗಿರಬೇಕಷ್ಟೆ. ನಾಟಕದ ಜೊತೆಗೆ ಸಂಗೀತ, ನೃತ್ಯಗಳ ಆಸಕ್ತಿಯನ್ನೂ ಮಕ್ಕಳಲ್ಲಿ ಬೆಳೆಸಬೇಕು. ನಾಟಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಸಾಧನ.
-ಮಂಡ್ಯ ರಮೇಶ್, ನಟ (10 ವರ್ಷಗಳಿಂದ ಮೈಸೂರಿನಲ್ಲಿ `ರಜಾ-ಮಜಾ' ಮಕ್ಕಳ ರಂಗಭೂಮಿ ಶಿಬಿರ ನಡೆಸುತ್ತಿದ್ದಾರೆ)

ನಟರನ್ನಾಗಿಸುವ ಭ್ರಮೆ ಇಲ್ಲ

ಮಗು ರಂಗಭೂಮಿ ಶಿಬಿರಕ್ಕೆ ಸೇರಿದ ಕೂಡಲೇ ಉತ್ತಮ ನಟನನ್ನಾಗಿ ಮಾಡುತ್ತೇವೆಂಬ ಭ್ರಮೆಯಂತೂ ಖಂಡಿತ ಇಲ್ಲ. ಆದರೆ ಶಿಬಿರದಲ್ಲಿ ಭಾಗವಹಿಸಿದ ಮಗುವಿನಲ್ಲಿ ಖಂಡಿತ ಮಾನಸಿಕ ಬದಲಾವಣೆ ಕಾಣಬಹುದು. ಕೆಲವರಲ್ಲಿ ಆ ಬದಲಾವಣೆ ಹೆಚ್ಚಿನ ಪ್ರಮಾಣದಲ್ಲಿ, ಕೆಲವರಲ್ಲಿ ಕಡಿಮೆ ಪ್ರಮಾಣದಲ್ಲಿ ಆಗಬಹುದು. ಆದರೆ ಅಲ್ಪ ಮಟ್ಟಿನ ಸಕಾರಾತ್ಮಕ ಬದಲಾವಣೆಯಾಗುವುದಂತೂ ಸತ್ಯ. ಹೆಸರನ್ನು ಹೇಳಲು ಹಿಂಜರಿಯುವ ಮಗು ರಂಗದ ಮೇಲೆ ನಾಟಕದ ಸಂಭಾಷಣೆಯನ್ನು ಅಳುಕಿಲ್ಲದೇ ಹೇಳುವಷ್ಟು ಸಾಮರ್ಥ್ಯವನ್ನು ರಂಗಭೂಮಿ ನೀಡುತ್ತದೆ.

ಶಿಬಿರಕ್ಕೆ ಸೇರುವ ಎಲ್ಲಾ ಮಕ್ಕಳೂ ರಂಗಭೂಮಿಗೆ ಅರ್ಹರಾಗಿರುವುದಿಲ್ಲ. ಆದರೆ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಒರೆಗೆ ಹಚ್ಚುವ, ಅದನ್ನು ತಿದ್ದಿ ತೀಡುವ ಕಾಯಕ ರಂಗಭೂಮಿಯದ್ದು.

ರಂಗಭೂಮಿ ಈಗ ಪ್ರದರ್ಶಕ ಕಲೆಯಾಗಿ ಉಳಿದಿಲ್ಲ. ಅದೂ ಒಂದು ಮಾಧ್ಯಮವಾಗಿದೆ. ಮೊದಲು ಬೇಸಿಗೆ ಶಿಬಿರಗಳನ್ನು ಮಾಡುವ ಸಂಸ್ಥೆಯಾಗಿ ಹುಟ್ಟಿಕೊಂಡ `ವಿಜಯರಂಗ' ಪೋಷಕರ ಒತ್ತಾಯದ ಮೇರೆಗೆ ರಂಗಶಾಲೆಯಾಗಿ ರೂಪುಗೊಂಡಿದೆ.
-ಡಾ.ಕಶ್ಯಪ್ (ವಿಜಯರಂಗ ಬಿಂಬ, ರಂಗಶಿಕ್ಷಣ ಕೇಂದ್ರ)

ಕುಸಿದ ಮಕ್ಕಳ ನಾಟಕಗಳ ಸಂಖ್ಯೆ

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಪ್ರತಿವರ್ಷವೂ 30 ಮಕ್ಕಳ ನಾಟಕಗಳಾಗುತ್ತಿದ್ದವು. ಆದರೆ ಈಗ ಆ ಸಂಖ್ಯೆ ಕ್ಷೀಣಗೊಂಡಿದೆ. ರಂಗಭೂಮಿಯತ್ತ ಮಕ್ಕಳ ಒಲವು ಹೆಚ್ಚಿಸುವ ಅಗತ್ಯವಿದೆ. ಎಲ್ಲಾ ಶಾಲೆಗಳ ಮಕ್ಕಳೂ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು. ಹಾಗಾಗಿ ಪ್ರತಿ ಶಾಲೆಗೂ ಹೋಗಿ ಶಾಲಾ ಶಿಕ್ಷಕರು, ಮಕ್ಕಳಿಗೆ ರಂಗಭೂಮಿಯ ಬಗ್ಗೆ ಅರಿವು ಮೂಡಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಜೂನ್‌ನಲ್ಲಿ ಈ ಕಾರ್ಯ ಆರಂಭಿಸಲಾಗುತ್ತದೆ.
-ಕಟ್ಟೆ ರಾಮಚಂದ್ರ, ಹಿರಿಯ ರಂಗ ನಿರ್ದೇಶಕ

ಬುದ್ಧಿ ಮನಸ್ಸು ಪಕ್ವಗೊಳ್ಳಬೇಕು
ಮಗುವಿನ ಸರ್ವಾಂಗೀಣ ಬೆಳವಣಿಗೆ ಶಿಬಿರದ ಉದ್ದೇಶ. ನಾಟಕದಾಚೆಗೂ ವಿವಿಧ ಕಲಾತ್ಮಕ ಚಟುವಟಿಕೆಗಳಲ್ಲಿ ಅವರನ್ನು ತೊಡಗುವಂತೆ ಮಾಡಲಾಗುತ್ತದೆ. ಕಾರ್ ಮೆಕಾನಿಕ್, ದಿಢೀರ್ ಅಡುಗೆ ಮಾಡುವುದು, ಮಡಿಕೆ- ಕುಡಿಕೆ ತಯಾರಿಸುವುದು, ಮ್ಯಾಜಿಕ್, ವಿಜ್ಞಾನ ಇತರೆಲ್ಲ ವಿಷಯಗಳ ಮೇಲೂ ಬೆಳಕು ಚೆಲ್ಲಲಾಗುತ್ತದೆ.

ಮಗುವಿನ ಬುದ್ಧಿ, ಮನಸ್ಸು ರಂಗಭೂಮಿಯಲ್ಲಿ ಪಕ್ವಗೊಳ್ಳುತ್ತದೆ. ಇದರಲ್ಲಿ ಸಮರ್ಥರಾದ ಮಕ್ಕಳು ರಂಗಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯ. ನಾಟಕವೇ ಅಂತಿಮವಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಾಟಕದ ಜೊತೆಗೆ ಇತರ ಕ್ಷೇತ್ರಗಳಲ್ಲೂ ಅವರು ತೊಡಗಿಸಿಕೊಳ್ಳಬೇಕು. ಶಿಬಿರಕ್ಕೆ ಸೇರಬೇಕೆಂದು ಬರುವ ಮಕ್ಕಳನ್ನೆಲ್ಲಾ ಸೇರಿಸಿಕೊಳ್ಳುವುದಿಲ್ಲ. ಪೋಷಕರು ಹಾಗೂ ಮಗುವನ್ನು ಮಾತನಾಡಿಸಿ ಅವರ ಮನೋಭಾವವನ್ನು ಅರಿತು ಆನಂತರ ಶಿಬಿರಕ್ಕೆ ಸೇರಿಸಿಕೊಳ್ಳಲಾಗುತ್ತದೆ.
-ಸುರೇಂದ್ರ, ಕ್ರಿಯಾತ್ಮಕ ನಿರ್ದೇಶಕ. ರಂಗಶಂಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT