ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಶೈಕ್ಷಣಿಕ ಪ್ರವಾಸ ಪ್ರವೇಶ ಪರೀಕ್ಷೆ

Last Updated 16 ಜುಲೈ 2013, 10:18 IST
ಅಕ್ಷರ ಗಾತ್ರ

ಹರಪನಹಳ್ಳಿ: ಮಕ್ಕಳಲ್ಲಿ ಕಲಿಕೆಯ ಕುರಿತು ಆಸಕ್ತಿ ಕೆರಳಿಸಲು ಹಾಗೂ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಶಿಕ್ಷಣಕ್ಕೆ ಪೂರಕವಾದ ಪ್ರೇಕ್ಷಣಿಯ ಹಾಗೂ ಚಾರಿತ್ರಿಕ ಸ್ಥಳಗಳ ಪ್ರವಾಸಕ್ಕೆ ಆಯ್ಕೆಮಾಡುವ ಹಿನ್ನೆಲೆಯಲ್ಲಿ ಶನಿವಾರ ನಡೆದ ಪ್ರವೇಶ ಪರೀಕ್ಷೆಗಾಗಿ ತಾಲ್ಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಯ 56ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.

ಬೆಂಗಳೂರು ಶಿಕ್ಷಣ ಫೌಂಡೇಷನ್ ಸ್ವಯಂಸೇವಾ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶನಿವಾರ ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರವೇಶ ಪರೀಕ್ಷೆ ನಡೆಯಿತು.

ತಾಲ್ಲೂಕಿನ 30 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದುಕೊಂಡಿರುವ ಶಿಕ್ಷಣ ಫೌಂಡೇಷನ್ ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಶಾಲೆಯ ಮೂಲಸೌಕರ್ಯ ಸೇರಿದಂತೆ ವಿಭಿನ್ನ ಚಟುವಟಿಕೆಗಳ ಮುಖಾಂತರ ಮಕ್ಕಳಲ್ಲಿ ಗುಣಾತ್ಮಾಕ ಶಿಕ್ಷಣ ಒದಗಿಸಲು ಮುಂದಾಗಿದೆ.

ದತ್ತು ಪಡೆದುಕೊಂಡಿರುವ 30 ಶಾಲೆಗಳ ಪೈಕಿ, ಪ್ರತಿ ಶಾಲೆಯಲ್ಲಿ ತಲಾ 10ರಿಂದ 20 ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಉಚಿತವಾಗಿ ದೇಶದ ರಾಜಧಾನಿ ನವದೆಹಲಿಯಲ್ಲಿನ ಪ್ರೇಕ್ಷಣಿಯ ಹಾಗೂ ಐತಿಹಾಸಿಕ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳುತ್ತದೆ.

ಪ್ರವಾಸಕ್ಕೆ ಪ್ರತಿಭಾನ್ವಿತ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಆಯ್ಕೆಮಾಡಲಾಗುತ್ತದೆ ಎಂದು ಫೌಂಡೇಷನ್ ಸಂಯೋಜಕ ಚೌಡಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಜತೆಗೆ, ಆಯ ಶಾಲೆಯ ಇಬ್ಬರೂ ಶಿಕ್ಷಕರಿಗೂ ಪ್ರವಾಸದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೂ ಯಾವುದೇ ರೀತಿಯ ಶುಲ್ಕ ಪಡೆದುಕೊಳ್ಳುವುದಿಲ್ಲ. ಫೌಂಡೇಷನ್‌ನ ಶೈಕ್ಷಣಿಕ ಪ್ರವಾಸ ಯೋಜನೆ ಮಕ್ಕಳಲ್ಲಿ ಆಸಕ್ತಿ ಕೆರಳಿಸಿದೆ.

ಪ್ರವೇಶ ಪರೀಕ್ಷಾ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್.ಜತ್ತಿ ಹಾಗೂ ಕ್ಷೇತ್ರ ಸಮನ್ವಾಯಾಧಿಕಾರಿ ಮಹೇಶ್ ವಿ.ಪೂಜಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT