ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಿನಿಮಾ ಉತ್ಸವ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

`ಏಳು ಮಗು ಶಾಲೆಗೆ ಟೈಮ್ ಆಗ್ತಾ ಇದೆ~ ಎಂದು ಅಮ್ಮ ಮಗುವನ್ನು ಹಾಸಿಗೆಯಿಂದ ಎಬ್ಬಿಸಿ ಶಾಲೆಗೆ ಕಳುಹಿಸುತ್ತಾಳೆ. ಶಾಲೆಯಿಂದ ಬಂದ ಕೂಡಲೇ ಮಕ್ಕಳನ್ನು ಟ್ಯೂಶನ್‌ಗೆ ಕಳುಹಿಸುವ ತರಾತುರಿ. ಅಲ್ಲಿಂದ ಬಂದ ಮಗುವಿಗೆ ಮತ್ತೆ ಹೋಮ್ ವರ್ಕ್...
 
ಹೀಗೆ ದಿನ ಪೂರ್ತಿ ಮಕ್ಕಳನ್ನು ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿರುವ ಪೋಷಕರು ಈ ಎಲ್ಲಾ ಕೆಲಸಗಳಿಗೆ ಕೊಂಚ ಬ್ರೇಕ್ ಹಾಕುವ ಅವಕಾಶ ಬಂದಿದೆ. ಏಕೆಂದರೆ ನಗರದಲ್ಲಿ ಐದು ದಿನ `ಮಕ್ಕಳ ಚಲನಚಿತ್ರೋತ್ಸವ~ ನಡೆಯಲಿದೆ. 

ಚಿಣ್ಣರಿಗಾಗಿ ನಮ್ಮ ಕನ್ನಡದ್ದೇ ಅಲ್ಲದೆ ವಿದೇಶಿ ಚಿತ್ರಗಳು ನಗರದ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಲಭ್ಯ.

ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಚಿತ್ರೋತ್ಸವ ಮುಗಿದಿದ್ದು, ಅದರ ಬೆನ್ನಲೇ `ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆ~ ಸೋಮವಾರದಿಂದ ಶುಕ್ರವಾರದ (ಜ.9ರಿಂದ13) ವರೆಗೆ 7ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಹಮ್ಮಿಕೊಂಡಿದೆ. ಚಿತ್ರೋತ್ಸವದಲ್ಲಿ ಸುಮಾರು 100 ಸಿನಿಮಾಗಳನ್ನು ನೋಡುವ ಅವಕಾಶ. ಚೀನಾ, ನೆದರ್‌ಲೆಂಡ್, ಕೊರಿಯಾ, ಜರ್ಮನಿ, ಫ್ರಾನ್ಸ್, ಶ್ರೀಲಂಕಾ ಸೇರಿದಂತೆ ಇತರೆ ದೇಶಗಳ ಚಿತ್ರಗಳು ಮಕ್ಕಳಿಗೆ ರಸದೌತಣ ನೀಡಲಿವೆ.

ಅವುಗಳಲ್ಲಿ `ಕಿಂಗ್ ಸಿರಿ~ (ಶ್ರೀಲಂಕಾ), `ಇನ್ ಎ ಆರ್ಟ್ ಬೀಟ್~ (ಅಮೆರಿಕ), `ದಿ ಜಾಸ್ಮಿನ್ ಬರ್ಡ್ಸ್~ (ಸಿರಿಯಾ), `ಓನ್ಲಿ~, `ಮೆಡೊ~, `ಫ್ಲೈಟ್ ಆಫ್ ದಿ ಡಕ್ಸ್~ `ದಿ ಲೆಜೆಂಡ್ ಆಫ್ ದಿ 2012~ (ಇರಾನ್), `ದಿ ಥೌಸಂಡ್ ಟೈಮ್ಸ ಸ್ಟ್ರಾಂಗರ್~ (ಸ್ವೀಡನ್) ಚಿತ್ರಗಳು ಮುಖ್ಯವಾಗಿವೆ. ಅಲ್ಲದೇ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳು ಇವೆ. ಉದ್ಘಾಟನಾ ಚಿತ್ರವಾಗಿ ಇರಾನ್‌ನ `ದಿ ಸೌಂಡ್ ಆಫ್ ಮೈ ಫುಟ್~ ಚಿತ್ರ ಪ್ರದರ್ಶನಗೊಳ್ಳಲಿದೆ.

ಈ ಬಾರಿ ಚಿತ್ರೋತ್ಸವದ ವಿಶೇಷವೆಂದರೆ ಪರಿಸರ ಚಿತ್ರೋತ್ಸವ ಆಯೋಜಿಸಿರುವುದು. ಇಲ್ಲಿ ಪರಿಸರ ಸಂಬಂಧಿ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಅದರಲ್ಲೂ ಇರಾನ್ ದೇಶದ ಚಿತ್ರಗಳನ್ನು ಕೇಂದ್ರೀಕರಿಸಲಾಗಿದೆ.  ಪ್ರಚಂಚದಲ್ಲೇ ಮಕ್ಕಳ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡಿ, ಗಂಭೀರವಾಗಿ ಪರಿಗಣಿಸಿ ಚಿತ್ರ ತಯಾರು ಮಾಡುತ್ತಿರುವ ಇರಾನ್‌ನಿಂದ ಕಲಿಯಬೇಕಾದ್ದು ಬಹಳಷ್ಟು ಇದೆ. ಹಾಗಾಗಿ ಇರಾನ್ ಚಿತ್ರಗಳಿಗೆ ಈ ಬಾರಿ ಪ್ರಧಾನ್ಯತೆ ನೀಡಲಾಗಿದೆ ಎನ್ನುತ್ತಾರೆ ಚಿಲ್ಡ್ರನ್ಸ್ ಇಂಡಿಯಾ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡ.

ಮಕ್ಕಳ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾರುಕಟ್ಟೆ ಸಮಸ್ಯೆ ಮತ್ತೊಂದು ಕಡೆ, ಗ್ಲ್ಯಾಮರ್ ಕೊರತೆ, ಮಾಧ್ಯಮಗಳ ಹೊಣೆಗಾರಿಕೆ ಇಲ್ಲದೆ ಮಕ್ಕಳ ಸಿನಿಮಾಗಳು ಹೆಚ್ಚು ಯಶಸ್ವಿಯಾಗುತ್ತಿಲ್ಲ ಎನ್ನುತ್ತಾರೆ ಅವರು. ವರ್ಷದಲ್ಲಿ ಸಾವಿರಾರು ಚಿತ್ರಗಳು ತೆರೆ ಕಾಣುತ್ತವೆ ಅವುಗಳಲ್ಲಿ ಮಕ್ಕಳ ಚಿತ್ರಗಳ ಪಾಲು ಬೆರಳೆಣಿಕೆಯಷ್ಟಿದೆ. ಇದಕ್ಕೆ ಕನ್ನಡ ಚಿತ್ರಗಳೂ ಹೊರತಾಗಿಲ್ಲ. ಈ ಮೂಲಕ ಅರಿವು ಮೂಡಿಸುವ, ಮಕ್ಕಳಿಗೆ ಜಾಗತಿಕ ಪರಿಸರವನ್ನು ಪರಿಚಯಿಸುವ ಉದ್ದೇಶದಿಂದ ಚಿತ್ರೋತ್ಸವ ಆಯೋಜಿಸಲಾಗುತ್ತಿದೆ ಎಂದು ಹೇಳುತ್ತಾರೆ.

ಮಕ್ಕಳಿಗೆ ಅನುಕೂಲವಾಗಲೆಂದು ನಗರದ ನಾನಾ ಚಿತ್ರ ಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಪ್ರಸಕ್ತ ವರ್ಷದಿಂದ ಮಕ್ಕಳ ಚಿತ್ರೋತ್ಸವದಲ್ಲಿ ಸ್ಪರ್ಧೆಯಿದ್ದು, ಮೊದಲ ಅತ್ಯುತ್ತಮ ಚಿತ್ರ, ದ್ವಿತೀಯ ಅತ್ಯುತ್ತಮ ಚಿತ್ರ ಎಂದು ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎನ್ನುತ್ತಾರೆ ಅವರು.

ಬಿ.ರಾಮದಾಸ ನಾಯ್ಡು ನಿರ್ದೇಶನದ `ಹೆಜ್ಜೆಗಳು~, `ಅ ಆ ಇ ಈ~ (ಎನ್.ಆರ್. ನಂಜುಂಡೇಗೌಡ), `ಪುಟಾಣಿ ಪಾರ್ಟಿ~, `ಕಿನ್ನರ ಬಾಲೆ~ `ಗುರುಕುಲ~ ಕನ್ನಡ ಚಿತ್ರಗಳು ಸಹ ಪ್ರರ್ದಶನಗೊಳ್ಳುತ್ತಿವೆ.

ಮಕ್ಕಳ ಸಿನಿಮಾಗಳೆಂದರೆ ಮೂಗು ಮುರಿಯುವ ಮಂದಿಯ ನಡುವೆ ವಿಭಿನ್ನ ನೆಲೆಗಟ್ಟಿನ ಮಕ್ಕಳ ಚಿತ್ರಗಳು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದ್ದು, ಯಶಸ್ವಿಯಾಗಿಯೂ ಹೊರಹೊಮ್ಮುತ್ತಿವೆ ಎಂಬುದಕ್ಕೆ ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳು ಸಾಕ್ಷಿಯಾಗಲಿವೆ. 

ಎಲ್ಲೆಲ್ಲಿ ಪ್ರದರ್ಶನ
ಆವಲಹಳ್ಳಿಯ ವೆಂಕಟೇಶ್ವರ, ಅಜಂತಾ, ಗೋವರ್ಧನ್, ಮಲ್ಲೇಶ್ವರಂನ ಸೇವಾಸದನ, ನವರಂಗ್,ಸುಚಿತ್ರ ಚಿತ್ರಮಂದಿರ, ಬಾಲಭವನ,ಕೈಲಾಶ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಇಂದು ಉದ್ಘಾಟನೆ...
ಸೋಮವಾರ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಂದ ಉದ್ಘಾಟನೆ. ಅತಿಥಿಗಳು: ಸುದೀಪ್, ರಾಗಿಣಿ, ಮಹೇಶ್ ಟೆಂಗಿನಕಾಯಿ, ಜೆ.ಪಿ.ನಾರಾಯಣಸ್ವಾಮಿ, ಮಿತ್ಸುವೊ ತಹಿರ, ಸುಲಫ ಹಿಝಾಜಿ. ಅಧ್ಯಕ್ಷತೆ: ಕೆ.ವಿ.ಚಂದ್ರಶೇಖರ್.
ಸ್ಥಳ: ದೇವರಾಜ ಅರಸ್ ಭವನ, (ಅಂಬೇಡ್ಕರ್ ಭವನ ಹಿಂಭಾಗ), ವಸಂತನಗರ. ಮಧ್ಯಾಹ್ನ 2. ಪಾಸುಗಳಿಗೆ ಚಿಲ್ಡ್ರನ್ಸ್ ಇಂಡಿಯಾ, ಮೊದಲ ಮಹಡಿ, ಮೈಶುಗರ್ ಕಟ್ಟಡ, ಜೆ.ಸಿ. ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT