ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಿನಿಮಾ... ಭಣಭಣ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಪುಟ್ಟೀ, ನಿನ್ನ ಹೆಸರು?
ಸಾಯಿದಾ ಬಾನು.

ಯಾವ ಕ್ಲಾಸು?
ಐದು

ಇಲ್ಲಿ ಬಂದಿದ್ದು?
ಸಿನೆಮಾ ನೋಡೋಕೆ...

ಯಾವ ಸಿನೆಮಾ...
ಗೊತ್ತಿಲ್ಲ.

ಯಾರು ಕರ್ಕೊಂಡ್ ಬಂದ್ರು...
ಮಿಸ್ ಕರ್ಕೊಂಡ್ ಬಂದ್ರು, ಹಾಗೇ ಬಂದೆ...
*
ಮೇಡಂ ನಿಮ್ಮ ಹೆಸ್ರು..?
ನಫೀಸಾ...

ಯಾವುದು ಮಕ್ಕಳ ಚಿತ್ರ?
`ಸರ್ಕಾರದ ಅನುದಾನ ಪಡೆದು ಮಕ್ಕಳ ಚಿತ್ರಗಳ ಉತ್ಸವ ನಡೆಸುತ್ತಿರುವ ನಂಜುಡೇಗೌಡರ ಉದ್ದೇಶಗಳೇನೋ ಅತ್ಯುತ್ತಮವಾದುದು. ಅದಕ್ಕೆ ಬಳಸಿಕೊಳ್ಳುತ್ತಿರುವ ಸಂಪನ್ಮೂಲಗಳು ಮಾತ್ರ ಪರಿಪೂರ್ಣವಾಗಿಲ್ಲ. ಶಿಕ್ಷಣ ಇಲಾಖೆ ಇಲ್ಲವೇ ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗ ಪಡೆದು ಈ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ಮತ್ತಷ್ಟು ಸಫಲವಾಗುತ್ತಿತ್ತು. ಚಿತ್ರ ನೋಡಿದ ಬಳಿಕ ಮಕ್ಕಳಿಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದಾಗ ಮಾತ್ರ ಅದು ಆಕರ್ಷಣೀಯವಾಗುತ್ತದೆ.

ನಾವು ಶಾಂತಿನಿಕೇತನ ಹಾಗೂ ಹೊಸ್ಕೆರೆ ಶಾಲೆಗಳಲ್ಲಿ `ಫಿಲ್ಮ್ ಕ್ಲಬ್~ ಆರಂಭಿಸಿದ್ದು ಪ್ರತಿ ಶನಿವಾರ ಇಲ್ಲಿ ಕನ್ನಡವೂ ಸೇರಿದಂತೆ ಅನ್ಯಭಾಷೆಯ ಮಕ್ಕಳ ಚಿತ್ರಗಳನ್ನು ತೋರಿಸುತ್ತೇವೆ. ಆರಂಭದ ವಾರಗಳಲ್ಲಿ 50ರಷ್ಟಿದ್ದ ಮಕ್ಕಳ ಸಂಖ್ಯೆ ಇದೀಗ 500ಕ್ಕೆ ಏರಿಕೆಯಾಗಿದೆ. ಈ ವಾರದ ಪ್ರದರ್ಶಿಸಿದ ಚಿತ್ರಗಳ ಬಗ್ಗೆ ಮುಂದಿನ ವಾರ ಚರ್ಚೆ ಇಲ್ಲವೇ ಪ್ರಬಂಧ ಸ್ಪರ್ಧೆ ನಡೆಸುತ್ತೇವೆ. ಇದು ಮತ್ತಷ್ಟು ಮಕ್ಕಳ ಪಾಲ್ಗೊಳ್ಳುವಿಕೆಗೆ ನೆರವಾಗುತ್ತದೆ. ಇದು ಚಿತ್ರ ಮಂಡಳಿಯಲ್ಲಿ ಏಕೆ ಸಾಧ್ಯವಿಲ್ಲ?

ಮಕ್ಕಳ ಚಿತ್ರಗಳ ಉದ್ದೇಶ ಮನರಂಜನೆ ಮಾತ್ರವಾಗಬಾರದು. ಮಕ್ಕಳ ಚಿತ್ರಗಳೆಂದರೆ ಯಾವುದು ಎಂಬ ವರ್ಗೀಕರಣ ನಡೆಯಬೇಕು. `ತಾರೇ ಜಮೀನ್ ಪರ್~ ಮಕ್ಕಳ ಚಿತ್ರವೇ? `ನಾಗರ ಹೊಳೆ~ ಚಿತ್ರವೇ? ಎಂಬ ಬಗ್ಗೆ ಮೊದಲು ಚರ್ಚೆ ನಡೆಯಬೇಕು. ಅದರ ಬದಲು ಮುಖ್ಯಮಂತ್ರಿಗಳು ದೀಪ ಹಚ್ಚುವ ನೆಪದಲ್ಲಿ `ನಾಲ್ಕು ಚಿತ್ರಗಳಿಗೆ 25 ಲಕ್ಷ ನೀಡುವೆ~ ಎಂದು ಹೇಳಿಕೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಗಟ್ಟಿತನವಲ್ಲ. ಮಕ್ಕಳ ಚಿತ್ರಗಳು ಯಾವುದೆಂಬ ಗೊಂದಲಕ್ಕೆ ತೆರೆ ಎಳೆಯದೆ ಸಬ್ಸಿಡಿ ನೀಡುವುದು ನೀರಿನಲ್ಲಿ ಮಾಡಿದ ಹೋಮದಂತೆ...
-
ನಿರ್ದೇಶಕ ಬಿ.ಸುರೇಶ್



ಯಾವ ಸಿನೆಮಾ ನೋಡೋಕೆ ಬಂದ್ರಿ?
ಅದೇನೋ ಗೊತ್ತಿಲ್ಲ, ಮಕ್ಕಳ ಸಿನೆಮಾ ಇದೆ, ವಿದ್ಯಾರ್ಥಿಗಳನ್ನು ಕರ್ಕೊಂಡ್ 9 ಗಂಟೆಗೆ ಬಾಲಭವನಕ್ಕೆ ಬನ್ನಿ ಅಂತ ಫೋನ್ ಮಾಡಿದ್ರು. ಅದ್ಕೆ 5ರಿಂದ 7ನೇ ಕ್ಲಾಸ್‌ಮಕ್ಕಳೊಂದಿಗೆ ಬಂದಿದ್ವಿ. ಈಗ ನೋಡಿ 10 ಗಂಟೆ ಹತ್ರ ಆದ್ರೂ ಇನ್ನೂ ಬಾಗಿಲೇ ತೆರೆದಿಲ್ಲ. ನಮ್ಮ ಖರ್ಚಿನಲ್ಲೇ ಮಕ್ಕಳನ್ನು ಶಾಲೆಯಿಂದ ಕರೆ ತಂದಿದ್ದೇವೆ...

ಇದು ಬುಧವಾರ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿ.ಕೆ.ಒ.ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿಯೊಬ್ಬರ ಮಾತು.

ಅದೇ ಸಮಯಕ್ಕೆ ಅಲ್ಲಿಗೆ ಬಂದ ಇನ್ನೊಂದು ಮಕ್ಕಳ ತಂಡವನ್ನು ಪ್ರಶ್ನಿಸಿದಾಗ, ಮಕ್ಕಳ ಚಲನಚಿತ್ರೋತ್ಸವವೇ...ಅದೆಲ್ಲಿ? ಎಂದಿನಿಂದ ನಡೆಯುತ್ತಿದೆ...ಇಲ್ಲ, ನಮಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಶಾಲೆಯಿಂದ ವರ್ಷಕ್ಕೆ ಎರಡು ಬಾರಿ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳುತ್ತೇವೆ. ಅದರ ಭಾಗವಾಗಿ ಬಾಲಭವನದ ಪ್ಲಾನಟೋರಿಯಂ ಹಾಗೂ ಮ್ಯೂಸಿಯಂ ತೋರಿಸಲು ಇಲ್ಲಿ ಭೇಟಿ ನೀಡಿದ್ದೇವೆ. ಇದರ ಹೊರತಾಗಿ ನಮಗೇನೂ ತಿಳಿದಿಲ್ಲ. ಶಾಲೆಗೂ ಈ ಬಗ್ಗೆ ಮಾಹಿತಿ ಇಲ್ಲ ಎಂಬ ಸ್ಪಷ್ಟ ನುಡಿ ಆರ್.ಟಿ.ನಗರದ ಕ್ರೌನ್ ಕಾನ್ವೆಂಟ್‌ನ ಶಿಕ್ಷಕ ಇಲ್ಯಾಸ್ ಪಾಷಾ ಅವರದ್ದು. ಜಾಲಹಳ್ಳಿಯ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯ ಬಿಂದು ಅವರೂ ಇದೇ ಮಾತುಗಳನ್ನು ಪುನರುಚ್ಚರಿಸಿದರು.

ನಿರಂತರ ಯತ್ನ ನಡೆಯಲಿ
ವರ್ಷಕ್ಕೊಮ್ಮೆ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸುವುದರಿಂದ ಅವುಗಳು ತಲುಪುವ ಸಾಧ್ಯತೆ ಕಡಿಮೆ. ಇದು ನಿರಂತರವಾಗಿ ನಡೆಯುತ್ತಿರಬೇಕು. ತಂತ್ರಜ್ಞಾನ ಬೆಳವಣಿಗೆ ಪರಿಣಾಮ ಥಿಯೇಟರ್‌ಗೆ ಬಂದು ಚಿತ್ರ ನೋಡಬೇಕೆಂಬ ಅನಿವಾರ್ಯತೆಯೂ ಇಲ್ಲ. ಪ್ರೊಜೆಕ್ಟರ್‌ಗಳ ಮೂಲಕ ಶಾಲೆಗಳಲ್ಲೇ ಚಿತ್ರ ವೀಕ್ಷಿಸಬಹುದು. ಆಯ್ದ ಚಿತ್ರಗಳನ್ನು ಎಲ್ಲಾ ಶಾಲೆಗಳಲ್ಲೂ ಪ್ರದರ್ಶಿಸುವುದಷ್ಟೇ ಇದಕ್ಕೆ ಪರಿಹಾರ.
- ಎಸ್.ವಿ.ರಾಜೇಂದ್ರ ಸಿಂಗ್ ಬಾಬು
ನಿರ್ದೇಶಕ

`ದೇಶ ವಿದೇಶಗಳ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಿ ವೈವಿಧ್ಯಮಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ನಮ್ಮದು. ಚಿತ್ರರಂಗದಲ್ಲಿ ಕಡೆಗಣನೆಗೆ ಒಳಗಾದ ಮಕ್ಕಳ ಚಿತ್ರಗಳನ್ನೂ ಎಲ್ಲರೂ ಗಮನಿಸುವಂತಾಗಬೇಕು, ಅದಕ್ಕೂ ಪ್ರೋತ್ಸಾಹ ನೀಡಬೇಕು ಎಂಬ ಆಶಯ ನಮ್ಮದು. ಅದಕ್ಕಾಗಿ ಸುಮಾರು 200 ಶಾಲೆಗಳಿಗೆ ಆಮಂತ್ರಣ ಪತ್ರಿಕೆ ಹಾಗೂ ಅದಕ್ಕಾಗಿ ಚಿತ್ರಗಳ ವೇಳಾಪಟ್ಟಿಯನ್ನೂ ಕಳುಹಿಸಲಾಗಿದೆ. ಹಿಂದಿನ ಬಾರಿ ಚಿತ್ರ ವೀಕ್ಷಿಸಿದ್ದ ಕೆಲವು ಶಾಲೆಗಳಷ್ಟೇ ಈ ಬಾರಿ ಮುಂದೆ ಬಂದಿವೆ, ಹೊಸಬರು `ಮುಂದಿನ ತಿಂಗಳು ಎಕ್ಸಾಮ್ಸ ಇದೆ ಸಾರ್, ಬರಕ್ಕಾಗಲ್ಲ, ನಮ್ಮಲ್ಲೇ ಥಿಯೇಟರ್ ಇದೆ, ಸಿಡಿ ತಂದು ತೋರಿಸ್ಕೋತೀವಿ, ಥಿಯೇಟರ್ ದೂರ ಇದೆ~ ಎಂದು ನೆಪ ಹೇಳುತ್ತಾರೆ. ಅವರನ್ನು ಒಲಿಸಿ ಚಿತ್ರಮಂದಿರಕ್ಕೆ ಮರಳಿ ತರುವ ಪ್ರಯತ್ನಗಳೂ ನಡೆಯುತ್ತಿವೆ~ ಎನ್ನುತ್ತಾರೆ ಎನ್.ಆರ್.ನಂಜುಂಡೇಗೌಡ.

 ಕಳೆದ ಏಳು ವರ್ಷಗಳಿಂದ ನಗರದಲ್ಲಿ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ನಡೆಯುತ್ತಿದ್ದರೂ ನಗರದ ಹತ್ತಾರು ಶಾಲೆಗಳಿಗೆ ಈ ಬಗ್ಗೆ ಮಾಹಿತಿಯಿಲ್ಲ. 600 ಮಕ್ಕಳು ಕೂತು ಚಿತ್ರ ನೋಡಬಹುದಾಗಿದ್ದ ಬಾಲಭವನದಲ್ಲಿ ಮಂಗಳವಾರ ನೂರು ಮಕ್ಕಳು ಪಾಲ್ಗೊಂಡಿದ್ದರೆ ಬುಧವಾರ ಆ ಸಂಖ್ಯೆ 40 ರಷ್ಟಿತ್ತು. ಮೊದಲ ದಿನದ ಮಧ್ಯಾಹ್ನದ ಬಳಿಕ ಮಕ್ಕಳಿಲ್ಲ ಎಂಬ ಕಾರಣಕ್ಕೆ ಶೋಗಳು ರದ್ದುಗೊಂಡಿವೆ. ಬುಧವಾರ ಬೆಳಿಗ್ಗೆ 10ಗಂಟೆಗೆ ಆರಂಭಗೊಳ್ಳಬೇಕಿದ್ದ ಚಿತ್ರ ಪ್ರೊಜೆಕ್ಟರ್ ಇಲ್ಲ ಎಂಬ ಕಾರಣಕ್ಕೆ 11ರ ಬಳಿಕವಷ್ಟೇ ಶುರುವಾಯಿತು.

`ಅಜಂತ~ದಲ್ಲಿ ಪ್ರದರ್ಶನವೇ ಇಲ್ಲ
`ಅಜಂತ ಚಿತ್ರಮಂದಿರದಲ್ಲಿ ಪ್ರದರ್ಶನವಿದೆ ಎಂಬ ಮಾಹಿತಿ ಮೇರೆಗೆ ಅಲ್ಲಿ ಹೋಗಿ ವಿಚಾರಿಸಿದರೆ ಇಲ್ಲಿ ಯಾವ ಉತ್ಸವವೂ ನಡೆಯುತ್ತಿಲ್ಲ ಎಂದು ಕೈಯಾಡಿಸಿದರು. ಚಿತ್ರದ ವೇಳಾಪಟ್ಟಿಯಲ್ಲಿ ಸುಳ್ಳು ಮಾಹಿತಿ ಪ್ರಕಟಿಸುವುದು ತಪ್ಪಲ್ಲವೇ, ಉತ್ತಮ ಚಿತ್ರ ಇದೆ ಎಂದು ಮಕ್ಕಳೊಂದಿಗೆ ಬಂದರೆ ಹೀಗಾಗಿದೆ ನೋಡಿ~ ಎಂಬ ಬೇಸರ ಶಿವಾಜಿನಗರದ ಗೃಹಿಣಿ ಲಲಿತಾ ಅವರದ್ದು.

ಇನ್ನು ಆದರ್ಶ ಚಿತ್ರಮಂದಿರದಲ್ಲಿ ತಾಂತ್ರಿಕ ಕಾರಣಗಳಿಂದ ಮಂಗಳವಾರ ಚಿತ್ರ ಪ್ರದರ್ಶನ ನಡೆದಿಲ್ಲ. ಕನ್ನಡ ಚಿತ್ರ ಪ್ರದರ್ಶನವಿದ್ದುದರಿಂದ ವೀಕ್ಷಿಸಲು ಬಂದಿದ್ದ ಸರ್ಕಾರಿ ತಮಿಳು ಶಾಲೆಯ 100ಕ್ಕೂ ಅಧಿಕ ಮಕ್ಕಳು ಹತಾಶೆಯೊಂದಿಗೆ ವಾಪಾಸಾಗಿದ್ದಾರೆ. ಒಂದು ಸಾವಿರ ಆಸನವಿರುವ ಚಿತ್ರಮಂದಿರದಲ್ಲಿ ಬುಧವಾರ 150 ಮಕ್ಕಳು ಚಿತ್ರ ವೀಕ್ಷಿಸಿದ್ದಾರೆ.

ಕೈಲಾಶ್ ಚಿತ್ರಮಂದಿರದಲ್ಲಿ `ನನ್ನ ಗೋಪಾಲ~ ಕನ್ನಡ ಚಿತ್ರ ಪ್ರದರ್ಶನವಿದ್ದುದರಿಂದ ಮಂಗಳವಾರ 240 ಮಕ್ಕಳು ಚಿತ್ರ ವೀಕ್ಷಿಸಿದ್ದಾರೆ. ಬುಧವಾರದ ಮೂರು ಪ್ರದರ್ಶನಗಳಿಗೆ ಮಂದಿರ ಬುಕ್ ಆಗಿದೆ ಎನ್ನುತ್ತಾರೆ ನಿರ್ವಾಹಕ ಗಂಗಾಧರ್. 1200 ಆಸನಗಳಿರುವ ನವರಂಗನಲ್ಲಿ ಬುಧವಾರ 82 ಮಕ್ಕಳು ಚಿತ್ರ ವೀಕ್ಷಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT