ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಅಪೌಷ್ಟಿಕತೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಯಚೂರು ಜಿಲ್ಲೆಯಲ್ಲಿ ವಿಶೇಷವಾಗಿ ದೇವದುರ್ಗ ತಾಲ್ಲೂಕಿನಲ್ಲಿ ಆರು ವರ್ಷದ ಒಳಗಿನ ಹಲವು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಅವರಲ್ಲಿ ನಾಲ್ಕು ಮಕ್ಕಳು ಸತ್ತಿರುವ ಘಟನೆ ಆತಂಕಕಾರಿ. ಆದರೆ ಈ ಮಕ್ಕಳ ಸಾವು ಅಪೌಷ್ಟಿಕತೆಯಿಂದಲ್ಲ, ಬೇರೆ ಬೇರೆ ರೋಗಗಳಿಂದ ಎಂದು ಕಾರಣ ಹೇಳುತ್ತಿರುವ ಸ್ಥಳೀಯ ಆಡಳಿತ ವಾಸ್ತವ ಸಂಗತಿಯನ್ನು ಮುಚ್ಚಿಡುತ್ತಿರುವಂತೆ ಕಾಣುತ್ತಿದೆ. ಸಾವಿಗೀಡಾದ ಮಕ್ಕಳು ಇಥಿಯೋಪಿಯಾದ ಮಕ್ಕಳಂತೆ ಬಡಕಲಾಗಿ ಕಾಣುವುದನ್ನು ನೋಡಿದರೆ ಅಪೌಷ್ಟಿಕತೆಗೆ ಸಂಬಂಧಿಸಿದ ಕಾಯಿಲೆಗಳಿಂದಲೇ ಸತ್ತಿರುವುದನ್ನು ಖಾತರಿ ಪಡಿಸುವಂತಿದೆ.
 
ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಒಟ್ಟು 71,600 ಮಕ್ಕಳಲ್ಲಿ, ರಾಯಚೂರು ಜಿಲ್ಲೆಯಲ್ಲಿ 4,531 ಮತ್ತು ದೇವದುರ್ಗ ತಾಲ್ಲೂಕಿನಲ್ಲಿ 932 ಮಕ್ಕಳು ಸೇರಿದ್ದಾರೆ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲರು ಅಂಕಿ ಅಂಶಗಳನ್ನು ಹೊರಗೆಡವಿದ್ದಾರೆ. ಸದಾ ಬರಗಾಲ ಸ್ಥಿತಿ ಎದುರಿಸುವ ದೇವದುರ್ಗ ತಾಲ್ಲೂಕಿನಲ್ಲಿ ಕಿತ್ತುತಿನ್ನುವ ಬಡತನವಿದೆ. ಗ್ರಾಮೀಣ ಪ್ರದೇಶದ ಜನರಿಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಎಂಎನ್‌ಆರ್‌ಇಜಿಪಿಯಂತಹ ಯೋಜನೆ ಬಡವರಿಗೆ ಕೆಲಸ ನೀಡುವಲ್ಲಿ ವಿಫಲವಾಗಿದೆ.

ಕಡುಬಡ ಕುಟುಂಬಗಳ ಆರು ವರ್ಷದೊಳಗಿನ ಮಕ್ಕಳನ್ನು ಅಂಗನವಾಡಿಗಳಿಗೆ ಸೇರಿಸಿ ಅಲ್ಲಿ ದಿನಕ್ಕೆ 500 ಕ್ಯಾಲೊರಿ ಸಿಗುವಂತೆ ಹಾಲು ಮತ್ತು ಪೌಷ್ಟಿಕ ಆಹಾರ ನೀಡಬೇಕು. ಈ ಉದ್ದೇಶಕ್ಕಾಗಿಯೇ ಸಮಗ್ರ ಮಕ್ಕಳ ಅಭಿವೃದ್ಧಿ ಸೇವಾ ಯೋಜನೆಯನ್ನು ಕಳೆದ 36 ವರ್ಷಗಳಿಂದ ಜಾರಿಗೆ ತರಲಾಗಿದೆ. ಆದರೂ ಬಡಮಕ್ಕಳು ಅಪೌಷ್ಟಿಕತೆಯಿಂದ ಸಾವಿನ ದವಡೆಗೆ ಜಾರುತ್ತಿದ್ದಾರೆ ಎಂದರೆ ಈ ಕಾರ್ಯಕ್ರಮ ಸರಿಯಾಗಿ ನಡೆಯುತ್ತಿಲ್ಲ ಎಂದೇ ತಿಳಿಯಬೇಕಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕಾಗಿರುವ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ತಪಾಸಣೆ ಮಾಡಿ ಸಕಾಲಕ್ಕೆ ಔಷಧೋಪಚಾರ ನೀಡಬೇಕಾಗಿರುವ ಆರೋಗ್ಯ ಇಲಾಖೆಯ ವೈಫಲ್ಯಕ್ಕೆ ಇದು ಹಿಡಿದ ಕೈಗನ್ನಡಿ.

ಬಡ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗದಂತೆ, ಸರ್ಕಾರ ಆ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಸಾರ್ವಜನಿಕ ಆಹಾರ ವಿತರಣೆ ವ್ಯವಸ್ಥೆಯ ಮೂಲಕ ಆಹಾರ ಧಾನ್ಯವನ್ನು ನೀಡಬೇಕು. ಆಹಾರ ಧಾನ್ಯವನ್ನು ಖರೀಸುವ ಶಕ್ತಿ ಬರುವಂತೆ ಬಡಕುಟುಂಬಗಳ ಜನರಿಗೆ ಕೂಲಿ ನೀಡಬೇಕು. ಬರಪೀಡಿತ ತಾಲ್ಲೂಕಿನಲ್ಲಿ ಸಾಕಷ್ಟು ಕಾಮಗಾರಿಗಳು ಜಾರಿಯಲ್ಲಿರುತ್ತವೆ.
 
ಆದರೆ ಬಡವರು ತಮ್ಮ ಮಕ್ಕಳ ತುತ್ತಿನ ಚೀಲವನ್ನು ತುಂಬಿಸಲು ಸಾಧ್ಯವಾಗದಿರುವ ಪರಿಸ್ಥಿತಿ ನಿಜಕ್ಕೂ ನಮ್ಮ ಆಡಳಿತ ವ್ಯವಸ್ಥೆ ಬಡವರ ಬಗೆಗೆ ಹೊಂದಿರುವ ನಿಷ್ಕಾಳಜಿಯನ್ನು ತೋರಿಸುತ್ತಿದೆ. ಮಕ್ಕಳಿಗೆ ತಿನ್ನಲು ಆಹಾರವಿಲ್ಲದ ಮೇಲೆ ಅಂತಹ ಮಕ್ಕಳಲ್ಲಿ ನ್ಯುಮೋನಿಯಾ, ದೇಹದ ತೂಕದಲ್ಲಿ ಇಳಿಕೆ, ಅತಿಸಾರ ಮತ್ತು ಮಲೇರಿಯಾ ಕಾಣಿಸಿಕೊಂಡು ಸಾವಿಗೆ ತುತ್ತಾಗುತ್ತವೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿ ಹೆಚ್ಚಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಇದೆ. ಈ ಸ್ಥಿತಿ ಈಗ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ ಎಂದರೆ ಸರ್ಕಾರ ಬಡ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಲೇಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT