ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಶಾಲೆಯಲ್ಲಿಯೇ ಮೈಮೇಲೆ ಸೀಮೆಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿಜಾಪುರದ 10 ವರ್ಷದ ಬಾಲಕ ಅಜಯ್, ಐದು ದಿನ ಸಾವು-ಬದುಕಿನ ನಡುವೆ ಸೆಣಸಿದರೂ, ಬದುಕುಳಿಯಲಿಲ್ಲ ಎಂಬುದು ವಿಷಾದನೀಯ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಟ್ಟಿಗಿನ ಒತ್ತಡಕ್ಕೆ ಇಷ್ಟು ಚಿಕ್ಕ ವಯಸ್ಸಿನ ಬಾಲಕ ಸಿಲುಕಿದ್ದಾದರೂ ಹೇಗೆ ಎಂಬುದೇ ಆಘಾತಕಾರಿ.

ಇದಿನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಇದಕ್ಕೆ ಕಾರಣ, ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಾಲಕ ನೀಡಿರುವ ವೈರುಧ್ಯದ ಹೇಳಿಕೆಗಳು. `ಹೋಂವರ್ಕ್ ಮಾಡದ ಕಾರಣ ಟೀಚರ್ ಶಿಕ್ಷಿಸುತ್ತಾರೆಂದು ಹೆದರಿ ಹೀಗೆ ಮಾಡಿದೆ' ಎಂದು ಮೊದಲಿಗೆ ಪೊಲೀಸರ ಬಳಿ ಹೇಳಿರುವ ಬಾಲಕ, ನಂತರ ಆಸ್ಪತ್ರೆಗೆ ಭೇಟಿ ನೀಡಿದ್ದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಮುಂದೆ `ಯಾವ ಶಿಕ್ಷಕರೂ ಶಿಕ್ಷಿಸುವ ಬೆದರಿಕೆ ಹಾಕಿರಲಿಲ್ಲ' ಎಂದಿದ್ದಾನೆ.

ಇದರ ಜೊತೆಗೇ, ಬೆಂಗಳೂರಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮತ್ತೊಂದು ಪ್ರಕರಣವೂ ವರದಿಯಾಗಿದೆ. ಸರಿಯಾಗಿ ತರಗತಿಗೆ ಹಾಜರಾಗದ ಈಕೆಗೆ, ಪೋಷಕರೊಂದಿಗೆ ಕಾಲೇಜಿಗೆ ಬರಬೇಕೆಂದು ಕಾಲೇಜು ಆಡಳಿತಮಂಡಳಿ ಸೂಚಿಸಿತ್ತು.

ವಿಷಯ ತಿಳಿದ ಪೋಷಕರು, ಮಗಳನ್ನು ಬೈದಿದ್ದೇ ಈ ದುರಂತಕ್ಕೆ ಕಾರಣವಾಯಿತೆನ್ನಲಾಗಿದೆ. ಬದುಕಿನಲ್ಲಿ ಕೆಲವೊಮ್ಮೆ ಎದುರಾಗಬಹುದಾದ ಇಂತಹ ಸವಾಲುಗಳನ್ನು ಎದುರಿಸಲಾಗದಷ್ಟು ನಮ್ಮ ಎಳೆಯ ಪೀಳಿಗೆ ದುರ್ಬಲವಾಗುತ್ತಿದೆಯೆ? ಎಂಬುದು ಇಲ್ಲಿನ ಪ್ರಶ್ನೆ.

ಹಾಗೆಯೇ ತೀವ್ರವಾಗಿ ಬದುಕಿನ ಮೌಲ್ಯಗಳು ಸ್ಥಿತ್ಯಂತರಗೊಳ್ಳುತ್ತಿರುವ ಇಂದಿನ ಯುಗದಲ್ಲಿ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪೋಷಕರು, ಶಿಕ್ಷಕರು ಹಾಗೂ ಸಾಮಾಜಿಕ ವ್ಯವಸ್ಥೆಯೂ ಸೋಲುತ್ತಿದೆಯೇ ಎಂಬುದು ಮತ್ತೊಂದು ಪ್ರಶ್ನೆ. ಎಲ್ಲಾ ವಿಷಯಗಳಲ್ಲೂ ಅತ್ಯುತ್ತಮ ಅಂಕಗಳನ್ನೇ ಗಳಿಸಬೇಕೆಂಬ ಪೋಷಕರ ನಿರೀಕ್ಷೆಗಳು ಎಳೆಯ ಮನಗಳಲ್ಲಿ ಒತ್ತಡಗಳನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಶಾಲಾ ಪಠ್ಯವಿಧಾನ, ಪರೀಕ್ಷಾ ವ್ಯವಸ್ಥೆ - ಇವೆಲ್ಲವೂ ಸೃಜನಾತ್ಮಕ ಕಲಿಕೆಯ ಪ್ರಕ್ರಿಯೆಗಿಂತ, ಅಂಕ ಗಳಿಕೆಗೇ ಪ್ರಾಶಸ್ತ್ಯ ನೀಡುವಂತಹದ್ದು. ಪ್ರಾಥಮಿಕ ಶಾಲೆಗಳಲ್ಲಿನ ಪಠ್ಯದ ಹೊರೆ ಮಗುವಿನ ಬಾಲ್ಯವನ್ನೇ ಕಿತ್ತುಕೊಳ್ಳುವಂತಹದ್ದಾಗಿರುತ್ತದೆ. ಈ ಎಲ್ಲದರ ನಡುವೆ ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಿರುವ ಇಂದಿನ ಮಕ್ಕಳು ಅನುಭವಿಸುವ ಒತ್ತಡವೂ ಹೆಚ್ಚಿನದೇ.

ಈ ಹಿನ್ನೆಲೆಯ್ಲ್ಲಲೇ, ಮಕ್ಕಳಿಗೆ ಶಿಸ್ತು ಕಲಿಸಲು ಪಾರಂಪರಿಕವಾಗಿ ಬಳಸಲಾಗುತ್ತಿದ್ದ ಶಿಕ್ಷೆಯ ವಿಧಾನಗಳು, ಬದಲಾದ ಸಾಮಾಜಿಕ ವಾತಾವರಣಕ್ಕೆ ತಕ್ಕಂತೆ ಬದಲಾಗಬೇಕಿದೆ. ಶಿಕ್ಷೆಗಿಂತ ಹೆಚ್ಚಾಗಿ ಮಕ್ಕಳನ್ನು ಅರ್ಥಮಾಡಿಕೊಂಡು ಆಪ್ತಸಲಹೆ ನೀಡುವ, ತಿಳಿಹೇಳುವ ಮಾರ್ಗಗಳು ಇಂದಿನ ಒತ್ತಡದ ಬದುಕಿನಲ್ಲಿ ಹೆಚ್ಚು ಪ್ರಸ್ತುತ.

ಇಲ್ಲದಿದ್ದಲ್ಲಿ ಶೈಕ್ಷಣಿಕ ಸ್ಪರ್ಧೆ, ತರಗತಿಯ ಸ್ನೇಹಿತರ ಜೊತೆಗಿನ ಪೈಪೋಟಿ ಹಾಗೂ ತಂದೆತಾಯಿಗಳ ನಿರೀಕ್ಷೆಗಳಿಗೆ ತಕ್ಕಂತೆ ಬದುಕು ರೂಪಿಸಿಕೊಳ್ಳುವಂತಹ ಒತ್ತಡಗಳನ್ನು ನಿಭಾಯಿಸುವಲ್ಲಿ ಮಕ್ಕಳು ಹತಾಶೆಯ ಸ್ಥಿತಿ ತಲುಪುತ್ತಾರೆ. ಆತ್ಮಹತ್ಯೆ ಪ್ರವೃತ್ತಿ ಅಥವಾ ಹಿಂಸಾತ್ಮಕ ನಡವಳಿಕೆಗಳನ್ನೂ ಪ್ರದರ್ಶಿಸಬಹುದು.

ಹೀಗಾಗಿ ಮಕ್ಕಳಿಗೆ `ಬದುಕುವ ಕಲೆ'ಯನ್ನು ಮೊದಲು ಕಲಿಸಬೇಕಾದುದು ಮುಖ್ಯ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರಲ್ಲಿ ಸಂವೇದನಾಶೀಲತೆ ಮೂಡುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT