ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಎಚ್‌ಐವಿ ಸೋಂಕು

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ 14,500 ಮಕ್ಕಳು ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವ ಮಾಹಿತಿ ಆತಂಕಕಾರಿ. ಈ ಪೈಕಿ 4500 ಮಕ್ಕಳು ಬೆಳಗಾವಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಮತ್ತು ವಿಜಾಪುರ ಜಿಲ್ಲೆಗಳಿಗೆ ಸೇರಿದವರು ಎಂಬುದನ್ನು ಗಮನಿಸಬೇಕು.

ವರ್ಷದಿಂದ ವರ್ಷಕ್ಕೆ ಈ ಐದು ಜಿಲ್ಲೆಗಳಲ್ಲಿ ಸೋಂಕಿಗೆ ಗುರಿಯಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಅದರಲ್ಲೂ ಕಳೆದ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 1501 ಮಕ್ಕಳು ಹೊಸದಾಗಿ ಎಚ್‌ಐವಿ ಸೋಂಕಿಗೆ ಗುರಿಯಾಗಿದ್ದಾರೆ ಎಂಬ ವಿಚಾರ ಇನ್ನೂ ಆಘಾತಕಾರಿ.

ವಾಸ್ತವವಾಗಿ, ಎಚ್‌ಐವಿ ಸೋಂಕು ಹೆಚ್ಚು ವ್ಯಾಪಕವಾಗಿ ಇರುವ ಜಿಲ್ಲೆಗಳಾಗಿದ್ದರೂ ಇಲ್ಲಿ ಸೋಂಕು ತಡೆಗಾಗಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂಬ ಸಂಶಯಕ್ಕೆ ಆಸ್ಪದವಾಗಿದೆ.
 
ಎಚ್‌ಐವಿ ಸೋಂಕು ಇರುವ ತಾಯಂದಿರಿಗೆ ಜನಿಸುವ ಮಕ್ಕಳು ಎಚ್‌ಐವಿ ಸೋಂಕು ಹೊಂದುವ ಅಪಾಯ ಇದ್ದೇ ಇರುವುದು ವಾಸ್ತವ. ಇದನ್ನು ತಪ್ಪಿಸಲೆಂದೇ ಪಿಎಂಟಿಸಿಟಿ ಕಾರ್ಯಕ್ರಮ (ಪ್ರಿವೆನ್‌ಷನ್ ಆಫ್ ಮದರ್ ಟು ಚೈಲ್ಡ್ ಟ್ರಾನ್ಸ್‌ಮಿಷನ್ - ತಾಯಿಯಿಂದ ಮಗುವಿಗೆ ಸೋಂಕು ರವಾನೆ ತಡೆ) ಜಾರಿಯಲ್ಲಿದೆ.

ಆದರೆ ಬಹಳಷ್ಟು ಎಚ್‌ಐವಿ ಸೋಂಕಿತ ತಾಯಂದಿರಿಗೆ ಈ ಕಾರ್ಯಕ್ರಮಗಳ ಕುರಿತು ಅರಿವಿಲ್ಲ. ಚಿಕಿತ್ಸೆಗಿಂತ ಮುಂಜಾಗರೂಕತೆಯೇ ಮುಖ್ಯವಾದದ್ದರಿಂದ, ಗರ್ಭಿಣಿ ಇರುವಾಗಲೇ ಎಚ್‌ಐವಿ ಪರೀಕ್ಷೆಗೊಳಪಡಬೇಕಾದ ಅಗತ್ಯವನ್ನು ಜನರಿಗೆ ಮನಗಾಣಿಸಬೇಕಿದೆ. ಇಂತಹ ಕ್ರಮದಿಂದ ಎರಡು ರೀತಿಯ ಅನುಕೂಲಗಳಿವೆ.
 
ಒಂದು ಹೆರಿಗೆಗೆ ಮುಂಚೆಯೇ ಎಚ್‌ಐವಿ ಸೋಂಕಿತ ಗರ್ಭಿಣಿಯನ್ನು ಸುಲಭವಾಗಿ ಗುರುತಿಸಬಹುದು. ನಂತರ ಸೂಕ್ತ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಚ್‌ಐವಿ ಸೋಂಕಿನಿಂದ ಮಗುವನ್ನು ರಕ್ಷಿಸುವುದು ಸಾಧ್ಯವಾಗುತ್ತದೆ. 

 ಸಾಮಾಜಿಕ ಕಾರಣಗಳಿಗಾಗಿ ಎಚ್‌ಐವಿ ಪರೀಕ್ಷೆ ಕುರಿತಂತೆ ಮಹಿಳೆಯರು ಭಯ ಪಡುತ್ತಾರೆ. ಹೀಗಾಗಿ ಈ ಪರೀಕ್ಷೆಗೆ ಅವರನ್ನು ಒಪ್ಪಿಸುವುದು ಕಷ್ಟ. ಗರ್ಭಿಣಿಯ ಅನುಮತಿ ಪಡೆದು ಎಚ್‌ಐವಿ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಇನ್ನೂ ವ್ಯಾಪಕವಾಗಬೇಕಿವೆ.
 
ಏಕೆಂದರೆ, ಹೆರಿಗೆಯ ಸಂದರ್ಭ ಮಾತ್ರವೇ ಎಚ್‌ಐವಿ ಸೋಂಕು ತಡೆಗಟ್ಟಬಹುದಾದ ಕಡೆಯ ಒಂದು ಅವಕಾಶ ಎಂಬುದನ್ನು ನಾವು ನೆನಪಿಡಬೇಕು. ಭಾರತಕ್ಕೆ ಎಚ್‌ಐವಿ ಸೋಂಕು ಮುಕ್ತ ಪೀಳಿಗೆಯ ಅಗತ್ಯವಿದೆ; ಯಾವ ನವಜಾತ ಶಿಶುವೂ ಸೋಂಕಿನಿಂದ ನರಳಬಾರದು ಎಂಬುದು ಆದ್ಯತೆಯಾಗಬೇಕು.

ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕಿನ ರವಾನೆ ಎಂಬುದು, ಆ ಮಗುವಿನ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಸರ್ಕಾರ ಪರಿಗಣಿಸಬೇಕು. ಇದರ ಜೊತೆಗೆ, ಸೋಂಕು ಹೊಂದಿದ ಮಕ್ಕಳಿಗೆ ಹೆಚ್ಚು ಪೌಷ್ಟಿಕ ಆಹಾರದ ಅಗತ್ಯವೂ ಇದೆ. ಚಿಕಿತ್ಸೆ ಪಡೆಯುವ ಸಂದರ್ಭದಲ್ಲಂತೂ ಇದು ಅಗತ್ಯ.

ಎಚ್‌ಐವಿ ಸೋಂಕಿನ ಜೊತೆಗೆ 6000 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂಬುದನ್ನೂ ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಈ ಎಲ್ಲಾ ಸಮಸ್ಯೆಗಳಿಗೂ ಸಮಗ್ರ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪುಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT