ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಮಾನಸಿಕ ಒತ್ತಡ!

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತಾಯಿ ಗರ್ಭದಿಂದ ಹೊರಬಂದ ನವಜಾತ ಶಿಶುವನ್ನು ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕಾದ ಒತ್ತಡ ಬಾಧಿಸುತ್ತದೆ.  ಆದರೂ ತಾಯಿ ಹೃದಯದ ಅಮೃತವನ್ನು ಕುಡಿಯುತ್ತಾ, ತಾಯಿ ಬೆಚ್ಚನೆಯ ಅಪ್ಪುಗೆಯಲ್ಲಿ ಕ್ರಮೇಣ ಈ ಹೊಸ ಜಗತ್ತಿಗೆ ಅದು ಹೊಂದಿಕೊಳ್ಳುತ್ತದೆ.  ಆದರೆ, ಮಕ್ಕಳಲ್ಲಿ ಈ ಕೆಳಕಂಡ ಕಾರಣಗಳಿಂದ ಆತಂಕ ಉಂಟಾಗುತ್ತದೆ.

ಮಕ್ಕಳಲ್ಲಿ ಒತ್ತಡ ಉಂಟಾಗುವುದಕ್ಕೆ ಕಾರಣಗಳು: 
* ಎಳೆಯ ಹಸುಳೆಯನ್ನು ಉದ್ಯೋಗಸ್ಥ ತಾಯಿ ಶಿಶುವಿಹಾರದಲ್ಲಿ ಬಿಟ್ಟು ಹೋಗುವುದು.

* ಅತ್ಯಂತ ಪ್ರತಿಷ್ಠಿತ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಎರಡೂವರೆ ಮೂರು ವರ್ಷದ ಕಂದಮ್ಮನನ್ನು ಆ ಶಾಲೆ ಪರೀಕ್ಷೆ ಮಾಡುವುದು.

* ತಾಯಿ ತಂದೆಯರ ಜಗಳಗಳು, ಡೈವೋರ್ಸ್‌ ಇತ್ಯಾದಿ,  ಒಡಕು, ಅತ್ತೆ-ಸೊಸೆಯರ ಮಧ್ಯೆ ಜಗಳ, ಮನೆಯ ಹಿರಿಯರನ್ನು ಅನಾದರದಿಂದ ನಡೆಸಿಕೊಳ್ಳುವುದು. ಈ ಎಲ್ಲಾ ಕಾರಣದಿಂದಲೇ `ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು~ ಎಂಬ ಗಾದೆ ಹುಟ್ಟಿರುವುದು.

* ಕುಟುಂಬದಲ್ಲಿ ಆಗಾಗ ತಲೆತೋರುವ ಬಿಕ್ಕಟ್ಟು, ಹೊಟ್ಟೆಕಿಚ್ಚು, ದ್ವೇಷ ಮುಂತಾದವುಗಳಿಂದ ಮಗು ಆತಂಕಕ್ಕೆ ಈಡಾಗಿ ನಕಾರಾತ್ಮಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತದೆ.

* ಮಕ್ಕಳು ಚಿಕ್ಕವರೆಂದು ದೊಡ್ಡವರು ಮೈಮರೆತು, ಲೈಂಗಿಕ ಚಟುವಟಿಕೆಗಳಲ್ಲಿ ಮೈಮರೆತರೆ ಅದನ್ನು  ನೋಡಿ ಮಗು ತೀವ್ರ ಆತಂಕಕ್ಕೆ ಒಳಗಾಗುತ್ತದೆ.  

* ತಾಯಿ ತಂದೆಯರು ಪ್ರತಿಷ್ಠೆಗಾಗಿ ಮಗು ಆಲ್‌ರೌಂಡರ್ ಎನಿಸಿಕೊಳ್ಳಲು ವಿವಿಧ ಕ್ಲಾಸುಗಳಿಗೆ ಮಗುವಿಗೆ  ಆಸಕ್ತಿ ಇಲ್ಲದಿದ್ದರೂ ಸೇರಿಸುವುದು.

* 6, 8 ವರ್ಷದ ಮಗು ಶಾಲೆಯಿಂದ ಏಕಾಂಗಿಯಾಗಿ ಮನೆಗೆ ಬಂದು  ಬೀಗ ತೆರೆದು ಒಬ್ಬನೇ/ಒಬ್ಬಳೇ ಇರಬೇಕಾದಂತಹ ಸಂದರ್ಭಗಳು.

* ಮಗುವಿಗೆ ಬಹುಬೇಗ ವಾಸಿಯಾಗಲಾರದ ಚರ್ಮ ಕಾಯಿಲೆಗಳು, ಅಂಗವಿಕಲತೆಯಿಂದಾಗಿ ಮಗುವಿನ ತಂದೆ ತಾಯಿ ಕೀಳರಿಮೆಗೆ ತುತ್ತಾಗಿ ಮಗುವನ್ನು ಆತಂಕಕ್ಕೆ ಈಡು ಮಾಡುತ್ತಾರೆ.

* ಇಬ್ಬರು ಮಕ್ಕಳು ಇದ್ದಾಗ ಪರಸ್ಪರ ಹೋಲಿಕೆ ಮಾಡಿದಾಗ ಅನಾಕರ್ಷಕ ಅಥವಾ ಅಷ್ಟು ಬುದ್ಧಿವಂತಿಕೆ ಇಲ್ಲದ ಮಗು ಆತಂಕಕ್ಕೆ ಈಡಾಗುತ್ತದೆ. 

* ತಂದೆ ತಾಯಿ ತೀವ್ರ ಕಾಯಿಲೆಗಳಿಗೆ ತುತ್ತಾದಾಗ ಅಥವಾ ಅಕಾಲ ಮರಣಕ್ಕೆ ಈಡಾದಾಗ ಮಗು ಆತಂಕಕ್ಕೆ ಒಳಗಾಗುತ್ತದೆ.  

* ಶಾಲೆಯಲ್ಲಿ ಕಲಿಯುವಿಕೆಯಲ್ಲಿ ಹಿಂದುಳಿದಾಗ ಶಿಕ್ಷಕರು ತಂದೆ ತಾಯಿಯರನ್ನು ಕರೆದು ಅವಹೇಳನ ಮಾಡಿದಾಗ ಮಗು ಆತಂಕಕ್ಕೆ ತುತ್ತಾಗುತ್ತದೆ.

* ಶಾಲೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಯನ್ನು ಎಲ್ಲರ ಎದುರು ಶಿಕ್ಷಕರು ಅವಮಾನ ಮಾಡುವುದು.

* ಮನೆಯ ಆರ್ಥಿಕ ದುಃಸ್ಥಿತಿ. ಚಿಕ್ಕ ಮಕ್ಕಳನ್ನು ಕೂಲಿ ಕೆಲಸ ಮತ್ತಿತರ ಕೆಲಸಗಳಲ್ಲಿ ತೊಡಗಿಸುವುದು, ಶಾಲೆಗೆ ಕಳುಹಿಸದಿರುವುದು, ದೊಡ್ಡವರ ಹಿಂಸೆ, ಕೋಪತಾಪಗಳು, ದೈಹಿಕ ದೌರ್ಜನ್ಯದಿಂದ ಮಗು ಬಳಲಿಹೋಗುತ್ತದೆ.

* ಸಣ್ಣ ಮಕ್ಕಳ ಮೇಲೆ ಪರಿಚಯಸ್ಥರಿಂದಲೇ ಲೈಂಗಿಕ ದೌರ್ಜನ್ಯ.

* ಶಾಲೆಯಲ್ಲಿ ಕಾಡುವ ಬಲಿಷ್ಠ ಮಕ್ಕಳು (ಬುಲ್ಲಿಗಳು).

* ಇತ್ತೀಚೆಗೆ 8-10 ವರ್ಷಕ್ಕೆ ಹೆಣ್ಣು ಮಕ್ಕಳು ಋತುಮತಿಯಾಗುತ್ತಿರುವುದರಿಂದ ಶಾರೀರಿಕವಾಗಿ, ಮಾನಸಿಕವಾಗಿ ಆದ ಬದಲಾವಣೆಗಳೂ ಮಗುವಿನ ತೀವ್ರ ಆತಂಕಕ್ಕೆ ಕಾರಣ. 

* ಟೀನೇಜ್ ಮಗಳು ತನ್ನ ಸಹಪಾಠಿಯೊಂದಿಗೆ ಮಾತನಾಡಿದಾಗ ಅಥವಾ ಇನ್ನಿತರ ಅಂತಹ ಯಾವುದೇ ಸನ್ನಿವೇಶದಲ್ಲಿ ಮಗಳನ್ನು ಅನುಮಾನದಿಂದ  ಕಾಣುವುದರಿಂದ ಮಗುವಿಗೆ ತಾನು ನಂಬಿಕೆಗೆ ಅರ್ಹವಲ್ಲ ಎಂಬ ದುಃಖ ಬಾಧಿಸುತ್ತದೆ.

* ಮಕ್ಕಳನ್ನು ತಂದೆ ತಾಯಿಗಳು ತಮ್ಮ  ಸ್ವತ್ತು ಎಂದು ಭಾವಿಸುವುದು ಮತ್ತು  ಅವರಿಂದ ಅತಿಯಾದ ವಿಧೇಯತೆಯನ್ನು ನಿರೀಕ್ಷಿಸುವುದು; ಮಕ್ಕಳ ಪಾಲನೆ ಪೋಷಣೆಗಾಗಿ ವಿದ್ಯಾಭ್ಯಾಸಕ್ಕಾಗಿ ಮಾಡಿದ ಖರ್ಚನ್ನು ತ್ಯಾಗವೆಂದು ಭಾವಿಸಿ ಮಕ್ಕಳು ಸದಾ ಕಾಲ ತಮ್ಮ ಆಜ್ಞಾನುಸಾರ ವರ್ತಿಸಬೇಕೆಂದು ಅಪೇಕ್ಷಿಸುವುದು. ಇದರಿಂದ ಮಕ್ಕಳಲ್ಲಿ ವಿರುದ್ಧ ಗುಣಗಳು ಕಂಡುಬರಬಹುದು.

* ಮಕ್ಕಳಲ್ಲಿ ವಿಶ್ವಾಸವಿಡದಿರುವುದು. 

* ಅತೀ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬ ಪೀಡನೆ.

* ರೆಸಿಡೆನ್ಷಿಯಲ್ ಶಾಲೆಗಳಲ್ಲಿ ವಾಸವಿರುವ ಮಕ್ಕಳು ತಂದೆ ತಾಯಿಯರ ಪ್ರೀತಿ, ವಿಶ್ವಾಸದಿಂದ ವಂಚಿತರಾದಾಗ ಸಾಕಷ್ಟು ಆತಂಕ ಮಕ್ಕಳನ್ನು ಬಾಧಿಸುತ್ತದೆ.

* ಮಕ್ಕಳಿಗೆ ಶಾಲೆಯಲ್ಲಿ ನೀಡುವ ತೀವ್ರತೆರನಾದ ಶಿಕ್ಷೆ, ಶಿಕ್ಷಕರ ಪಕ್ಷಪಾತ ಧೋರಣೆ ಮಗುವನ್ನು ಘಾಸಿಗೊಳಿಸುತ್ತವೆ.

* ವಯೋಸಹಜವಾಗಿ ಏನೂ ತಿಳಿಯದ ಮಗುವೊಂದು ಲೈಂಗಿಕ ಪದಗಳನ್ನು ಬಳಸಿದಾಗ ಅಥವಾ ತನ್ನ ಸಹಪಾಠಿಗೆ `ಐ ಲವ್ ಯೂ~ ಎಂದು ಹೇಳಿದಾಗ ಅದನ್ನೇ ದೊಡ್ಡ ಪ್ರಕರಣವನ್ನಾಗಿ ಮಾಡುವ ಶಿಕ್ಷಕರಿಂದ/ದೊಡ್ಡವರಿಂದ ಮಗು ಗೊಂದಲಗೊಳ್ಳುತ್ತದೆ.

* ತಮ್ಮ ಆಸಕ್ತಿಯನ್ನು  ಮಗುವಿನ ಮೇಲೆ ಹೇರುವುದು, ತಮ್ಮ ಪ್ರತಿಷ್ಠೆಗಾಗಿ ಮಗುವನ್ನು ಬಲಿಕೊಡುವುದು.

* ಗುರುವೇ ಶಿಷ್ಯರ ಉತ್ಕರ್ಷವನ್ನು ಕಂಡು ಮತ್ಸರ ಪಡುವಾಗ ಮಗುವಿಗೆ ದಿಕ್ಕೇ ತೋಚದಂತಾಗುತ್ತದೆ.  

ಆತಂಕದ ಪರಿಣಾಮ
ಮಗುವಿನ ದೈಹಿಕ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತ, ಶಾಲೆಯ ಆಟ ಪಾಟದಲ್ಲಿ ಪ್ರಗತಿ ಇಲ್ಲದಿರುವುದು, ಖಿನ್ನತೆಗೆ ತುತ್ತಾಗುವುದು. ಸುಳ್ಳು ಹೇಳುವುದು, ಕದಿಯುವುದು, ರಾತ್ರಿ ನಡಿಗೆ, ಅನಾರೋಗ್ಯಕ್ಕೆ  ಈಡಾಗುವುದು. ಮನೋದೈಹಿಕ ಕಾಯಿಲೆಗಳು. ಉದಾ :ಮೂರ್ಛೆ,  ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ, ಭಿನ್ನವಾದ ನಡವಳಿಕೆಗಳು, ಮನೆ ಬಿಟ್ಟು ಓಡಿ ಹೋಗುವುದು, ಹಿಂಸಾಚಾರಕ್ಕಿಳಿಯುವುದು, ಕೆಟ್ಟಜನರ ಸಹವಾಸ, ಆತ್ಮಹತ್ಯೆ, ಶಾಲೆಯಿಂದ ವಿಮುಖವಾಗುವುದು...

ಪರಿಹಾರೋಪಾಯಗಳು
* ಮಗುವನ್ನು  ಯಾವುದೇ ಷರತ್ತಿಲ್ಲದೇ ಶುದ್ಧ ಮನದಿಂದ ಪ್ರೀತಿಸುವುದು. 

* ತಂದೆ ತಾಯಿ, ಶಿಕ್ಷಕರು ಉತ್ತಮ ನಡವಳಿಕೆಯಿಂದ ಮಾದರಿಯಾಗುವುದು.

* ಮಗುವನ್ನು ಪಾರ್ಕ್, ವ್ಶೆಜ್ಞಾನಿಕ ಮೇಳ, ಪುಸ್ತಕ ಮೇಳ, ಪುಸ್ತಕ ಮಳಿಗೆ, ಚಿತ್ರಕಲೆ ಪ್ರದರ್ಶನಗಳಿಗೆ ಕರೆದುಕೊಂಡು ಹೋಗುವುದು.

* ಶಾರೀರಿಕ ವಿಕಲತೆಗಿಂತ ಮಾನಸಿಕ ವಿಕಲತೆ ದೊಡ್ಡದು ಎಂಬುದನ್ನು ತಿಳಿಸುವುದು.

* ಸೋಲುಗಳು ಗೆಲವಿನ ಸೋಪಾನ ಎಂಬುದನ್ನು ತಿಳಿಸುವುದು.

* ಹೆಚ್ಚು ಅಂಕಕ್ಕಾಗಿ, ರ‌್ಯಾಂಕಿಗಾಗಿ ಹಠ ಹಿಡಿಯದೆ, ಉತ್ತಮ ವ್ಯಕ್ತಿಯಾಗಿ ಸಮಾಜ ಉಪಕಾರಿಯಾಗುವಂತೆ ಬೆಳೆಸುವುದು.

* ತಪ್ಪನ್ನು ಒಪ್ಪಿಕೊಳ್ಳುವಂತಹ ವಿನಯಶೀಲರಾಗಿಸುವುದು. 

* ಬದುಕಿನಲ್ಲಿ ಯಶಸ್ಸು ಸಾಧಿಸಿದ ಮಹನೀಯರ ಕಥೆಗಳನ್ನು  ಹೇಳುತ್ತಾ, ಯಶಸ್ಸು  ಮತ್ತು  ತೃಪ್ತಿ ಕಲಿಸುವುದು. 

* ಸಮಸ್ಯೆಗಳು ಬಂದಾಗ ಅದರ ಭಾಗವಾಗದೇ ಪರಿಹಾರಕ್ಕಾಗಿ ಆಲೋಚಿಸುವುದನ್ನು ಕಲಿಸಿಕೊಡುವುದು. ಸಮಸ್ಯೆ ನಿಭಾಯಿಸಿಕೊಂಡು  ಶಕ್ತಿವಂತರಾಗುವುದನ್ನು ಹೇಳಿಕೊಡುವುದು.

* ಶಿಸ್ತು ನೋವಲ್ಲ. ಕೊಠಡಿಯಲ್ಲಿ ಓರಣವಿದ್ದರೆ ಭಾವನೆಗಳ ಮೇಲೆ ಹಿಡಿತವಿರುತ್ತದೆ. 

* ಲೈಂಗಿಕ ತೃಷೆಯ ಗುಲಾಮರಾಗದೇ ಎಲ್ಲದಕ್ಕೂ ಕಾಲ ಬರುತ್ತದೆ ಅಲ್ಲಿಯವರೆಗೆ ಕಾಯವುದು ಮತ್ತು ಎಲ್ಲ ಶಕ್ತಿಯನ್ನು ವಿದ್ಯಾಭ್ಯಾಸ ಸೃಜನಾತ್ಮಕ ಕೆಲಸಕ್ಕಾಗಿ ಬಳಸುವುದನ್ನು ಹೇಳಿಕೊಡುವುದು.

* ವ್ಯರ್ಥ ಕಾಲಹರಣದಿಂದಾಗುವ ನಷ್ಟ.  ಪುಸ್ತಕಗಳಿಂದಾಗುವ ಜ್ಞಾನಾಭಿವೃದ್ಧಿ ಆಧುನಿಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವುದು.

* ಪೃಕೃತಿ ಪ್ರೀತಿ, ತಂದೆತಾಯಿಗೆ ತೋರಬೇಕಾದ ಗೌರವ, ರಾಷ್ರಭಕ್ತಿ, ಮಾತೃಭಾಷಾ ಪ್ರೇಮ,ಗುರುಹಿರಿಯರಲ್ಲಿ ಭಕ್ತಿ ಇತ್ಯಾದಿಗಳನ್ನು ಮನದಟ್ಟು ಮಾಡಿಸುವುದು. 

* ಹದಿಹರೆಯದ ಮಕ್ಕಳಿಗೆ ನೇರವಾಗಿ ಬುದ್ಧಿವಾದ/ಉಪದೇಶ ಹೇಳುವ ಬದಲು ನಮ್ಮ ಅಥವಾ ಇತರರ ಬದುಕಿನಲ್ಲಿ ಅಕಾಲದಲ್ಲಿ ಪ್ರೇಮ ಮಾಡಿ ಆದಂತಹ ದುರಂತಗಳ ಬಗ್ಗೆ ಹೇಳಿ, ಹದಿಹರೆಯದ ಪ್ರೇಮ  ಕೇವಲ ಆಕರ್ಷಣೆ ಎಂಬುದನ್ನು ದೃಢಪಡಿಸುವುದು. ಜೋರಾಗಿ ಬೈಕ್ ಓಡಿಸುವುದರಿಂದ ಅಕಾಲದಲ್ಲಿ ಮೃತಪಟ್ಟ ಮಕ್ಕಳು, ಅದರಿಂದ ನಿರಂತರ ದುಃಖ ಅನುಭವಿಸುತ್ತಿರುವ ಕುಟುಂಬಗಳ ವಿಷಯಗಳನ್ನು ಮಾತನಾಡುವುದು.

* ಅತಿ ಹೆಚ್ಚು ಪಾಕೆಟ್ ಮನಿ ಕೊಡುವುದು ತಪ್ಪು. ಕೊಡದೆ ಇರುವುದೂ ತಪ್ಪು. 

* ಮಕ್ಕಳನ್ನು ಮುದ್ದಿಸಿ ಕೆಲಸ ಮಾಡಿಸುವುದು, ಆಮಿಷ ಒಡ್ಡುವುದು,  ಹೆಚ್ಚು ಅಂಕಕ್ಕೆ ಪುಸಲಾಯಿಸುವುದು ತಪ್ಪು. ನೀನು ಮಾಡಲೇಬೇಕಾದದ್ದು ಎಂಬುದನ್ನು  ಪ್ರೀತಿ ಸಮಾಧಾನ ಮತ್ತು ಧೃಢತೆಯಿಂದ  ತಿಳಿಸಬೇಕು.

* ಮಕ್ಕಳಿಗೆ ಆಸ್ತಿ ಕೂಡಿಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವುದು.

* ಅಶಿಸ್ತು ಮತ್ತು  ಅತಿಶಿಸ್ತು ಎರಡೂ ಅಪಾಯಕಾರಿ. ಅತಿಶಿಸ್ತಿನಿಂದ ಮಗು ಸ್ವಾರ್ಥಿ, ಅಹಂಕಾರಿಯಾಗಬಹುದಾದ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT