ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿನ ಅಪೌಷ್ಟಿಕತೆಯ ನಿವಾರಣೆ:ಬಿಎಂಪಿಯಿಂದ 2 ಲಕ್ಷ ಮಕ್ಕಳ ತಪಾಸಣೆ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನಿವಾರಿಸಲು ಬಿಬಿಎಂಪಿಯು ನಗರದ ಆರು ವರ್ಷದೊಳಗಿನ ಸುಮಾರು 2,22,720 ಮಕ್ಕಳನ್ನು ತಪಾಸಣೆಗೊಳಪಡಿಸಿದ್ದು, ಆ ಪೈಕಿ ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 2186 ಮಕ್ಕಳ ಪೈಕಿ 181 ಮಕ್ಕಳನ್ನು ಚಿಕಿತ್ಸೆಗಾಗಿ ಶಿಫಾರಸು ಮಾಡಿದೆ.

ಸುಮಾರು 2700 ಮಂದಿ ಸ್ವಯಂಸೇವಕರು ಹಾಗೂ ಆರೋಗ್ಯ ಕಾರ್ಯಕರ್ತರು ನಾಲ್ಕು ದಿನಗಳಿಂದ ನಗರದ 3,20,840 ಮನೆಗಳಿಗೆ ಭೇಟಿ ನೀಡಿ, ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿರುವ ಆರು ವರ್ಷದೊಳಗಿನ ಮಕ್ಕಳನ್ನು ಗುರುತಿಸಿದ್ದರು. ಈ ಪೈಕಿ ಭಾನುವಾರ 1271 ಮಕ್ಕಳನ್ನು ತಪಾಸಣೆಗೊಳಪಡಿಸಲಾಯಿತು.

ವಿಶೇಷವಾಗಿ ಕೊಳಚೆ ಪ್ರದೇಶಗಳು ಹಾಗೂ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿರುವಂತಹ 191 ಗರ್ಭಿಣಿಯರನ್ನು ಶಿಬಿರದಲ್ಲಿ ತಪಾಸಣೆಗೊಳಪಡಿಸಲಾಗಿದೆ. ಅಪೌಷ್ಟಿಕ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ 156 ಮಂದಿ ತಾಯಂದಿರನ್ನು ಕೂಡ ತಪಾಸಣೆಗೊಳಪಡಿಸಲಾಗಿದೆ ಎಂದು ಬಿಬಿಎಂಪಿಯ ಯೋಜನಾ ಸಮನ್ವಯಾಧಿಕಾರಿ (ತಾಯಿ ಮತ್ತು ಮಕ್ಕಳ ಆರೋಗ್ಯ) ಡಾ.ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು.

`ನಮಗೆ ಕಾಲಾವಕಾಶ ಕಡಿಮೆ ಇದ್ದುದರಿಂದ ಕೇವಲ 10 ದಿನಗಳಲ್ಲಿ ಅಪೌಷ್ಟಿಕ ಸಮಸ್ಯೆಯಿಂದ ನರಳುತ್ತಿರುವಂತಹ ಎಲ್ಲ ಮಕ್ಕಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಕೊಳಚೆ ಪ್ರದೇಶಗಳು ಹಾಗೂ ಕೂಲಿ ಕಾರ್ಮಿಕರ ಮಕ್ಕಳನ್ನು ಗುರುತಿಸಲು ಆದ್ಯತೆ ನೀಡಲಾಗಿದೆ. ಮುಂದಿನ ಒಂದು ವಾರದೊಳಗೆ ವಸತಿ ಬಡಾವಣೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿನ ಮಕ್ಕಳನ್ನು ಕೂಡ ಗುರುತಿಸುವ ಪ್ರಕ್ರಿಯೆ ಮುಂದುವರಿಸಲಾಗುತ್ತದೆ~ ಎಂದು ಅವರು ತಿಳಿಸಿದರು.

ಬಡತನ ಮುಖ್ಯ ಕಾರಣ: `ಬಡತನ ಹಾಗೂ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸದಿರುವುದು ಅಪೌಷ್ಟಿಕತೆಗೆ ಮುಖ್ಯ ಕಾರಣ. ಇಂತಹ ಮಕ್ಕಳಿಗೆ ಪ್ರೋಟೀನ್‌ಯುಕ್ತ ಆಹಾರ ಪದಾರ್ಥಗಳನ್ನು ಪಾಲಿಕೆಯಿಂದ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಐದು ಕೆ.ಜಿ. ಗೋಧಿ ನೀಡುತ್ತಿದೆ. ಅಲ್ಲದೆ, ಅಪೌಷ್ಟಿಕ ಸಮಸ್ಯೆಯಿಂದ ನರಳುತ್ತಿರುವ ಮಕ್ಕಳನ್ನು ಅಂಗನವಾಡಿಗಳಿಗೆ ಸೇರಿಸುವ ಮೂಲಕ 750 ರೂಪಾಯಿ ಮೌಲ್ಯದ ಔಷಧಿಗಳನ್ನು ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆಗೆ ರಾಜ್ಯ ಸರ್ಕಾರ 40 ಸಾವಿರ ರೂಪಾಯಿವರೆಗೆ ವೆಚ್ಚ ಭರಿಸಲಿದೆ~ ಎಂದು ಅವರು ತಿಳಿಸಿದರು.

ಉತ್ತಮ ಆರೋಗ್ಯ ಕಲ್ಪಿಸಬೇಕು: ಬಿಬಿಎಂಪಿ ವತಿಯಿಂದ ಭಾನುವಾರ ಪುರಭವನದ ಸಮೀಪ ಇರುವ ದಾಸಪ್ಪ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಕೆ. ಪಾಟೀಲ್, `ಮಕ್ಕಳು ಭವಿಷ್ಯದಲ್ಲಿ ಸದೃಢ ನಾಗರಿಕರಾಗಬೇಕಾದರೆ ಅವರಿಗೆ ಉತ್ತಮ ಆರೋಗ್ಯ ಕಲ್ಪಿಸಬೇಕು~ ಎಂದು ಸಲಹೆ ಮಾಡಿದರು.

ಶಿಬಿರದಲ್ಲಿ ಉಚಿತ ತಪಾಸಣೆಗೊಳಪಡಿಸಿದ ಮಕ್ಕಳಿಗೆ ಹೆಸರುಕಾಳು, ಹಣ್ಣು, ಮೊಟ್ಟೆ , 5 ಕೆ.ಜಿ ಗೋಧಿ ಹಾಗೂ ಉಚಿತವಾಗಿ ಔಷಧಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ವೆಂಕಟೇಶಬಾಬು, ಸದಸ್ಯ ಧನರಾಜ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT