ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಟಿಕೆಟ್: ಗುಲ್ಬರ್ಗದಲ್ಲಿ ಗುಸುಗುಸು ಪಿಸಪಿಸ!

Last Updated 17 ಏಪ್ರಿಲ್ 2013, 20:16 IST
ಅಕ್ಷರ ಗಾತ್ರ

ಗುಲ್ಬರ್ಗ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವ ಬಗ್ಗೆ ಇಲ್ಲಿ ಬಹಿರಂಗವಾಗಿ ವಿರೋಧ ವ್ಯಕ್ತವಾಗಿಲ್ಲ. ಕಾಂಗ್ರೆಸ್ ನಾಯಕರು ಒಟ್ಟಾಗಿಯೇ ಪ್ರಚಾರ ನಡೆಸಿದ್ದಾರೆ. ಆದರೆ ಅಲ್ಲಲ್ಲಿ ಪಿಸುಮಾತಿನಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ.

ಅದು ಗುಲ್ಬರ್ಗ ಕಾಂಗ್ರೆಸ್ ಕಚೇರಿ. ಅಲ್ಲಿ ಪಕ್ಷಕ್ಕೆ ಬಂದವರನ್ನು ಸೇರಿಸಿಕೊಳ್ಳುವ ಕಾರ್ಯಕ್ರಮ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಜಿಲ್ಲೆಯ ಹಲವಾರು ಕಾಂಗ್ರೆಸ್ ಮುಖಂಡರು ಅಲ್ಲಿದ್ದರು. ಕಚೇರಿಯ ಹೊರಭಾಗದಲ್ಲಿ ನಿಂತಿದ್ದ ಯುವಕ ಯೂಸುಫ್ ಖಾನ್ `ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ನಾಲ್ಕು ದಶಕದಿಂದಲೂ ಅಧಿಕಾರದಲ್ಲಿದ್ದಾರೆ. ಸಾಕಷ್ಟು ಹೋರಾಟ ನಡೆಸಿದ್ದಾರೆ. ರಾಷ್ಟ್ರಮಟ್ಟದಲ್ಲಿಯೂ ಬೆಳೆದು ನಿಂತಿದ್ದಾರೆ.

ಅಸ್ಪೃಶ್ಯತೆಯ ನೋವುಗಳನ್ನು ಅವರೂ ಅನುಭವಿಸಿದ್ದಾರೆ. ಆದರೆ ಅವರ ಪುತ್ರನಿಗೆ ಈ ಅನುಭವ ಆಗಿದೆಯೇ?' ಎಂದು ಪ್ರಶ್ನೆ ಮಾಡಿದ. ಇಷ್ಟಕ್ಕೇ ಆತ ನಿಲ್ಲಿಸಲಿಲ್ಲ. `ಖರ್ಗೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಇನ್ಯಾರನ್ನಾದರೂ ಬೆಳೆಸಬಹುದಾಗಿತ್ತಲ್ಲವೇ?' ಎಂದು ಕೇಳಿದ. ಆದರೆ ವೇದಿಕೆಯಲ್ಲಿ ಕುಳಿತಿದ್ದ ಖರ್ಗೆಯವರು `ನನ್ನ ಮಗನಿಗೆ ಟಿಕೆಟ್ ಸಿಕ್ಕಿದ್ದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಅವನ ಸ್ವಂತ ಅರ್ಹತೆಯಿಂದ ಟಿಕೆಟ್ ಪಡೆದುಕೊಂಡಿದ್ದಾನೆ' ಎಂದು ಹೇಳುತ್ತಿದ್ದರು!

2008ರ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಖರ್ಗೆ ಅವರೇ ಜಯ ಗಳಿಸಿದ್ದರು. ನಂತರ ಅವರು ಲೋಕಸಭೆಗೆ ಆಯ್ಕೆಯಾದ ಮೇಲೆ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಪ್ರಿಯಾಂಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಿಜೆಪಿಯ ವಾಲ್ಮೀಕಿ ನಾಯಕ ಜಯ ಗಳಿಸಿದ್ದರು. ಈಗಿನ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಲ್ಲಿ ಯಾವಾಗಲೂ ಸ್ಪರ್ಧಿಸುತ್ತಿದ್ದ ಖರ್ಗೆ ಅವರು ವಿಧಾನ ಸಭಾಕ್ಷೇತ್ರ ಪುನರ್ ವಿಂಗಡಣೆ ನಂತರ ಚಿತ್ತಾಪುರಕ್ಕೆ ಬಂದಿದ್ದರು.

ಕಳೆದ ಬಾರಿ ಖರ್ಗೆಯವರ ಮಗ ಸೋತಿದ್ದರಿಂದ ಈ ಬಾರಿ ಅನುಕಂಪದ ಮತಗಳು ಬೀಳಬಹುದೇ ಎಂದು ಕೇಳಿದರೆ `ಹೌದ್ರಿ ಸರ್. ಅಂತಹ ವಾತಾವರಣ ಅದ' ಎಂದು ವಿಶ್ವನಾಥ ಪಾಟೀಲ ಹೇಳಿದರು. `ಅಪ್ಪ ಚಲೋ ಮನಶಾರಿ. ಮಗ ಜನರೊಂದಿಗೆ ಅಷ್ಟು ಬೆರೆಯೋದಿಲ್ರಿ. ಅವರು ಯಾವಾಗಲೂ ಬೆಂಗಳೂರಿನಾಗೇ ಇರ‌್ತಾರ‌್ರಿ' ಎಂಬ ಮಾತು ಮಲ್ಲಿನಾಥ ಕತ್ತಿ ಅವರಿಂದ ಬಂತು.

ಚಿತ್ತಾಪುರ ಅತ್ಯಂತ ಹಿಂದುಳಿದ ತಾಲ್ಲೂಕು. ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತವೆ. ರಸ್ತೆ ಇಲ್ಲ. ಚಿತ್ತಾಪುರದಿಂದ ಕೇವಲ ಎಂಟು ಕಿ.ಮೀ ದೂರದಲ್ಲಿರುವ ಮೊಗಲ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಸರ್ಕಾರಿ ಬಸ್ ಹೋಗುವುದಿಲ್ಲ. ಇಟಗ ಗ್ರಾಮಕ್ಕೂ ರಸ್ತೆ ಇಲ್ಲ. ಬಸ್ಸೂ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ಹಿಂದೆ ಇದೆ. ಅಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದರೂ ಈ ಸೌಲಭ್ಯ ಕೊಡಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಕೇಳುವವರೂ ಇದ್ದಾರೆ.

ಖರ್ಗೆ ಅವರು ಕೇಂದ್ರ ಸಚಿವರಾದ ನಂತರ ಏಕಲವ್ಯ ಶಾಲೆ ತಂದಿದ್ದಾರೆ. ಚಿತ್ತಾಪುರದ ಮೇಲೆ ಹಾದು ಹೋಗುವಂತೆ ರಾಷ್ಟ್ರೀಯ ಹೆದ್ದಾರಿ ತಂದಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಅವರು ಯಾವಾಗಲೂ ಹಿಂದೆ ಬಿದ್ದಿಲ್ಲ ಎಂಬುದು ಸೋಪಾನ ಅವರ ಅಭಿಪ್ರಾಯ.

`ಅಸ್ಪೃಶ್ಯರನ್ನು ಬೆಂಬಲಿಸಿದರೆ ಮುಂದೆ ತೊಂದರೆಯಾಗಲಿದೆ ಎಂಬ ಭಾವನೆ ಮೇಲ್ವರ್ಗದಲ್ಲಿದೆ. ಅದಕ್ಕಾಗಿಯೇ ಮೀಸಲು ಕ್ಷೇತ್ರದಲ್ಲಿ ಸ್ಪೃಶ್ಯರನ್ನೇ ಬೆಂಬಲಿಸುವ ನಿರ್ಧಾರವನ್ನು ಅವರು ಕೈಗೊಂಡಿದ್ದರಿಂದ ಕಳೆದ ಬಾರಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಿತು. ಈ ಬಾರಿಯೂ ಮೇಲ್ವರ್ಗದವರು ಹಾಗೆ ಮಾಡುವುದಿಲ್ಲ ಎನ್ನುವುದು ಯಾವ ಗ್ಯಾರಂಟಿ' ಎಂದು ಮಲ್ಲಿಕಾರ್ಜುನ ಪ್ರಶ್ನೆ ಮಾಡುತ್ತಾರೆ.

ಚಿತ್ತಾಪುರದಲ್ಲಿಯೂ ಜಾತಿ ರಾಜಕೀಯ ನಡೆಯುತ್ತದೆಯಾ ಎಂದು ಕೇಳಿದರೆ `ಎಲ್ಲ ಕಡೆಯೂ ಸೂರ್ಯ ಮುಳುಗಿದ ನಂತರ ನಮ್ಮ ಊರಲ್ಲಿ ಮಾತ್ರ ಬೆಳಕು ಇರಬೇಕು ಎಂದರೆ ಹೇಗೆ?' ಎನ್ನುವುದು ಅವರ ಮರು ಪ್ರಶ್ನೆ.

ತಯಾರಿ: ಗುಲ್ಬರ್ಗ ರಾಜಕೀಯ ಎಂದರೆ ಅದು ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂಸಿಂಗ್ ಅವರ ರಾಜಕೀಯ.ಈಗ ಇಬ್ಬರ ಮಕ್ಕಳೂ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಧರಂಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಅವರು ಜೇವರ್ಗಿ ಕ್ಷೇತ್ರದಲ್ಲಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ ಜನರಿಗೆ ಹತ್ತಿರವಾಗಿದ್ದಾರೆ. `ರಾತ್ರಿ ಜಡ್ಡಾದರೂ ಡಾಕ್ಟರ್ ಬರ‌್ತಾರೆ' ಎನ್ನುವ ಮಾತುಗಳು ಅಲ್ಲಿ ಕೇಳಿ ಬರುತ್ತದೆ. ಕಳೆದ ಬಾರಿ ಗುಲ್ಬರ್ಗ ದಕ್ಷಿಣದಲ್ಲಿ ನಿಂತು ಸೋಲು ಅನುಭವಿಸಿದ್ದ ಅಜಯ್ ಸಿಂಗ್ ಈ ಬಾರಿ ತಮ್ಮ ತಂದೆಯ ಕ್ಷೇತ್ರವಾದ ಜೇವರ್ಗಿಯಲ್ಲಿ ಸ್ಪರ್ಧೆ ಮಾಡಿದ್ದಾರೆ.

`ಅಪ್ಪನಿಗಿಂತ ಮಗ ಇನ್ನೂ ಒಳ್ಳೆಯವರು' ಎಂದು ಶ್ರೀನಿವಾಸ ಹರವಾಳ್ಕರ ಹೇಳಿದರು.  ಜೇವರ್ಗಿಯಲ್ಲಿ ಹಾಲಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ ನರಿಬೋಳ ಅವರ ಬಗ್ಗೆ ಅಂತಹ ವಿರೋಧ ಕಾಣುತ್ತಿಲ್ಲ. ಕಳೆದಬಾರಿ ಧರಂಸಿಂಗ್ ಅವರನ್ನು ಕೇವಲ 52 ಮತಗಳಿಂದ ಸೋಲಿಸಿದ್ದ ದೊಡ್ಡಪ್ಪ ಗೌಡ ಅವರಿಗೆ ಅವರ ಸಹೋದರನ ಬಗ್ಗೆ ಇರುವ ಅತೃಪ್ತಿ ಅಡ್ಡಗೋಡೆಯಾದರೆ ಅಚ್ಚರಿಯಿಲ್ಲ. ಜೇವರ್ಗಿಯಲ್ಲಿ ಕುಡಿಯುವ ನೀರಿನ ತೊಂದರೆ ಇದೆ.

ಭೀಮಾ ತೀರದಲ್ಲಿಯೇ ಇದ್ದರೂ ಜನರು ನೀರಿಗಾಗಿ ಗೋಳು ಪಡುವುದು ತಪ್ಪಿಲ್ಲ.`ಜೇವರ್ಗಿಯಲ್ಲಿ ಬಣಜಿಗರು ನಿರ್ಣಾಯಕ ಮತದಾರರು. ಆದರೆ ಈ ಬಾರಿ ಅವರಲ್ಲಿಯೂ ಎರಡು ಪಂಗಡವಾಗಿದೆ. ಅದರ ಲಾಭ ಅಜಯಸಿಂಗ್ ಅವರಿಗೆ ಸಿಗುತ್ತದೆ. ಅಲ್ಲದೆ ಕಳೆದ ಬಾರಿ 11 ಪಕ್ಷೇತರರು ನಿಂತಿದ್ದರು. ಅವರು ಮತವನ್ನು ಕಸಿದಿದ್ದರಿಂದ ಧರ್ಮಸಿಂಗ್ ಅವರಿಗೆ ಸೋಲುಂಟಾಯಿತು. ಈ ಬಾರಿ ಪಕ್ಷೇತರರು ಹೆಚ್ಚು ನಿಲ್ಲದಂತೆ ನೋಡಿಕೊಂಡರೆ ಅಜಯ್ ಸಿಂಗ್‌ಗೆ ಗೆಲುವು ಸಾಧ್ಯ' ಎಂಬ ವಿಶ್ವಾಸ ಬಸವರಾಜ ಪೂಜಾರ ಅವರದ್ದು.

ಆಕಳ ಬಾಲದ ಮೇಲೆ ಆಣೆ
ವಿಜಾಪುರ ಜಿಲ್ಲೆಯಲ್ಲಿ ಲಂಬಾಣಿಗರು ಬೇವಿಲ ತಪ್ಪಲದ ಮೇಲೆ ಆಣೆ ಮಾಡುವ ಪದ್ಧತಿ ಇದ್ದರೆ ಇಲ್ಲಿ ಲಂಬಾಣಿಗರು ಆಕಳ ಬಾಲವನ್ನು ಕೈಯಲ್ಲಿ ಹಿಡಿದು ಆಣೆ ಮಾಡುವ ಪದ್ಧತಿ ಇದೆಯಂತೆ.  `ಲಂಬಾಣಿಗಳು ತಂದೆ ಮೇಲೆ, ತಾಯಿ ಮೇಲೆ ಆಣೆ ಮಾಡಿದರೂ ಮುರಿಯಬಹುದು.

ಆದರೆ ಆಕಳ ಬಾಲ ಹಿಡಿದು ಆಣೆ ಮಾಡಿದರೆ ಮುರಿಯುವುದಿಲ್ಲ. ಇಂತಹ ಪ್ರಯೋಗಗಳು ಈ ಹಿಂದಿನ ಚುನಾವಣೆಯಲ್ಲಿ ನಡೆದಿವೆ. ಈ ಬಾರಿಯೂ ಅದು ನಡೆಯುವುದಿಲ್ಲ ಎನ್ನಲು ಸಾಧ್ಯವಿಲ್ಲ” ಎಂದರು ಭೀಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT