ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಬಿಸಿ ಊಟ ಮಾತ್ರ ತಪ್ಪಿಲ್ಲ

ಕಾಳೆಕಾರೆ ಶಾಲೆಯಲ್ಲಿ ಒಲೆ ಹಚ್ಚಲ್ಲ; ಪಾತ್ರೆಗಳ ಸದ್ದಿಲ್ಲ....
Last Updated 17 ಡಿಸೆಂಬರ್ 2013, 6:47 IST
ಅಕ್ಷರ ಗಾತ್ರ

ಮುಂಡಗೋಡ: ಬಿಸಿ ಊಟದ ಪಾತ್ರೆಗಳು ಇಲ್ಲಿ ಸದ್ದು ಮಾಡುವುದಿಲ್ಲ, ಇಲ್ಲಿನ ಮುಖ್ಯ ಶಿಕ್ಷಕರಿಗೆ ತರಕಾರಿ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಖರೀದಿ ಮಾಡಬೇಕೆನ್ನುವ ಚಿಂತೆಯಿಲ್ಲ. ಬಿಸಿ ಊಟದ ಕೋಣೆಯಿಲ್ಲದಿದ್ದರೂ ಸಹಿತ ಈ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನಿರಂತರವಾಗಿ ಬಡಿಸಲಾಗುತ್ತಿದೆ.

ತಾಲ್ಲೂಕಿನ ಗುಂಜಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಳೆಕಾರೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೇಂದ್ರ ಮಂಜೂರು ಆಗದೇ ಇರುವುದರಿಂದ  ಕಳೆದ ಮೂರು ವರ್ಷಗಳಿಂದ ಪಕ್ಕದ ಶಾಲೆಯಿಂದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಬಡಿಸಲಾಗುತ್ತಿದೆ. ಸುಮಾರು ಎರಡು ಕಿ.ಮೀ. ದೂರದ ಮೈನಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ತಯಾರಿಸಿ ಅಲ್ಲಿಂದಲೇ 21ಮಕ್ಕಳಿರುವ ಕಾಳೆಕಾರೆ ಶಾಲೆಗೆ ಸರಬರಾಜು ಮಾಡಲಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆಯ ಹಾಲನ್ನು ಸಹ ಮೈನಳ್ಳಿ ಶಾಲೆಯಿಂದಲೇ ತಯಾರಿಸಿ ಒದಗಿಸಲಾಗುತ್ತಿದೆ.

ಗೌಳಿಗ ಜನಾಂಗದವರೇ ಹೆಚ್ಚಾಗಿ ವಾಸಿಸುವ ಕಾಳೆಕಾರೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಗಿದೆ.  ಅದಕ್ಕೂ ಮೊದಲು ಈ ಗ್ರಾಮದ ಮಕ್ಕಳು ಎರಡು ಕಿ.ಮೀ. ದೂರದ ಮೈನಳ್ಳಿ ಶಾಲೆಗೆ ಹೋಗುತ್ತಿದ್ದರು. ಶಾಲೆ ಪ್ರಾರಂಭವಾದರೂ ಸಹಿತ ಅಡುಗೆ ಕೇಂದ್ರ ಮಂಜೂರು ಆಗದೇ ಇರುವುದು ಹಾಗೂ ಸಿಬ್ಬಂದಿ ನೇಮಕವಾಗದಿರುವುದರಿಂದ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಬೇರೆ ಶಾಲೆಯಿಂದ ಸರಬರಾಜು ಮಾಡಲಾಗುತ್ತಿದೆ. ಬಿಸಿ ಊಟದ ಕೋಣೆ ನಿರ್ಮಾಣಕ್ಕೆ ಹಲವು ಸಲ ಒತ್ತಾಯಿಸಿದರೂ ಇನ್ನೂತನಕ ಕಾರ್ಯಗತಗೊಂಡಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

ತಲೆಯ ಮೇಲೆ ಬಿಸಿಯೂಟದ ಬುತ್ತಿ: ತಾಲ್ಲೂಕಿನ ಕಾಳೆಕಾರೆ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ಮೈನಳ್ಳಿ ಶಾಲೆಯಿಂದ ನೇಮಕಗೊಂಡ ಮಹಿಳೆ ಕಾಲ್ನಡಿಗೆಯಲ್ಲಿಯೇ ತಲೆಯ ಮೇಲೆ ಹೊತ್ತುಕೊಂಡು ಬಂದು ಈ ಶಾಲೆಯ ಮಕ್ಕಳಿಗೆ ಊಟ ಬಡಿಸುತ್ತಾರೆ. ಬಿಸಿಲು, ಮಳೆ ಎನ್ನದೇ ಮಕ್ಕಳ ಸೇವೆಯಲ್ಲಿ ಮಹಿಳೆ ನಿರತರಾಗಿದ್ದಾರೆ. ಸುಮಾರು ಎರಡು ಕಿ.ಮೀ. ವರೆಗೆ ನಡೆದು ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಊಟ ತಂದು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಅಧಿಕಾರಿ ಹೇಳಿಕೆ: ‘ಕಾಳೆಕಾರೆ ಪ್ರಾಥಮಿಕ ಶಾಲೆಗೆ ಅಡುಗೆ ಕೇಂದ್ರ ಮಂಜೂರು ಆಗಿದ್ದು ಅಡುಗೆ ಸಿಬ್ಬಂದಿ ನೇಮಕಾತಿಯನ್ನು ಸಹ ಮಾಡಲಾಗಿದೆ. ಅಡುಗೆ ಅನಿಲ ಮಂಜೂರು ಆದ ನಂತರ ಬಿಸಿ ಊಟವನ್ನು ಅಲ್ಲಿಯೇ ತಯಾರಿಸಲಾಗುವುದು. ಸದ್ಯ ಮೈನಳ್ಳಿ ಶಾಲೆಯಿಂದ ಊಟವನ್ನು ತರುತ್ತಿರುವ ಸಿಬ್ಬಂದಿಗೆ ಸಾಗಾಣಿಕ ವೆಚ್ಚ ಎಂದು ತಿಂಗಳಿಗೆ ₨ 500 ನೀಡಲಾಗುತ್ತಿದೆ’ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ ಸಾಳುಂಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ಇದರಂತೆ ತಾಲ್ಲೂಕಿನ ಇಂದೂರ ಪ್ಲಾಟ್‌ನ ಸಂಜಯನಗರ, ಪಟ್ಟಣದ ದೇಶಪಾಂಡೆ ನಗರದ ಉರ್ದು ಪ್ರಾಥಮಿಕ ಶಾಲೆ, ಗೊಟಗೋಡಿಕೊಪ್ಪ ಪ್ಲಾಟ್‌ ಹಾಗೂ ಲೊಯೋಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ  ಅಡುಗೆ ಕೇಂದ್ರಗಳು ಮಂಜೂರು ಆಗಿವೆ. ಕೆಲವೆಡೆ ಅಡುಗೆ ಸಿಬ್ಬಂದಿ ನೇಮಕಾತಿಯನ್ನು ಸಹ ಮಾಡಲಾಗಿದೆ. ಸದ್ಯ ಅಡುಗೆ ಅನಿಲ ಮಂಜೂರಿಯಾಗಬೇಕಾಗಿದ್ದು ನಂತರದಲ್ಲಿ ಬಿಸಿ ಊಟವನ್ನು ಅಲ್ಲಿಯೇ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತದೆ. ಅಲ್ಲಿಯವರೆಗೆ ಸನಿಹದ ಶಾಲೆಯಲ್ಲಿ ಬಿಸಿ ಊಟ ಹಾಗೂ ಹಾಲನ್ನು ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ ಎಂದು ಮಂಜುನಾಥ ಸಾಳುಂಕೆ ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT