ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಲಸಿಕೆ: ಹೊಸ ವ್ಯವಸ್ಥೆ ಪರಿಣಾಮಕಾರಿ

Last Updated 7 ಫೆಬ್ರುವರಿ 2012, 5:15 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಪ್ರಕ್ರಿಯೆಯ ಸಮರ್ಪಕ ನಿರ್ವಹಣೆ ಹಾಗೂ ಸೂಕ್ತ ಮೇಲ್ವಿಚಾರಣೆ ನಡೆಸಲು ಜಾರಿಗೊಳಿಸಿರುವ ಹೊಸ ವ್ಯವಸ್ಥೆ ಪರಿಣಾಮಕಾರಿ ಎನಿಸಿದೆ~ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಹಾಗೂ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ `ಅಸೋಸಿಯೇಷನ್ ಫಾರ್ ಅಕ್ರೆಡಿಷನ್ ಫಾರ್ ಹ್ಯೂಮನ್ ರೀಸರ್ಚ್ ಪ್ರೊಟೆಕ್ಷನ್ ಪ್ರೋಗ್ರಾಮ್~ನ (ಎಎಎಚ್‌ಆರ್‌ಪಿಪಿ) ಮಾನ್ಯತೆ ಪತ್ರ ಪ್ರದಾನ ಮಾಡಿ ಅವರು ಮಾತನಾಡಿದರು.

`ಕೇಂದ್ರ ಸರ್ಕಾರದ ವತಿಯಿಂದ ದೇಶದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ವಿವಿಧ ಲಸಿಕೆಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ಮಗು ಲಸಿಕೆ ಪಡೆಯುವಂತೆ ಮಾಡಲು ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಆದರೂ ಇದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿರಲಿಲ್ಲ~ ಎಂದರು.

`ಆ ಹಿನ್ನೆಲೆಯಲ್ಲಿ ಲಸಿಕೆ ಪಡೆದ ಮಗುವಿನ ಹೆಸರು, ವಿಳಾಸ ಹಾಗೂ ದೂರವಾಣಿ ಆಧಾರಿತ ಮಾಹಿತಿ ಕಲೆ ಹಾಕಲಾಗುತ್ತಿದೆ. ಪರಿಣಾಮ ಹಿಂದಿನ ಅಂಕಿ-ಅಂಶಗಳಿಗೂ ಈಗಿನ ಅಂಕಿ ಅಂಶಗಳಿಗೂ ಸಾಕಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ~ ಎಂದರು.

`ಲಸಿಕೆ ಹಾಕುವ ಪ್ರಕ್ರಿಯೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ತೊಡಗಿಸಿಕೊಳ್ಳುವ ಚಿಂತನೆ ಇದೆ. ದೇಶದಲ್ಲಿ ಒಟ್ಟು 335 ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿದ್ದು, ಇವುಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು~ ಎಂದು ಹೇಳಿದರು.

`ದೇಶದಲ್ಲಿನ ಔಷಧ ತಯಾರಿಕಾ ಕಂಪೆನಿಗಳಿಂದ ಜಗತ್ತಿನ 212 ರಾಷ್ಟ್ರಗಳಿಗೆ ಔಷಧ ಪೂರೈಕೆಯಾಗುತ್ತಿದೆ. ಹಾಗೆಯೇ 150 ದೇಶಗಳಿಗೆ ವಿವಿಧ ಲಸಿಕೆಗಳನ್ನು ಪೂರೈಸಲಾಗುತ್ತಿದೆ. ಔಷಧೀಯ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳಾಗಬೇಕು. ಜನಸ್ನೇಹಿ ಹಾಗೂ ಸುರಕ್ಷಿತ ವಿಧಾನಗಳ ಮೂಲಕ ಔಷಧಗಳ ಪ್ರಯೋಗಾರ್ಥ ಬಳಕೆಗೆ ಮುಂದಾಗಬೇಕು~ ಎಂದರು.

`ಮಣಿಪಾಲ್ ಆಸ್ಪತ್ರೆಯು ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪ್ರಮುಖವೆನಿಸಿದೆ. ಮುಂಬೈ, ದೆಹಲಿ, ಚೆನ್ನೈನಂತಹ ಮಹಾನಗರಗಳಲ್ಲಿ ಸರಣಿ ಆಸ್ಪತ್ರೆಗಳನ್ನು ಹೊಂದಿರುವ ಹಲವು ಆಸ್ಪತ್ರೆಗಳು ಈ ಮಾನ್ಯತೆ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಮಣಿಪಾಲ್ ಆಸ್ಪತ್ರೆಯು ಪ್ರತಿಷ್ಠಿತ ಎಎಎಚ್‌ಆರ್‌ಪಿಪಿ ಮಾನ್ಯತೆ ಪಡೆದಿರುವುದು ಆಸ್ಪತ್ರೆಯ ಗುಣಮಟ್ಟದ ಸೇವೆಯನ್ನು ತೋರಿಸುತ್ತದೆ~ ಎಂದರು.

ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಗುಣಮಟ್ಟ ವಿಭಾಗದ ಅಧ್ಯಕ್ಷ ಡಾ.ಎಸ್.ಸಿ. ನಾಗೇಂದ್ರಸ್ವಾಮಿ, ವೈದ್ಯಕೀಯ ನಿರ್ದೇಶಕ ಡಾ.ಎಚ್. ಸುದರ್ಶನ ಬಲ್ಲಾಳ್, ವೈದ್ಯಕೀಯ ಅಧೀಕ್ಷಕ ಡಾ.ಪುಲ್ಗಾಂವ್ಕರ್, ಉಪಾಧ್ಯಕ್ಷ (ನಿರ್ವಹಣೆ ವಿಭಾಗ) ಸಿ.ಜಿ. ಮುತ್ತಣ್ಣ ಇತರರು ಉಪಸ್ಥಿತರಿದ್ದರು.


ನಿಯಮಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯ

`ಔಷಧ ತಯಾರಿಕಾ ಕಂಪೆನಿಗಳು ಅಭಿವೃದ್ಧಿಪಡಿಸಿದ ಔಷಧಗಳ ಪ್ರಯೋಗಾರ್ಥ ಬಳಕೆ ಸಂದರ್ಭದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು~ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಹೇಳಿದರು.

ಔಷಧ ತಯಾರಿಕಾ ಕಂಪೆನಿಗಳು ಅಕ್ರಮ ಮತ್ತು ಅನೈತಿಕವಾಗಿ ಕೈಗೊಳ್ಳುತ್ತಿರುವ ಔಷಧಗಳ ಪ್ರಯೋಗಾರ್ಥ ಬಳಕೆ ಬಗ್ಗೆ ಮಧ್ಯಪ್ರದೇಶ ಮೂಲದ ಸ್ವಾಸ್ಥ್ಯ ಅಧಿಕಾರ್ ಮಂಚ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿರುವ ಸಂಬಂಧ ಅವರು ಪ್ರತಿಕ್ರಿಯೆ ನೀಡಿದರು.

`ದೇಶದಲ್ಲಿ ಔಷಧ ತಯಾರಿಕಾ ಕಂಪೆನಿಗಳು ಹೊಸ ಔಷಧವನ್ನು ಪ್ರಯೋಗಾರ್ಥವಾಗಿ ಮನುಷ್ಯರ ಮೇಲೆ ಬಳಕೆ ಮಾಡುವಾಗ ನಿಯಮಗಳನ್ನು ಪಾಲಿಸಲೇಬೇಕು. ಕಾನೂನಿನ ಮಿತಿಯೊಳಗೆ ಪ್ರಯೋಗ ನಡೆಸಬೇಕು. ಒಂದೊಮ್ಮೆ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಭಾರಿ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂಸ್ಥೆಗಳ ವಿರುದ್ಧ ಕೇಂದ್ರ ಔಷಧ ಮಹಾನಿಯಂತ್ರಕರು ಕ್ರಮ ಕೈಗೊಳ್ಳಲಿದ್ದಾರೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT