ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗದಾಳರ `ಹಿಂದೂಸ್ತಾನದ ಭೂಗೋಲ'

ಹಳತು ಹೊನ್ನು
Last Updated 27 ಜುಲೈ 2013, 19:59 IST
ಅಕ್ಷರ ಗಾತ್ರ

ಹಿಂದೂಸ್ತಾನದ ಭೂಗೋಲ
ಲೇ: ವೆಂಕಟೇಶ ನರಸಿಂಗರಾವ ಮಗದಾಳ, ಪು: 154; ಬೆ: ರೂ. 8 ಆಣೆ, ಪ್ರ: ಕರ್ನಾಟಕ ಪ್ರಿಂಟಿಂಗ್ ವರ್ಕ್ಸ್, ಧಾರವಾಡ.


`ಹಿಂದೂಸ್ತಾನದ ಭೂಗೋಲ' ಧಾರವಾಡದ ಹೆಣ್ಣುಮಕ್ಕಳ ಟ್ರೇನಿಂಗ್ ಕಾಲೇಜಿನ ಶಿಕ್ಷಕರಾದ ವೆಂಕಟೇಶ ನರಸಿಂಗರಾವ ಮಗದಾಳ (ಕೆಲ ಕಾಲ ಪುಣೆ ಫರ್ಗ್ಯುಸನ್ ಕಾಲೇಜಿನ ದಕ್ಷಿಣ ಫೆಲೋ) ಅವರ ಕೃತಿ. ಐದು ಸಾವಿರ ಪ್ರತಿಗಳು ಅಚ್ಚಾಗಿರುವ, ಇಲ್ಲಿ ಪ್ರಸ್ತಾಪಿಸಲಾಗುತ್ತಿರುವ ಎರಡನೇ ಆವೃತ್ತಿಯ ಈ ಪುಸ್ತಕವನ್ನು 1915ರಲ್ಲಿ ಮಿ. ಕೃಷ್ಣಾಜಿ ಹಣಮಂತ ಮುದವೇಢಕರ ಇವರು ಧಾರವಾಡದ ಕರ್ನಾಟಕ ಪ್ರಿಂಟಿಂಗ್ ವರ್ಕ್ಸ್ ಮುದ್ರಣಾಲಯದಲ್ಲಿ ಮುದ್ರಿಸಿ ಪ್ರಸಿದ್ಧಿ ಮಾಡಿದರು. 8 ಆಣೆ ಬೆಲೆಯ ಅಷ್ಟಮ ಡೆಮಿ ಆಕಾರದ 14+140 ಪುಟಗಳ ಈ ಭೂಗೋಲದ ಕೃತಿಯನ್ನು ಮುಂಬಯಿ ಸರ್ಕಾರದ ವಿದ್ಯಾ ಇಲಾಖೆ ಪರವಾಗಿ ಧಾರವಾಡದ ಕೆ.ವ್ಹಿ. ಭಂಡಿವಾಡ ಎನ್ನುವವರು ಪ್ರಕಾಶಪಡಿಸಿದ್ದಾರೆ. ಇದರ ಮೊದಲ ಮುದ್ರಣದ ಬಗ್ಗೆ ಮಾಹಿತಿಗಳಿಲ್ಲವಾದರೂ 1911ನೇ ಇಸವಿಯ ಖಾನೇಸುಮಾರಿಯನ್ನು (ಜನಗಣತಿ) ಈ ಕೃತಿಯೊಳಗೆ ಉಲ್ಲೇಖಿಸಿರುವುದರಿಂದ ಇದರ ಮೊದಲ ಮುದ್ರಣವು ಸುಮಾರು 1911ರ ನಂತರ ಹಾಗೂ 1915ಕ್ಕೆ ಮೊದಲು ಆಗಿದೆ ಎಂದು ಅಂದಾಜಿಸಬಹುದು.

ವೆಂಕಟೇಶ ನರಸಿಂಗರಾವ ಅವರು `ಏಷ್ಯಾದ ಭೂಗೋಲ' ಎನ್ನುವ ಕೃತಿಯನ್ನೂ ರಚಿಸಿದ್ದಾರೆ. ಇದರ ಜೊತೆಗೆ ಬಿ.ಎಸ್. ಪುರೋಹಿತ ಎಂಬ ಲೇಖಕರೊಂದಿಗೆ `ಅಂಕಗಣಿತ' ಎನ್ನುವ ಕೃತಿಯನ್ನೂ ರಚಿಸಿರುತ್ತಾರೆ. ವಿದ್ಯಾ ಇಲಾಖೆ ಪ್ರಚುರಪಡಿಸಿರುವುದರಿಂದ ಮತ್ತು ಪುಸ್ತಕದ ಕೊನೆಯಲ್ಲಿ ಮಾದರಿಯ ಪ್ರಶ್ನೆಗಳು ಎಂಬ ಘಟಕವು ಇರುವುದರಿಂದ ಪ್ರಾಯಶಃ ಈ ಕೃತಿಯು ಆ ಕಾಲಘಟ್ಟದಲ್ಲಿ ಪಠ್ಯವಾಗಿರುವ ಸಾಧ್ಯತೆಯಿದೆ. ಈ ಕೃತಿಯ ಆರಂಭದಲ್ಲಿ DEDICATED to Prof. J. N. Fraser, M.A. (Oxen), Principal, Secondary Teachers’ Training College, Bombay. (With Kind Permission) by HIS ADMIRING & OBEDIENT PUPIL- THE AUTHOR ಎನ್ನುವ ಒಕ್ಕಣೆ ಇದೆ.

ಈ ಭೂಗೋಲವನ್ನು ಅಧ್ಯಯನ ಮಾಡುವಾಗ ನಕಾಶೆಗಳನ್ನು ಬಳಸದೆ ಓದಬಾರದೆಂದೂ ಅಧ್ಯಯನ ಎಂದರೆ ಕಂಠಪಾಠವಲ್ಲವೆಂದೂ ಲೇಖಕರು ಸೂಚಿಸಿದ್ದಾರೆ. ಹುಡುಗರಿಗೆ ತಲೆ ಚಿಟ್ಟೆನಿಸುವ ಹಾಗೆ ಅಪ್ರಯೋಜಕವಾಗಿ ಬರೆಯಬಾರದು ಎಂಬ ಎಚ್ಚರ ಲೇಖಕರಿಗಿದೆ. ಭೂಗೋಲ ಅಧ್ಯಯನದ ಶಿಸ್ತು ಕುರಿತು ಪ್ರಸ್ತಾವನೆಯಲ್ಲಿ ಲೇಖಕರು- “ಭೂಗೋಲವು ಮನುಷ್ಯನಿಗೂ ಅವನ ವಾಸಸ್ಥಾನಕ್ಕೂ ಇರುವ ಪರಸ್ಪರ ಸಂಬಂಧವನ್ನು ಅಭ್ಯಾಸಿಸುವುದು. ಆದ್ದರಿಂದ ಈ ಪುಸ್ತಕದಲ್ಲಿ ನಾವು ಹಿಂದೂಸ್ತಾನದ ಪರ್ವತ, ತಪ್ಪಲು, ಹೊಳೆ ಮೊದಲಾದವುಗಳ ಹೆಸರುಗಳನ್ನು ಮಾತ್ರ ಅಭ್ಯಾಸಿಸುವುದಲ್ಲದೆ, ಈ ದೇಶದ ಜನರ ಸ್ಥಿತಿಗಳಿಗೂ, ಇವುಗಳಿಗೂ ಯಾವ ಸಂಬಂಧವಿರುವುದು? ಎಂಬುದನ್ನು ಕಂಡು ಹಿಡಿಯಲಿಕ್ಕೆ ಪ್ರಯತ್ನಿಸಬೇಕು... ಭೂಗೋಲದಲ್ಲಿ ಕಾರ್ಯಕಾರಣ ಸಂಬಂಧವು ಮಹತ್ವವಾದದ್ದು” ಎಂದು ಹೇಳಿದ್ದಾರೆ.

ಈ ಕೃತಿಯೊಳಗೆ 9 ನಕಾಶೆಗಳು, 22 ಪ್ರಕರಣಗಳು ಇವೆ. ಆ 22 ಅಧ್ಯಾಯಗಳು ಇಂತಿವೆ: 1. ಮೇರೆಗಳು, ಆಕಾರ, ಕ್ಷೇತ್ರ, ದಂಡೆಯ ಪ್ರದೇಶ, ದ್ವೀಪಗಳು, 2. ಪ್ರಾಕೃತಿಕ ಸ್ವರೂಪ, ಪರ್ವತಗಳು, 3. ಪ್ರಾಕೃತಿಕ ಸ್ವರೂಪ, ತಪ್ಪಲುಗಳು, ಬೈಲುಗಳು, 4. ಹವೆ ಮಳೆಗಳು.  5. ಹೊಳೆಗಳು, ಸರೋವರಗಳು, 6. ಭೂಮಿಯ ಗುಣ, ಕಾಲುವೆಗಳು, ಬರ, 7. ಹುಟ್ಟುವಳಿ,  8. ಉದ್ಯೋಗ, ಕೈಗಾರಿಕೆ, ಕಲಾಕೌಶಲಗಳು, 9. ಮಾರ್ಗಗಳು, 10. ವ್ಯಾಪಾರ, 11. ಇತಿಹಾಸ, ಜನರು, ಜನವಸತಿ, ಧರ್ಮ, ಭಾಷೆ, ಶಿಕ್ಷಣ, 12. ಸರ್ಕಾರ, ರಾಜಕೀಯ ವಿಭಾಗಗಳು, 13. ಪಂಜಾಬ, 14. ಸಂಯುಕ್ತ ಪ್ರಾಂತಗಳು, 16. ಬಿಹಾರ, ಛೋಟಾನಾಗಪುರ, ಓಡಿಶಾ,  17. ಅಸ್ಸಾಂ ಪ್ರಾಂತ, 18. ಮುಂಬಯಿ ಇಲಾಖೆ,  19. ಮದ್ರಾಸ ಇಲಾಖೆ,  20. ಮಧ್ಯಪ್ರಾಂತಗಳು,  21. ದೇಶೀಯ ಸಂಸ್ಥಾನಗಳು, 22. ಸರಹದ್ದಿನ ಪ್ರಾಂತಗಳು.

ಕೃತಿಯ ಕೊನೆಯಲ್ಲಿ 20 ಮಾದರಿ ಪ್ರಶ್ನೆಗಳು ಹಾಗೂ ಹಿಂದೂಸ್ತಾನದ ಅಂದಿನ ರಾಜಕೀಯ ವಿಭಾಗಗಳು, ಕ್ಷೇತ್ರ, ಜನಸಂಖ್ಯೆ, ಮುಖ್ಯ ಅಧಿಕಾರ ಹುದ್ದೆಗಳ ಪಟ್ಟಿಯ ಕೋಷ್ಟಕವೊಂದನ್ನು ನೀಡಲಾಗಿದೆ. ನಮ್ಮ ದೇಶದಿಂದ ರಫ್ತಾಗುತ್ತಿದ್ದ ಮೊತ್ತ ಹಾಗೂ ರಫ್ತು ಮಾಡುತ್ತಿದ್ದ ದೇಶ ಇವುಗಳ ಒಂದು ಕೋಷ್ಟಕವಿದೆ. ಈ ಎಲ್ಲಾ ಭಾಗಗಳಲ್ಲಿ ಒಟ್ಟು 273 ಘಟಕಾಂಶಗಳಲ್ಲಿ ಹಿಂದೂಸ್ತಾನದ ಭೂಗೋಲದ ಬಗ್ಗೆ ಒಂದು ಸ್ಪಷ್ಟ ಚಿತ್ರವನ್ನು ನೀಡಲು ಮಗದಾಳರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ.

ಆ ಕಾಲದಲ್ಲಿ ಪ್ರಚುರವಾಗಿದ್ದ 1903ರಲ್ಲಿ ಕೆ. ರಾಮಸ್ವಾಮಿ ಅಯ್ಯಂಗಾರ್ಯ ಅವರಿಂದ ರಚಿತವಾದ `ಲಘು  ವ್ಯಾಕರಣ', `ಭೂಗೋಲ ವಿದ್ಯಾ-ಭಾಗ 3', `ಮುಂಬಯಿ ಇಲಾಖೆಯ ಭೂಗೋಲ', ಪದ್ಮನಾಭ ಶಂಕರ ಚಂದಾವರಕರ ವಿರಚಿತ `ಹೊಸಪದ್ಧತಿಯ ಭೂಮಿತಿ' (ಭಾಗ-1, 1907), `ಏಷ್ಯಾದ ಭೂಗೋಲ', `ಜಮಾ ಖರ್ಚು, `ಅಂಕಗಣಿತ- ಭಾಗ 1', `ಹಿಂದೂಸ್ತಾನದ ನಿವಾಸಿ', `ಮಾರ‌್ಸಡನ್ ವಿರಚಿತ ಇತಿಹಾಸ' ಎನ್ನುವ ಮಹತ್ವದ ಕನ್ನಡದ ಕೃತಿಗಳ ಉಲ್ಲೇಖ ಈ ಪುಸ್ತಕದಲ್ಲಿದೆ. ಆದರೆ ಈಗ ಈ ಕೃತಿಗಳಾವುವೂ ಲಭ್ಯವಿಲ್ಲ. ಕೆಲವೆಡೆ ಅಡಿಟಿಪ್ಪಣಿಗಳಲ್ಲಿ ವಿಶೇಷ ವಿಷಯಗಳನ್ನು ನಮೂದಿಸಲಾಗಿದೆ. `ಟೀಪೂ' ಎಂಬ ಶೀರ್ಷಿಕೆಯಲ್ಲಿ ಹೆಚ್ಚಿನ ಮಾಹಿತಿಗಳನ್ನು ನೀಡಲಾಗಿದೆ. ಹೊಳೆಗಳು, ಸರೋವರಗಳು ಎಂಬ ಐದನೇ ಪ್ರಕರಣದ ಅಡಿಟಿಪ್ಪಣಿಯಲ್ಲಿ, ಎತ್ತರದಿಂದ ಇಳಿದು ಬರುವಾಗ ನದಿಗಳ ಗತಿಯು ಯಾವುದೊಂದು ಕಾರಣದಿಂದ ಸಾವಕಾಶವಾದರೆ, ಅಲ್ಲಿ ಒಂದು ಸರೋವರವು ಆಗುವುದು... ನದಿಯು ತಂದ ಉಸುಕೂ ಮಣ್ಣು ಅಲ್ಲಿ ಕಲೆ ಬೀಳುವುವು. ಕಾಲಾಂತರದಲ್ಲಿ ಅದು ತುಂಬಿಕೊಂಡು ವಿಶಾಲವಾದ ಕೊಳ್ಳವಾಗುವುದು (ಬೈಲುಭೂಮಿ). ಹಿಮಾಲಯದಲ್ಲಿ ಈ ರೀತಿಯಿಂದಾದ ಕೊಳ್ಳಗಳು ಹಲವಿರುವವು. ಪ್ರಸಿದ್ಧವಾದ ಕಾಶ್ಮೀರದ ಕೊಳ್ಳವು ಇದರಲ್ಲಿ ಒಂದು ಎನ್ನುವ ಮಹತ್ವದ ಮಾಹಿತಿಯನ್ನು ಗಮನಿಸಬಹುದು.

ಈ ಪುಸ್ತಕದಲ್ಲಿ 5000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ವಾಸಸ್ಥಳಗಳನ್ನು ಪಟ್ಟಣಗಳೆಂದು ಪರಿಭಾವಿಸಲಾಗಿದೆ. 1911ರ ಜನಗಣತಿಯ ಅನ್ವಯ ಅಂದಿನ ಬೆಂಗಳೂರಿನ ಜನಸಂಖ್ಯೆ 1,89,000. ಅಂದು ಕನ್ನಡ ಮಾತನಾಡುವವರ ಜನಸಂಖ್ಯೆ ಒಂದು ಕೋಟಿ. 21ನೆಯ ಪ್ರಕರಣ `ದೇಶೀಯ ಸಂಸ್ಥಾನ'ಗಳು ಎಂಬ ಶೀರ್ಷಿಕೆಯ ಅಡಿಯಲ್ಲಿ 258 ಹಾಗೂ 259ನೆಯ ಘಟಕಾಂಶಗಳಾಗಿ ಮೈಸೂರು ಸಂಸ್ಥಾನ, ಬೆಂಗಳೂರು, ಶ್ರೀರಂಗಪಟ್ಟಣ ಹಾಗೂ ಕೋಲಾರಗಳನ್ನು ಕುರಿತ ಭೌಗೋಲಿಕ ಅಂಶಗಳನ್ನು ನಿರೂಪಿಸಲಾಗಿದೆ. ಇವರು ನೀಡಿರುವ ಹೋಲಿಕೆಗಳು ಕುತೂಹಲಕರವಾಗಿವೆ. ಹಿಂದೂಸ್ತಾನವನ್ನು ಕುರಿತು ವಿವರಿಸಿರುವಾಗ ಹಿಂದೂಸ್ತಾನದ ನಕಾಶೆ ನೋಡಿದರೆ ಗಾಳಿಪಟದ ನೆನಪಾಗುವುದು ಎಂದಿದ್ದಾರೆ.

ಬೆಂಗಳೂರನ್ನು ಕುರಿತು ಈ ಪುಸ್ತಕದಲ್ಲಿರುವ ಮಾಹಿತಿ ಹೀಗಿದೆ:
“3100 ಅಡಿ ಎತ್ತರದಲ್ಲಿರುವುದು. ಮೈಸೂರು ಸರ್ಕಾರದ ಸ್ಥಳ. ನೆರೆಹೊರೆಯಲ್ಲಿ ಬ್ರಿಟಿಷ್ ಸೈನ್ಯದ ಛಾವಣಿಯು ದಕ್ಷಿಣ ಹಿಂದೂಸ್ತಾನದಲ್ಲಿ ಹೆಸರಾದದ್ದು. ಮಹಾರಾಜರ ಅರಮನೆಯೂ ಊರಿನ ಹೊರಗೆ ಹೊಸದಾಗಿ ಆದ ಕಟ್ಟಡಗಳೂ ನೋಡತಕ್ಕವಾಗಿವೆ. ನೆರೆಯಲ್ಲಿ ಇಮಾರತಿಯ ಕಲ್ಲುಗಳು ದೊರೆಯುತ್ತವೆ. ಈ ಹೊಸ ಭಾಗದಲ್ಲಿ ವಿದ್ಯುತ್ತಿನ ದೀಪಗಳನ್ನು ಹಚ್ಚುವುದರಿಂದ ರಾತ್ರಿಯ ನೋಟವು ರಮಣೀಯವಾಗಿರುವುದು. ಎತ್ತರದಲ್ಲಿರುವುದರಿಂದ ಇದರ ಹವೆಯು ಸೊಗಸಾಗಿರುವುದು. ಇಲ್ಲಿಂದ ಮೂರು- ನಾಲ್ಕು ರೈಲು ಮಾರ್ಗಗಳು ನಾಲ್ಕೂ ಕಡೆಗೆ ಹೋಗಿರುವುವು. ಆದ್ದರಿಂದ ವ್ಯಾಪಾರದ ಸ್ಥಳ. ನೂಲಿನ ಹಾಗೂ ಉಣ್ಣೆಯ ಕಾರ್ಖಾನೆಗಳಿರುತ್ತವೆ. ಇಲ್ಲಿ ತಯಾರಾಗುವ ಜಮಖಾನೆಗೂ, ರತ್ನಗಂಬಳಿಗಳಿಗೂ ಈ ಪ್ರಾಂತದಲ್ಲಿ ಹೆಸರಾಗಿವೆ. ಮೈಸೂರ ಪ್ರಾಂತದಲ್ಲಿ ವಿದ್ಯಾಭಿವೃದ್ಧಿಯ ಮುಖ್ಯಸ್ಥಳ. ವರ್ಷದ ಮಳೆ ಸುಮಾರು 35 ಇಂಚು. ಇಂತಹ ಹಲವು ಅಪೂರ್ವ ಮಾಹಿತಿಗಳು ಈ ಕೃತಿಯಲ್ಲಿ ದೊರೆಯುತ್ತದೆ. ಸುಮಾರು ಒಂದು ಶತಮಾನದ ಹಿಂದೆ ಪ್ರಕಟವಾಗಿರುವ ಈ ಭೂಗೋಲದ ಕೃತಿಯು ತನ್ನ ಕಾಲದ ಮಟ್ಟಿಗೆ ಆ ಕ್ಷೇತ್ರದಲ್ಲಿ ಒಂದು ವಿದ್ವತ್ಕೃತಿಯೂ ಸ್ವಯಂಪೂರ್ಣ ಕೃತಿಯೂ ಆಗಿದ್ದು ಕನ್ನಡ ಪುಸ್ತಕ ಪ್ರಪಂಚಕ್ಕೆ ಒಂದು ಅಮೂಲ್ಯ ಕೊಡುಗೆಯಾಗಿದೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT