ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಬರುವಿಕೆಗೆ ಕಾಯುತ್ತಿದೆ ಕುನು...

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕುನು (ದಕ್ಷಿಣ ಆಫ್ರಿಕಾ, ಎಎಫ್‌ಪಿ): ದಕ್ಷಿಣ ಆಫ್ರಿಕಾ ದಲ್ಲಿ ಬಿಳಿಯರ ದಬ್ಬಾಳಿಕೆ ವಿರುದ್ಧ ದನಿ ಎತ್ತಿ, ವರ್ಣ ಭೇದ ನೀತಿಗೆ ಇತಿಶ್ರೀ ಹಾಡಿದ ನೆಲ್ಸನ್‌ ಮಂಡೇಲಾ ಎಂಬ ಮಗನಿಗಾಗಿ ಕುನು ಕಾಯುತ್ತಿದೆ.  

ಜೀವನವಿಡೀ ಹೋರಾಟ ನಡೆಸಿದ ತನ್ನ ಮಗನನ್ನು ತನ್ನೊಡಲಲ್ಲಿ ಇಟ್ಟುಕೊಳ್ಳಲು ಈ ಹಳ್ಳಿ ಕಾಯುತ್ತಿದೆ. ಮಂಡೇಲಾ ಅವರ ಅಂತಿಮ ವಿಧಿ–ವಿಧಾನ ಕಾರ್ಯ ಗಳಿಗೆ ಇಡೀ ಗ್ರಾಮಸ್ಥರು ಸಿದ್ಧತೆ ನಡೆಸತೊಡಗಿದ್ದಾರೆ.

ಕುನು ಎಂಬ ಸಣ್ಣಹಳ್ಳಿಯಲ್ಲಿ ಆಡಿಬೆಳೆದ ಹುಡುಗ, ದೇಶಕ್ಕೇ ಅಧ್ಯಕ್ಷನಾಗಿ ಆಡಳಿತ ನಡೆಸಿ, ಇದೀಗ ತನ್ನೂರಿನ ಮಣ್ಣಲ್ಲೇ ಮಣ್ಣಾಗುವ ಕ್ಷಣವನ್ನು ಎದಿರುಗೊಳ್ಳಲು ಗ್ರಾಮಸ್ಥರು ಕಾಯುತ್ತಿದ್ದಾರೆ.

ಮಂಡೇಲಾ ಅವರಿಗೆ ನಾವು ಯಾವತ್ತೂ ಗೌರವ ಸಲ್ಲಿಸುತ್ತೇವೆ. ಅವರು ಬದುಕಿದ್ದಾಗ ಹೇಗೆ ಗೌರವಿಸು ತ್ತಿದ್ದೆವೊ ಅವರ ಮರಣದ ನಂತರವೂ ಇದೇ ಗೌರವ ಮುಂದುವರಿಯಲಿದೆ ಎಂದು ಮಂಡೇಲಾ ಅವರ ನೆರೆ ಮನೆಯಾತ ಹಿರಿಯರಾದ ಮಟಿರಾರಾ ಹೇಳುತ್ತಾರೆ.

ಮಂಡೇಲಾ ಅವರನ್ನು ‘ಮಡಿಬಾ’ ಎಂದೇ ಪ್ರೀತಿ ಯಿಂದ ಕರೆಯುತ್ತಿದ್ದ ಗ್ರಾಮಸ್ಥರು, ತಮ್ಮ ಮಗನ ಅಂತ್ಯಸಂಸ್ಕಾರ ನೆರವೇರಿಸಲು ನಿಯೋಗವೊಂದನ್ನು ಮಂಡೇಲಾ ಕುಟುಂಬದತ್ತ ಕಳುಹಿಸಿದ್ದಾರೆ.

ಮಂಡೇಲಾ ಅವರ ತೆಂಬು ಎಂಬ ಬುಡಕಟ್ಟಿನ ರಾಜ ದಲಿನ್‌ಡೈಬೊ ಅವರ ನೇತೃತ್ವದ ತಂಡ ಜೋಹಾನ್ಸ್‌ ಬರ್ಗ್‌ನಲ್ಲಿ ಶನಿವಾರ ಮಂಡೇಲಾ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಅಂತಿಮ ವಿಧಿ–ವಿಧಾನ ಗಳನ್ನು ನೆರವೇರಿಸುವಂತೆ ಕೋರಿದೆ.

‘ಆ ಹಿರಿಯ ಮನುಷ್ಯ ತನ್ನ ಜೀವಿತಾವಧಿಯುದ್ದಕ್ಕೂ ಹೋರಾಟ ನಡೆಸಿದ. ನಮಗಾಗಿ ಸ್ವಾತಂತ್ರ್ಯ ತಂದು ಕೊಟ್ಟ ಆ ಹಿರಿಯ ಜೀವ ಇದೀಗ ವಿಶ್ರಾಂತಿ ಪಡೆ ಯುತ್ತಿದೆ. ಅವರಂಥ ಮತ್ತೊಬ್ಬನನ್ನು ನಾವು ಕಾಣಲು ಅಸಾಧ್ಯ. ಆತ ನಮ್ಮವನಾಗಿದುದ್ದಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ’ ಎಂದು ಕುನು ಗ್ರಾಮದ ನಾಗರಿಕ ನೆಜ್‌ವೆನಿ  ಅಭಿಪ್ರಾಯಪಡುತ್ತಾರೆ.

ದಕ್ಷಿಣ ಆಫ್ರಿಕಾಕ್ಕೆ ಒಬಾಮ, ಬುಷ್‌, ಕ್ಲಿಂಟನ್: ವಾಷಿಂಗ್ಟನ್‌ (ಎಪಿ): ನೆಲ್ಸನ್‌ ಮಂಡೇಲಾ ಅವರ ಸ್ಮರಣಾರ್ಥ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ, ಮಾಜಿ ಅಧ್ಯಕ್ಷರಾದ ಜಾರ್ಜ್‌ ಬುಷ್‌ ಹಾಗೂ
ಬಿಲ್‌ ಕ್ಲಿಂಟನ್ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಬರಾಕ್‌ ಒಬಾಮ, ಪತ್ನಿ ಮಿಶೆಲ್‌ ಮುಂದಿನ ವಾರ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ. ತಮ್ಮೊಂದಿಗೆ ಆಫ್ರಿಕಾಕ್ಕೆ ತೆರಳಲು ಬರಾಕ್‌ ಒಬಾಮ ಅವರು, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಬುಷ್‌, ಪತ್ನಿ ಲಾರಾ ಅವರನ್ನೂ ಆಹ್ವಾನಿಸಿದ್ದಾರೆ ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ.

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರೂ ಪತ್ನಿ ಹಿಲರಿ ಅವರೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲು ಬಯಸಿದ್ದು, ತಮ್ಮ ಇಡೀ ಕುಟುಂಬ ನೆಲ್ಸನ್‌ ಮಂಡೇಲಾ ಅವರ ಅಂತಿಮ ದರ್ಶನ  ಪಡೆಯಲಿದೆ ಎಂದು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಮಂಡೇಲಾ ಶ್ರದ್ಧಾಂಜಲಿಗೆ ಸಿದ್ಧತೆ
ಜೋಹಾನ್ಸ್‌ಬರ್ಗ್‌ (ಪಿಟಿಐ): ನೆಲ್ಸನ್ ಮಂಡೇಲಾ ಅವರಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸುವ ಜಗತ್ತಿನ ವಿವಿಧ ಗಣ್ಯರಿಗೆ ಅಗತ್ಯ ಸೌಲಭ್ಯ ಒದಗಿಸಲು ದಕ್ಷಿಣ ಆಫ್ರಿಕಾ ಸರ್ಕಾರ ಸಿದ್ಧತೆ ನಡೆಸಿದೆ.

ಜೋಹಾನ್ಸ್‌ಬರ್ಗ್‌ನ ಎಫ್‌ಎನ್‌ಬಿ ಕ್ರೀಡಾಂಗಣದಲ್ಲಿ ಮಂಗಳವಾರ ಮಂಡೇಲಾ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ.
ಮಂಡೇಲಾ ಅವರು ಹುಟ್ಟಿಬೆಳೆದ ಕುನುವಿನಲ್ಲಿ ಡಿ. 15ರಂದು ಅಂತಿಮ ವಿಧಿ–ವಿಧಾನಗಳು ನೆರ ವೇರ­ಲಿದ್ದು, ಅದಕ್ಕೂ ಮೂರು ದಿನ ಮುನ್ನ ರಾಜ­ಧಾನಿ ಪ್ರಿಟೊರಿಯಾದ ಯೂನಿಯನ್‌ ಕಟ್ಟಡದಲ್ಲಿ ಮಂಡೇಲಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಿಟೊರಿಯಾದ ಮುಖ್ಯಬೀದಿಗಳಲ್ಲಿ ಮಂಡೇಲಾ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಗುವುದು. ನಂತರ ಮಂಡೇಲಾ ಅವರು ಹುಟ್ಟಿಬೆಳೆದ ಕುನು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಡಿ. 8ಅನ್ನು ರಾಷ್ಟ್ರೀಯ ಪ್ರಾರ್ಥನಾ ದಿನವನ್ನಾಗಿ ಆಚರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.  ಡಿ. 11ರಿಂದ 13ರತನಕ ದೇಶದಾ ದ್ಯಂತ ಮಂಡೇಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದಕ್ಷಿಣ ಆಫ್ರಿಕಾಕ್ಕೆ ಸ್ವಾತಂತ್ರ್ಯ ದೊರೆಕಿಸಿಕೊಟ್ಟು, ಕಪ್ಪು ಜನಾಂಗದ ಮೊದಲ ಅಧ್ಯಕ್ಷರಾಗಿ ಆಯ್ಕೆ ಯಾದ ನೆಲ್ಸನ್‌ ಮಂಡೇಲಾ ಅವರಿಗಾಗಿ ಒಗ್ಗಟ್ಟಾಗಿ ಸಾಮೂಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಕುರಿತು  ಆಫ್ರಿಕಾದ ಜನತೆ ಸಿದ್ಧತೆ ನಡೆಸುತ್ತಿದೆ ಎಂದು ಆಫ್ರಿಕಾದ ಅಧ್ಯಕ್ಷೀಯ ಕಚೇರಿಯ ಮೂಲಗಳು ತಿಳಿಸಿವೆ.

 ದೇಶಾದ್ಯಂತ ಪ್ರಾರ್ಥನಾ ಮಂದಿರ, ಚರ್ಚುಗಳು, ಮಸೀದಿಗಳು, ಮಂದಿರಗಳಲ್ಲಿ ಎಲ್ಲಾ ಜನರು ಒಂದಾಗಿ ಮಂಡೇಲಾ ಅವರಿಗಾಗಿ  ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT