ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಸಾವಿಗೆ ನಿರ್ಲಕ್ಷ್ಯವೇ ಕಾರಣ

Last Updated 12 ಜುಲೈ 2012, 4:30 IST
ಅಕ್ಷರ ಗಾತ್ರ

ದೇವನಹಳ್ಳಿ: ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತಾಲ್ಲೂಕಿನ ನಾಗಮಂಗಲ ಗ್ರಾಮದ ಎನ್.ಎ.ವೇಣುಗೋಪಾಲ (16) ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ತಂದೆ ಅಪ್ಪಯ್ಯಣ್ಣ ಆರೋಪಿಸಿದ್ದಾರೆ.

ಗ್ರಾಮದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ. ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಅವನು ಬಂದಿರಲಾರ ಎಂಬ ಬಲವಾದ ಸಂದೇಹ ವ್ಯಕ್ತಪಡಿಸಿದರು.

ಜುಲೈ 5 ರಂದು ವೇಣುಗೋಪಾಲನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಗ ಇತರೆ ವಿದ್ಯಾರ್ಥಿಗಳೊಂದಿಗೆ ಅವನನ್ನು ಚಿಕಿತ್ಸೆಗೆಂದು ಸ್ಥಳಿಯ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಅಲ್ಲಿ ಅವನಿಗೆ ಗ್ಯಾಸ್ಟ್ರಿಕ್ ಮಾತ್ರೆ ನೀಡಲಾಗಿದೆ. ನಂತರ ಹಾಸ್ಟಲ್‌ಗೆ ಬಂದ ಅವನ ಆರೋಗ್ಯದ ಬಗ್ಗೆ ಹಾಗೂ ಊಟ ಉಪಚಾರದ ಬಗ್ಗೆ ನಿಲಯ ಪಾಲಕರು ಸೂಕ್ತ ನಿಗಾ ವಹಿಸಿಲ್ಲ.

ಸೌಜನ್ಯಕ್ಕಾದರೂ ಪೋಷಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿಲ್ಲ. 48 ಗಂಟೆ ಕಳೆದ ನಂತರ `ನಿಮ್ಮ ಮಗನ ಆರೋಗ್ಯ ಗಂಭೀರ ಪರಿಸ್ಥಿತಿಯಲ್ಲಿದೆ ಎಂದು ಜುಲೈ 6 ರಂದು ಶುಕ್ರವಾರ ಮಧ್ಯಾಹ್ನ 2.45ಕ್ಕೆ ನಮಗೆ ನಿಲಯ ಪಾಲಕ ನಾಗೇಶ್ ದೂರವಾಣಿ ಕರೆ ಮಾಡಿ ತಿಳಿಸ್ದ್ದಿದಾರೆ. ನಂತರ 30 ನಿಮಿಷವಾದ ಮೇಲೆ ನಿಮ್ಮ ಮಗ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮತ್ತೊಮ್ಮೆ ಕರೆ ಮಾಡಿದ್ದಾರೆ.
 
ರಾತ್ರಿ 9.45ರ ಸಮಯದಲ್ಲಿ ವಿದ್ಯಾರ್ಥಿ ನಿಲಯಕ್ಕೆ ತೆರಳಿ ನೋಡಿದಾಗ ಮಗ ಶವವಾಗಿ ಮಲಗಿದ್ದ ಎಂದು ಅಪ್ಪಯ್ಯಣ್ಣ ವಿವರಿಸಿದರು. 10ನೇ ತರಗತಿಯಲ್ಲಿ ಶೇ.89.06ರಷ್ಟು ಫಲಿತಾಂಶ ಪಡೆದಿದ್ದ ಮಗನನ್ನು ಅತ್ಯುತ್ತಮ ಶಿಕ್ಷಣ ಸಿಗಲಿ ಎಂಬ ಆಸೆಯಿಂದ ಅವನನ್ನು ಮೂಡಬಿದ್ರೆ ಆಳ್ವಾಸ್ ಕಾಲೇಜಿಗೆ ದಾಖಲಿಸಿದ್ದೆವು. ಪರಸ್ಥಳಕ್ಕೆ ಓದಲು ಕಳುಹಿಸುವ ಮಕ್ಕಳನ್ನು ಎಷ್ಟು ಕಾಳಜಿ ಮಾಡಲಾಗುತ್ತದೆ ಎಂಬುದಕ್ಕೆ ಇದು ಉಹಾರಣೆಯಾಗಿದೆ ಎಂದು ನೋವು ತೋಡಿಕೊಂಡರು.

ಸಿರಿಗನ್ನಡ ಹಾಗೂ ಪ್ರತಿಭಾ ಪರೀಕ್ಷೆಯಲ್ಲಿ ಅವನು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ್ನ ಗಳಿಸಿಕೊಂಡಿದ್ದ. ನಮ್ಮ ಒಬ್ಬನೇ ಮಗನನ್ನು ನಾವು ಈ ರೀತಿ ಕಳೆದುಕೊಂಡಿದ್ದೇವೆ. ಪ್ರತಿಷ್ಠಿತ ಕಾಲೇಜು ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಾಲೇಜುಗಳು ಈ ರೀತಿ ವರ್ತಿಸಿದರೆ ಹೇಗೆ? ಅವರಿಗೆ ಅಲ್ಲಿ ರಕ್ಷಣೆ ಇಲ್ಲದಿದ್ದರೆ ಹೇಗೆ? ಮಗನ ಆತ್ಮಹತ್ಯೆ ಬಗ್ಗೆ ಅನೇಕ ಸಂಶಯಗಳಿವೆ. ಎರಡು ದಿನ ದೂರವಾಣಿ ಕರೆ ಮಾಡದಿರುವ ಕಾರಣವೇನು ? ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಅಪ್ಪಯ್ಯಣ್ಣ ಹೇಳಿದರು.

ದುಃಖದಲ್ಲಿ ತಾಯಿ
: ಬರ ಸಿಡಿಲಿನಂತೆ ಬಂದೆರಗಿದ ಮಗನ ಸಾವಿನ ಸುದ್ದಿ ಕೇಳಿದ ಮೃತನ ತಾಯಿ ಜಯಮ್ಮ ಹಾಗೂ ಅಕ್ಕ ಚಂದ್ರಿಕಾ ನಗರದ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಕೈಕ ಮಗನನ್ನು ಕಳೆದುಕೊಂಡಿರುವ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಜೂನ್ 16ರಷ್ಟೇ ವೇಣುಗೋಪಾಲ್ ಕಾಲೇಜಿಗೆ ದಾಖಲಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT