ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಮದುವಿ ಹೆಂಗ ಮಾಡೋದ್ರಿ

Last Updated 14 ಮಾರ್ಚ್ 2011, 6:45 IST
ಅಕ್ಷರ ಗಾತ್ರ

ಕೆಂಭಾವಿ: “10 ವರ್ಷದಿಂದ ನಾವು ಇಲ್ಲೇ ಕೂಲಿ ಕೆಲಸಾ ಮಾಡತಿದ್ದಿವ್ರಿ, ಮೂರು ಸಣ್ಣ ಸಣ್ಣ ಮಕ್ಕಳಾವರಿ. ಅವು ಸಾಲಿಗಿ ಹೋಗತಾವ್ರಿ ಮನ್ಯಾಗ ಐದ್ ಮಂದಿ ದಿನಾ ಗದ್ಯಾಗ ದುಡದ ತಂದು, ಮಗಳ ಲಗ್ನಾ ಮಾಡ್ಲಾಕ ಅಂತ ಕೂಡಿಟ್ಟ ರೊಕ್ಕ ಬೆಂಕಿ ಪಾಲಾ ಗ್ಯಾದ ನೋಡ್ರಿ. ಆದ್ಯಾವ್ರ ನಮ್ಮಂತ ಬಡವರಿಗೆ ಇಂತಾ ತ್ರಾಸ್ ಕೊಡತಾನ ನೋಡ್ರಿ ಸಾಹೇಬ್ರಾ ನಮಗ ಗೊರ ಮೆಂಟ (ಸರ್ಕಾರ) ನಿಂದ ಏನಾದ್ರು ಬರತಿದ್ರ ಕೊಡಸ್ರಿ. ಮಗಳ ಮದವಿ ಮಾಡಬೇಕಾಗ್ಯಾದ್ರಿ ಈಗ ಒಂದ್ ತಿಂಗಳ ಹಿಂದ ಲಗ್ನಾ ಗಟ್ಯಾಗಿತ್ರಿ”

ಪಟ್ಟಣದ ಸಾಯಿನಗರದಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ 8 ಗುಡಿಸಲುಗಳು ಸುಟ್ಟಿರುವ ಘಟನೆ ಯಲ್ಲಿ ಮಗಳ ಮದುವೆಗೆ ಕೂಡಿಟ್ಟ ಬಂಗಾರ, ಹಣವನ್ನೆಲ್ಲ ಕಳೆದುಕೊಂಡಿ ರುವ ನೂರಸಾಬ ಎಂಬುವವರ ಕುಟುಂಬದ ಅಳಲಿದು.

ಮಗಳ ಮದುವೆಯನ್ನು ನಿಶ್ಚಯಿಸಿ, ಅದಕ್ಕಾಗಿ ಹಣ, ಒಡವೆಗಳನ್ನು ಸಿದ್ಧ ಪಡಿಸಿಕೊಂಡಿದ್ದ ಕುಟುಂಬಕ್ಕೆ ಈಗ ದಿಕ್ಕು ತೋಚದಂತಾಗಿದೆ. ಕೂಲಿ ಮಾಡಿ, ಅದರಲ್ಲಿಯೇ ಜೀವನ ಸಾಗಿಸಿ, ಉಳಿಸಿದ ಹಣವನ್ನೆಲ್ಲ ಮಗಳ ಮದುವೆ ಗೆಂದೇ ಈ ಕುಟುಂಬ ತೆಗೆದಿಟ್ಟಿತ್ತು. ಬೆಂಕಿಯ ಕೆನ್ನಾಲಿಗೆಯಲ್ಲಿ ನಗ, ನಾಣ್ಯ ಗಳೆಲ್ಲವೂ ಸುಟ್ಟು ಹೋಗಿದ್ದು, ಮಗಳ ಮದುವೆಗೆ ಏನು ಮಾಡುವುದು ಎಂಬ ಚಿಂತೆ ಕುಟುಂಬ ವನ್ನು ಕಾಡುತ್ತಿದೆ.

“10 ವರ್ಷದ ಹಿಂದ ಇಲ್ಲಿಗೆ ಕೂಲಿ ಕೆಲಸಕ್ಕ ಬಂದಿದ್ದಿವ್ರಿ. ದಿನಾ ಗದ್ಯಾಗ ದುಡದು ಅಷ್ಟಿಷ್ಟು ರೊಕ್ಕ ಕೂಡಿಸಿ ಇಟ್ಟಿದ್ದೇವ್ರಿ. ಬಂಗಾರಾನೂ ಮಾಡಿ ಸಿದ್ದೀವ್ರಿ. ಈಗ ನೋಡಿದ್ರ ಎಲ್ಲಾ ಸುಟ್ಟ ಹೋತು. ಇನ್ನ ಹೆಂಗ ಮಗಳ ಮದುವಿ ಮಾಡೋದ್ರಿ” ಎಂದು ಮಾತನಾಡಿದ ಗುಡಿಸಲು ಕಳೆದುಕೊಂಡಿರುವ ನೂರಸಾಬ್ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.
ಸುಟ್ಟಿರುವ ನೋಟುಗಳನ್ನು ತೋರಿ ಸುತ್ತಲೇ ತಮ್ಮ ದುಃಖ ತೋಡಿಕೊಂಡ ನೂರಸಾಬರ ಪತ್ನಿ, “ನಮ್ಮ ಮಗಳು ನೂರಬಿ ಬೇಗಂಳ ಮದುವಿಗೆ ಕೂಡಿಟ್ಟಿದ್ದ 70 ಸಾವಿರ ರೂಪಾಯಿ ಹಾಗೂ 15 ಗ್ರಾಂ ಬಂಗಾರ ಸುಟ್ಟ ಹೋತ್ರಿ. ಇನ್ನ ಹೆಂಗಳ ಮಗಳ ಮದುವಿ ಮಾಡೋದ ಹೇಳ್ರಿ” ಎಂದು ಗೋಗರೆಯುತ್ತಾರೆ.

ನೂರಸಾಬರ ಮಕ್ಕಳು ದಿನಾಲು ಸ್ಥಳೀಯ ಶಾಲೆಗಳಿಗೆ ಹೋಗುತ್ತಿದ್ದು, ಶಾಲೆಯ ಸಮವಸ್ತ್ರ ಹಾಗೂ ಪುಸ್ತಕ ಗಳೂ ಬೆಂಕಿಗೆ ಆಹುತಿ ಆಗಿವೆ. ಇದೀಗ ಮಕ್ಕಳು ಪುಸ್ತಕ ಎಲ್ಲಿ ಎಂದು ಕೇಳುತ್ತಿ ರುವ ದೃಶ್ಯ ಮನಕಲುಕುವಂತಿತ್ತು.ಇನ್ನೊಂದೆಡೆ ಗುಡಿಸಲಿನಲ್ಲಿ ವಾಸಿಸು ತ್ತಿದ್ದ 10 ಕೂಲಿ ಕಾರ್ಮಿಕರ ಕುಟುಂಬ ಗಳ 42 ಜನರು ಬೀದಿ ಪಾಲಾಗಿದ್ದಾರೆ. ಜಿಲ್ಲಾಡಳಿತದಿಂದ ಪರಿಹಾರ ಸಿಗುತ್ತದೆ ಎಂಬ ಆಸೆಯಿಂದ ಕುಳಿತಿದ್ದಾರೆ. ಇದೀಗ ವಾಸಿಸಲು ಸ್ಥಳವಿಲ್ಲದೇ ಇಕ್ಕಟ್ಟಾದ ಗುಡಿಸಲಿನಲ್ಲಿ ಜೀವನ ಸಾಗಿಸುವಂತಾಗಿದೆ. ಗುಡಿಸಲು ಕಳೆದುಕೊಂಡಿರುವ ಕುಟುಂಬಗಳು ಪರಿಹಾರಕ್ಕಾಗಿ ಇದೀಗ ಜಿಲ್ಲಾಡಳಿತ ದತ್ತ ಮುಖ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT