ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಮಾರಾಟ ಪ್ರಕರಣಕ್ಕೆ ಹೊಸ ತಿರುವು

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ನಡೆಯುತ್ತಿದೆ ಎನ್ನಲಾದ `ಮಕ್ಕಳ ಮಾರಾಟ ಪ್ರಕರಣ~ವು ಹೊಸ ತಿರುವು ಪಡೆದುಕೊಂಡಿದೆ. ಮಾರಾಟಕ್ಕೆ ಮುಂದಾದರೆನ್ನಲಾದ  ಗಂಡು ಮಗುವಿನ ತಂದೆತಾಯಿ ಅದನ್ನು ಶುಕ್ರವಾರ ಶಿಶುಗೃಹಕ್ಕೆ ಹಸ್ತಾಂತರಿಸಿದ್ದಾರೆ. ಉಳಿದೆರಡು ನವಜಾತ ಹೆಣ್ಣುಮಕ್ಕಳನ್ನು ಹೆತ್ತವರೇ ಸಾಕಲು ಮುಂದಾಗಿದ್ದು, ಅವರಿಗೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ.

ಭಿಕ್ಕುನಾಯಕ ತಾಂಡಾದ ವಿನೋದ್- ಸೋನಾಬಾಯಿ 20 ದಿನಗಳ ಗಂಡುಮಗುವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹ್ಮದ್ ರಫಿ ಶಕಾಲೆ ಅವರಿಗೆ ಹಸ್ತಾಂತರಿಸಿದರು. ಬಳಿಕ ಅದನ್ನು ಸಾಕಲೆಂದು ಗುಲ್ಬರ್ಗದ `ಅಮೂಲ್ಯ~ ಶಿಶುಗೃಹಕ್ಕೆ ಹಸ್ತಾಂತರ ಮಾಡಲಾಯಿತು.

ಹಿನ್ನೆಲೆ: ಸೋನಾಬಾಯಿ- ವಿನೋದ್ ಒಂದೇ ತಾಂಡಾದವರಾಗಿದ್ದು ಪ್ರೀತಿಸುತ್ತಿದ್ದರು. ಇವರ ನಡುವೆ ದೈಹಿಕ ಸಂಪರ್ಕ ನಡೆದಿದ್ದು ಸೋನಾಬಾಯಿ ಗರ್ಭಿಣಿಯಾಗಿದ್ದರು. ಇದನ್ನು ಅರಿತ ವಿನೋದ್ ವಿವಾಹವಾಗಬೇಕೆಂಬ ಆಕೆಯ ಒತ್ತಾಯ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳಿದ್ದ.

ಸೋನಾಬಾಯಿ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಪೊಲೀಸರು ಮಧ್ಯಸ್ಥಿಕೆ ವಹಿಸಿ ವಿನೋದ್‌ನನ್ನು ಕರೆಸಿ ತಿಳಿವಳಿಕೆ ಹೇಳಿ ಮದುವೆ ಮಾಡಿಸಿದ್ದರು. 19 ವರ್ಷದ ವಿನೋದ್ ಮತ್ತು 16ರ ಹರೆಯದ ಸೋನಾಬಾಯಿ ಇಬ್ಬರೂ  ಮದುವೆಯಾಗಿದ್ದರು. ಮಾರ್ಚ್ 12ರಂದು ವಿವಾಹವಾಗುವ ಸಂದರ್ಭದಲ್ಲೇ ಸೋನಾಬಾಯಿ ಆರು ತಿಂಗಳ ಗರ್ಭಿಣಿಯಾಗಿದ್ದಳು.

ಇದೀಗ ವಿನೋದ್ `ಮಗು ತನ್ನದಲ್ಲ~ ಎನ್ನುತ್ತಿರುವ ಹಿನ್ನೆಲೆಯಲ್ಲಿ, ಸೋನಾಬಾಯಿ ಬಲವಂತಕ್ಕೆ ಒಳಗಾಗಿ ಅಳುತ್ತಾ ಮಗುವನ್ನು ಅಧಿಕಾರಿಗೆ ಹಸ್ತಾಂತರಿಸಿದರು. ಬುಧವಾರ ಇವರಿಬ್ಬರನ್ನು ಕರೆಸಿದ ತಹಶೀಲ್ದಾರ್ ಡಾ. ರಮೇಶಬಾಬು ಹಾಲು, ಸರ್ಕಲ್ ಇನ್‌ಸ್ಪೆಕ್ಟರ್ ಕೆ. ಬಸವರಾಜ್, ಕೊಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹಮ್ಮದ್ ಗಫಾರ್ ತಿಳಿವಳಿಕೆ ನೀಡಿದರೂ ಒಪ್ಪದ ವಿನೋದ್, `ಮಗುವನ್ನು ಇಟ್ಟುಕೊಳ್ಳುವುದಿಲ್ಲ. ಮಗುವನ್ನು ಉಳಿಸಿಕೊಂಡಿದ್ದೇ ಆದರೆ ಪತ್ನಿ ತನ್ನಿಂದ ದೂರ ಇರಬೇಕಾಗುತ್ತದೆ~ ಎಂದು ತಿಳಿಸಿದ್ದಾನೆ.

ಒಂಟಿಚಿಂತಾದ ಕವಿತಾ- ವಿಠ್ಠಲ ರಾಠೋಡ, ಒಂಟಿಗುಡ್ಸಿ ತಾಂಡಾದ ಕವಿತಾ- ತಾರಾಸಿಂಗ್ ತಮಗೆ ಪದೇ ಪದೇ ಹೆಣ್ಣುಮಗು ಹುಟ್ಟುತ್ತಿದ್ದ ಕಾರಣ ಮಾರಾಟ ಮಾಡಲು ಹೊರಟಿದ್ದರೆನ್ನಲಾದ ಇತರ ಎರಡು ಹೆಣ್ಣು ಶಿಶುಗಳು ಅಧಿಕಾರಿಗಳ ಮನವೊಲಿಕೆಯಿಂದ ಮಾತೆಯರ ಆಶ್ರಯದಲ್ಲೇ ಉಳಿದಿವೆ. ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರತ್ನಾ ಕಲಂದಾನಿ ಈ ಕುಟುಂಬದವರನ್ನು ಭೇಟಿ ಮಾಡಿ ಭಾಗ್ಯಲಕ್ಷ್ಮಿ ಬಾಂಡ್ ಕೊಡುವುದಾಗಿ ತಿಳಿಸಿದರು. ಸರ್ಕಾರದ ವಿವಿಧ ಸೌಲಭ್ಯ ಒದಗಿಸುವುದಾಗಿಯೂ ಭರವಸೆ ನೀಡಿದರು.
ಒಂದು ದಶಕದ ಹಿಂದೆ ಇಲ್ಲಿನ ತಾಂಡಾಗಳಲ್ಲಿ ವರದಿಯಾದ ಹೆಣ್ಣು ಶಿಶುಗಳ ಮಾರಾಟ ಪ್ರಕರಣದಲ್ಲಿ ಶಿಶುಗಳನ್ನು ಅನಾಥಾಶ್ರಮದ ಹೆಸರಿನಲ್ಲೇ ಖರೀದಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT