ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಾಗಿದ್ದಾಗಿನಿಂದಲೇ ನಾನೂ ಲೈಂಗಿಕ ಶೋಷಣೆಗೆ ಬಲಿಯಾಗಿದ್ದೆ: ಅನೂಷ್ಕಾ ಶಂಕರ್

Last Updated 13 ಫೆಬ್ರುವರಿ 2013, 10:16 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದಂತಕಥೆಯಾದ ಸಿತಾರ್ ವಾದಕ  ರವಿ ಶಂಕರ್ ಅವರ ಪುತ್ರಿ ಅನೂಷ್ಕಾ ಶಂಕರ್ ಅವರು ದೆಹಲಿ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕೊನೆ ಹಾಡುವ ಬೇಡಿಕೆಯೊಂದಿಗೆ ಆರಂಭವಾಗಿರುವ 'ಅಂತರ್ಜಾಲ ಚಳವಳಿ'ಗೆ ಬೆಂಬಲ ಘೋಷಿಸಿದ್ದಾರೆ.

31ರ ಹರೆಯದ ಸಿತಾರ್ ವಾದಕಿ 10 ಲಕ್ಷ ಮಹಿಳೆಯರಿಗೆ ಮನೆಯಿಂದ ಹೊರಬಂದು 'ನರ್ತಿಸುವ' ಮೂಲಕ ಫೆಬ್ರುವರಿ 14ರ 'ಪ್ರೇಮಿಗಳ ದಿನ'ದಂದು ಮಹಿಳೆಯರ ವಿರುದ್ಧದ ಹಿಂಸೆಗೆ ಕೊನೆಹಾಡುವ ಬೇಡಿಕೆಯನ್ನು ಒತ್ತಾಯಿಸುವಂತೆ ವೆಬ್ ಸೈಟ್ 'ಚೇಂಜ್.ಆರ್ಗ್' (Change.org) ಮೂಲಕ ಆಹ್ವಾನ ನೀಡಿದ್ದಾರೆ.

'10 ಲಕ್ಷ ಜನರ ಜಾಗೃತಿ ಚಳವಳಿ'ಯು ("The campaign 'One Billion Rising') 'ಸಾಕು! ಹಿಂಸಾಚಾರ ಈಗ ಕೊನೆಗೊಳ್ಳಬೇಕು' ಎಂದು ಹೇಳಲು ವಿಶ್ವಾದ್ಯಂತದ ಮಹಿಳೆಯರು ಮತ್ತು ಪುರುಷರ ಜೊತೆಗೆ ನಾವೂ ಎದ್ದೇಳುತ್ತಿದ್ದೇವೆ ಎಂದು ಪ್ರಮಾಣ ಮಾಡುವಂತಹ ಚಳವಳಿ ಎಂದು ವೆಬ್ ಸೈಟ್ ತಿಳಿಸಿದೆ.

ಅನೂಷ್ಕಾ ಅವರು ಹಿಂಸೆ- ಶೋಷಣೆಗೆ ಗುರಿಯಾದ ಮಹಿಳೆಯರ ಪರವಾಗಿ ಮಾತನಾಡುವ ಹಾಗೂ ಚಳವಳಿಯನ್ನು ಬೆಂಬಲಿಸುವಂತೆ ಜನರಿಗೆ ಮನವಿ ಮಾಡುವ ವಿಡಿಯೋವನ್ನೂ ಈ ವೆಬ್ ಸೈಟ್ ಹೊಂದಿದೆ. 'ಮಗುವಾಗಿದ್ದಾಗಿನಿಂದಲೇ ಹಲವಾರು ವರ್ಷಗಳ ಕಾಲ ನನ್ನ ಹೆತ್ತವರು ಅಪಾರ ನಂಬಿಕೆ ಇಟ್ಟಿದ್ದ ವ್ಯಕ್ತಿಯೊಬ್ಬನಿಂದಲೇ ನಾನೂ ಲೈಂಗಿಕ ಹಾಗೂ ಭಾವನಾತ್ಮಕವಾದ ದುರ್ವರ್ತನೆಗೆ ಬಲಿಯಾಗಿದ್ದೆ' ಎಂದು ಅನೂಷ್ಕಾ ಈ ವಿಡಿಯೋದಲ್ಲಿ ಹೇಳಿದ್ದಾರೆ.

ಬೆಳೆಯುತ್ತಿದ್ದಂತೆಯೇ ಬಹುತೇಕ ಮಹಿಳೆಯರಂತೆಯೇ ನಾನೂ ಮೈಮುಟ್ಟುವುದು, ಅವಾಚ್ಯ ಶಬ್ದ ಪ್ರಯೋಗವೇ ಮುಂತಾದ ಹೇಗೆ ನಿಭಾಯಿಸಬೇಕೆಂದೂ ಗೊತ್ತಾಗದಂತಹ ಶೋಷಣೆಗಳಿಗೆ ಬಲಿಯಾಗಿದ್ದೇನೆ. ನಾನು ಬದಲಾಗಬಹುದು ಎಂದೂ ನನಗೆ ಗೊತ್ತಿರಲಿಲ್ಲ' ಎಂದು ಪ್ರಸ್ತುತ ಲಂಡನ್ ನಲ್ಲಿ ವಾಸವಾಗಿರುವ ಭಾರತೀಯ ಸಂಗೀತಗಾರ್ತಿ ಹೇಳಿದ್ದಾರೆ.

'ಮಹಿಳೆಯಾಗಿ ನಾನು ಸದಾಕಾಲವೂ ಭಯದಲ್ಲೇ ಬದುಕುತ್ತಿದ್ದೇನೆ. ರಾತ್ರಿ ಏಕಾಂಗಿಯಾಗಿ ನಡೆದಾಡಲು ಭಯಪಡುತ್ತೇನೆ. ನನ್ನೊಂದಿಗೆ ಮಾತನಾಡಲು ಸಮಯ ಕೇಳುವ ವ್ಯಕ್ತಿಗೆ ಉತ್ತರಿಸಲು ಹೆದರುತ್ತೇನೆ. ಸಾಕಪ್ಪಾ ಸಾಕು. ದೆಹಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಹಾಗೂ ಅಂತಹ ಹಿಂಸೆಗೆ ಗುರಿಯಾದ ಇತರ ಮಹಿಳೆಯರ ಪರವಾಗಿ ನಾನು ಎದ್ದೇಳುತ್ತಿದ್ದೇನೆ. ನಿಬ್ಬೆರಗು ಉಂಟು ಮಾಡುತ್ತಿರುವ ನನ್ನ ರಾಷ್ಟ್ರದ ಮಹಿಳೆಯರ ಪರವಾಗಿ ನಾನು ಎದ್ದೇಳುತ್ತಿದ್ದೇನೆ. ನನ್ನೊಳಗಿನ ಮಗುವಿವಾಗಿ ನಾನು ಎದ್ದೇಳುತ್ತಿದ್ದೇನೆ. ಆಕೆಗೆ (ದೆಹಲಿಯಲ್ಲಿ ಮೃತಳಾದ ತರುಣಿ) ಆದ ಅನ್ಯಾಯಕ್ಕೆ ಕ್ಷಮೆ ಇದೆ ಎಂದು ನನಗೆ ಅನಿಸುವುದಿಲ್ಲ. ಆದ್ದರಿಂದ ನನ್ನ ಜೊತೆಗೂಡಿ, ಎದ್ದೇಳಿ, ನಾವು ನರ್ತಿಸೋಣ. ಗಾಯ ಗುಣಪಡಿಸುವ ಶಕ್ತಿಗಾಗಿ, ಬದಲಾವಣೆಗಾಗಿ ನರ್ತಿಸೋಣ. ನಮ್ಮನ್ನು ನಾವೇ ಬದಲಾಯಿಸಿಕೊಳ್ಳೋಣ ಮತ್ತು ಈ ಜಗತ್ತನ್ನು ಬದಲಾಯಿಸೋಣ. ನಾವಲ್ಲರೂ ಒಟ್ಟಾಗಿ ಎದ್ದೇಳೋಣ' ಎಂದು ಅನೂಷ್ಕಾ ಕರೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT