ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷ ಮಗುವಿಗೆ ಲೈಂಗಿಕ ಕಿರುಕುಳ ನೀಡಿ ಬನಶಂಕರಿಯ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದ ದೊರೆಸ್ವಾಮಿ (35) ಎಂಬುವವನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಗುವನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹೊಸೂರು ರಸ್ತೆಯಲ್ಲಿ ಬಂಧಿಸಿದ್ದಾರೆ.

ಆರೋಪಿ  ಮತ್ತು ಮಗುವನ್ನು ಗುರುವಾರ ಬೆಳಿಗ್ಗೆ ಕಿಮ್ಸ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಮೂರ‌್ನಾಲ್ಕು ದಿನಗಳಲ್ಲಿ ವರದಿ ನೀಡುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಮಗಳು ಆಸ್ಪತ್ರೆಗೆ ದಾಖಲಾಗಿರುವ ವಿಷಯ ಮಾಧ್ಯಮಗಳ ಮೂಲಕ ಗೊತ್ತಾಯಿತು. ವಿಷಯ ತಿಳಿದು ಮಗುವಿನ ತಾಯಿಯೊಂದಿಗೆ ಗುರುವಾರ ಬೆಳಿಗ್ಗೆ ನಗರಕ್ಕೆ ಬಂದೆವು. ಆಸ್ಪತ್ರೆಗೆ ತೆರಳಿ ಮಗುವಿನ ಸ್ಥಿತಿಯನ್ನು ನೋಡಿದಾಗ ಆಘಾತವಾಯಿತು' ಎಂದು ಮಗುವಿನ ಸಂಬಂಧಿಕರು ತಿಳಿಸಿದರು.

`ಮಗಳ ದೇಹದ ಮೇಲಾಗಿರುವ ಗಾಯಗಳನ್ನು ಕಂಡ ತಾಯಿ ಚೀರಿಕೊಂಡು ಮರುಕ ವ್ಯಕ್ತಪಡಿಸಿದರು. ಮೊದಲೇ ಖಿನ್ನತೆಗೆ ಒಳಗಾಗಿದ್ದ ಮಗು, ತಾಯಿಯ ಆಕ್ರಂದನದಿಂದ ಮತ್ತಷ್ಟು ಖಿನ್ನತೆಗೆ ಒಳಗಾಗಿದೆ' ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

`ಆಟವಾಡುತ್ತಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದು ಮಗುವಿನ ಕಾಲಿಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಮನೆಗೆ ಬಂದಿದ್ದ ದೊರೆಸ್ವಾಮಿ, ನನಗೆ ನುರಿತ ಮೂಳೆ ತಜ್ಞರ ಪರಿಚಯವಿದೆ. ಅವರಿಂದ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತೇನೆ ಎಂಬ ವಿಶ್ವಾಸ ಮೂಡಿಸಿದ್ದ. ಆದರೆ, ಮಗುವಿನ ತಂದೆ ರುದ್ರೇಶ್, ಮಗಳನ್ನು ಕಳುಹಿಸದೇ ಹಾಸನದ ಆಸ್ಪತ್ರೆಯೊಂದರಲ್ಲೇ ಚಿಕಿತ್ಸೆ ಕೊಡಿಸಿದ್ದರು. ವೈದ್ಯರು ಇತ್ತೀಚೆಗೆ ಮಗುವಿನ ಕಾಲಿಗೆ ರಾಡ್ ಅಳವಡಿಸಿದ್ದರು' ಎಂದು ಮಗುವಿನ ಚಿಕ್ಕಪ್ಪ ತಿಳಿಸಿದ್ದಾರೆ.

`ಕೆಲ ವರ್ಷ ಹಿಂದೆ ಅಕ್ಕಿಪೇಟೆಯಲ್ಲಿ ಬೇಕರಿ ಇಟ್ಟುಕೊಂಡಿದ್ದ ರುದ್ರೇಶ್, ಕುಟುಂಬ ಸದಸ್ಯರೊಂದಿಗೆ ಕುಾರಸ್ವಾಮಿ ಲೇಔಟ್‌ನಲ್ಲಿ ವಾಸವಾಗಿದ್ದರು. ವ್ಯಾಪಾರದಲ್ಲಿ ನಷ್ಟ ಉಂಟಾದ ಕಾರಣ ಕುಟುಂಬ ಸದಸ್ಯರೊಂದಿಗೆ ತಮ್ಮ ಮೂಲ ಸ್ಥಳವಾದ ಹಾಸನ ಜಿಲ್ಲೆಯ ಮಲ್ಲಿಗೆಹಳ್ಳಿಗೆ ಹಿಂದಿರುಗಿದ್ದರು. ಈ ಸಂದರ್ಭದಲ್ಲಿ ಆರೋಪಿ ದೊರೆಸ್ವಾಮಿ ರುದ್ರೇಶ್‌ಗೆ ಆಪ್ತನಾಗಿದ್ದ' ಎಂದು ಮಕ್ಕಳ ಸಹಾಯವಾಣಿಯ ಸಂಚಾಲಕಿ ಜೆನಿಫರ್ ಮಾಹಿತಿ ನೀಡಿದರು.

ಕೆಲಸದ ಸಲುವಾಗಿ ಇತ್ತೀಚೆಗೆ ಪುನಃ ನಗರಕ್ಕೆ ಬಂದಿದ್ದ ರುದ್ರೇಶ್, ದೊರೆಸ್ವಾಮಿಯ ಮನೆಯಲ್ಲೇ ಉಳಿದಿದ್ದರು. ನಿಮ್ಮ ಕುಟುಂಬ ಸದಸ್ಯರನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಡಿ.6ರಂದು ರುದ್ರೇಶ್‌ಗೆ ಹೇಳಿ ಹಾಸನಕ್ಕೆ ಹೋಗಿದ್ದ ಆರೋಪಿ, ನಗರಕ್ಕೆ ಹಿಂದಿರುಗುವಾಗ ಜತೆಯಲ್ಲಿ ಮಗುವನ್ನೂ ಕರೆದುಕೊಂಡು ಬಂದಿದ್ದ. ಬಹಳ ದಿನಗಳ ನಂತರ ಮಗಳನ್ನು ಕಂಡ ರುದ್ರೇಶ್‌ಗೂ ಸಂತಸವಾಗಿತ್ತು.

ಆದರೆ, ಡಿ.8ರಂದು ರುದ್ರೇಶ್ ಕೆಲಸದ ನಿಮಿತ್ತ ಹೊಸೂರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದನು. ಡಿ.10ರಂದು ಹೊಸೂರಿನಿಂದ ಹಿಂದಿರುಗಿದ ರುದ್ರೇಶ್ ಮಗಳ ಬಗ್ಗೆ ವಿಚಾರಿಸಿದ್ದಾನೆ. ಆಗ ದೊರೆಸ್ವಾಮಿ ಮಗುವನ್ನು ಸ್ನೇಹಿತರ ಮನೆಯಲ್ಲಿ ಬಿಟ್ಟು ಬಂದಿರುವುದಾಗಿ ಹೇಳಿದ್ದಾನೆ. ಮರುದಿನ ಸಹಾಯವಾಣಿಯವರು ಕರೆ ಮಾಡಿದಾಗ ರುದ್ರೇಶ್‌ಗೆ ಆಘಾತವಾಗಿದೆ ಎಂದು ಜೆನಿಫರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT