ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ವಿಶ್ವಾಸಕ್ಕೆ ದ್ರೋಹ ಬಗೆದ `ಅಂಕಲ್'!

Last Updated 26 ಡಿಸೆಂಬರ್ 2012, 6:09 IST
ಅಕ್ಷರ ಗಾತ್ರ

ಕುಷ್ಟಗಿ: ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಮೂರನೇ ತರಗತಿ ವಿದ್ಯಾರ್ಥಿ ಅರವಿಂದ ದಂಡಿನ ಅಪಹರಣ ಪ್ರಕರಣ ಇಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಲಕ್ಷಾಂತರ ರೂಪಾಯಿಗಳನ್ನು ಗಳಿಸುವ ಸಂಚು ಮಾಡಿದ್ದ ಅಪಹರಣಕಾರರ ದುರಾದೃಷ್ಟ ಎಂಬಂತೆ ಬಾಲಕನ ಶಾಲಾ ಸಹಪಾಠಿ ವಿದ್ಯಾರ್ಥಿಯೊಬ್ಬ ಬಿಳಿ ಬಣ್ಣದ ಮತ್ತು `ಅಪ್ಪಾಜಿ' ಎಂದು ಬರೆದುದನ್ನು ಹೇಳಿದ್ದು ಆರೋಪಿಗಳನ್ನು ಬಲೆಗೆ ಕೆಡವಲು ಪೊಲೀಸರಿಗೆ ನೆರವಾಗಿದೆ.

ಎಂದಿನಂತೆ ಸೋಮವಾರ ಸಂಜೆ ಸ್ಕೂಲ್‌ಬಸ್‌ನಿಂದ ಬಾಲಕ ಇಳಿದ ಸ್ಥಳದಲ್ಲಿ ಬಿಳಿ ಇಂಡಿಕಾ ಕಾರ್‌ನೊಂದಿಗೆ ಕಾದುನಿಂತಿದ್ದ ಆರೋಪಿಗಳು ಬಾಲಕನನ್ನು ಪ್ರಮುಖ ಆರೋಪಿಯಾಗಿರುವ ಬಸವರಾಜ ಅಳಗುಂಡಿ ಎಂಬುವವ ಅದೇ ವೈದ್ಯರ ಆಸ್ಪತ್ರೆಯ ಲ್ಯಾಬ್‌ನಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸಿ ಐದಾರು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದಾನೆ.

ಮೊದಲಿನಿಂದಲೂ ಬಾಲಕನಿಗೆ ತಂದೆ-ತಾಯಿಗಳಿಗಿಂತಲೂ ಆತ್ಮೀಯನಾಗಿದ್ದ, ಅಲ್ಲದೇ ಬಾಲಕ ಆತನನ್ನು `ಅಂಕಲ್'ಎಂದೆ ಕರೆಯುತ್ತಿದ್ದ. `ಅಮ್ಮ ವಿಜಾಪುರಕ್ಕೆ ಮದುವೆಗೆ ಹೋಗಿದ್ದು ನಿನ್ನನ್ನು ಕರೆ ತರಲು ಕಾರು ಕಳಿಸಿದ್ದಾರೆ' ಎಂದು ಹೇಳಿದ್ದರಿಂದ  ಪ್ರತಿರೋಧ ಒಡ್ಡದೇ ಬಾಲಕ ಓಡೋಡಿ ಕಾರ್ ಹತ್ತಿದ್ದಾನೆ.

ಮಗ ಮನೆಗೆ ಬಾರದಕ್ಕೆ ತಾಯಿ ಡಾ.ಅರ್ಚನಾ ಚಿಂತೆಗೊಳಗಾಗಿದ್ದರು. ತಾಸಿನ ನಂತರ ಹುನುಗುಂದ ತಾಲ್ಲೂಕು ಗುಡೂರಿನ ಕಾಯಿನ್‌ಬೂತ್‌ನಿಂದ ಕರೆ ಮಾಡಿ ರೂ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು, ತಾಸಿನ ನಂತರ ಹಣದೊಂದಿಗೆ ತಾವು ಹೇಳುವ ಜಾಗಕ್ಕೆ ಬರುವಂತೆ ತಿಳಿಸಿದ್ದಾರೆ. ಅಲ್ಲದೇ ಕಾಯಿನ್‌ಬೂತ್ ಫೋನ್ ವೈರ್ ಕತ್ತರಿಸಿ ನಂತರ ಗಜೇಂದ್ರಗಡ ಮಾರ್ಗವಾಗಿ ಕುಷ್ಟಗಿಗೆ ಬಂದಿದ್ದಾರೆ. ಆದರೆ ಅಪಹರಣಕಾರರು ಮತ್ತೆ ಕರೆ ಮಾಡದಿರುವುದಕ್ಕೆ ದಿಗಿಲುಗೊಂಡ ವೈದ್ಯ ದಂಪತಿ ಹಣ ಹೊಂದಿಸಿಕೊಂಡದ್ದಲ್ಲದೇ ನಂತರ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ದುರಾದೃಷ್ಟ ಅಪಹರಣಕಾರರ ಬೆನ್ನುಹತ್ತಿದೆ, ರಾತ್ರಿ 8 ಗಂಟೆ ವೇಳೆಯಲ್ಲಿ ಮೊಬೈಲ್‌ಗೆ ಕರೆನ್ಸಿ ಚಾರ್ಜ್ ಮಾಡಿಸಿಕೊಳ್ಳುವುದಕ್ಕೆಂದು ಕುಷ್ಟಗಿ ಬಸವೇಶ್ವರ ವೃತ್ತದ ಬಳಿ ಕಾರು ನಿಲ್ಲಿಸಿದಾಗ ಸುಳಿವು ಹಿಡಿದ ಪೇದೆ ಸಣ್ಣಈರಣ್ಣ ಮತ್ತು ಚಂದಪ್ಪ ಆರೋಪಿಗಳನ್ನು ಹಿಡಿದಿದ್ದಾರೆ.

ನವದೆಹಲಿಯಲ್ಲಿನ ನರ್ಸಿಂಗ್ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣದ ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗುತ್ತಿರುವ ಸಂದರ್ಭದಲ್ಲೇ ಸ್ವತಃ ಮುಖ್ಯಮಂತ್ರಿ ಸಂಬಂಧಿಕರ ಮಗು ಅಪಹರಣಕ್ಕೊಳಗಾದ ಘಟನೆಯಿಂದ ರಾಜ್ಯ ಸರ್ಕಾರ ಮುಜುಗರಕ್ಕೆ ಸಿಲುಕಬಹುದು ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಹಾಗಾಗಿ ಬಾಲಕನ ರಕ್ಷಣೆ ಪೊಲೀಸರ ಮೊದಲ ಆದ್ಯತೆಯಾಗಿತ್ತು. ಒಂದು ವೇಳೆ ಕುಷ್ಟಗಿ ಪಟ್ಟಣದಲ್ಲಿ ಕಾರು ಅನುಮಾನಾಸ್ಪದವಾಗಿ ನಿಲ್ಲದಿದ್ದರೆ ಆರೋಪಿಗಳು ಕೈಗೆ ಸಿಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.

ಅಚ್ಚರಿಯ ಸಂಗತಿಯಂದರೆ ಬಾಗಲಕೋಟೆಯಲ್ಲಿ ಬಾಲಕನನ್ನು ಅಪಹರಿಸಿದವರು ಎಲ್ಲಿಯೂ ನಿಲ್ಲದಂತೆ ನೋಡಿಕೊಂಡಿದ್ದಾರೆ. ಆದರೆ ತಮ್ಮ ಸಹಪಾಟಿ ಅರವಿಂದ ದಂಡಿನ ಬಿಳಿ ಮತ್ತು `ಅಪ್ಪಾಜಿ' ಎಂದು ಬರೆದಿದ್ದ ಕಾರಿನಲ್ಲಿ ಸಲೀಸಾಗಿ ಹತ್ತಿ ಹೋಗಿದ್ದನ್ನು ವಿದ್ಯಾರ್ಥಿಯೊಬ್ಬ ನೀಡಿದ ಮಾಹಿತಿ ಆರೋಪಿಗಳನ್ನು ಸುಲಭವಾಗಿ ಹಿಡಿಯುವುದಕ್ಕೆ ಸಾಧ್ಯವಾಗಿದೆ. ಅಲ್ಲದೇ ಅಪಹರಣಕಾರರು ನೀರಲಕೇರಿ, ಗುಳೇದಗುಡ್ಡ, ಪಟ್ಟದಕಲ್ಲ, ಗುಡೂರು, ಗಜೇಂದ್ರಗಡಕ್ಕೆ ತೆರಳಿದ್ದರೂ ಹಳ್ಳಿಯ ಒಳದಾರಿಗಳನ್ನೇ ಬಳಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT