ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳಿಂದ ಶರಣ ಸಂಸ್ಕೃತಿ ಉಳಿವು: ಜಯಶ್ರೀ

Last Updated 3 ಅಕ್ಟೋಬರ್ 2011, 8:45 IST
ಅಕ್ಷರ ಗಾತ್ರ

ಹುಕ್ಕೇರಿ: ದಸರಾ ಉತ್ಸವದ ಹಿನ್ನೆಲೆಯಲ್ಲಿ ಇಲ್ಲಿಯ ಹಿರೇಮಠದ ವತಿಯಿಂದ ಖ್ಯಾತ ರಂಗಕಲಾವಿದೆ, ರಾಜ್ಯಸಭೆ ಸದಸ್ಯೆ ಬಿ. ಜಯಶ್ರೀ ಅವರಿಗೆ ರೇಣುಕಶ್ರೀ ಮತ್ತು ಮತ್ತು ಹಿರಿಯ ಸಾಹಿತಿ ಡಾ. ಮುಡ್ನಾಕೂಡು ಚಿನ್ನಸ್ವಾಮಿ ಅವರಿಗೆ ಡಾ. ಸ.ಜ. ನಾಗಲೋಟಿಮಠ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.

ಶ್ರೀಮಠದಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಕೃಷಿ ಸಚಿವ ಉಮೇಶ ಕತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಮಠಮಾನ್ಯಗಳು ಜನರಿಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವ ಜೊತೆಗೆ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಸೇವೆ. ಇಂಥ ಕಾರ್ಯಕ್ರಮಗಳ ಮೂಲಕ ಪ್ರತಿಭಾವಂತರು ಬೆಳಕು ಕಾಣಲು ಸಹಾಯಕ ಎಂದು ನುಡಿದರು.

`ರೇಣುಕಶ್ರಿ~ ಪ್ರಶಸ್ತಿ ಪುರಸ್ಕೃತೆ ಜಯಶ್ರೀ ಅವರು ಮಾತನಾಡಿ, ಪ್ರಶಸ್ತಿಯ ಸಂತಸದ ಜೊತೆಗೆ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜದ ಒಳಿತಿಗೆ ಪೂರಕವಾಗಿ ಸೇವೆ ಸಲ್ಲಿಸಲಾಗುವುದು ಎಂದು ಹೇಳಿದರು.
ಹಿರೇಮಠವು ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಕಾರ್ಯ ನಿರ್ವಹಿಸುವ ಜೊತೆಗೆ  ಪ್ರತಿದಿನ 60 ಸಾವಿರ ಮಕ್ಕಳಿಗೆ ಬಿಸಿಯೂಟ ಪೂರೈಸುವ ಕಾರ್ಯ ನಿಭಾಯಿಸುತ್ತಿರುವದು ಅಚ್ಚರಿಯ ಸಂಗತಿ.
 

ಶ್ರೀಮಠದ ಚಂದ್ರಶೇಖರ ಸ್ವಾಮೀಜಿ ಭಾವೈಕ್ಯತೆಯ ಸಂಕೇತ. ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ನುಡಿದರು.12ನೇ ಶತಮಾನದ ಶರಣ ಸಂಸ್ಕೃತಿಯನ್ನು ಉಳಿಸಿ, ಮುನ್ನಡೆಸಿಕೊಂಡು ಹೋಗುತ್ತಿರುವ ಮಠಗಳ ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಗೆ ಬೆಲೆ ಕಟ್ಟಲಾಗದು ಎಂದು ಜಯಶ್ರೀ ಹೇಳಿದರು.

ಮಠಗಳಿಂದ ಬಡವರು, ದುರ್ಬಲರು ಮತ್ತು ಸಮಾಜದ ಕೆಳಸ್ತರದ ಬಡ ಜನರಿಗೆ ಅನುಕೂಲ ಆಗಬೇಕು. ಅದಕ್ಕಾಗಿ ತಮಗೆ ನೀಡಿರುವ ಪ್ರಶಸ್ತಿ ಪುರಸ್ಕಾರದ ಹಣವನ್ನು ಶ್ರೀಮಠದ ಸೇವೆಗೆ ಸಮರ್ಪಿಸುವುದಾಗಿ ತಿಳಿಸಿದರು.

ಡಾ. ಸ.ಜ.ನಾಗಲೋಟಿಮಠ  `ಸಾಹಿತ್ಯ ರತ್ನ~  ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಸಾಹಿತಿ ಡಾ. ಮುಡ್ನಾಕೂಡು ಚಿನ್ನಸ್ವಾಮಿ ಮಠಗಳು ಸಾಂಸ್ಕೃತಿಕ ವೇದಿಕೆಯಾಗದೆ, ಜಾಗೃತಿ ಕೇಂದ್ರಗಳಾಗಬೇಕು ಎಂದು ನುಡಿದರು.
ಶಾಸಕ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿದರು.

ಸ.ಜ.ನಾ. ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ನಾಗಲೋಟಿಮಠ, ಪ.ಪಂ. ಅಧ್ಯಕ್ಷ ಜಯಗೌಡ ಪಾಟೀಲ, ಸದಸ್ಯ ಮಹಾವೀರ ನಿಲಜಗಿ, ವಸಂತ ನಿಲಜಗಿ, ಮುಕ್ತಾರ ಪಠಾಣ, ತಹಸೀಲ್ದಾರ ಎ.ಐ. ಅಕ್ಕಿವಾಟೆ ಉಪಸ್ಥಿತರಿದ್ದರು.  ಮಠಾಧೀಶ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರೇಮಠ ಸ್ವಾಗತಿಸಿದರು. ಡಾ. ವೈ.ಬಿ. ಹಿಮ್ಮಡಿ ಪರಿಚಯಿಸಿದರು. ಸಿ.ಎಂ. ದರಬಾರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT