ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಮಾನ್ಯಗಳಿಗೆ ಶೆಟ್ಟರ್ ನೆರವಿನ ಅಭಯ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ನೆಲಮಂಗಲ: `ನಾಡಿನ ಶೈಕ್ಷಣಿಕ ಪ್ರಗತಿಗೆ ದಾಸೋಹದ ಮೂಲಕ ನಾಂದಿ ಹಾಡಿದ ಮಠ ಮಾನ್ಯಗಳಿಗೆ ಸರ್ಕಾರ ಸಹಾಯ ಹಸ್ತ ಮುಂದುವರೆಸಲಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರ ಭರವಸೆ ನೀಡಿದರು.

ತಾಲ್ಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಕಂಬಾಳು ಸಂಸ್ಥಾನ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ಮತ್ತು ಸಿದ್ದಗಂಗಾ ಶ್ರೀಗಳ ಗುರುವಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


`ಶಿಕ್ಷಣ ರಂಗಕ್ಕೆ ಅಪಾರ ಕಾಣಿಕೆ ಸಲ್ಲಿಸಿದ ಮಠಗಳು, ಖಾಸಗಿ ಸಂಸ್ಥೆಗಳು, ಧರ್ಮ ಪೀಠಗಳು ಮತ್ತು ಪ್ರಾರ್ಥನಾ ಮಂದಿರಗಳಿಗೆ ಸರ್ಕಾರ ಸಹಾಯಧನ ನೀಡುವುದು ಟೀಕೆಗೆ ಗುರಿಯಾಗಿದ್ದರೂ ಅದು ಸಮಾಜ ಪರಿವರ್ತನೆಗೆ ಅಗತ್ಯ. ಹೀಗಾಗಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದಲ್ಲಿ ಮುಂದುವರೆಯುತ್ತೇನೆ~ ಎಂದರು.

`ಪ್ರಖರ ಇಚ್ಛಾಶಕ್ತಿಯಿಂದ ಪರಿವರ್ತನೆ ಸಾಧ್ಯ ಎಂಬುದಕ್ಕೆ ಹುಬ್ಬಳ್ಳಿಯ ಸಾಮಾನ್ಯ ಬೆಟ್ಟ (ನೃಪತುಂಗ ಬೆಟ್ಟ) ಉತ್ತಮ ಉದಾಹರಣೆಯಾಗಿದೆ. ಇಂದು ಅದು ಸಾಂಸ್ಕೃತಿಕ ವಿಹಾರ ಕೇಂದ್ರವಾಗಿದೆ. ಆ ಕ್ಷೇತ್ರದ ಶಾಸಕನಾಗಿ ಅಂದು ನಾನು ಸಂಕಲ್ಪ ಮಾಡಿದಂತೆ ಇಂದು ಮುಖ್ಯಮಂತ್ರಿಯಾಗಿ ಧಾರ್ಮಿಕ, ಸಾಂಸ್ಕೃತಿಕ, ಪ್ರವಾಸಿ ಕೇಂದ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ~ ಎಂದು ಪ್ರಕಟಿಸಿದರು.

`ನೆರೆಯ ರಾಜ್ಯಗಳಆದ ಕೇರಳ ಮತ್ತು ಗೋವಾದಲ್ಲಿ ಪ್ರವಾಸೋದ್ಯಮದಿಂದಲೇ ಸಂಪತ್ತಿನ ಕ್ರೋಡೀಕರಣವಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಸಾಕಷ್ಟು ಪ್ರಕೃತಿ ಸೌಂದರ್ಯದ ತಾಣಗಳು, ಪ್ರವಾಸಿ ತಾಣಗಳಿವೆ. ಅವುಗಳ ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗುವುದು~ ಎಂದೂ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.

ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ: `ಕಂಬಾಳು ಸಂಸ್ಥಾನ ಮಠ ಗ್ರಂಥ~ ಲೋಕಾರ್ಪಣೆ ಮಾಡಿದ ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ, `ಕೂಡಲಸಂಗಮ ಪ್ರಾಧಿಕಾರ ರಚಿಸಿ ಆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದಂತೆ ಶಿವಗಂಗೆ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಆ ಮೂಲಕ ದೇಶದ ಗಮನಸೆಳೆಯುವ ಮತ್ತು ಸಾಹಿತ್ಯ ಸಂಸ್ಕೃತಿಯ ಧರ್ಮದ ನೆಲೆ ಬೀಡಾದ ಇಲ್ಲಿ ಸಂಶೋಧನಾ ಕಾರ್ಯ ಕೈಗೊಳ್ಳುವ ಮಹಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು~ ಎಂದು ಆಗ್ರಹಿಸಿದರು.

ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕ ಎಂ.ವಿ.ನಾಗರಾಜು, ಮೇಲಣಗವಿ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ನೂತನ ಶ್ರೀಗಳಾದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT