ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ಕೋಟೆಯಲ್ಲಿ ಹಾರಿದ ಕೆಂಪುಬಾವುಟ

Last Updated 22 ಫೆಬ್ರುವರಿ 2013, 6:30 IST
ಅಕ್ಷರ ಗಾತ್ರ

ಮಡಿಕೇರಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರ ಎರಡನೇ ದಿನವಾದ ಗುರುವಾರ ಕೂಡ ಕೊಡಗು ಜಿಲ್ಲೆಯಲ್ಲಿ ಮುಂದುವರಿಯಿತು. ಜನಜೀವನಕ್ಕೆ ಯಾವುದೇ ಧಕ್ಕೆಯಾಗದಂತೆ ದಿನವಿಡೀ ಹಲವೆಡೆ ಪ್ರತಿಭಟನೆಗಳು, ಮುಷ್ಕರಗಳು ನಡೆದವು.

ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್ ಹಾಗೂ ಆಟೊ ಸಂಚಾರ ಸಾಮಾನ್ಯವಾಗಿತ್ತು. ಅಂಗಡಿ ಮುಂಗಟ್ಟುಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಕೇಂದ್ರ ಸರ್ಕಾರ ಸ್ವಾಮ್ಯದ ಅಂಚೆಕಚೇರಿ, ಬಿಎಸ್‌ಎನ್‌ಎಲ್ ಹಾಗೂ ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ.

ಮಡಿಕೇರಿ ನಗರದಾದ್ಯಂತ ಗುರುವಾರ ದಿನವಿಡೀ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಖಾಸಗಿ ಬಸ್ ನಿಲ್ದಾಣ, ಕಾಲೇಜು ರಸ್ತೆ, ಜಿ.ಟಿ. ವೃತ್ತದಿಂದ ಕೋಟೆ ಆವರಣದವರೆಗೆ ಒಂದಾದ ಮೇಲೊಂದರಂತೆ ಪ್ರತಿಭಟನಾ ಮೆರವಣಿಗೆಗಳು ಸಾಗಿಬಂದವು. ದಾರಿಯುದ್ದಕ್ಕೂ ಕಾರ್ಮಿಕ ವಿರೋಧಿ ಸರ್ಕಾರದ ನಿಲುವುಗಳ ವಿರುದ್ಧ ಘೋಷಣೆ ಕೂಗಿದರು.

ನಗರದ ಕೋಟೆ ಆವರಣಕ್ಕೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯೂನ್, ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ತಲೆಹೊರೆ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ, ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್, ಬಿಎಸ್‌ಎನ್‌ಎಲ್ ನೌಕರರ ಸಂಘ, ಕೂರ್ಗ್ ಡಿಸ್ಟ್ರಿಕ್ಟ್ ಜನರಲ್ ವರ್ಕರ್ಸ್‌ ಯುನಿಯೂನ್, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಜಿಲ್ಲಾ ತೋಟ ಕಾರ್ಮಿಕರ ಸಂಘ, ಎಲ್‌ಐಸಿ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಆಗಮಿಸಿದರು.

ಕಾರ್ಮಿಕರ ಕನಿಷ್ಠ ವೇತನವನ್ನು ರೂ. 10 ಸಾವಿರಕ್ಕೆ ನಿಗದಿಪಡಿಸಬೇಕು, ಖಾಸಗೀಕರಣ ನಿಲ್ಲಿಸಬೇಕು, ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಯಂತ್ರಿಸಬೇಕು, ಸರ್ವರಿಗೂ ಪಿಂಚಣಿ ನೀಡಬೇಕು, ಕಾರ್ಮಿಕರ ಕಾನೂನುಗಳನ್ನು ಜಾರಿಗೊಳಿಸಬೇಕು. ಎಲ್ಲ ಕಾರ್ಮಿಕರಿಗೂ ಬಿಪಿಎಲ್ ಪಡಿತರ ಚೀಟಿ ನೀಡಿ, ಪಡಿತರ ಪದಾರ್ಥಗಳನ್ನು ಕಡಿಮೆ ಬೆಲೆಗೆ ನೀಡಬೇಕು. ತೋಟದಲ್ಲಿ ದುಡಿಯುವ ಹಂಗಾಮಿ ಕಾರ್ಮಿಕರನ್ನು ಖಾಯಂಗೊಳಿಸಿ, ಮೂಲ ಸೌಲಭ್ಯ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಟನೆಗಳು ಮಂಡಿಸಿವೆ.

ಎರಡನೇ ದಿನವೂ ಮುಷ್ಕರ ಯಶಸ್ವಿ
ಶನಿವಾರಸಂತೆ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಚೇಂಬರ್ ಆಫ್ ಕಾಮರ್ಸ್, ಮೋಟಾರು ಕಾರ್ಮಿಕರ ಸಂಘ ಮತ್ತಿತರ ಸಂಘಟನೆಗಳು ನಡೆಸಿದ ಮುಷ್ಕರಕ್ಕೆ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಟ್ಟಣದಲ್ಲಿ ಎಲ್ಲ ಶಾಲೆ, ಕಾಲೇಜುಗಳು, ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು, ಅಂಚೆ ಕಚೇರಿ ಮುಚ್ಚಿದ್ದವು. ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಕೆಲವು ಖಾಸಗಿ ವಾಹನಗಳು, ಆಟೊರಿಕ್ಷಾಗಳು ಮಾತ್ರ ಓಡಾಡುತ್ತಿದ್ದವು. ಅಂಗಡಿ ಮುಂಗಟ್ಟುಗಳು, ಹೋಟೆಲ್, ಕ್ಯಾಂಟೀನುಗಳು ಮುಚ್ಚಿದ್ದವು. ಊಟ, ಉಪಾಹಾರ ಹಾಗೂ ಪ್ರಯಾಣಕ್ಕಾಗಿ ಜನ ಪರದಾಡುವಂತಾಯಿತು.
ಕೊಡ್ಲಿಪೇಟೆಯಲ್ಲಿ ನೀರಸ: ಸಮೀಪದ ಕೊಡ್ಲಿಪೇಟೆಯಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬುಧವಾರ ಹಾಗೂ ಗುರುವಾರ ಎರಡೂ ದಿನ ಜನಜೀವನ ಎಂದಿನಂತೆ ಇತ್ತು. ಸರ್ಕಾರಿ ಹಾಗೂ ಖಾಸಗಿ ವಾಹನಗಳು ಎಂದಿನಂತೆ ಓಡಾಡಿದವು. ವ್ಯಾಪಾರ ವಹಿವಾಟು ಕೂಡ ಸರಳವಾಗಿ ನಡೆಯಿತು. ಅಲ್ಲಲ್ಲಿ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿದ್ದು ಬಿಟ್ಟರೆ ಯಾರೂ ಪ್ರತಿಭಟನೆಯಲ್ಲಿ ತೊಡಗಲಿಲ್ಲ.

ಸೋಮವಾರಪೇಟೆ: ಬಂದ್ ಯಶಸ್ವಿ
ಸೋಮವಾರಪೇಟೆ: ಡಿಸೇಲ್ ಮತ್ತು ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ವಿವಿಧ ಸಂಘಟನೆಗಳು ಗುರುವಾರ ಕರೆದಿದ್ದ ಪಟ್ಟಣದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬುಧವಾರ ಸಂಜೆಯ ಹೊತ್ತಿಗೆ ದಿಢೀರಾಗಿ ಬಂದ್ ಕರೆ ನೀಡಲು ನಿರ್ಧರಿಸಿದ್ದರಿಂದ  ಸಾರ್ವಜನಿಕರಿಗೆ ತೊಂದರೆಯಾಯಿತು.

ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬೆಳಗಿನಿಂದಲೇ ಮುಚ್ಚಿದ ವ್ಯಾಪಾರಿಗಳು ಬಂದ್‌ಗೆ ಸಹಕರಿಸಿದರು. ಖಾಸಗಿ ಬಸ್‌ನವರೂ ಬಂದ್‌ಗೆ ಬೆಂಬಲ ನೀಡಿದ್ದರು. ಇದರೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೂ ಸಂಘಟಕರು ಅವಕಾಶ ನೀಡಲಿಲ್ಲ.

ಸರ್ಕಾರಿ ಕಚೇರಿಗಳಲ್ಲಿ ನೌಕರರು ಎಂದಿನಂತೆ ಕಾರ್ಯನಿರ್ವಹಿಸಿದರು. ಬ್ಯಾಂಕ್‌ಗಳು ಮುಚ್ಚಿದ್ದರಿಂದ ಗ್ರಾಮಾಂತರ ಪ್ರದೇಶಗಳ ಜನರು ಪಟ್ಟಣಕ್ಕೆ ಬರಲಿಲ್ಲ. ಕೇವಲ ಪಟ್ಟಣ ಪ್ರದೇಶಕ್ಕೆ ಮಾತ್ರ ಬಂದ್ ಸೀಮಿತವಾಗಿದ್ದರಿಂದ ಅಕ್ಕಪಕ್ಕದ ಗ್ರಾಮಗಳ ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕಚೇರಿಗಳ ಸಿಬ್ಬಂದಿಗಳು ಪರದಾಡಿದರು.

ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ವರ್ತಕರ ಸಂಘ, ಮೋಟಾರ್ ಯೂನಿಯನ್, ಜಯ ಕರ್ನಾಟಕ ಸಂಘಟನೆ, ಆಟೊ ಚಾಲಕರ ಮತ್ತು ಮಾಲೀಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಟ್ಟಣದ ವಿವೇಕಾನಂದ ವೃತ್ತದ ಬಳಿ ರಸ್ತೆತಡೆ ನಡೆಸಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT