ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ದಸರಾ: ನವರಸ ಇಲ್ಲದ ಕವನ ಸಾಲುಗಳು...

Last Updated 22 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ದಸರಾ ಉತ್ಸವ ಅಂಗವಾಗಿ ಕಾವೇರಿ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಬಹುತೇಕವಾಗಿ ಕೊಡಗಿನ ಪರಿಸರ ಸೌಂದರ್ಯ, ವೀರರು ಹಾಗೂ ಶೂರತ್ವದ ಬಣ್ಣನೆ ಮತ್ತು ದಸರಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುವ ಕವನಗಳನ್ನು ಕವಿಗಳು ವಾಚಿಸಿದರು.

ಕವಿಗೋಷ್ಠಿಯಲ್ಲಿ ಒಟ್ಟು 53 ಕವನಗಳು ವಾಚಿಸಲ್ಪಟ್ಟವು. ಇವುಗಳಲ್ಲಿ 19 ಕನ್ನಡದ ಕವನಗಳು ಬಂದಿದ್ದರೆ, ಇನ್ನುಳಿದಂತೆ ಏಳು ಕೊಡವ ಕವನಗಳು, ಏಳು ಅರೆಭಾಷೆ ಕನ್ನಡ, ಐದು ಇಂಗ್ಲಿಷ್ ಕವನಗಳು, ನಾಲ್ಕು ಮಕ್ಕಳ ಕವನ ಹಾಗೂ ಕುಂಬಾರ ಭಾಷೆ, ಬ್ಯಾರಿ, ತುಳು, ಮರಾಠಿ, ತೆಲುಗು, ಕೊಂಕಣಿ, ಹಿಂದಿಯಲ್ಲಿ ತಲಾ ಒಂದೊಂದು ಕವನಗಳು ವಾಚಿಸಲ್ಪಟ್ಟವು.

ಪಂಚ್ ಕವನಗಳಿಗೆ ಕೊರತೆ
ಬಹುತೇಕ ಕವನಗಳು ಸೌಂದರ್ಯ ವರ್ಣನೆಗೆ, ಹೊಗಳಿಕೆಗೆ, ಪ್ರಶಂಸೆಗೆ ಸೀಮಿತವಾಗಿದ್ದವು. ಸಾಮಾನ್ಯವಾಗಿ ದಸರಾ ಕವಿಗೋಷ್ಠಿಯಲ್ಲಿ ಕೇಳಿಬರುತ್ತಿದ್ದ ರಾಜಕೀಯ ವಿಡಂಬನೆಯ ಕವನಗಳು, ಸಮಾಜದ ಡೊಂಕು ವ್ಯವಸ್ಥೆಯನ್ನು ತಿವಿಯುವ, ಪ್ರಸ್ತುತ ಸನ್ನಿವೇಶಗಳನ್ನು ಗೇಲಿ ಮಾಡುವ, ನವಿರಾದ ಹಾಸ್ಯ ಉಕ್ಕಿಸುವ ಕವನಗಳು ಈ ಬಾರಿ ಕೇಳಿಬರಲಿಲ್ಲ. ಹೀಗಾಗಿ ಸಭಾಂಗಣದಲ್ಲಿ ಸಭಿಕರ ಕರತಾಡನ ಮೊಳಗಲಿಲ್ಲ.

ಒಂದಿಷ್ಟು ಆಶಾಕಿರಣ
ಇದ್ದುದರಲ್ಲಿ ಕುಡೆಕಲ್ ಸಂತೋಷ್ ಅವರ `ಕಾವೇರಿ ನಾಡ್~ ಅರೆಭಾಷೆ ಕವನ ಒಂದಿಷ್ಟು ಮೊನಚು ಕಾಯ್ದುಕೊಂಡಿತ್ತು. ಇಂದು ಕೊಡಗಿನ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿರುವ ರೆಸಾರ್ಟ್ ಸಂಸ್ಕೃತಿಯನ್ನು ತಮ್ಮದೇ ಧಾಟಿಯಲ್ಲಿ ಚುಚ್ಚಿದರು.

ಕೊಯನಾಡಿನ ಲೋಕೇಶ್ ಊರುಬೈಲು ಅವರ `ಚಾಮೆವ್ವ ನೆಂಪಾದವೆ...!~ ಗಮನ ಸೆಳೆಯಿತು. `ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು....~ ಗೀತೆಯ ಧಾಟಿಯಲ್ಲಿ ಬೆಟ್ಟಗೇರಿಯ ಕಡ್ಲೇರ ತುಳಸಿ ಮೋಹನ್ ಅವರು `ಯೋಧಂಗೆ ಸಮರ್ಪಣೆ~ ಕವನವನ್ನು ಹಾಡಿದಾಗ ಅವರೊಂದಿಗೆ ಸಭಿಕರೂ ಧ್ವನಿಗೂಡಿಸಿದರು.

ಇದಕ್ಕೂ ಮುಂಚೆ ನಡೆದ ಸಭಾ ಕಾರ್ಯಕ್ರಮದಲ್ಲಿ ದಸರಾ ಸಮಿತಿ ಕಾರ್ಯಧ್ಯಕ್ಷರಾದ ಪಳೆಯಂಡ ರಾಬಿನ್ ದೇವಯ್ಯ ಅವರು ಮಾತನಾಡಿ, ಈ ಬಾರಿ ದಸರಾದ ನಾನಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಇದನ್ನು ಸರ್ಮಪಕವಾಗಿ ಬಳಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಬೆಳಕು ಚೆಲ್ಲುವಂತಾಗಬೇಕು ಎಂದು ಅವರು ಹೇಳಿದರು. 

ಕವನ ಸಂಕಲನ `ಕಾವ್ಯ ಲಹರಿ~ಯನ್ನು ಬಿಡುಗಡೆ ಮಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಕಾವ್ಯಗಳ ಮೂಲಕ ಸಮಾಜವನ್ನು ಎಚ್ಚರಿಸುವುದಲ್ಲದೇ, ಕವಿತೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕಿದೆ ಎಂದರು.

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹರದಾಸ ಅಪ್ಪಚ್ಚು ಕವಿ ಮತ್ತು ಭಾರತೀಸುತ ಕಾದಂಬರಿಕಾರರ ರಸ್ತೆಗಳಿಗೆ ಮರು ನಾಮಕರಣ ಮಾಡಬೇಕು. ನಾಮಫಲಕಗಳನ್ನು ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕವಿತಾ ರೈ ಅವರು ಮಾತನಾಡಿದರು. ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷರಾದ ಎಂ.ಶ್ರೀಧರ ಹೂವಲ್ಲಿ ಅವರು ಸ್ವಾಗತಿಸಿದರು. ಪತ್ರಕರ್ತ ಕೂಡೆಕಲ್ ಸಂತೋಷ್ ನಿರೂಪಿಸಿದರು. ಪರ್ತಕರ್ತ ಉಜ್ವಲ್ ರಂಜಿತ್ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT