ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ಸಮ್ಮೇಳನಕ್ಕೆ ನಾ. ಡಿಸೋಜ ಅಧ್ಯಕ್ಷ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಡಿಕೇರಿಯಲ್ಲಿ ಜನವರಿ 7, 8 ಮತ್ತು 9ರಂದು ನಡೆಯಲಿರುವ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ನಾ. ಡಿಸೋಜ (76) ಅವರನ್ನು ಆಯ್ಕೆ ಮಾಡಲಾಗಿದೆ.

ಬುಧವಾರ ಇಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೪೩ ಸದಸ್ಯರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ  ನಿರ್ಣಯ ಕೈಗೊಳ್ಳಲಾಯಿತು ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

೧೯೪೯ರಲ್ಲಿ ಗುಲ್ಬರ್ಗದಲ್ಲಿ ನಡೆದ ೩೨ನೇ ಸಮ್ಮೇಳನಕ್ಕೆ ಉತ್ತಂಗಿ ಚನ್ನಪ್ಪ ಅವರು ಅಧ್ಯಕ್ಷರಾಗಿದ್ದರು. ಅವರ ನಂತರ ಕ್ರೈಸ್ತ ಸಮುದಾಯದ ಸಾಹಿತಿ­ಯೊಬ್ಬರು ಅಧ್ಯಕ್ಷರಾಗುತ್ತಿರುವುದು ಇದೇ ಮೊದಲು ಎಂದು ತಿಳಿಸಿದರು.

‘ಸಾಹಿತಿಗಳಾದ ಲತಾ ರಾಜ­ಶೇಖರ್, ಡಾ.ಹಂ.ಪ. ನಾಗರಾ­ಜಯ್ಯ, ವೀರಭದ್ರಯ್ಯ ಮತ್ತು ದೇವ­ನೂರ ಮಹಾದೇವ ಅವರ ಹೆಸರು ಚರ್ಚೆಗೆ ಬಂದವು. ಆದರೆ ಅಂತಿಮ­ವಾಗಿ ನಾ.ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು’.

‘ರಾಜ್ಯ ಸರ್ಕಾರ ಸಮ್ಮೇಳನಕ್ಕಾಗಿ ಬಜೆಟ್‌ನಲ್ಲಿ ರೂ 1 ಕೋಟಿ ಮೀಸ­ಲಿಟ್ಟಿದೆ. ಆದರೆ ಹೆಚ್ಚುವರಿ­ಯಾಗಿ ಇನ್ನೂ ರೂ 1 ಕೋಟಿ ಅಗತ್ಯವಿದ್ದು, ಸರ್ಕಾರ ಈ ಹಣವನ್ನೂ ನೀಡುತ್ತದೆ ಎಂಬ ಭರವಸೆ ಇದೆ. ಮಡಿಕೇರಿ ಸಣ್ಣ ನಗರವಾಗಿದ್ದು, ಎರಡು ಸಾವಿರ ಮಂದಿಗೆ ಮಾತ್ರ ವಸತಿ ವ್ಯವಸ್ಥೆ ಕಲ್ಪಿಸಬಹುದು. ಆದ್ದರಿಂದ ಡಿಸೆಂಬರ್ ೧೫ರೊಳಗೆ ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಹೇಳಿದರು.

ಈ ಬಾರಿಯ ಸಮ್ಮೇಳನಕ್ಕೆ ಒಂದು ಲಕ್ಷ ಜನ ಬರುವ ನಿರೀಕ್ಷೆ ಇದೆ. ಇವರಲ್ಲಿ ನೋಂದಾಯಿತ ಪ್ರತಿನಿಧಿಗಳು 8 ಸಾವಿರಕ್ಕೂ ಹೆಚ್ಚಿರುತ್ತಾರೆ. ಅವರಿಗಾಗಿ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಒ.ಒ.ಡಿ ಪತ್ರವನ್ನು ಪರಿಷತ್ತಿನ ಜಿಲ್ಲಾ ಶಾಖೆಗಳಲ್ಲೇ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಪಿ.ರಮೇಶ್ ಮಾತನಾಡಿ, ಸಮ್ಮೇಳನಕ್ಕೆ ಬರುವವರಿ­ಗಾಗಿ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗೆ ಹಾಗೂ ನೋಂದಾಯಿತ ಪ್ರತಿನಿಧಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅವರಿಗೆ ಕೂಪನ್‌ ನೀಡಲಾಗುತ್ತದೆ. ಹೆಸರು ನೋಂದಾಯಿಸಿಕೊಳ್ಳದ ಜನರಿಗೆ ಪ್ರತ್ಯೇಕವಾಗಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಚಳಿಗೆ ಸಜ್ಜಾಗಿ ಬನ್ನಿ!
ಸಮ್ಮೇಳನ ನಡೆಯುವ ಸಮಯದಲ್ಲಿ ಮಡಿಕೇರಿಯಲ್ಲಿ ವಿಪರೀತ ಚಳಿ ಇರುತ್ತದೆ. ಆದ್ದರಿಂದ ಪ್ರತಿನಿಧಿಗಳು ಚಳಿಯಿಂದ ರಕ್ಷಣೆ ಪಡೆಯಲು ಸೂಕ್ತ ವ್ಯವಸ್ಥೆ ಮಾಡಿ­ಕೊಂಡು ಬರುವುದು ಒಳ್ಳೆಯದು. ಹಿರಿಯರು ಮತ್ತು ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು.
">- ಪುಂಡಲೀಕ ಹಾಲಂಬಿ, ಕಸಾಪ ಅಧ್ಯಕ್ಷ


ಡಿ. 12ರಂದು ಪ್ರತಿಭಟನೆ
ಎಂಇಎಸ್ ಶಾಸಕರಾದ ಸಂಭಾಜಿರಾವ್ ಪಾಟೀಲ ಮತ್ತು ಅರವಿಂದ್ ಪಾಟೀಲ ಅವರು ರಾಜ್ಯದ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಹಾಗೂ ಮಾಜಿ ಸಚಿವ ಉಮೇಶ್‌ ಕತ್ತಿ ಅವರು ರಾಜ್ಯ ವಿಭಜನೆ ಬಗ್ಗೆ ನೀಡಿರುವ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸುತ್ತದೆ.

ಈ ಸಂಬಂಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಇದೇ 4ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಕನ್ನಡ ಪರಿಷತ್ತಿನ ಕಾರ್ಯಕಾರಿ ಸಭೆ ನಿರ್ಧರಿಸಿದೆ ಎಂದು ಹಾಲಂಬಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT