ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯ ಓಂಕಾರೇಶ್ವರ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ಕೊಡಗಿನ ಪ್ರಸಿದ್ಧ ಧಾರ್ಮಿಕ ಕೇಂದ್ರ. ಈ ದೇವಸ್ಥಾನದ ಸುತ್ತಲಿನ ಪ್ರಶಾಂತ ವಾತಾವರಣ ಹಾಗೂ ಸುಂದರ ಪರಿಸರ ವಿಶಿಷ್ಟವಾದದು. ಓಂಕಾರೇಶ್ವರ ದೇವಸ್ಥಾನವನ್ನು ಕೊಡಗನ್ನು ಆಳುತ್ತಿದ್ದ ಲಿಂಗರಾಜ ಅರಸರು ನಿರ್ಮಿಸಿದರು. ಕಾಶಿಯಿಂದ ಶಿವಲಿಂಗವನ್ನು ತರಿಸಿ ಕ್ರಿ.ಶ. 1820ರಲ್ಲಿ  ಪ್ರತಿಷ್ಠಾಪಿಸಿದರು.

 ಈ ದೇವಸ್ಥಾನ ಕೊಡಗಿನ ಅರಸರ ಕಾಲದ ಧಾರ್ಮಿಕ ಸಾಮರಸ್ಯ ಹಾಗೂ ವೈಭವದ ಸಂಕೇತವಾಗಿದೆ. ಲಿಂಗರಾಜರು ಬ್ರಹ್ಮಹತ್ಯಾ ದೋಷದ ಪರಿಹಾರಾರ್ಥವಾಗಿ ಈ ದೇವಸ್ಥಾನವನ್ನು ನಿರ್ಮಿಸಿದರು ಎನ್ನಲಾಗಿದೆ. ದೇವಸ್ಥಾನ ಕಟ್ಟಡದ ವಾಸ್ತುಶೈಲಿ ಕೊಡಗಿನ ಅರಸರ ಅಭಿರುಚಿಯ ಸಂಕೇತ. ದೇವಸ್ಥಾನದ ಒಳಕ್ಕೆ ಬಂದರೆ ನಡು ಭಾಗದಲ್ಲಿ ಬಂಗಾರ ಬಣ್ಣದ ಕಳಸ ಹಾಗೂ ವೃತ್ತಾಕಾರದ ಶಿಖರ ಗಮನ ಸೆಳೆಯುತ್ತದೆ.
ಈ ಶಿಖರ ದೇವಸ್ಥಾನಕ್ಕೆ ವಿಶಿಷ್ಟ ಮೆರಗು ನೀಡಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ನಿತ್ಯ ಪೂಜೆ ನಡೆಯುತ್ತದೆ. ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ನಂದಿಯ ಶಿಲ್ಪಗಳೊಂದಿಗೆ ನಾಲ್ಕು ವಿಶಿಷ್ಟ ವಿನ್ಯಾಸದ ಮಿನಾರ್‌ಗಳಿವೆ. ಇವುಗಳಿಂದಾಗಿ ಈ ಕಟ್ಟಡ ಮುಸ್ಲಿಂ ವಾಸ್ತುಶೈಲಿಯಂತೆ ಕಂಗೊಳಿಸುತ್ತದೆ. ಓಂಕಾರೇಶ್ವರ ದೇವಸ್ಥಾನದ ವೈಶಿಷ್ಟ್ಯಕ್ಕೆ ಇಲ್ಲಿಗೆ ಪ್ರವಾಸಿಗರು ಬೆರಗಾಗುತ್ತಾರೆ. ಇದೇ ಈ ದೇವಸ್ಥಾನದ ವೈಶಿಷ್ಟ್ಯ.

 ಓಂಕಾರೇಶ್ವರ ದೇವಸ್ಥಾನ ಕರ್ನಾಟಕದಲ್ಲಿರುವ ಶಿವಾಲಯಗಳ ಪೈಕಿ ಅತ್ಯಂತ ಭಿನ್ನವಾಗಿದೆ. ಇಸ್ಲಾಂ ಮತ್ತು ರೋಮನ್ ವಾಸ್ತುಶಿಲ್ಪಗಳ ಪ್ರಭಾವವಿರುವ ಏಕೈಕ ಹಿಂದೂ ದೇವಸ್ಥಾನ ಎಂಬ ಖ್ಯಾತಿ ಓಂಕಾರೇಶ್ವರ ದೇವಸ್ಥಾನಕ್ಕಿದೆ.

ದೇವಸ್ಥಾನಕ್ಕೆ ಮೇಲ್ಛಾವಣಿ ಇಲ್ಲ. ಮೇಲ್ಚಾವಣಿ ತಾರಸಿಯದೆ. ಉಪ್ಪರಿಗೆ ಮೇಲೆ ಮಧ್ಯಭಾಗದಲ್ಲಿ ಗಾರೆಯಿಂದ ಮಾಡಿದ ಗೋಳವಿದೆ. ಅದರ ತುದಿಯಲ್ಲಿ ಪಂಚಲೋಹದಿಂದ ಮಾಡಿದ ಕಳಶವಿದೆ. ಕಳಶದ ಮೇಲೆ ಪತಾಕೆ ಇದ್ದು ಸೂರ್ಯ,ಚಂದ್ರ ಚಿಹ್ನೆಗಳಿದ್ದು `ಲಿಂ~ ಎಂಬ ಮೊಹರು ಇದೆ. ಶಿರೋಭಾಗದ ಕಳಶದ ನಾಲ್ಕು ಮೂಲೆಗಳಲ್ಲೂ ಗಾರೆಯಿಂದ ನಿರ್ಮಿಸಿದ ನಂದಿಗಳಿವೆ. ಅವುಗಳಲ್ಲೂ ಕಳಶಗಳಿವೆ. ಮಧ್ಯ ಮಂಟಪದ ಮೇಲ್ಗಡೆಯೂ ಕಳಶವಿದೆ. ಪತಾಕೆಗಳಲ್ಲಿ ಲಿಂಗರಾಜರ ಹಸ್ತಾಕ್ಷರವಾದ ಹಳೆಗನ್ನಡದ `ಲಿಂ~ ಎಂಬ ಮೊಹರು ಇದೆ.

ಈ ದೇವಸ್ಥಾನದಲ್ಲಿ ಉಮಾಮಹೇಶ್ವರ, ಗಣಪತಿ, ಸುಬ್ರಹ್ಮಣ್ಯ, ನಂದಿ ವಿಗ್ರಹಗಳಿವೆ. ಉಮಾಮಹೇಶ್ವರ ಮೂರ್ತಿ ಪಂಚಲೋಹದ್ದು. ಗಣಪತಿ, ಸುಬ್ರಹ್ಮಣ್ಯ, ನಂದಿ  ಮೂರ್ತಿಗಳನ್ನು ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿದೆ. ಶಿವಲಿಂಗವನ್ನು ಕಲ್ಲಿನಪಾಣಿ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಮುಂಭಾಗ ವಿಶಾಲವಾಗಿದೆ. ನಡುವೆ ಒಂದು ಸುಂದರ ಕೊಳವಿದೆ. ಅದರ ಮಧ್ಯಭಾಗದಲ್ಲಿ ಉತ್ಸವ ಮಂಟಪವಿದೆ.

ಒಂದು ಬದಿಯಿಂದ ಮಾತ್ರ ಅಲ್ಲಿಗೆ ಹೋಗಿಬರಲು ಸೇತುವೆಯಂತಹ ವ್ಯವಸ್ಥೆ ಇದೆ. ಕೊಳದ ಸುತ್ತ ಕಬ್ಬಿಣದ ಸರಳಿನ ಬೇಲಿ ಹಾಕಿರುವುದರಿಂದ ಪುಷ್ಕರಣಿಯ ಸೌಂದರ್ಯ ಇಮ್ಮಡಿಸಿದೆ. ಈ ಕೊಳದಲ್ಲಿ ವರ್ಷಕ್ಕೊಮ್ಮೆ ನಡೆಯುವ ತೆಪ್ಪೋತ್ಸವ ಅತ್ಯಂತ ಆಕರ್ಷಣೀಯ. ತೆಪ್ಪೋತ್ಸವ ನೋಡಲು ಕೊಡಗು ಜಿಲ್ಲೆಯ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ.

ಈ ದೇವಸ್ಥಾನದಲ್ಲಿರುವ ಶಾಸನಗಳಲ್ಲಿ ತೆಪ್ಪೋತ್ಸವದ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಾಲಕಾಲಕ್ಕೆ ಉತ್ಸವ ನಡೆಯುವಂತೆ ಲಿಂಗರಾಜರು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ ಉಲ್ಲೇಖವಿದೆ. ಹಿಂದೂ ಮುಸ್ಲಿಂ ವಾಸ್ತುಶೈಲಿಯ ಈ ದೇವಸ್ಥಾನ ನಿರ್ಮಾಣಗೊಂಡು 190 ವರ್ಷಗಳಾಗಿವೆ.

 ಕೊಡಗು ಜಿಲ್ಲೆಯ ನಿಸರ್ಗ ಸೌಂದರ್ಯ ವೀಕ್ಷಿಸಲು ಬರುವ ಪ್ರವಾಸಿಗರೆಲ್ಲರೂ ಓಂಕಾರೇಶ್ವರ ದೇವಸ್ಥಾನದ ವಾಸ್ತುಶಿಲ್ಪದ ವೀಕ್ಷಣೆಗಾಗಿ ಇಲ್ಲಿಗೆ ಬರುತ್ತಾರೆ. ಶ್ರಾವಣ, ಕಾರ್ತಿಕ ಮಾಸಗಳಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.

ಓಂಕಾರೇಶ್ವರ ದೇವಸ್ಥಾನಕ್ಕೆ ಎಲ್ಲ ಜಾತಿ, ವರ್ಗಗಳ ಜನರೂ ಬರುತ್ತಾರೆ. ಇಲ್ಲಿ ನಡೆಯುವ ಪೂಜೆ ಹಾಗೂ ಉತ್ಸವಗಳಿಗೆ ಸಂಬಂಧಿಸಿದ ಮಾಹಿತಿಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್: 08272-228331.

ಸೇವಾ ವಿವರ
* ಮಹಾಪೂಜೆ        150ರೂ
* ಕ್ಷೀರಾಭಿಷೇಕ        25ರೂ
* ಪಂಚಾಮೃತಾಭಿಷೇಕ  25ರೂ
* ಬಿಲ್ವಾರ್ಚನೆ          25ರೂ
* ನವಗ್ರಹ ಪೂಜೆ ...  25ರೂ
* ಕುಂಕುಮಾರ್ಚನೆ...   25ರೂ
* ಗಣಪತಿ ಪೂಜೆ...    25ರೂ
* ಸತ್ಯನಾರಾಯಣ ಪೂಜೆ...       100ರೂ
* ಅಲಂಕಾರ ಪೂಜೆ...   175ರೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT