ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯ ಪ್ರಥಮ ಆಟೊ ಚಾಲಕಿ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ವಯಸ್ಸು 45 ಮೀರಿದರೂ ಚಿಲುಮೆಯಂತಹ ಉತ್ಸಾಹ. ಏನಾದರೂ ಸಾಧಿಸಬೇಕು, ಬೇರಾರೂ ಮಾಡದ್ದನ್ನು ಮಾಡುವ ಅದಮ್ಯ ಬಯಕೆ. ಈ ಬಯಕೆಯೇ, ಶೈಲಜಾ ಮೊಣ್ಣಪ್ಪ ಅವರನ್ನು ಈಗ ಮಡಿಕೇರಿ ನಗರದ ಪ್ರಥಮ ಆಟೊ ಚಾಲಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿಸಿದೆ.

ಕಳೆದ ನಾಲ್ಕೈದು ವರ್ಷಗಳ ಹಿಂದೆ ಆಟೊದಲ್ಲಿ ಕೂರಿಸಿಕೊಂಡು ಕಲಿಯುವಂತೆ ಹೇಳುತ್ತಿದ್ದ ಪತಿಗೆ `ನನ್ನನ್ನೇನು ಆಟೊದಲ್ಲಿ ಸಾಯಿಸಲು ಹೊರಟಿದ್ದೀರಾ~ ಎಂದು ಹಾಸ್ಯವಾಗಿ ಗದರಿಸಿದ್ದ ಶೈಲಜಾ ಇಂದು ಹೆಮ್ಮೆಯಿಂದ, ತಾನು ಆಟೊ ಚಾಲಕಿ ಎಂದು ಹೇಳಿಕೊಳ್ಳುತ್ತಾರೆ.

ಮಡಿಕೇರಿ ತುಂಬಾ ಚಿಕ್ಕ ನಗರ. ಇಂತಹ ಪ್ರದೇಶದಲ್ಲಿ ಮಹಿಳೆಯೊಬ್ಬರು ಆಟೊ ಓಡಿಸುವುದೆಂದರೆ ಆಶ್ಚರ್ಯದ ಮಾತು. ಇಂತಹ ಆಶ್ಚರ್ಯಗಳಿಗೆ ಸಾಕಾರ ನೀಡಿರುವ ಅವರು, ತನ್ನನ್ನು ನೋಡಿ ವರ್ಷದೊಳಗೆ ಹತ್ತು ಜನ ಮಹಿಳೆಯರು ಆಟೊ ಗೇರ್ ಹಾಕದಿದ್ದಲ್ಲಿ ಕೇಳಿ ಎನ್ನುವ ವಿಶ್ವಾಸ  ಹೊಂದಿದ್ದಾರೆ.

ಎಸ್‌ಎಸ್‌ಎಲ್‌ಸಿಯವರೆಗೆ ಓದಿರುವ ಶೈಲಜಾ ಅವರಿಗೆ ಆಟೊ ಹುಚ್ಚು ಹಚ್ಚಿಸಿದವರು ಅವರ ಪತಿ ಮೊಣ್ಣಪ್ಪ. ಅವರು ನೀರಾವರಿ ಇಲಾಖೆಯಲ್ಲಿ ಉದ್ಯೋಗಿ. ನಾಲ್ಕೈದು ವರ್ಷಗಳ ಹಿಂದೆ ಮನೆಯಲ್ಲಿದ್ದ ಆಟೊದಲ್ಲಿಯೇ ಪತ್ನಿಗೆ ಪಾಠ ಹೇಳಿಕೊಡಲು ಪ್ರಯತ್ನಿಸಿದ್ದರು.

ಆ ನಂತರ ಅದ್ಯಾಕೋ ಆಟೊ ಬಗ್ಗೆ ಒಲವು ಕಳೆದುಕೊಂಡ ಶೈಲಜಾ ಕುಟುಂಬದೆಡೆ ಹೆಚ್ಚು ಗಮನ ಹರಿಸಿದರು. ಪ್ರಸ್ತುತ ಮಡಿಕೇರಿಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಹಂಗಾಮಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಶೈಲಜಾ ಕೆಲವು ದಿನಗಳ ಹಿಂದೆ ಆಟೊದತ್ತ ಮನಸ್ಸು ಮಾಡಿದರು. ಆದರೆ, ಅಷ್ಟೊತ್ತಿಗಾಗಲೇ  ಅವರಲ್ಲಿದ್ದ ಆಟೊ ಮಾರಾಟವಾಗಿತ್ತು.

ಆಟೊ ಇಲ್ಲದಿದ್ದರೆ ಕಲಿಯುವುದು ಕಷ್ಟ ಎಂದುಕೊಂಡು, ಪೈಸೆ ಪೈಸೆ ಕೂಡಿಟ್ಟ ಸುಮಾರು 40 ಸಾವಿರ ರೂಪಾಯಿಯನ್ನು ಕೊಟ್ಟು ಸೆಕೆಂಡ್ ಹ್ಯಾಂಡ್ ಆಟೊ ಖರೀದಿಸಿಯೇ ಬಿಟ್ಟರು. ತಡ ಯಾಕೆ ಎಂದು ಕಳೆದ ತಿಂಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಚಾಲನಾ ತರಬೇತಿ ಪರವಾನಗಿ (ಎಲ್‌ಎಲ್‌ಆರ್) ಪಡೆದ ಅವರು ಆಟೊ ಹತ್ತಿ ಚಾಲನೆ ಕಲಿಯಲು ಆರಂಭಿಸಿಯೇಬಿಟ್ಟರು. ಪತಿ ಮೊಣ್ಣಪ್ಪ ಅವರೇ ಚಾಲನೆ ಹೇಳಿಕೊಟ್ಟಿರುವ ಗುರು.  ಮುಂಜಾನೆ ಐದು ಗಂಟೆಗೆ ವಾಯುವಿಹಾರ ಮುಗಿಸಿ ಬರುವ ಶೈಲಜಾ, ಪತಿ ಹಾಗೂ ಇಬ್ಬರು ಮಕ್ಕಳನ್ನು ಕಾಲೇಜಿಗೆ ಕಳುಹಿಸಿ ಕೊಟ್ಟ ಬಳಿಕ ಆಟೊ ಚಾಲನೆಗೆ ಮುಂದಾಗುತ್ತಾರೆ.

ಏಪ್ರಿಲ್, ಮೇ ತಿಂಗಳಿನಲ್ಲಿ ಶಾಲೆಗಳಿಗೆ ರಜೆ ಇದ್ದ ಕಾರಣ ಶೈಲಜಾ ಅವರಿಗೆ ಆಟೊ ಕಲಿಯಲು ಸಾಕಷ್ಟು ಸಮಯ ದೊರೆತಿದೆ.

ಕೈಕುಲುಕಿದರು: `ಆಟೊ ಚಾಲನೆ ಅಭ್ಯಾಸ ಮಾಡುತ್ತಿರುವುದನ್ನು ನೋಡಿದ ಕೆಲವು ಆಟೊ ಚಾಲಕರು (ಪುರುಷರು) ಬಂದು ನನ್ನ ಕೈಕುಲುಕಿ ಹಾರೈಸಿದರು. ಇಡೀ ನಗರದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆಟೊ ಓಡಿಸುವುದನ್ನು ನೋಡಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ~ ಎಂದರು ಶೈಲಜಾ.

`ನಗರದಲ್ಲಿ ಬಹಳಷ್ಟು ಜನ ಬಡಮಹಿಳೆಯರಿದ್ದಾರೆ. ಇವರ ಜೀವನೋಪಾಯಕ್ಕೆ ಏನಾದರೂ ಒಂದು ದಾರಿಯಾಗಬೇಕು. ಆಟೊ ಹತ್ತಲು ಬಹಳಷ್ಟು ಜನ ಮಹಿಳೆಯರು ಹಿಂದೇಟು ಹಾಕುತ್ತಾರೆ. ಬೇರಾರೂ ಓಡಿಸಲ್ಲ, ನಾವಷ್ಟೇ ಓಡಿಸಿದರೆ ಜನರು ಆಡಿಕೊಳ್ಳುತ್ತಾರೆ ಎನ್ನುವುದು ಅವರಿಗಿರುವ ಭಯ. ನಾನು ಆಟೊ ಓಡಿಸುವುದನ್ನು ನೋಡಿದರೆ ಈ ಭಯ ಹೊರಟುಹೋಗುತ್ತದೆ. ನಾವೂ ಏಕೆ ಆಟೊ ಓಡಿಸಬಾರದು ಎಂದು ಅವರು ಮುಂದೆ ಬರಬಹುದು. ನೋಡ್ತಾ ಇರಿ, ನಾಲ್ಕೈದು ವರ್ಷಗಳಲ್ಲಿ ಹತ್ತು ಮಹಿಳೆಯರು ಆಟೊ ಓಡಿಸದಿದ್ದರೆ ಕೇಳಿ~ ಎಂದು ಅವರು ಸವಾಲು ಹಾಕುತ್ತಾರೆ.

ಇವರೊಬ್ಬ ಅಥ್ಲೀಟ್ ಕೂಡ ಆಗಿದ್ದು, ಹಿರಿಯರ ವಿಭಾಗದ ಮೆರಾಥಾನ್ ಓಟಗಾರ್ತಿ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವ ಇವರು, 15 ಚಿನ್ನ, 8 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇಲ್ಲಿ ನಡೆಯುವ ಕಾವೇರಿ ಮೆರಾಥಾನ್‌ನಲ್ಲೂ ಭಾಗವಹಿಸಿದ್ದಾರೆ. ಹಾಗೆಯೇ ಸರಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, 2011ರ ಕೊಡಗು ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ಪ್ರಶಸ್ತಿ ಹಾಗೂ ರಾಜ್ಯ ಸರಕಾರದ 2011ರ ಕರ್ನಾಟಕ ಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT