ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡೆ ಮಡೆಸ್ನಾನ ಸಂವಿಧಾನ ವಿರೋಧಿ

Last Updated 2 ಜನವರಿ 2012, 8:30 IST
ಅಕ್ಷರ ಗಾತ್ರ

ಮಂಗಳೂರು: ಮಡೆ ಮಡೆ ಸ್ನಾನ ಆಚರಣೆ ಮೌಢ್ಯವಾಗಿದ್ದು, ಇದು ಜಾತಿ ತಾರತಮ್ಯವನ್ನು ಜೀವಂತವಾಗಿಡುವ, ಮೇಲು ಕೀಳೆಂಬ ಭಾವನೆಯನ್ನು ಕಾಯ್ದಿಡುವ ಹುನ್ನಾರ. ಇದನ್ನು ಸರ್ಕಾರ ತಕ್ಷಣ ನಿಷೇಧಿಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಡಿವೈಎಫ್‌ಐ ಜಿಲ್ಲಾ ಸಮಿತಿ ಹಾಗೂ ಸಹಮತ ವೇದಿಕೆಯ ಆಶ್ರಯದಲ್ಲಿ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ನಡೆದ `ಮಡೆಸ್ನಾನ- ನಂಬಿಕೆ, ಆಚರಣೆ ಮತ್ತು ವಿರೋಧಗಳು~ ಕುರಿತ ವಿಚಾರಸಂಕಿರಣ ಹಾಗೂ ಸಂವಾದದಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.

ಸಂವಿಧಾನದ ಜಾತ್ಯಾತೀತ, ಸಮಾನತೆಯ ಆಶಯಗಳಿಗೆ ಈ ಆಚರಣೆ ವಿರುದ್ಧವಾಗಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿರುವ ಆಚರಣೆಯನ್ನು ನಂಬಿಕೆಯ ಹೆಸರಿನಲ್ಲಿ ಮುಂದುವರಿಯಲು ಬಿಡಬಾರದು ಎಂದು ನಿರ್ಣಯಿಸಲಾಗಿದೆ. ಮಡೆ ಮಡೆ ಸ್ನಾನ ನಿಷೇಧಿಸದಿದ್ದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ಜನಪರ, ಪ್ರಗತಿಪರ ಹಾಗೂ ಸಂಘಟನೆಗಳ ಆಶ್ರಯದಲ್ಲಿ ಚಳವಳಿ ನಡೆಸಲಾಗುವುದು. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನಿಷೇಧದ ತೀರ್ಮಾನ ಕೈಗೊಳ್ಳದಿದ್ದರೆ ಮಂಗಳೂರಿನಿಂದ ಸುಬ್ರಹ್ಮಣ್ಯದ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಚಿಂತಕ ಪ್ರೊ. ಜಿ.ಕೆ. ಗೋವಿಂದ ರಾವ್ ವಿಚಾರ ಮಂಡಿಸಿ, ಮಡೆ ಮಡೆ ಸ್ನಾನ ಅಸಂಖ್ಯ ಮೂಢನಂಬಿಕೆಗಳಲ್ಲಿ ಒಂದು. ನಂಬಿಕೆಯ ಹೆಸರಿನಲ್ಲಿ ಎಂಜಲೆಲೆ ಮೇಲೆ ಉರುಳಾಡುವ ಈ ಆಚರಣೆ ಮಾನವ ಘನತೆಯನ್ನು ಚರಂಡಿಗೆ ಎಸೆಯುವಂತೆ ಮಾಡುವ ಆಚರಣೆ ಎಂದು ಟೀಕಿಸಿದರು.

`ನಾವು ನಂಬುವ ದೇವರೆದುರು ನಮ್ಮ ಘನತೆ ಆತನಿಗೆ ಸವಾಲಾಗಬೇಕೇ ಹೊರತು ಆ ಘನತೆಯನ್ನೇ ತಿರಸ್ಕರಿಸುವಂತಾಗಬಾರದು. ದೇಶದ ಶೇ 99ರಷ್ಟು ಮಠಗಳು ಯಾವತ್ತೂ ಪ್ರಗತಿಪರವಾದ ವಿಚಾರಗಳನ್ನು ತಮ್ಮ ಸಂಸ್ಥೆಯಿಂದ ಹೊಮ್ಮಿಸಿಲ್ಲ~ ಎಂದರು.

ವಿ.ಎಸ್.ಆಚಾರ್ಯ ಅವರನ್ನು ಸಚಿವರೆಂದು ಹೇಳುವುದೇ ನಾಚಿಕೆಗೇಡು. ಪೇಜಾವರ ಶ್ರೀ ಮತ್ತು ಆಚಾರ್ಯರಿಗೆ ಯಾವುದೇ ವ್ಯತ್ಯಾಸ ಇಲ್ಲ. ಆದರೆ ಯಾವುದೇ ಕಾರಣಕ್ಕೂ ಮಠ ಧರ್ಮ ಹಾಗೂ ವಿಧಾನಸೌಧದ ರಾಜಕೀಯ ಒಂದಾಗಿರಬಾರದು. ನಾವು ಮಠಗಳನ್ನು ತಿರಸ್ಕರಿಸಬೇಕು ಎಂದು ಅವರು ಸಲಹೆ ನೀಡಿದರು.

ಅಣ್ಣಾ ವಿರುದ್ಧ ಟೀಕೆ: ಪೇಜಾವರ ಸ್ವಾಮೀಜಿಯ ರಾಜಕೀಯ ಪರಿಕಲ್ಪನೆ ಅಣ್ಣಾ ಹಜಾರೆ. ಅಣ್ಣಾ ಸಂವಿಧಾನ ನಾಶ ಮಾಡಲು ಹೊರಟಿದ್ದಾರೆ. ಪ್ರಜಾಪ್ರಭುತ್ವ ನಾಶವಾದರೆ ಜನಸಾಮಾನ್ಯರು ನಾಶವಾದಂತೆ. ಅಣ್ಣಾ ಮಠ ತೀರಾ ಅಪಾಯಕಾರಿ ಮಠ. ಮಧ್ಯಮವರ್ಗ ಮತ್ತು ಮಾಧ್ಯಮಗಳು ಸೃಷ್ಟಿಸಿದ ಕೋಟಾ ಮಹಾತ್ಮ ಅಣ್ಣಾ ಹಜಾರೆ ಎಂದು ಅವರು ಕಟಕಿಯಾಡಿದರು.

ಪೇಜಾವರ ಶ್ರೀಗೆ ಸವಾಲು: ದಲಿತರ ಕೇರಿಗಳಿಗೆ ಭೇಟಿ ನೀಡಿ, ದಲಿತರ ಮನೆಯಲ್ಲಿ ಊಟ ಮಾಡಿದ ಬಳಿಕ ಪೇಜಾವರ ಶ್ರೀಗಳು ಮಠಕ್ಕೆ ಹಿಂತಿರುಗಿ ಸ್ನಾನ ಮಾಡುವುದಿಲ್ಲ, ಪಂಚಗವ್ಯ ಸ್ವೀಕರಿಸುವುದಿಲ್ಲ ಎಂದು ಎಲ್ಲರೆದುರು ಬಂದು ಹೇಳಿದರೆ ಅವರ ಕಾಲಿಗೆ ಬೀಳುತ್ತೇನೆ ಎಂದು ಸವಾಲು ಎಸೆದರು.

ಮಂಗಳೂರು ವಿವಿ ಕನಕದಾಸ ಅಧ್ಯಯನ ಪೀಠದ ಸಂಯೋಜಕ ಪ್ರೊ. ಶಿವರಾಮ ಶೆಟ್ಟಿ ಮಾತನಾಡಿ, ಮಡೆ ಮಡೆ ಸ್ನಾನವು ನಂಬಿಕೆಯ ಭಾಗವಾಗಿ ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆಯನ್ನು ಒಳಗೊಂಡಿರುವುದರಿಂದ ಸಾಂಸ್ಕೃತಿಕ ಸ್ವರೂಪದ ರೀತಿಯಲ್ಲಿ ಇದನ್ನು ವಿರೋಧಿಸಬೇಕಾಗಿದೆ ಎಂದರು.

ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಶಿವರಾಮು ಮಾತನಾಡಿ, ಮಡೆಮಡೆ ಸ್ನಾನ ಗುಲಾಮಗಿರಿಯ ಸಂಕೇತ. ಪಂಕ್ತಿಭೇದ  ನಿಷೇಧವಾದರೆ ಮಡೆ ಮಡೆ ಸ್ನಾನ ತಾನಾಗಿಯೇ ನಿಷೇಧವಾಗುತ್ತದೆ ಎಂದರು.

ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಅಧ್ಯಕ್ಷ ಎಲ್. ಚಂದು ಅಧ್ಯಕ್ಷತೆ ವಹಿಸಿದ್ದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಪಿ. ಆನಂದ, ಸಹಮತ ವೇದಿಕೆಯ ಸಂಚಾಲಕ ವಾಸುದೇವ ಬೆಳ್ಳೆ, ಡಿವೈಎಫ್‌ಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ದಯಾನಂದ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT