ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡೆಸ್ನಾನ: ಪೇಜಾವರ ಶ್ರೀ ಹೇಳಿಕೆಗೆ ಮತ್ತೆ ವಿರೋಧ

Last Updated 8 ಜನವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಿಡುಮಾಮಿಡಿ ಮಹಾಸಂಸ್ಥಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಮಡೆಸ್ನಾನ: ಒಂದು ಸಂವಾದ~ ಕಾರ್ಯಕ್ರಮದಲ್ಲಿ `ಸಂವಿಧಾನಕ್ಕಾಗಿ ಧರ್ಮಶಾಸ್ತ್ರವನ್ನು ಬಲಿ ಕೊಡುವುದಿಲ್ಲ~ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ನೀಡಿದ ಹೇಳಿಕೆ ಬಗ್ಗೆ ತೀವ್ರ ಚರ್ಚೆ ನಡೆಯಿತು.

ಸಂವಾದದಲ್ಲಿ ಮಾತನಾಡಿದ ವಿಶ್ವೇಶತೀರ್ಥರು, `ಧರ್ಮಶಾಸ್ತ್ರ ಹಾಗೂ ರಾಷ್ಟ್ರದ ಸಂವಿಧಾನ ಎರಡನ್ನೂ ಒಪ್ಪುತ್ತೇನೆ. ಆದರೆ ಸಂವಿಧಾನಕ್ಕಾಗಿ ಧರ್ಮಶಾಸ್ತ್ರವನ್ನು ಬಲಿ ಕೊಡುವುದಿಲ್ಲ~ ಎಂದರು.

ಇದಕ್ಕೆ ಕೆಲ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು. ಚಿಂತಕ ಪ್ರೊ.ಜಿ.ಕೆ.ಗೋವಿಂದಾವ್, ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಘಟಕದ ಸಂಚಾಲಕ ಮಾವಳ್ಳಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಸಭಾಂಗಣದ ಹೊರಗೆ ಘೋಷಣೆ ಕೂಗಿದರು.

ಬಳಿಕ ಪ್ರತಿಕ್ರಿಯಿಸಿದ ವಿಶ್ವೇಶತೀರ್ಥರು, `ಸಂವಿಧಾನ ಹಾಗೂ ಧರ್ಮಶಾಸ್ತ್ರವನ್ನು ಗೌರವಿಸುತ್ತೇನೆ. ಈ ಎರಡೂ ವಿಷಯ ಬಂದಾಗ ಸಂವಿಧಾನಕ್ಕೆ ವಿರೋಧವಾಗದಂತೆ ಶಾಸ್ತ್ರದೊಂದಿಗೆ ಸಮನ್ವಯ ಸಾಧಿಸಿಕೊಂಡು ಮುಂದುವರಿಯುತ್ತೇನೆ~ ಎಂದರು.

ಮುಸ್ಲಿಮರು ಹಬ್ಬದ ಸಂದರ್ಭದಲ್ಲಿ ಒಂದೇ ತಟ್ಟೆಯಲ್ಲಿ ಆಹಾರ ಸೇವಿಸುವುದು ಕೂಡ ಎಂಜಲು ಸೇವಿಸಿದಂತೆ ಎಂಬುದಾಗಿ ವಿಶ್ವೇಶತೀರ್ಥರು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶಿವಮೊಗ್ಗದ ಮುನೀರ್, `ಅದು ಸಹ- ಭೋಜನವೇ ಹೊರತು ಎಂಜಲು ಸೇವಿಸಿದಂತಾಗುವುದಿಲ್ಲ. ಅಲ್ಲದೇ ಆ ರೀತಿ ಆಹಾರ ಸೇವಿಸುವುದು ಭ್ರಾತೃತ್ವದ ಪ್ರತೀಕ~ ಎಂದರು.

ಬಳಿಕ ಪ್ರತ್ಯುತ್ತರ ನೀಡಿದ ವಿಶ್ವೇಶತೀರ್ಥರು, `ಒಂದು ತುತ್ತು ಸೇವಿಸಿ ಮತ್ತೆ ತಟ್ಟೆಯಲ್ಲಿನ ಆಹಾರವನ್ನು ತೆಗೆದುಕೊಂಡರೆ ಅದು ಎಂಜಲಾಗುತ್ತದೆ. ಹಾಗಾಗಿ ಒಂದೇ ತಟ್ಟೆಯಲ್ಲಿ ಒಟ್ಟಿಗೆ ಆಹಾರ ಸೇವಿಸುವುದು ಸಹ ಎಂಜಲು ಸೇವಿಸಿದಂತೆ. ಈ ಪದ್ಧತಿಗಳನ್ನು ಯಾರೊಬ್ಬರು ವಿರೋಧಿಸುವುದಿಲ್ಲ. ಹಾಗೆಂದು ಅನ್ಯ ಧರ್ಮೀಯರನ್ನು ದೂಷಿಸುವುದಿಲ್ಲ. ಹಿಂದೂ ಆಚರಣೆಗಳನ್ನೇ ವಿರೋಧಿಸುವ ಹಿಂದೂಗಳನ್ನು ಪ್ರಶ್ನಿಸುತ್ತಿದ್ದೇನೆ~ ಎಂದು ಹೇಳಿದರು. ಬಳಿಕ ಸಭಿಕರ ಲಿಖಿತ ಪ್ರಶ್ನೆಗಳಿಗೆ ಸಾರಾಂಶ ರೂಪದಲ್ಲಿ ಅವರು ತಮ್ಮ ಅಭಿಪ್ರಾಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT