ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡೆಸ್ನಾನ: ಮಠಾಧೀಶರ ಕಿಡಿ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಂಬಿಕೆಗಳ ಹೆಸರಿನಲ್ಲಿ ನಡೆಯುವ ಎಲ್ಲಾ ಅನಿಷ್ಟ ಆಚರಣೆಗಳನ್ನೂ ಸರ್ಕಾರ ನಿಷೇಧಿಸಬೇಕು. ಮಡೆಸ್ನಾನದ ಆಚರಣೆಯನ್ನು ಸರ್ಕಾರ ಸಮರ್ಥಿಸಿಕೊಳ್ಳುವುದು ಯಾವ ರೀತಿಯಿಂದಲೂ ಸರಿಯಲ್ಲ~ ಎಂದು ಚಿತ್ರದುರ್ಗದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿಡಿಕಾರಿದರು.

ನಿಡುಮಾಮಿಡಿ ಮಠ ಮತ್ತು ಮಾನವ ಧರ್ಮಪೀಠ ಮಡೆಸ್ನಾನ ನಿಷೇಧಿಸಲು ಒತ್ತಾಯಿಸಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿಪರ ಮಠಾಧೀಶರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ನಂಬಿಕೆಗಳು ಒಂದು ಕಾಲದಲ್ಲಿ ಸಮಾಜದ ನೆಮ್ಮದಿಗೆ ಕಾರಣವಾಗಿದ್ದವು. ಆದರೆ ಕಾಲ ಕಳೆದಂತೆ ನಂಬಿಕೆಗಳು ಮೂಢ ನಂಬಿಕೆಗಳಾಗಿ ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾದವು. ನಮ್ಮಳಗಿನ ಕೊಳೆಯನ್ನು ತೊಳೆದುಕೊಳ್ಳದೇ ಅರಿವು ಸಾಧ್ಯವಿಲ್ಲ. ಸಮಾಜದ ಕೊಳೆ ತೊಳೆಯದೇ ಸಮಾಜದ ಸುಧಾರಣೆ ಸಾಧ್ಯವಿಲ್ಲ. ಯಾವುದೇ ಧರ್ಮದ ಅನಿಷ್ಟ ಆಚರಣೆಗಳನ್ನು ನಿಷೇಧಿಸುವುದು ಸರ್ಕಾರದ ಜವಾಬ್ದಾರಿ. ಮಡೆಸ್ನಾನದ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ~ ಎಂದು ಅವರು ನುಡಿದರು.

ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, `ಬಹು ಸಂಸ್ಕೃತಿ, ಬಹು ಜಾತಿ, ಬಹು ಭಾಷೆಗಳ ಭಾರತದಲ್ಲಿ ಒಂದೇ ಜಾತಿಯ ಜನರು ಶ್ರೇಷ್ಠ ಎಂಬ ಭಾವನೆಯನ್ನು ಬಿತ್ತುತ್ತಾ ಬರಲಾಗುತ್ತಿದೆ. ಈ ಹಿಂದಿನ ಸರ್ಕಾರಗಳು ಬಾಲ್ಯ ವಿವಾಹ, ಸತಿ, ಬೆತ್ತಲೆ ಪೂಜೆ, ದೇವದಾಸಿಯಂತಹ ಅನಿಷ್ಟ ಆಚರಣೆಗಳನ್ನು ನಿಷೇಧಿಸಿವೆ. ಆದರೆ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕಾಗಿದ್ದ ಸರ್ಕಾರದ ಸಚಿವರೇ ಆಚರಣೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಂತ~ ಎಂದು ಅವರು ವಿಷಾದಿಸಿದರು.

`ಮಡೆಸ್ನಾನ 500 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ನಂಬಿಕೆ. ಅದರ ಆಚರಣೆ ಅವರವರ ನಂಬಿಕೆಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಉನ್ನತ ಶಿಕ್ಷಣ ಸಚಿವರು ಜನರಲ್ಲಿ ಮೌಢ್ಯ ಬಿತ್ತುವ ಕೆಲಸ ಮಾಡುತಿದ್ದಾರೆ. ಹಾಗೇ ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದ ಸ್ವಾಮೀಜಿಗಳು ಸರ್ಕಾರ ಆಚರಣೆ ನಿಷೇಧಿಸಿದರೆ ನಿಷೇಧಿಸಲಿ, ಆದರೆ ಮಡೆಸ್ನಾನದ ಆಚರಣೆ ಜನರ ನಂಬಿಕೆಯ ಭಾಗ ಎಂದು ಹೇಳುವ ಮೂಲಕ ಇಬ್ಬಂದಿತನ ಪ್ರದರ್ಶಿಸುತ್ತಿದ್ದಾರೆ. ಇದು ಪುರೋಹಿತ ಶಾಹಿಯು ತನ್ನ ಪ್ರಾಬಲ್ಯ ಮೆರೆಸುವ ಹುನ್ನಾರ ಹಾಗೂ ಮಾನವೀಯತೆಗೆ ಭಂಗ ತರುವ ಘೋರ ಅಪರಾಧ~ ಎಂದರು.

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, `ಮಧ್ಯಮ ವರ್ಗದ ಜನರು ಬದಲಾವಣೆಯ ಬಗ್ಗೆ ಆಶಾವಾದಿಗಳಾಗಿದ್ದಾರೆ. ಸಮಾಜದ ಬದಲಾವಣೆಗೆ, ಜನರ ಆಶೋತ್ತರಗಳಿಗೆ ಮಠಾಧೀಶರು ಸ್ಪಂದಿಸದಿರುವುದು ಮಠಾಧೀಶರನ್ನು ಜನತೆ ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಮಠಾಧೀಶರು ಯಥಾಸ್ಥಿತಿವಾದಿಗಳಾಗದೇ ಸಮಾಜದ ಶೋಷಣೆಯ ವಿರುದ್ಧ ಹೋರಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ~ ಎಂದರು.

ಮುಂದಿನ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಮಡೆಸ್ನಾನ ನಿಷೇಧಿಸುವ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕು. ಮಡೆಸ್ನಾನವೂ ಸೇರಿದಂತೆ ಎಲ್ಲಾ ಅನಿಷ್ಟ ಆಚರಣೆಗಳ ಬಗ್ಗೆ ತಜ್ಞರ ಸಮಿತಿ ರಚಿಸಿ ವರದಿ ತರಿಸಿಕೊಂಡು, ಎಲ್ಲಾ ಅನಿಷ್ಟ ಆಚರಣೆಗಳನ್ನೂ ನಿಷೇಧಿಸಲು ಸರ್ಕಾರ ಮುಂದಾಗಬೇಕು ಎಂದು ಸಮಾವೇಶದಲ್ಲಿ ನಿರ್ಣಯಕ್ಕೆ ಬರಲಾಯಿತು.

ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ, ಬೀದರ್‌ನ ಬಸವಯೋಗ ಕೇಂದ್ರದ ಶಿವರಾಮ ಬೆಲ್ದಾಳ ಶರಣರು, ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯಂಜಯ ಸ್ವಾಮೀಜಿ, ಹಂಪಿಯ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಭಾಲ್ಕಿಯ ಹಿರೇಮಠದ ಡಾ.ಬಸವಲಿಂಗ ಪಟ್ಟದೇವರು, ಗುಳೇದಗುಡ್ಡದ ಗುರು ಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಹಾವೇರಿಯ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಮುನಿ ಸ್ವಾಮೀಜಿ, ವಿಜಾಪುರದಹಡಪದ ಅಪ್ಪಣ್ಣ ಪೀಠದ ಬಸವ ಪ್ರಿಯ ಅನ್ನದಾನ ಭಾರತಿ ಸ್ವಾಮೀಜಿ, ಶಿವಯೋಗೀಶ್ವರ ಸಾಧು ಮಠದ ಶಿವಾನಂದ ಭಾರತಿ ಸ್ವಾಮೀಜಿ, ವಿಜಯ ಮಹಾಂತೇಶ್ವರ ಮಠದ ಡಾ.ಮಹಾಂತಪ್ಪ ಸ್ವಾಮೀಜಿ, ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಸೇರಿದಂತೆ ಇನ್ನಿತರ ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT