ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡೆಸ್ನಾನ : ಮಲೆಕುಡಿಯರ ಬಾಂಧವ್ಯ

ಅಕ್ಷರ ಗಾತ್ರ

ಮಡೆ ಸ್ನಾನ, ಎಡೆ ಸ್ನಾನದ ಬಗ್ಗೆ ಪ್ರೊ. ಎನ್.ವಿ.ಅಂಬಾಮಣಿಮೂರ್ತಿ ಅವರು ಬರೆದಿರುವ ಲೇಖನ ಸಂಗತದಲ್ಲಿ ಓದಿದೆ. ಧಾರ್ಮಿಕ ದೃಷ್ಟಿಯಲ್ಲಿ ನಂಬಿಕೆ ಹೊಂದಿರುವ ಭಕ್ತರ ಭಾವನೆಗೆ ನೋವು ಉಂಟಾಗದಂತೆ ಬರೆಯಬಹುದಿತ್ತು.

ಕುಕ್ಕೆಯಲ್ಲಿ ಇಂತಹ ವಿಶಿಷ್ಟ ರೀತಿಯ ಸೇವೆ ಅನೇಕ ಶತಮಾನಗಳಿಂದ ಧಾರ್ಮಿಕವಾಗಿ ಸಂಪ್ರದಾಯ ರೀತಿ ಕ್ಷೇತ್ರದ ಪೂರ್ವಾಶಿಷ್ಟಾಚಾರ ಪ್ರಕಾರ ಆಚರಣೆಯಲ್ಲಿ ಇದೆ. ಇಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರುತಿಸಿ ಹೀಯಾಳಿಸಿ ಆರೋಪ ಮಾಡಿರುವುದು ಪವಿತ್ರ ಸ್ಥಳದಲ್ಲಿ ಸಂಘರ್ಷಕ್ಕೆ ದಾರಿಯಾಗುತ್ತಿದೆ. ಬ್ರಾಹ್ಮಣ (ಪುರೋಹಿತ ವರ್ಗ) ಸಮುದಾಯದಿಂದ ಕುಕ್ಕೆಯಲ್ಲಿ ಮಡೆಸ್ನಾನ ಆರಂಭವಾಗಿದ್ದು ಶತಮಾನಗಳಿಂದಲೂ ಬ್ರಾಹ್ಮಣರು ಉಂಡ ಎಲೆಯ ಮೇಲೆ ಬ್ರಾಹ್ಮಣರೇ ಉರುಳಾಡುವುದನ್ನು ಮಡೆಸ್ನಾನ ಎನ್ನಲಾಗುತ್ತದೆ.

ಇತರ ಸಮುದಾಯ ಈ ಸೇವೆ ಮಾಡಬೇಕೆಂದೇನೂ ಕ್ಷೇತ್ರದ ನಿಯಮ ಇರುವುದಿಲ್ಲ. ಆದರೂ ಈ ವಿಚಾರವಾಗಿ “ಮಡೆ ಮಡೆಸ್ನಾನ” ನಿಷೇಧ ಮಾಡಬೇಕೆಂದು ವಿವಿಧ ಹಂತದ ಹೋರಾಟಗಳು, ವಿಭಿನ್ನ ರೀತಿಯ ಹೇಳಿಕೆಗಳು ವಿವಾದಕ್ಕೆ ಮೂಲವಾಗಿದೆ.( ಕುಕ್ಕೆ ಸುಬ್ರಮಣ್ಯದಲ್ಲಿ ಮಡೆಸ್ನಾನದಲ್ಲಿ ರೂಪಾಂತರ ಮಾಡುವಂತೆ ಸೂಚಿಸಿದ್ದ ರಾಜ್ಯ ಹೈಕೋರ್ಟ್‌ನ ಆದೇಶಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದೆ)  ಧಾರ್ಮಿಕ ಕ್ಷೇತ್ರದ ಪೂರ್ವಾಶಿಷ್ಟಾಚಾರಗಳು ಹಾಗೂ ಸಂಪ್ರದಾಯಗಳು ಇದು ಭಕ್ತ ನಂಬಿಕೆಯ ಮೇಲೆ ಆಚರಿಸಲಾಗುವ ಸೇವೆಯಾಗಿರುತ್ತದೆ. ಇಲ್ಲಿ ಕಾನೂನು ಬದ್ಧ ನಿಷೇಧಕ್ಕೆ ಅವಕಾಶವಿಲ್ಲ. ಇಂತಹ ಸೂಕ್ಷ್ಮ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಸ್ವಾಗತಾರ್ಹ.

ಕುಕ್ಕೆ ಕ್ಷೇತ್ರದಲ್ಲಿ ಅನಾದಿಯಿಂದ ನೆಲೆ ನಿಂತಿರುವ ಮೂಲ ನಿವಾಸಿ ಮಲೆಕುಡಿಯ ಸಮುದಾಯ ಕುಕ್ಕೆ ಲಿಂಗ ವಂಶಸ್ಥರಿಂದ ಈ ಕ್ಷೇತ್ರಕ್ಕೆ ಕುಕ್ಕೆ ಲಿಂಗ ಸುಬ್ರಹ್ಮಣ್ಯವೆಂದು ಹೆಸರು ಬಂದಿದೆ. ಈ ಸಮುದಾಯದ ಆರಾಧ್ಯ ದೇವರು ಹಾಗೂ ಐತಿಹಾಸಿಕ ಹಿನ್ನೆಲೆ ನೋಡಿದರೆ ಮಲೆಕುಡಿಯ ಜನಾಂಗದ ಕುಕ್ಕ ಮತ್ತು ಅಂಗರೆಂಬ ಆದಿವಾಸಿಗಳು ಕುಮಾರ ಪರ್ವತ ಶಿಖರದಿಂದ ಹೊತ್ತು ತಂದು ಆದಿಸುಬ್ರಹ್ಮಣ್ಯ ಎಂಬಲ್ಲಿ ಪ್ರತಿಷ್ಠೆ ಮಾಡಲಾದ ಸ್ಥಳದಲ್ಲಿ ಇಂದಿಗೂ ವಾಲ್ಮಿಕ (ಹುತ್ತ)ದಿಂದ ಆವರಿಸಲ್ಪಟ್ಟ ಮೂಲ ದೇವರು ಸುಬ್ರಹ್ಮಣ್ಯನು ವಾಸುಕಿ ಸಹಿತ ನೆಲೆಯಾಗಿರುತ್ತಾನೆ.

ಇಲ್ಲಿಂದಲೇ (ಮೃತ್ತಿಕೆಯ ಮಣ್ಣಿನ) ಹುತ್ತದ ಮಣ್ಣು ಪ್ರಸಾದವನ್ನು ಪ್ರತಿವರ್ಷ ಕ್ಷೇತ್ರ ಸಂಪ್ರದಾಯ ಪ್ರಕಾರ ಮಲೆಕುಡಿಯ ಸಮ್ಮುಖದಲ್ಲಿಯೇ ಮೃತ್ತಿಕೆ ತೆಗೆಯಬೇಕು. ಇದು ಒಂದು ನಿರ್ದಿಷ್ಟ ಸಮುದಾಯದ ಬ್ರಾಹ್ಮಣ (ಶಿವಳ್ಳಿ) ಎಡಪಡಿತ್ತಾಯರು ಮಾತ್ರವೆ ತೆಗೆಯುವ ಅರ್ಹತೆ ಹೊಂದಿರುತ್ತಾರೆ. ಈ ಹುತ್ತದಿಂದ ಮೃತ್ತಿಕೆಯ ಪ್ರಸಾದ ಪಡೆಯಲಾಗುತ್ತದೆ. ಈ ಪ್ರಸಾದಕ್ಕೆ ಅಪಾರ ಶಕ್ತಿ ಫಲದಾಯವಾಗಿರುತ್ತದೆಯೋ ಅಷ್ಟೇ ಪುಣ್ಯ ಫಲವನ್ನು “ಮಡೆ ಮಡೆಸ್ನಾನ” ಮಾಡುವ ಬ್ರಾಹ್ಮಣ ಸಮುದಾಯ ಪಡೆಯುತ್ತದೆ ಎಂಬ ಉದ್ದೇಶ ತಿಳಿದ ಬ್ರಾಹ್ಮಣೇತರ ಸಮುದಾಯಗಳು ಸುಮಾರು 40 ವರ್ಷಗಳ ಹಿಂದಿನಿಂದ ಈ ಸೇವೆಯನ್ನು ಪಡೆದುಕೊಂಡಿವೆ.  ಕುಕ್ಕೆ ಕ್ಷೇತ್ರದ ಮೂಲ ನಿವಾಸಿ ಮಲೆಕುಡಿಯರಿಗೂ, ದೇವಾಲಯಕ್ಕೂ ಅನೇಕ ಶತಮಾನಗಳ ಬಾಂಧವ್ಯವಿದೆ.

ಕುಕ್ಕೆ ಕ್ಷೇತ್ರದ ಮಡೆಸ್ನಾನವನ್ನು ಮಲೆಕುಡಿಯರು, ದಲಿತರು ಮತ್ತು ಇತರ ಯಾವುದೇ ಬ್ರಾಹ್ಮಣೇತರರ ಸಮುದಾಯ ಮಾಡಬೇಕಾಗಿಲ್ಲ. ಬ್ರಾಹ್ಮಣರು ಉಂಡ ಎಲೆಯ ಮೇಲೆ ಬ್ರಾಹ್ಮಣರೇ ಉರುಳಾಡಿದರೂ ಕ್ಷೇತ್ರದ ಸಂಪ್ರದಾಯ ಉಳಿದು ದೋಷ ನಿವಾರಣೆಯಾಗುತ್ತದೆ. ಈ ಉದ್ದೇಶದಿಂದ ಧಾರ್ಮಿಕ ಕ್ಷೇತ್ರದಲ್ಲಿ ಐತಿಹಾಸಿಕವಾಗಿ ಆಚರಣೆಯಲ್ಲಿದ್ದ `ಮಡೆಸ್ನಾನ' ರೂಪಾಂತರಗೊಳ್ಳುವುದು ಸೂಕ್ತವೆಂದೆನಿಸುವುದಿಲ್ಲ.

ಪಂಕ್ತಿಭೇದ ನಿಷೇಧಕ್ಕಾಗಿ ಮಡೆಸ್ನಾನದ ದುರ್ಬಳಕೆ ಮಾಡುವುದು ಕೂಡ ತಪ್ಪು. ಪವಿತ್ರವಾದ ನೈವೇದ್ಯ ಎಲೆಯ ಮೇಲೆ ಹಾಕಿ ಉರುಳಾಡಿದರೆ ಕಾಲಿನಿಂದ ತುಳಿದಾಗ ಅಪವಿತ್ರಗೊಳ್ಳುತ್ತದೆ. ಇದರಿಂದ ಈ ಸೇವೆ ಮಾಡಿದರೂ ನಂಬಿರುವ ಭಕ್ತರಿಗೆ ಫಲದೊರೆಯುವುದಿಲ್ಲ. ಸ್ವಯಂ ಪ್ರೇರಿತ ಭಕ್ತರು ಮಾಡುವ ಸೇವೆಗೆ ಕಾನೂನು ರೀತಿಯ ತೊಡಕು ಬೇಡವಾಗಿತ್ತು.

-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT