ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಯದ ರಾಮ್‌ದೇವ್

Last Updated 3 ಜೂನ್ 2011, 18:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಚಳವಳಿ ಆರಂಭಿಸಿರುವ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಸರ್ಕಾರದ ನಡುವೆ ಶುಕ್ರವಾರ ನಡೆದ ಸುಮಾರು ಐದು ತಾಸುಗಳ ದೀರ್ಘಾವಧಿ ಮಾತುಕತೆ ವಿಫಲವಾಗಿದ್ದು, ಯಾವುದೇ ರಾಜಿ ಸಂಧಾನ ಸಾಧ್ಯವಾಗಿಲ್ಲ.

ಹೀಗಾಗಿ ವಿದೇಶದಲ್ಲಿರುವ ಕಪ್ಪುಹಣವನ್ನು ಸ್ವದೇಶಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ನಿಗದಿಯಂತೆಯೇ ಶನಿವಾರದಿಂದ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ರಾಮ್‌ದೇವ್ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ಸಚಿವರಾದ ಕಪಿಲ್ ಸಿಬಲ್ ಮತ್ತು ಸುಬೋಧ್ ಕಾಂತ್ ಸಹಾಯ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಯೋಗ ಗುರು, ನಾವು ಈವರೆಗೂ ಯಾವುದೇ ರಾಜಿ ಸಂಧಾನಕ್ಕೆ ಬರಲಾಗಿಲ್ಲ ಮತ್ತು ನಾನು ನಾಳೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದರು.

ಹೋಟೆಲ್‌ವೊಂದರಲ್ಲಿ ನಡೆದ ಸಂಧಾನ ಸಭೆಯಿಂದ ಹೊರಬಂದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, `ಎರಡೂ ಕಡೆಗಳಿಂದ ಹಲವಾರು ವಿಷಯಗಳ ಬಗ್ಗೆ ರಚನಾತ್ಮಕ ಚರ್ಚೆ ನಡೆಸಲಾಗಿದೆ ಮತ್ತು ಮಾತುಕತೆಯ ಪ್ರಗತಿ ಕುರಿತು ತುಂಬಾ ಸಂತಸವಾಗಿದೆ, ಆದರೆ ಒಂದೇ ದಿನದಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗದು~ ಎಂದು ಪ್ರತಿಕ್ರಿಯಿಸಿದರು.

ಬಾಬಾ ಸಲಹೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿಸಿದ ಅವರು, ಈ ಹಿನ್ನೆಲೆಯಲ್ಲಿ ರಾಮ್‌ದೇವ್ ಸರಿಯಾದ ನಿಲುವು ಅನುಸರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಹಿತದೃಷ್ಟಿಯಿಂದ ಬಾಬಾ ಲಿಖಿತವಾಗಿ ಪ್ರಸ್ತಾಪಿಸಿದ ಬಹುತೇಕ ವಿಷಯಗಳಿಗೆ ಸರ್ಕಾರ ಸಹಮತ ಸೂಚಿಸಿದೆ ಎಂದೂ ಹೇಳಿದರು.

ಪ್ರಧಾನಿ-ರಾಷ್ಟ್ರಪತಿ ಭೇಟಿ:ಈ ಮಧ್ಯೆ, ಉಪವಾಸ  ಮಾಡದಂತೆ ಬಾಬಾ ಅವರ ಮನವೊಲಿಸಲು ಹಿರಿಯ ಸಚಿವರು ವಿಫಲವಾದ ನಂತರ ಸಂಜೆ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿ, ರಾಮ್‌ದೇವ್ ವಿಷಯ ಮತ್ತು ತಮ್ಮ ವಿದೇಶ ಪ್ರವಾಸ ಹಾಗೂ ಇತರ ಪ್ರಸಕ್ತ ವಿದ್ಯಮಾನಗಳನ್ನು ವಿವರಿಸಿದರು.

ಸುಮಾರು 40 ನಿಮಿಷಗಳ ಈ ಸಭೆಯಲ್ಲಿ ಪ್ರಧಾನಿ ತಮ್ಮ ಇಥಿಯೋಪಿಯಾ ಮತ್ತು ತಾಂಜಾನಿಯಾ ಭೇಟಿ ಹಾಗೂ ಯೋಗಗುರುವಿನ ಚಳವಳಿ ಬಗ್ಗೆ ರಾಷ್ಟ್ರಪತಿಗೆ ಮಾಹಿತಿ ನೀಡಿದರು. ಇವುಗಲ್ಲದೆ, ಇತರ ಅನೇಕ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆಯೂ ಇಬ್ಬರೂ ಚರ್ಚಿಸಿದರು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ಒಮ್ಮತಕ್ಕೆ ಆಶಾಭಾವನೆ: ಇದಕ್ಕೂ ಮುನ್ನ ಬೆಳಿಗ್ಗೆ ರಾಮಲೀಲಾ ಮೈದಾನದಲ್ಲಿ ಸೇರಿದ್ದ ತಮ್ಮ ಸಾವಿರಾರು ಅನುಯಾಯಿಗಳನ್ನುದ್ದೇಶಿಸಿ ಮಾತನಾಡಿದ ರಾಮ್‌ದೇವ್, ಸರ್ಕಾರದೊಂದಿಗಿನ ಮಾತುಕತೆಯಲ್ಲಿ ಒಂದೆರಡು ವಿಷಯ ಬಿಟ್ಟರೆ, ಉಳಿದ ಬಹುತೇಕ ವಿಚಾರಗಳಲ್ಲಿ ಒಮ್ಮತಾಭಿಪ್ರಾಯ ಮೂಡಿದೆ ಎಂದು ತಿಳಿಸಿದರು.

ಕೆಲವರು ಆರೋಪಿಸಿದಂತೆ, `ನನ್ನ ಪ್ರತಿಭಟನೆ ಯಾವುದೇ ರಾಜಕೀಯ ಪ್ರಚೋದನೆ ಅಥವಾ ಕೋಮುವಾದಿ ಮನೋಭಾವನೆ ಇಲ್ಲವೇ ರಹಸ್ಯ ಕಾರ್ಯಸೂಚಿ ಹೊಂದಿಲ್ಲ~ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರದ ಹಿತಾಸಕ್ತಿಯಿಂದ ಈ ಚಳವಳಿಯನ್ನು ಆರಂಭಿಸಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯ ಪ್ರಾಯೋಜಕತ್ವ ಇದಕ್ಕಿಲ್ಲ. ಜೊತೆಗೆ ಪ್ರತಿಭಟನೆಯು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧವೂ ಅಲ್ಲ, ಇದು ತಟಸ್ಥವಾದುದು. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನರು ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಯೋಗವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ತಳ್ಳಿಹಾಕಿದ ಅವರು, ಯೋಗದ ಮಿತಿ ದಾಟಿದವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಂತಹವರನ್ನು ಪುನಃ ಸ್ವಸ್ಥಾನಕ್ಕೆ ತರಲು ಯತ್ನಿಸುತ್ತಿರುವುದಾಗಿ ನುಡಿದರು.

 ವಿದೇಶದಲ್ಲಿರುವ ಸುಮಾರು 400 ಲಕ್ಷ ಕೋಟಿಗಳಷ್ಟು ಕಪ್ಪು ಹಣವನ್ನು ದೇಶಕ್ಕೆ ಮರಳಿ ತರಿಸುವ ಮತ್ತು ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸುವ ಗುರಿಯೊಂದಿಗೆ ಈ ಹೋರಾಟ ಹಮ್ಮಿಕೊಂಡಿರುವುದಾಗಿ ಹೇಳಿದ ಅವರು, `ಗಾಂಧೀಜಿ, ಅಣ್ಣಾ ಹಜಾರೆ ಮುಂತಾದವರ ಅಹಿಂಸಾ ಚಳವಳಿಯ ಮಾರ್ಗವನ್ನು ಕುಗ್ಗಿಸುವ ಪ್ರಯತ್ನ ನಡೆಸಿಲ್ಲ~ ಎಂದೂ ಟೀಕಾಕಾರರಿಗೆ ತಿರುಗೇಟು ನೀಡಿದರು.

ದೇಶದ 524 ಜಿಲ್ಲೆಗಳಲ್ಲಿ ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹ ನಡೆಯಲಿದೆ ಎಂದ ಅವರು, ಪ್ರಜಾಪ್ರಭುತ್ವವನ್ನು ಅಪಹರಿಸಿರುವ ಕೆಲವು ಜನರು ಭ್ರಷ್ಟಾಚಾರ ವ್ಯವಸ್ಥೆಗೆ ಕಾರಣಕರ್ತರಾಗಿದ್ದಾರೆ ಎಂದರು. `ಭ್ರಷ್ಟರು ಅತ್ಯಂತ ಪ್ರಭಾವಿಗಳು ಮತ್ತು ಅಧಿಕಾರಸ್ಥ ಜನರಾಗಿರುವುದರಿಂದ ಇವರ ವಿರುದ್ಧ ಹೋರಾಟ ನಡೆಸುವುದು ಸುಲಭವಾದುದಲ್ಲ~ ಎಂದೂ ಅವರು ಅಭಿಪ್ರಾಯಪಟ್ಟರು.

ಭ್ರಷ್ಟರಿಗೆ ಮರಣದಂಡನೆಯ ಸಲಹೆ: ಸಾಮಾನ್ಯರ ಸಮಸ್ಯೆಗಳಿಗೆ ನಿರ್ದಿಷ್ಟ ಅವಧಿದೊಳಗೆ ಅಧಿಕಾರಿಗಳು ಸ್ಪಂದಿಸುವಂತೆ ಸಾರ್ವಜನಿಕ ಸೇವಾ ವಿಲೇವಾರಿ ಕಾಯ್ದೆಯಡಿ ನಿಯಮ ರೂಪಿಸಬೇಕು. ಇದಕ್ಕೆ ಆಗಾಗ ತಪ್ಪುವ ಅಧಿಕಾರಿಗಳಿಗೆ ದಂಡ ಮತ್ತು ಅಮಾನತು ಶಿಕ್ಷೆ ವಿಧಿಸಬೇಕು. ಭ್ರಷ್ಟಾಚಾರದ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ, ಭ್ರಷ್ಟಾಚಾರದ ಮೂಲಕ ಕೋಟಿಗಟ್ಟಲೆ ಹಣ ಲೂಟಿ ಮಾಡುವವರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT