ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಲ್ಲಿ ಹುದುಗಿದ ಮುದನೂರಿನ ಇತಿಹಾಸ

Last Updated 9 ಏಪ್ರಿಲ್ 2011, 6:35 IST
ಅಕ್ಷರ ಗಾತ್ರ

ಯಾದಗಿರಿ: ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಶರಣರು ರಚಿಸಿದ ವಚನ ಸಾಹಿತ್ಯ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಹಲ ವಾರು ಶರಣರು ತಮ್ಮ ವಚನಗಳ ಮೂಲಕ ಸರಳ ಶೈಲಿಯಲ್ಲಿ ಬದುಕಿನ ಅರ್ಥವನ್ನು ತಿಳಿಸಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭು, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ ಹೀಗೆ ಹಲವಾರು ಶರಣರು 12 ನೇ ಶತಮಾನದಲ್ಲಿ ವಚನಗಳನ್ನು ರಚಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಆದರೆ 12 ಶತಮಾನಕ್ಕೂ ಪೂರ್ವದಲ್ಲಿಯೇ ವಚನ ಸಾಹಿತ್ಯ ಕೃಷಿ ಮಾಡಿದವರು ದೇವರ ದಾಸಿಮಯ್ಯ. ಅಂತೆಯೇ ಅವರನ್ನು ಆದ್ಯ ವಚನಕಾರ ಎಂತಲೂ ಕರೆಯ ಲಾಗುತ್ತದೆ. ಪ್ರಪ್ರಥಮ ವಚನಕಾರ ದೇವರ ದಾಸಿಮಯ್ಯನವರ ಜನ್ಮಸ್ಥಳ ಯಾದ ಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರು ಗ್ರಾಮ. ಸುಮಾರು 176 ವಚನಗಳನ್ನು ರಚಿಸುವ ಮೂಲಕ ವಚನ ಸಾಹಿತ್ಯ ರಚಿಸಿದ ಮೊದಲಿಗರೆನಿಸಿದ್ದಾರೆ.

ಸಮಾಜ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ತಮ್ಮ ವಚನಗಳ ಮೂಲಕ ಬಿಡಿಸಿದ್ದ ದೇವರ ದಾಸಿಮಯ್ಯನವರು, ತಮ್ಮ ವಚನಗಳನ್ನು ರಾಮನಾಥನಿಗೆ ಅರ್ಪಿಸಿದ್ದಾರೆ. ಶಿಲಾಶಾಸನದ ಪ್ರಕಾರ ಬಾದಾಮಿ ಚಾಲುಕ್ಯರ ಕಾಲದಲ್ಲಿ ಮುದನೂರು ಅಗ್ರಹಾರವಾಗಿತ್ತು. 11ನೇ ಶತಮಾನ ದಲ್ಲಿ ದೇವರ ದಾಸಿಮಯ್ಯನ ವರಿಂದಾಗಿ ಈ ಗ್ರಾಮ ಪ್ರಸಿದ್ಧಿ ಪಡೆ ಯಿತು. ನಂತರ ಅರಸೊತ್ತಿಗೆಗಳ ಮಧ್ಯೆ ನಡೆದ ಯುದ್ಧದ ಪರಿಣಾಮ ವಾಗಿ ಮುದನೂರು ಗ್ರಾಮ ಹಾಳಾಗಿ ಹೋಯಿತು ಎನ್ನುವುದು ಗ್ರಾಮದ ಹಿರಿಯರು ಹೇಳುವ ಮಾತು.

ಆದ್ಯ ವಚನಕಾರ ದಾಸಿಮಯ್ಯ ನವರ ಜನ್ಮಸ್ಥಳ, ಕರ್ಮಭೂಮಿ ಯಾದ ಮುದನೂರು ಮಾತ್ರ ಇತಿಹಾಸದ ಪುಟಗಳಲ್ಲಿ ಎದ್ದು ಕಾಣುತ್ತಲೇ ಇಲ್ಲ. ಸಹಸ್ರಮಾನದ ಇತಿಹಾಸವನ್ನು ಹೊಂದಿರುವ ಹಲ ವಾರು ದೇವಾಲಯಗಳು, ಶಿಲ್ಪಕಲಾ ಕೃತಿಗಳು, ಶಿಲಾಶಾಸನಗಳು ಇಂದಿಗೂ ಮುದನೂರಿನ ಮಣ್ಣಲ್ಲಿ ಈಗಲೂ ಅಡಗಿ ಕುಳಿತಿವೆ.

ಗ್ರಾಮದಲ್ಲಿರುವ ದೇವರ ದಾಸಿಮ ಯ್ಯನವರ ದೇವಸ್ಥಾನ, ಸಿದ್ಧ ಲಿಂಗೇಶ್ವರ ದೇವಸ್ಥಾನ, ವೇಣು ಗೋಪಾಲ ದೇವಾಲಯ, ಮಲ್ಲಿಕಾರ್ಜುನ ಗುಡಿ, ಸಂಗಮನಾಥ ದೇವಾಲಯಗಳಲ್ಲಿರುವ ಶಿಲ್ಪಕಲೆ ಅಚ್ಚರಿ ಮೂಡಿಸುತ್ತದೆ. ಈ ಗ್ರಾಮದಲ್ಲಿ ಒಟ್ಟಾರೆ 18 ಕ್ಕೂ ಹೆಚ್ಚು ಶಿಲಾಶಾಸನಗಳು ಪತ್ತೆಯಾಗಿವೆ. ಅನೇಕ ಸುಂದರ ಶಿಲ್ಪಕಲಾಕೃತಿಗಳು ದೇವಾಲಯಗಳ ಕಲ್ಲಿನಲ್ಲಿ ಕಾಣುತ್ತವೆ. ಗ್ರಾಮದಲ್ಲಿ ಸದಾಕಾಲ ತುಂಬಿ ಹರಿಯುವ ರಾಮತೀರ್ಥ, ಲಕ್ಷ್ಮಣ ತೀರ್ಥ, ಹಾಲು ತೀರ್ಥ, ಪಾಂಡವ ತೀರ್ಥ, ಸಕ್ಕರೆ ತೀರ್ಥ, ಸಂಗಮ ತೀರ್ಥಗಳೆಂಬ ಸಪ್ತ ತೀರ್ಥಗಳು ನಿರ್ವಹಣೆಯ ಕೊರತೆಯಿಂದ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ.

ದೇವರ ದಾಸಿಮಯ್ಯನವರ ಆರಾಧ್ಯ ದೈವವಾದ ರಾಮನಾಥನ ದೇವಾಲಯ ಇದೀಗ ಶಿಥಿಲಾವಸ್ಥೆಗೆ ತಲುಪಿದ್ದು, ದೇವಾಲಯದ ಮೇಲ್ಭಾ ಗದಲ್ಲಿ ಮನೆಗಳು ತಲೆ ಎತ್ತಿವೆ. ಇತಿಹಾಸ ಹೇಳುವ ಕಲ್ಲುಗಳು ದಾರಿಯಲ್ಲಿ ಅಡ್ಡವಾಗಿ ಮಲಗಿದ್ದರೆ, ಇನ್ನೂ ಕೆಲವು ಮನೆಗಳ ಗೋಡೆಗಳಾಗಿ ನಿಂತಿವೆ. ಮುದನೂರಿನ ಇತಿಹಾಸದ ಲಿಖಿತ ಕುರುಹುಗಳಾದ ಶಿಲಾಶಾಸನ ಗಳು ಸಂರಕ್ಷಣೆ ಇಲ್ಲದೇ ಹಾಳಾಗಿ ಹೋಗುತ್ತಿವೆ.

ಸಹಸ್ರಮಾನೋತ್ಸವದ ಸಂಭ್ರಮ:  ಒಂದು ಸಾವಿರ ವರ್ಷಗಳ ಇತಿಹಾಸ ವನ್ನು ಹೊಂದಿರುವ ಮುದನೂರು ಗ್ರಾಮದಲ್ಲಿ ಇದೀಗ ಸಹಸ್ರಮಾನೋತ್ಸವದ ಆಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಸರ್ಕಾರವೇ ಸುಮಾರು ರೂ.20 ಲಕ್ಷ ವೆಚ್ಚದಲ್ಲಿ ದೇವರ ದಾಸಿಮಯ್ಯನವರ ಸಹಸ್ರಮಾನೋತ್ಸವ, ನೇಕಾರರ ಸಮ್ಮೇಳನವನ್ನು ಏರ್ಪಡಿಸಿದೆ. ಈಗಾಗಲೇ ರಾಜ್ಯ ಸರ್ಕಾರವು ಇಲ್ಲಿನ ದಾಸೋಹ ಮಂಟಪಕ್ಕೆ ರೂ. 1 ಕೋಟಿ, ರಸ್ತೆ ಕಾಮಗಾರಿಗಳಿಗೆ ರೂ.2 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
ಏಪ್ರಿಲ್ 8 ರಿಂದ 10 ರವರೆಗೆ ಮೂರು ದಿನಗಳ ಸಹಸ್ರಮಾನೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಏಪ್ರಿಲ್ 9ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದೇವರ ದಾಸಿಮಯ್ಯನವರ ಭಾವ ಚಿತ್ರದ ಮೆರವಣಿಗೆ ನಡೆಯಲಿದ್ದು, ದಾಸಿಮಯ್ಯನವರು ನಡೆದು ಬಂದ ದಾರಿಯನ್ನು ವಿವರಿಸುವ ವಸ್ತು ಪ್ರದ ರ್ಶನವನ್ನೂ ಆಯೋಜಿಸಲಾಗಿದೆ. ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಮೈದಾನದಲ್ಲಿ 8 ಬದಿಗಳಲ್ಲಿ ದ್ವಾರ ಗಳನ್ನು ನಿರ್ಮಿಸಲಾಗಿದೆ.

ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷರೂ ಆದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಜಿಲ್ಲಾಡಳಿತ, ಸ್ಥಳೀಯ ಆಡಳಿತಗಳು ಗ್ರಾಮದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರತವಾಗಿವೆ.

ಸಾವಿರ ವರ್ಷಗಳ ಹಿಂದೆಯೇ ವಚನ ರಚಿಸುವ ಮೂಲಕ ಪ್ರಥಮ ವಚನಕಾರ ಎನಿಸಿದ ದೇವರ ದಾಸಿ ಮಯ್ಯನವರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗಬೇಕು. ಮುದನೂರು ಗ್ರಾಮದಲ್ಲಿರುವ ಅಪೂರ್ವ ಶಿಲ್ಪ, ಶಿಲಾಶಾಸನ, ದೇವಾಲಯ, ತೀರ್ಥ ಗಳಂತಹ ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಮುದನೂರಿನ ಅಭಿವೃದ್ಧಿಗೆ ಪ್ರಾಧಿ ಕಾರವನ್ನು ರಚಿಸುವುದು ಅತ್ಯಂತ ಸೂಕ್ತ ಎನ್ನುವುದು ಗ್ರಾಮದ ಜನರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT