ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಮಕ್ಕಳಿಂದಲೇ ಮಣ್ಣು ಮಾರಾಟ

Last Updated 7 ಸೆಪ್ಟೆಂಬರ್ 2013, 6:20 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸುತ್ತಿದ್ದಂತೆಯೇ ಮಣ್ಣಿನಿಂದ ಏನೂ ಗಿಟ್ಟುವುದಿಲ್ಲ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಅದಕ್ಕಾಗಿ ಮಣ್ಣನ್ನೇ ಮಾರುತ್ತಿದ್ದಾರೆ.

ಕೃಷಿ ಭೂಮಿಯನ್ನು ಗುತ್ತಿಗೆಗೆ ನೀಡಿ ಮಣ್ಣು ತೆಗೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಜಿಲ್ಲೆಯ ಆಸುಪಾಸಿನಲ್ಲಿ ಸಾಕಷ್ಟು ರಸ್ತೆ ಕಾಮಗಾರಿಗಳು, ಬೃಹತ್ ನಿರ್ಮಾಣಗಳು ನಡೆಯುತ್ತಿವೆ. ಅವುಗಳಿಗೆ ಕೃಷಿ ಭೂಮಿಯಿಂದಲೇ ಮಣ್ಣು ಸರಬರಾಜಾಗುತ್ತಿದೆ.

ಕೊಪ್ಪಳ ತಾಲ್ಲೂಕಿನ ಮಂಗಳಾಪುರ, ಕಾತರಕಿ, ಬೆಟಗೇರಿ, ಯಲಬುರ್ಗಾ ತಾಲ್ಲೂಕಿನ ರ‌್ಯಾವಣಕಿ ಭಾಗಗಳಲ್ಲಿ ಕೃಷಿ ಭೂಮಿಯ ಪಕ್ಕವೇ ಬೃಹತ್ ಹೊಂಡಗಳು ನಿರ್ಮಾಣವಾಗಿರುವುದನ್ನು ಕಾಣಬಹುದು. ವಿವಿಧ ನಿರ್ಮಾಣ ಕಾಮಗಾರಿಗೆ ಬೇಕಾದ ಗಟ್ಟಿಮಣ್ಣು (ಮುರ‌್ರಂ) ಇಲ್ಲಿಂದಲೇ ಸಾಗಿದೆ.

ಮಣ್ಣು ಪಾಳು ಭೂಮಿಯಿಂದ, ಕೃಷಿ ಜಮೀನಿನಿಂದ ಸಾಕಷ್ಟು ದೂರದಲ್ಲಿ, ಯಾವುದೇ ಪರಿಸರ ಹಾನಿ ಆಗದ ರೀತಿ ತೆಗೆಯಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳು ಹೇಳುತ್ತವೆ. ಆದರೆ, ರೈತರಿಗಿರುವ ಅನಿವಾರ್ಯತೆ, ಸ್ವಲ್ಪಮಟ್ಟಿನ ಹಣದಾಸೆಯೂ ಗುತ್ತಿಗೆದಾರರು ನೀಡುವ ಮೊತ್ತಕ್ಕೆ ಮಣ್ಣನ್ನೇ ಮಾರುವಂತೆ ಮಾಡಿದೆ. ಗುತ್ತಿಗೆದಾರರು ಗಟ್ಟಿ ಬಂಡೆ ಸಿಗುವವರೆಗೆ ಮಣ್ಣು ಅಗೆದು ಭೌಗೋಳಿಕ ವ್ಯವಸ್ಥೆಯನ್ನೇ ಏರುಪೇರು ಮಾಡಿ ಇನ್ನೇನೂ ಸಿಗದು ಎಂಬಂತಾದಾಗ ಬಿಟ್ಟು ಹೋಗಿದ್ದಾರೆ.

ಇದು ಒಂದೆಡೆ ರೈತರಿಗೆ ಭೂಮಿ ಇದ್ದೂ ಇಲ್ಲದ ಸ್ಥಿತಿ ಉಂಟು ಮಾಡಿದರೆ, ಮತ್ತೊಂದೆಡೆ ರಸ್ತೆಬದಿ ಅಪಾಯಕಾರಿ ಕಂದಕಗಳು ನಿರ್ಮಾಣವಾಗಿವೆ. ಕೆಂಪುಮಣ್ಣು ಹೆಚ್ಚು ಹರಡಿರುವ ಕಡೆ ಈ ಮರಂ ತೆಗೆಯುವ ದಂಧೆಯೂ ಎಗ್ಗಿಲ್ಲದೇ ಸಾಗಿದೆ. 

ಇನ್ನೂ ಕೆಲವುಕಡೆ ಅತ್ತ ಸರ್ಕಾರಿ ಜಮೀನು (ಗೋಮಾಳ ಅಥವಾ ಪಾಳು ಭೂಮಿ) ಇತ್ತ ಕೃಷಿ ಭೂಮಿಯ ಮಧ್ಯೆಯೂ ಮಣ್ಣು ತೆಗೆಯಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಿದೆ. ಒಂದಿಷ್ಟು ತೇವ ಹಿಡಿದುಕೊಳ್ಳುವ ಸಾಮರ್ಥ್ಯ ಇರುವ ಮಣ್ಣು ಗುತ್ತಿಗೆದಾರರ ಪಾಲಾಗಿದೆ. ಕೊನೆಗೆ ಗಟ್ಟಿ ಕಲ್ಲು ಉಳಿದುಕೊಂಡಿದೆ. ಹೀಗೆ ಪರಿಸರ ವ್ಯವಸ್ಥೆಯನ್ನೇ ಹಾಳು ಮಾಡುತ್ತಾ ಹೋದರೆ ಅಂತರ್ಜಲ ಉಳಿಯುವುದು ಹೇಗೆ? ಕೃಷಿ ಮುಂದುವರಿಸುವುದು ಹೇಗೆ ಎಂಬುದು ರೈತ ಶಂಕರಪ್ಪ ಅವರ ಪ್ರಶ್ನೆ.

ಕೇವಲ ಕೃಷಿ ಭೂಮಿಗಷ್ಟೇ ಅಲ್ಲ. ಮಣ್ಣುಬಾಕರು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿಯೂ ಮಣ್ಣಿಗೆ ಜೆಸಿಬಿ ಬಾಯಿ ಹಾಕಿದ್ದಾರೆ. ಇದರಿಂದ ಅಣೆಕಟ್ಟೆಗೆ ಹೋಗುವ ನೀರಿನ ಪ್ರಮಾಣದ ಮೇಲೂ ಪರಿಣಾಮ ಬೀರಿದೆ.

ಒಂದೆಡೆ ಮಳೆಯ ಕೊರತೆ, ಕುಸಿದ ಅಂತರ್ಜಲ, ಜಿಂಕೆ, ಚಿಗರೆ ಹಾವಳಿ, ಪರಿಣಾಮಕಾರಿಯಾಗಿ ಜಾರಿಯಾಗದ ನೀರಾವರಿ ಯೋಜನೆಗಳು, ಪ್ರಮುಖ ಸ್ಥಳಗಳಲ್ಲಿ ಆವರಿಸಿದ ಕೈಗಾರಿಕೆಗಳು, ಅವುಗಳ ತ್ಯಾಜ್ಯದಿಂದ ಬಂಜರಾದ ಭೂಮಿ ಇವೆಲ್ಲವೂ ರೈತರ ಬದುಕನ್ನು ಹೈರಾಣಾಗಿಸಿ ಕೃಷಿಯಿಂದಲೇ ವಿಮುಖರನ್ನಾಗಿಸಿದರೆ ಮುಂದೊಂದು ದಿನ ಹೊಲ ಉಳಲು ಮಣ್ಣೇ ಇಲ್ಲವಾದೀತೇ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT