ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನೊಂದಿಗೆ ಗುದ್ದಾಟ!

ಕೈ ಹಿಡಿದು ನಡೆಸಿದ ಫುಕುವೋಕ
Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಸುಮಾರು 10-12 ವರ್ಷಗಳ ಹಿಂದೆ ನನಗೆ ಅಲರ್ಜಿಕ್ ಬ್ರಾಂಕೈಟಿಸ್ ಅಥವಾ ಶೀತದ ಅಲರ್ಜಿ ಅಥವಾ ಇನ್ನೇನೋ ಇತ್ತು. ರೋಗದ ಹೆಸರು ಮುಖ್ಯವಲ್ಲ; ಲಕ್ಷಣ ಮುಖ್ಯ. ಚಳಿಗಾಲ ಇನ್ನೂ ಒಂದು ಮೈಲಿ ದೂರ ಇರುವಂತೆಯೇ ಮಂಕಿಕ್ಯಾಪ್, ಶಾಲು, ಸ್ವೆಟರ್, ರಗ್ಗು ಇತ್ಯಾದಿಗಳೆಲ್ಲ ಹೊರಗೆ ಬಂದುಬಿಡುತ್ತಿದ್ದವು. ಅವುಗಳನ್ನೆಲ್ಲ ಧರಿಸಿದ 50 ವರ್ಷದ ನಾನು 70 ವರ್ಷದ ಮುದುಕನಂತೆ ಕಾಣುತ್ತಿದ್ದೆ. ಹಾಗೆಂದು ನನ್ನ ಹೆಂಡತಿ ಕಿಚಾಯಿಸುತ್ತಿದ್ದಳು.

ಯಾವತ್ತೇ ಆಗಲಿ ನನ್ನ ಎದೆ ಶೀತಕ್ಕೆ ಸ್ವಲ್ಪ ಎಕ್ಸ್‌ಪೋಸ್ ಆದರೂ ಫ್ಯಾನ್ ಅಡಿ ಕುಳಿತರೂ, ಮಲಗಿದರೂ ತಕ್ಷಣ ಕೋಲ್ಡ್ ಅಟ್ಯಾಕ್ ಆಗಿಬಿಡುತ್ತಿತ್ತು. ಪರಿಣಾಮ, ಲೆಕ್ಕವಿಲ್ಲದಷ್ಟು ಸೀನುಗಳು. ಅದರಿಂದ ಮೂಗು ಕೆಂಪಾಗುತ್ತಿತ್ತು; ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಜೊತೆಗೆ ಮೂಗು ಕಟ್ಟುತ್ತಿತ್ತು, ಉಸಿರಾಟ ಕಷ್ಟವಾಗುತ್ತಿತ್ತು; ನೆಗಡಿ, ತಲೆನೋವು, ಮೈಕೈ ನೋವು, ಜ್ವರ ಇತ್ಯಾದಿ ಶೀತ ಸಂಬಂಧಿಗಳೆಲ್ಲ ಅಮರಿಕೊಂಡು ಮಲಗಿಸಿಬಿಡುತ್ತಿದ್ದವು.

ವಾರಗಟ್ಟಲೆ ನರಳಾಟ. ಹಾಗಾದಾಗಲೆಲ್ಲ ಡಾಕ್ಟರ ಬಳಿ ಹೋಗುತ್ತಿದ್ದೆ. ಅವರು ಯಾವುಯಾವುದೋ ಮಾತ್ರೆಗಳನ್ನು ಕೊಡುತ್ತಿದ್ದರು. ಅಥವಾ, ಸ್ಥಿತಿ ಗಂಭೀರವಾಗಿದ್ದಾಗ ಒಂದು ಇಂಜೆಕ್ಷನ್ ಕೊಟ್ಟು ಕಳಿಸುತ್ತಿದ್ದರು. ನರಳಾಟ... ಮಾತ್ರೆಗಳು... ಇಂಜೆಕ್ಷನ್... ಹಣ ಖರ್ಚು. ಮತ್ತದೇ ಸೈಕಲ್. ಬದುಕು ಹೀಗೇ ಸಾಗಿತ್ತು, ವರ್ಷಾನುಗಟ್ಟಲೆ. ಇದು ನನ್ನ ಮುಂದಿನ ಇಡೀ ಬದುಕಿನ ಕಥೆ, ವ್ಯಥೆ, ಯಾತನೆ ಎಂಬಂತಾಗಿತ್ತು.

ಪುಗಸಟ್ಟೆ ಸಲಹೆಗಳು
ಈ ಥರದ ಕಂಪ್ಲೇಂಟಿಗೆ ಔಷಧವಿಲ್ಲ. ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು. ಅದೊಂದೇ ಪರಿಹಾರ. ಜಿಮ್‌ಗೆ ಹೋಗಿ ಕಸರತ್ತು ಮಾಡಿ; ವಾಕಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ಯೋಗ ಮಾಡಿ ಎಂದು ಸಿಕ್ಕವರೆಲ್ಲ ಪುಗಸಟ್ಟೆ ಸಲಹೆ ಕೊಡುತ್ತಿದ್ದರು.

ಜಿಮ್‌ನ ಕೋಣೆಯೊಳಗೆ ಕಬ್ಬಿಣದೊಂದಿಗೆ ಗುದ್ದಾಡುವುದಕ್ಕಿಂತ ಬಯಲಲ್ಲಿ ಮಣ್ಣಿನೊಂದಿಗೆ ಗುದ್ದಾಡುವುದು ಮೇಲು. ಅದು ಗಂಧದೊಡನೆ ಗುದ್ದಾಡಿದಂತೆ! ಉಳಿದವು ಬಯಲಲ್ಲಿ ಮಾಡುವಂತಹವೇ ಆದರೂ ಪ್ರೊಡಕ್ಟೀವ್ ಅಲ್ಲ. ಲಾಭ ಸೀಮಿತ. ಹೆಚ್ಚೆಂದರೆ ಅವುಗಳಿಂದ ಆರೋಗ್ಯ ಸುಧಾರಿಸಬಹುದು ಅಷ್ಟೆ. ಬಾಡಿಯನ್ನು ವಾರ್ಮ್ ಆಗಿ ಇಟ್ಟುಕೊಳ್ಳಬೇಕೆಂದರೆ ದೇಹ ದಂಡಿಸಲೇಬೇಕು. ದೇಹ ದಂಡನೆಯಿಂದ ಬೇರೆ ರೀತಿಯ ಪ್ರಯೋಜನವೂ ಆಗುವಂಥ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ನನ್ನ ಇರಾದೆಯಾಗಿತ್ತು.

ಸೈಟಿಗೆ ಎಂಟ್ರಿ!
ಆಗಲೇ ನನಗೆ ನನ್ನ ಸೈಟುಗಳು (ನಿವೇಶನಗಳು) ಜ್ಞಾಪಕಕ್ಕೆ ಬಂದದ್ದು. ಅಲ್ಲಿ ಒಂದಿಷ್ಟು ತೋಟ ಬೆಳೆಸುವುದಾದರೆ ದೈಹಿಕ ಶ್ರಮವೂ ಆಗುತ್ತದೆ. ಒಂದಿಷ್ಟು ಪ್ರೊಡಕ್ಟೀವ್ ಕೆಲಸವೂ ಆಗುತ್ತದೆ. ಜೊತೆಗೆ, ಪರಿಸರದ ಕೆಲಸವೂ ಆಗುತ್ತದೆ.
ಈ ನಡುವೆ ನನಗೆ ಗಿಡಮರ, ಕಾಡುಮೇಡು, ಗಿರಿಕಂದರ, ಕೃಷಿ, ತೋಟ... ಇಂಥ ಪ್ರಕೃತಿಗೆ ಹತ್ತಿರವಾದ ಸಂಗತಿಗಳಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ಇದೇ ಸುಮಾರಲ್ಲಿ ಫುಕುವೋಕಾನ ಸಹಜ ಕೃಷಿಯನ್ನು ಓದಿದ್ದೆ. ಆಶ್ಚರ್ಯಗೊಂಡಿದ್ದೆ: ಏನೂ ಮಾಡದೆ ಬೆಳೆ! ನಾನೂ ಏನಾದರೂ ಮಾಡಬೇಕು ಅನ್ನಿಸುತ್ತಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನನ್ನ ಮನೆಯಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದಲ್ಲಿ, ತುಂಬಾ ವರ್ಷಗಳ ಹಿಂದೆ ಕೊಂಡಿದ್ದ 120/50 ಅಳತೆಯ ಸೈಟ್ ಇತ್ತು. ಅಷ್ಟೂ ವರ್ಷಗಳು ಆ ಕಡೆ ತಲೆ ಹಾಕಿರಲಿಲ್ಲ. ಅದರೊಳಗೆ ಏನೇನೋ ಬೆಳೆದುಕೊಂಡಿದ್ದವು: ಲಾಂಟಾನ, ಕಾಂಗ್ರೆಸ್ ಮತ್ತು ಹೆಸರು ಗೊತ್ತಿಲ್ಲದ ಅನೇಕ ಕುರುಚುಲು ಗಿಡಗಳು. ಅಲ್ಲಿ ಏಕೆ ಫುಕುವೋಕಾನನ್ನು ಪ್ರಯತ್ನಿಸಬಾರದು ಎಂದು ಒಂದು ದಿನ ಬಿತ್ತನೆ ರಾಗಿಯನ್ನು ತೆಗೆದುಕೊಂಡು ನಿವೇಶನದಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಕಂಡಿತೋ ಅಲ್ಲೆಲ್ಲಾ ಎರಚಿ ಬಂದೆ. ಅದರಿಂದೇನೂ ರಾಗಿ ಚಿಗಿಯಲಿಲ್ಲ ಅಂತಿಟ್ಟುಕೊಳ್ಳಿ.

ತೋಟದ ವ್ಯಸನ
ಹೀಗೆ ಗ್ರ್ಯಾಂಡ್ ಸ್ಕೇಲಿನಲ್ಲಿ ಕೃಷಿಗೆ ನನ್ನ ಎಂಟ್ರಿ ಆಯಿತು. ಆಮೇಲೆ ಅದನ್ನು ನಿಲ್ಲಿಸುವುದು ಸಾಧ್ಯವಾಗಲಿಲ್ಲ: ಗಿಡಮರಗಳ ಸೆಳೆತ ಅಷ್ಟು ಜೋರಾಗಿತ್ತು. ನಿವೇಶನದ ಸುತ್ತ ಕಲ್ಲಿನ ಕಾಂಪೌಂಡ್ ಎತ್ತಿಸಿದೆ. ಗೇಟ್ ಇಡಿಸಿದೆ. ನಲ್ಲಿ ಸಂಪರ್ಕ ತೆಗೆದುಕೊಂಡೆ. ಸಂಪ್ ಮಾಡಿಸಿದೆ. ಸುಮಾರು 50-60 ಸಾವಿರ ಸದ್ದಿಲ್ಲದೆ ಕೈಬಿಟ್ಟಿತು.

ಇಷ್ಟೆಲ್ಲ ಮಾಡುವಾಗ ಅಲ್ಲಿ ಏನು ಮಾಡಬೇಕೆಂಬ ಸ್ಪಷ್ಟ ಕಲ್ಪನೆ ಇರಲಿಲ್ಲ. ಆದರೆ ಸ್ಥೂಲವಾಗಿ ಎಲ್ಲ ತರಹದ ಗಿಡಮರಗಳನ್ನು ಬೆಳೆಸಬೇಕು ಎಂಬ ಆಸೆ ಮಾತ್ರ ಇತ್ತು. ಆಸೆಯ ಬೆನ್ನು ಹತ್ತಿ ಕೆಲಸ ಶುರು ಹಚ್ಚಿಕೊಂಡೆ.

ಒಂದೊಂದೇ ಗುಂಡಿಗಳನ್ನು ತೆಗೆದು ಅವುಗಳಲ್ಲಿ ಸಸಿ ನೆಡುತ್ತಾ ಹೋದೆ. ಕೂಲಿಯವರನ್ನು ನೇಮಿಸಿಕೊಳ್ಳದೆ ಇವನ್ನೆಲ್ಲ ಹಟ ಹಿಡಿದು ಮಾಡಿದೆ. ಇದನ್ನು ಪ್ರಾರಂಭ ಮಾಡಿದ್ದೇ ಮಣ್ಣಿನೊಂದಿಗೆ ಗುದ್ದಾಡಬೇಕೆಂದು, ದೇಹವನ್ನು ದಂಡಿಸಬೇಕೆಂದು, ಬೆವರು ಸುರಿಸಬೇಕೆಂದು. ತೋಟದ ರೂಪ ಪಡೆಯಲು ಇಪ್ಪತ್ತು ವರ್ಷಗಳಾಗಲಿ, ಚಿಂತೆಯಿಲ್ಲ. ನಾನೇ ಮಾಡಬೇಕೆಂದು ನಿರ್ಧರಿಸಿಯಾಗಿತ್ತು.

ಇಷ್ಟು ಸಾಲದೆ?
ನನ್ನ ತೋಟದಲ್ಲಿ ಇಂಚಿಂಚೇ ಹಸಿರು ಕಾಣಿಸಕೊಳ್ಳತೊಡಗಿತು. ಪ್ರತಿ ಬೆಳಿಗ್ಗೆ ಅಥವಾ ಸಂಜೆ, ಮನೆಯಿಂದ ತೋಟಕ್ಕೆ ಹೋಗುವುದು ಮತ್ತು ಅಲ್ಲಿ ಕನಿಷ್ಠ ಒಂದು ಗಂಟೆ ಕೆಲಸ ಮಾಡುವುದನ್ನು ನಿಯಮ ಮಾಡಿಕೊಂಡೆ. ದಿನಕಳೆದಂತೆ ಅದೊಂದು ವ್ಯಸನವಾಗಿ ಬಿಟ್ಟಿದೆ; ಬಿಟ್ಟರೂ ಬಿಡೆ ಎಂಬಂತಹ ಹವ್ಯಾಸವಾಗಿಬಿಟ್ಟಿದೆ. ನನ್ನ ತೋಟ ಈಗ ನನ್ನ ಕರ್ಮಭೂಮಿ.

ಭಗವದ್ಗೀತೆಯಲ್ಲಿ ಹೇಳಿರುವಂತೆ ಕರ್ಮದಲ್ಲಿರುವ ಸುಖ ಫಲದಲ್ಲ್ಲ್ಲಿಲ ಎಂಬಂತೆಯೇ ತೋಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಅದರ ಫಲದ ಮೇಲೆ ನನ್ನ ಕಣ್ಣಿಲ್ಲ. ಕೆಲಸದ ಮೇಲೆ ಮಾತ್ರ ಗಮನ - ಕಾಯಕವೇ ಕೈಲಾಸ ಎಂಬಂತೆ. ಗುದ್ದಲಿಯಲ್ಲಿ ಅಗೆಯುವಾಗ ಝಗಝಗ ಕುಣಿಯುವ ತೋಳಿನ ಮಾಂಸಖಂಡಗಳಿಂದ ಉಂಟಾಗುವ ಪುಳಕ...

ದೀರ್ಘ ಉಸಿರಾಟದಿಂದ ಆಗುವ ಒಂದು ರೀತಿಯ ಆನಂದ... ಗಿಡಮರಗಳಲ್ಲಿ ಬೆಳ್ಳನೆಯ ದೀಪಗಳು ಜಗ್ಗನೆ ಚಿಮ್ಮಿ, ಹಸಿರು ಬಣ್ಣದ ಬುರುಡೆಗಳಾಗಿ ವಿಕಸನಗೊಂಡು, ಹಾಗೇ ನಿಧಾನವಾಗಿ ಮೈದುಂಬಿಕೊಂಡು ಪಕ್ವವಾಗುವ ಪ್ರಕ್ರಿಯೆ...

ಆಗಾಗ ತೋಟದೊಳಕ್ಕೆ ಬರುವ ಗಿಳಿ, ಮೈನಾ, ಬುಲ್‌ಬುಲ್ ಹಾಗೂ ಹೆಸರು ಗೊತ್ತಿಲ್ಲದ ಇನ್ನು ಅನೇಕ ಪಕ್ಷಿಗಳು; ವಿವಿಧ ಬಣ್ಣದ ಚಿಟ್ಟೆಗಳು... ತರಹೇವಾರಿ ಬಲೆ ಹೆಣೆವ ಜೇಡಗಳು... ಗಟ್ಟಿ ಟೊಪ್ಪಿಗೆಯ ಬಸವನ ಹುಳು... 

ನಿಬ್ಬೆರಗಾಗಿಸುವ ಗಾತ್ರ ಮತ್ತು ಆಕಾರದ ಕೀಟಗಳು... ನಿಂಬೆಗೆ ದಿಢೀರನೆ ಎಲ್ಲಿಂದಲೋ ಬರುವ ಹಳದಿ ಪಟ್ಟೆಯ ಕಪ್ಪು ಹುಳುಗಳು... ಎಂಥೆಂಥ ಆಶ್ಚರ್ಯಜನಕ ಖಜಾನೆ!

ಬುದ್ಧಿಗೇಡಿ ಮೇಷ್ಟ್ರು! 
ಈಗ ನನ್ನ ತೋಟದಲ್ಲಿ ತೀರಾ ಆರ್ಗ್ಯಾನಿಕ್ ಆಗಿ -ಒಂದು ಚಿಟಿಕೆ ರಾಸಾಯನಿಕದ ಸೋಂಕಿಲ್ಲದೆ- ಬೆಳೆದ ನೂರಾರು ಮರಗಿಡಗಳಿವೆ. ಫಲ ಕೊಡುತ್ತಿವೆ. ಸೀಬೆ, ಸೀತಾಫಲ, ರಾಮಫಲ, ಸಪೋಟ, ನುಗ್ಗೆ, ಮಾವು, ತೆಂಗು... ಆದರೆ ಅದೆಲ್ಲ ನನಗೆ ಪೂರ್ಣ ಸಿಗುವುದೇ ಇಲ್ಲ.

ಆ ದಾರಿಯಲ್ಲಿ ಹೋಗುವ ಶಾಲೆಯ ಮಕ್ಕಳು ಮತ್ತು ದಾರಿಹೋಕರು ಯಾವ ಎಗ್ಗಿಲ್ಲದೆ ಕಾಂಪೌಂಡ್ ಹಾರಿ ಫಲದೊಂದಿಗೆ ಮಾಯವಾಗುತ್ತಾರೆ. ಮತ್ತೊಂದಷ್ಟನ್ನು ಗಿಳಿಗಳು, ಅಳಿಲುಗಳು ಹಾಗು ಇನ್ನಿತರೆ ಜೀವಿಗಳು ತಿಂದು ಆನಂದಪಡುತ್ತವೆ. ನನಗೂ ಒಂದು ರೀತಿಯಲ್ಲಿ ಆನಂದವೇ.

ಹೂವಿನ ಗಿಡಗಳೂ ಇವೆ: ಕನಕಾಂಬರ, ಕಾಕಡ, ಮಲ್ಲಿಗೆ, ದಾಸವಾಳ, ಜಾಜಿ... ಅವು ಸುತ್ತಮುತ್ತ ಇರುವವರ ದೇವರುಗಳ ಮುಡಿ ಏರುತ್ತಿವೆ. ಜೊತೆಗೆ ಬೇವು, ಕರಿಬೇವು, ಹಲಸು, ಸಿಲ್ವರ್ ಓಕ್, ತೇಗ, ಬಿದಿರು... ಇತ್ಯಾದಿ ಮರಗಳೂ ಇವೆ. ಏನಿಲ್ಲವೆಂದರೂ ಇವೆಲ್ಲ ನನ್ನ ಬದುಕಿನ ಅನಿವಾರ್ಯತೆಯಿಂದಾಗಿ ಉಂಟುಮಾಡುತ್ತಿರುವ ಪರಿಸರ ಮಾಲಿನ್ಯವನ್ನು ಸರಿಪಡಿಸುತ್ತಿವೆ ಎಂಬ ಸಮಾಧಾನ ನನಗಿದೆ. ಇದೆಲ್ಲವೂ ಆದಾಯವೇ.

ನನ್ನ ಈ ದಿನಚರಿಯ ಅರಿವಿರುವ ಎಷ್ಟೋ ಜನ ನನ್ನ ಬೆನ್ನ ಹಿಂದೆ `ಈ ಕಾಲೇಜು ಮೇಷ್ಟ್ರಿಗೇನು ಬಂದಿರೋದು ದೊಡ್‌ರೋಗ. ಏನೋ ತೋಟ ಮಾಡ್ತಾರಂತೆ ತೋಟ. ಅಲ್ಲಿ ಮೈಮುರಿಯೋದರ ಬದಲು ಒಂದೆರಡು ಬ್ಯಾಚ್‌ಗೆ ಟ್ಯೂಷನ್ ಮಾಡಿದ್ರೆ ಲಕ್ಷಾಂತರ ದುಡೀಬಹುದು' ಎಂದೆಲ್ಲಾ ಮಾತಾಡಿಕೊಳ್ಳುತ್ತಿದ್ದುದು ಗಮನಕ್ಕೆ ಬಂದಿದೆ. ಅವರಿಗೇನು ಹೇಳಲಿ? ಬಹುಶಃ ಹಣಕ್ಕಿಂತ ಆರೋಗ್ಯ, ಸುಖಕ್ಕಿಂತ ಸಂತೋಷ, ಸಂಪತ್ತಿಗಿಂತ ನಿಸರ್ಗ ಹೆಚ್ಚು ಬೆಲೆಯುಳ್ಳದ್ದು ಎಂಬ ಮನಸ್ಥಿತಿ ಉಳ್ಳವರಿಗೆ ಮಾತ್ರ ಇದು ಅರ್ಥವಾಗುತ್ತದೆ.

ಮಾಯವಾದ ಬ್ರಾಂಕೈಟಿಸ್
ಆರೋಗ್ಯಕ್ಕೂ ಜೀವನ ಶೈಲಿಗೂ ಎಂಥ ಸಂಬಂಧವಿದೆ ನೋಡಿ! ಈಗ ನನ್ನೆಲ್ಲ ಮಂಕಿ ಕ್ಯಾಪ್‌ಗಳು, ಶಾಲುಗಳು, ಸ್ವೆಟರ್‌ಗಳು, ರಗ್ಗುಗಳು, ಮಫ್ಲರ್‌ಗಳು, ಕೋಟುಗಳು ಗೂಟ ಸೇರಿವೆ. ಬನೀನಿನ ಮೇಲೆ ಒಂದು ಟೀಶರ್ಟ್ ಹಾಕಿಕೊಂಡರೂ ಸೆಕೆ ಅನ್ನಿಸುತ್ತದೆ. ಫ್ಯಾನ್ ಗಾಳಿ ಹಿಂಸೆ ಎನಿಸುವುದಿಲ್ಲ. ಮಾತ್ರೆಗಳು ಇಂಜಕ್ಷನ್‌ಗಳ ಕಾಟವಿಲ್ಲ. ಹಣದ ಖರ್ಚಿಲ್ಲ. ನನ್ನ ಬದುಕೂ ಬದಲಾಗಿದೆ. ಅಜ್ಜನಂತೆ ಕಾಣುವ ಅನಿವಾರ್ಯ ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT