ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಪರೀಕ್ಷೆಗೆ ಸರಳ ಸಾಧನ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ಭೂಮಿಯ ಮೇಲ್ಪದರದಲ್ಲಿ ಫಲವತ್ತಾದ ಒಂದು ಇಂಚು ದಪ್ಪ ಮಣ್ಣು ತಯಾರಾಗ ಬೇಕಾದರೆ ಸುಮಾರು ಒಂದು ನೂರು ವರ್ಷ ಬೇಕು. ಗಾಳಿ, ಮಳೆ, ಬಿಸಿಲು ಹೊಡೆತಕ್ಕೆ ಸಿಕ್ಕಿ ಕಲ್ಲು ಕ್ರಮೇಣ ಶಿಥಿಲಗೊಂಡು ಸಣ್ಣ ಸಣ್ಣ ಕಣಗಳಾಗಿ ಹೊರಬಂದು, ಖನಿಜ ಮತ್ತು ಸಾವಯುವ ವಸ್ತು ಬೆರೆತು ಮಣ್ಣಾಗುತ್ತದೆ.

ಈ ಮಣ್ಣು ವ್ಯವಸಾಯದ ಮೂಲ. ಆಧುನಿಕ ಕೃಷಿಯಲ್ಲಿ ಮಣ್ಣನ್ನು ಪರೀಕ್ಷಿಸಿ ಕೊರತೆ ಇರುವ ಪೋಷಕಾಂಶಗಳನ್ನು ರಸಗೊಬ್ಬರಗಳ ಮೂಲಕ ಒದಗಿಸಿ, ಸಮತೋಲನ ಕಾಪಾಡುವ ಕ್ರಮವಿದೆ.

ಮಣ್ಣಿನ ಆರೋಗ್ಯ ಹಾಗೂ ಗುಣವನ್ನು ಅದರ ರಸಸಾರ (ಪಿಎಚ್) ಮಟ್ಟದಿಂದ ತಿಳಿದುಕೊಳ್ಳುತ್ತಾರೆ. ಸಾಮಾನ್ಯ ರಸಸಾರ 7 ಇದ್ದರೆ ಎಲ್ಲಾ ಬೆಳೆಗೆ ಯೋಗ್ಯವೆಂದು, 6.3 ಕ್ಕಿಂತ ಕಡಿಮೆ ಇದ್ದರೆ ಹುಳಿಮಣ್ಣು, 8.5ಕ್ಕೂ ಮೇಲ್ಪಟ್ಟಿದ್ದರೆ ಕ್ಷಾರಯುಕ್ತ ಎಂದು ಗುರುತಿಸಲಾಗುತ್ತದೆ.

ಹುಳಿ ಮತ್ತು ಕ್ಷಾರಯುಕ್ತ ಮಣ್ಣಿನ ಜಮೀನುಗಳು ರೋಗ ಪೀಡಿತ ಮನುಷ್ಯನ ಹಾಗೆ. ಅವುಗಳನ್ನು ಸರಿಪಡಿಸಬೇಕಾದರೆ ಅಪಾರ ಸಾವಯುವ ಗೊಬ್ಬರ, ಹಸಿರೆಲೆ ಗೊಬ್ಬರ ಹಾಕಲೇಬೇಕು. ಹುಳಿಮಣ್ಣಿಗೆ ಸುಣ್ಣ ಬೆರೆಸುವುದು, ಕ್ಷಾರಮಣ್ಣಿಗೆ ಜಿಪ್ಸಂ ಹಾಕುವುದು ವಾಡಿಕೆ. ಮಣ್ಣು ಪರೀಕ್ಷಿಸಿದ ನಂತರವೇ ತಜ್ಞರ ಸಲಹೆ ಪಡೆದು ಯಾವ ಪ್ರಮಾಣದಲ್ಲಿ ಯಾವುದನ್ನು ಯಾವಾಗ ಹಾಕಬೇಕೆನ್ನುವುದನ್ನು ತಿಳಿಯಬೇಕು.

ಭೂಮಿಯ ಫಲವತ್ತತೆ ನಿರ್ಧರಿಸುವಲ್ಲಿ ಮಣ್ಣಿನ ಪರೀಕ್ಷೆಯು ಅತ್ಯಂತ ನಿರ್ಣಾಯಕವಾದ ಪಾತ್ರ ವಹಿಸುತ್ತದೆ. ಅನುಭವ ಹಾಗೂ ಸೂಕ್ತ ಜ್ಞಾನದೊಂದಿಗೆ ಇತರ ಪರೀಕ್ಷಾ ವಿಧಾನಗಳೊಡಗೂಡಿ ಮಣ್ಣಿನ ಪರೀಕ್ಷೆಯ ಫಲಿತಾಂಶಗಳನ್ನು ಅಧ್ಯಯನ ಮಾಡುವುದು ಸೂಕ್ತ. ಮಣ್ಣು ಪರೀಕ್ಷೆಯಲ್ಲಿ ಅದಕ್ಕೆ ಯಾವ ಪೋಷಕಾಂಶಗಳ ಅವಶ್ಯಕತೆಯಿದೆ ಹಾಗೂ ಯಾವ ಗೊಬ್ಬರಗಳ ಮೂಲಕ ಆ ಕೊರತೆಯನ್ನು ನೀಗಿಸಬಹುದು ಎಂಬುದನ್ನು ತಿಳಿಯಬಹುದು.

ಮಣ್ಣಿಗೆ ನೀಡಿದ ಪೋಷಕಾಂಶಗಳನ್ನು ಸಸ್ಯವು ಯಾವ ರೀತಿ ಸ್ವೀಕರಿಸುತ್ತವೆ ಎಂಬುದು ಮಣ್ಣಿನ ಫಲವತ್ತತೆಯ ಮೇಲೆ ಅವಲಂಬಿತವಾಗಿರುತ್ತದೆ.

ಬೇರೆ ವಿಜ್ಞಾನಗಳಂತೆ ಕೃಷಿ ಸಹ ಒಂದು ಮುಖ್ಯವಾದ ವಿಜ್ಞಾನ. ಮನುಷ್ಯನ ಆರೋಗ್ಯ ಪರೀಕ್ಷೆಗೆ ಹೇಗೆ ರಕ್ತ ಪರೀಕ್ಷೆ, ಎಕ್ಸ್‌ರೆ ಮತ್ತು ಸ್ಯ್ಕಾನಿಂಗ್ ಮಾಡಿ ತಕ್ಕುದಾದ ಔಷಧೋಪಚಾರ ನೀಡಿ ಗುಣಪಡಿಸುವರೋ ಹಾಗೆಯೇ ಕೃಷಿ ವಿಜ್ಞಾನಿಗಳು ಮಣ್ಣಿನ ಪರೀಕ್ಷೆ ಮಾಡಿ ರೈತರಿಗೆ ಸಲಹೆಗಳನ್ನು ನೀಡುತ್ತಾರೆ. ವಿವಿಧ ಬೆಳೆಗಳಿಗೆ ಬೇಕಾದ ಪೋಷಕಾಂಶಗಳ ಪ್ರಮಾಣವನ್ನು ನಿರ್ಧರಿಸುತ್ತಾರೆ.

ಗುಜರಾತ್ ಮಾದರಿ
ನಮ್ಮಲ್ಲಿ ಕೃಷಿ ಉದ್ಯಮ, ಕೃಷಿ ವಿವಿ, ಕೃಷಿ ಇಲಾಖೆಗಳು ರೈತರಿಗೆ ಮಣ್ಣು ಪರೀಕ್ಷೆಯ ಮಹತ್ವವನ್ನು ತಿಳಿಸುತ್ತವೆ. ಆದರೆ ರೈತರ ಜಮಿನುಗಳಿಗೆ ಹೋಗಿ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸುವ ಯಾವುದೇ ಯೋಜನೆಗಳನ್ನು ಅವು ಹೊಂದಿಲ್ಲ. ಈ ವಿಷಯದಲ್ಲಿ ಗುಜರಾತ್ ರಾಜ್ಯ ಬಹಳ ಮುಂದಿದೆ.
 
ಅಲ್ಲಿ ಸರ್ಕಾರ ಪ್ರತಿಯೊಬ್ಬ ರೈತನಿಗೂ ಮಣ್ಣಿನ ಆರೋಗ್ಯ ಕಾರ್ಡ್ ನೀಡಿದೆ. ಅಲ್ಲಿಯ ಕೃಷಿ ವಿವಿ ತಜ್ಞರು ರೈತರ ಜಮೀನಿಗೆ ಹೋಗಿ ಮಣ್ಣು ಪರೀಕ್ಷೆ ಮಾಡಿ ವಿವರವನ್ನು ಕಾರ್ಡಿನಲ್ಲಿ ದಾಖಲಿಸುತ್ತಾರೆ.

ಪ್ರತಿ ಹಳ್ಳಿಯ ಗ್ರಾಮಸೇವಕರ ಕಚೇರಿ ಕಂಪ್ಯೂಟರ್‌ನಲ್ಲಿ ಈ ವಿವರ ಸಂಗ್ರಹಿಸುತ್ತಾರೆ. ರೈತ ಅಲ್ಲಿಗೆ ಹೋಗಿ ತಾನು ಬೆಳೆಯುವ ಬೆಳೆ, ತನ್ನ ಜಮೀನಿನ ವಿವರ ತಿಳಿಸಿದರೆ ಪೂರ್ಣ ಮಾಹಿತಿ, ನೀಡಬೇಕಾದ ಪೋಷಕಾಂಶ ಇತ್ಯಾದಿ ಸಮಗ್ರ ವಿವರಗಳ ಪ್ರಿಂಟ್‌ಔಟ್ ಕೊಡುತ್ತಾರೆ.

ನಮ್ಮಲ್ಲಿಯೂ ಮಣ್ಣು ಪರೀಕ್ಷೆಗೆ ಇಲಾಖೆ ಹಾಗೂ ಖಾಸಗಿ ಪ್ರಯೋಗಾಲಯಗಳಿವೆ. ಆದರೆ ಎಷ್ಟು ರೈತರು ಇದರ ಪ್ರಯೋಜನ ಪಡೆಯುತ್ತಾರೆ? ಪ್ರಯೋಗಾಲಯಕ್ಕೆ ಹೋಗಬೇಕು, ಮಣ್ಣಿನ ಮಾದರಿ ಕೊಡಬೇಕು, ಫಲಿತಾಂಶ ತಿಳಿಯಲು ಮತ್ತೆ ಹೋಗಬೇಕು. ಇದೆಲ್ಲ ಕಷ್ಟದ ಕೆಲಸ. ರೈತ ತನ್ನ ಬೇರೆ ಕೆಲಸ ಬಿಟ್ಟು ಇದಕ್ಕಾಗಿ ಕಚೇರಿಗೆ ಅಲೆದಾಡ ಬೇಕಾಗುತ್ತದೆ.

ಈ ಕಿರಿಕಿರಿಯಿಂದ ರೈತರಿಗೆ ಮುಕ್ತಿ ಕೊಡಲು ಸರಳ ಸಾಧನವೊಂದು ಮಾರುಕಟ್ಟೆಗೆ ಬಂದಿದೆ. ಅದೇ `ಪ್ಯಾಕೆಟ್ ಪಿಎಚ್ ಮೀಟರ್~. ಇದು  ಡಿಜಿಟಲ್ ಮಣ್ಣು ಪರೀಕ್ಷಾ ಉಪಕರಣ. ಇಲ್ಲಿ ನೀವು ಮಾಡಬೇಕಾದದ್ದು ಇಷ್ಟೆ. ನಿಮ್ಮ ಜಮೀನಿನ ಭೂಗುಣಕ್ಕೆ ಅನುಗುಣವಾಗಿ ಇಂಗ್ಲಿಷ್ ವಿ ಆಕಾರದ ಗುಂಡಿಗಳನ್ನು ತೆಗೆದು ಮಧ್ಯದಲ್ಲಿರುವ ಮಣ್ಣನ್ನು ಒಂದು ಗಾಜಿನ ಲೋಟಕ್ಕೆ ಹಾಕಿ ಸ್ವಲ್ಪ ನೀರು ಬೆರೆಸಬೇಕು.
 
ಅದರಲ್ಲಿ ಈ ಡಿಜಿಟಲ್ ಮೀಟರ್ ಇಟ್ಟರೆ ನಿಮ್ಮ ಮಣ್ಣಿನ ಫಲಿತಾಂಶ ಕ್ಷಣ ಮಾತ್ರದಲ್ಲಿ ಲಭ್ಯ. ಇದರಿಂದ ಯಾವ ಭಾಗದ ಭೂಮಿಗೆ ಎಷ್ಟು ಸುಣ್ಣ, ಜಿಪ್ಸಂ ಹಾಕಬೇಕು ಎಂಬುದು ಗೊತ್ತಾಗುತ್ತದೆ.

ಇದೇ ರೀತಿ ಮಲೆನಾಡಿನ ಕಾಫಿ ತೋಟಗಳಲ್ಲಿ ಅರೇಬಿಕ ಕಾಫಿ ಮತ್ತು ಮೆಣಸಿಗೆ ಬೋಡೊ ದ್ರಾವಣ ಸಿಂಪಡಿಸುವುದು ಸಾಮಾನ್ಯ. ಇದಕ್ಕಾಗಿ 2 ಕಿಲೊ ಸುಣ್ಣ, 2 ಕಿಲೊ ಮೈಲುತುತ್ತ ಹಾಕಿ ಶೇಕಡ 1 ರ ಬೋಡೊ ದ್ರಾವಣ ತಯಾರಿಸುತ್ತಾರೆ.

ಇದರ ರಸಸಾರ (ಪಿಎಚ್) ನಿಗದಿತ 7 ಇರಬೇಕು. ಆದರೆ ಅನೇಕ ಸಲ ಈ ಪ್ರಮಾಣ ಏರುಪೇರಾಗಿ ಬೆಳೆಗೆ ಹಾನಿಯಾಗುತ್ತದೆ. ಇಂಥ ದ್ರಾವಣದಲ್ಲೂ ರಸಸಾರವನ್ನು ಕಂಡು ಹಿಡಿಯಲು ಈ ಸಾಧನ ಸಹಕಾರಿ.

ಈ ಕುರಿತ ಹೆಚ್ಚಿನ ಮಾಹಿತಿಗೆ ದಿನೇಶ್ ದೇವವಂದ (94838 11333, 82770 62933) ಅವರನ್ನು ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT