ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು, ಮೇವಿನ ರಕ್ಷಣೆ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಭಾಗಗಳಲ್ಲಿ ಹೊಲಕ್ಕೆ ಗೊಬ್ಬರ ಸಾಗಿಸುವ ಕೆಲಸ ಭರದಿಂದ ಸಾಗಿದೆ. ಈ ಸಂದರ್ಭದಲ್ಲಿ ತಿಪ್ಪೆಗೊಬ್ಬರವನ್ನು ಹೊಲಕ್ಕೆ ಹೇರಿ ತಿಂಗಳುಗಟ್ಟಲೆ ಬಿಸಿಲಿಗೆ ಬಿಡುವಂತಿಲ್ಲ. ಬಿಸಿಲ ಝಳಕ್ಕೆ ಸಾರಜನಕದಂತಹ ಅಮೂಲ್ಯ ಸತ್ವಗಳು ಗಾಳಿ ಪಾಲಾಗುತ್ತವೆ. ಭೂಮಿಯ ಶ್ರೀಮಂತಿಕೆಗೆ ಕಾರಣವಾಗುವ ಸೂಕ್ಷ್ಮಾಣುಗಳು ಸಾಯುತ್ತವೆ.

ಮಳೆ ಬಿದ್ದ ಮೇಲೆಯೇ ಗೊಬ್ಬರವನ್ನು ಹೊಲದಲ್ಲಿ ಹರಡಿ ತಕ್ಷಣವೇ ಉಳುಮೆ ಮಾಡಿ ಮಣ್ಣಿನಲ್ಲಿ ಬೆರೆಸಬೇಕು. ಮಳೆ ಬೀಳುವ ಮೊದಲೇ ಎತ್ತಿನ ಗಾಡಿಯಿಂದಲೇ ಗೊಬ್ಬರ ಸಾಗಿಸುವುದು ಅನಿವಾರ್ಯ ಎಂದಿಟ್ಟುಕೊಳ್ಳಿ. ಅಂತಹ ಪಕ್ಷದಲ್ಲಿ ಹೊಲದ ತುಂಬ ಚಿಕ್ಕಚಿಕ್ಕ ಗುಡ್ಡೆಗಳನ್ನಾಗಿ ಹೇರುವ ಬದಲು ನಾಲ್ಕೆಂಟು ಚಕ್ಕಡಿ ಗೊಬ್ಬರವನ್ನು ಒಂದೇ ಕಡೆ ಹರಡಿ ದೊಡ್ಡಗುಡ್ಡೆ ಹಾಕಬೇಕು. ಮಣ್ಣಿನಲ್ಲಿ ಮಿಶ್ರ ಮಾಡುವ ತನಕ ಗುಡ್ಡೆಯ ಮೇಲೆ ದಂಟು, ಹುಲ್ಲು, ತೆಂಗಿನ ಗರಿಯಿಂದ ಮುಚ್ಚಿ ನೇರವಾಗಿ ಬಿಸಿಲಿಗೆ ತಾಗದಂತೆ ಎಚ್ಚರವಹಿಸಬೇಕು.

ಮಳೆ ಬಿದ್ದ ಮೇಲೆ ಹೊಲದ ತುಂಬ ಗೊಬ್ಬರವನ್ನು ಸಮನಾಗಿ ಹರಡಿ ರಂಟೆ, ಕುಂಟೆ ಹೊಡೆದು ಮಣ್ಣಿನಲ್ಲಿ ಸೇರಿಸಬಹುದು. ಇದರಿಂದ ಪೋಲಾಗುವ ಪೋಷಕಾಂಶಗಳನ್ನು ರಕ್ಷಿಸಿ ಮಣ್ಣಿನ ಫಲವತ್ತತೆ ವೃದ್ಧಿಸಿಕೊಳ್ಳಬಹುದು.

`ತಿಪ್ಪೆಯಿಂದ ಸಾಗಿಸಿದ ಗೊಬ್ಬರವನ್ನು ಹೊಲದ ತುಂಬ ಚಿಕ್ಕಚಿಕ್ಕ ಗುಡ್ಡೆಗಳಾಗಿ ಕಡಿಯುವ ಪ್ರವೃತ್ತಿ ರೈತರಲ್ಲಿ ಹೆಚ್ಚಿದೆ. ಇದು ತಪ್ಪು. ಈ ರೀತಿ ಹೊಲದ ತುಂಬ ಹೇರಿದ ಗೊಬ್ಬರ ತಿಂಗಳುಗಟ್ಟಲೆ ಬಿಸಿಲ ಝಳಕ್ಕೆ ತತ್ತರಿಸಿ ಸತ್ವ ನಾಶವಾಗಿ ಹೋಗುತ್ತವೆ. 38-42 ಡಿಗ್ರಿ ಸೆಲ್ಸಿಯಸ್‌ವರೆಗಿನ ಉಷ್ಣತೆ ತಲುಪುವ ತಾಪಮಾನದಲ್ಲಿ ಗೊಬ್ಬರದಲ್ಲಿನ ಸತ್ವಗಳು ಆಕ್ಸೈಡ್ ರೂಪದಲ್ಲಿ ಪರಿವರ್ತನೆಗೊಂಡು ವ್ಯರ್ಥವಾಗುತ್ತವೆ. ಸಹಸ್ರಾರು ರೂಪಾಯಿ ಖರ್ಚು ಮಾಡಿ ಯೂರಿಯಾ ಗೊಬ್ಬರ ತಂದು ಸುರುವಿದರೂ ಈ ನಷ್ಟ ತುಂಬಲು ಸಾಧ್ಯವಿಲ್ಲ. ಜೀವಾಣುಗಳಿಲ್ಲದ ಒಣ ದ್ರವ್ಯ ನಿರುಪಯುಕ್ತ. ಹೀಗಾಗಿ ಗೊಬ್ಬರದಲ್ಲಿ ಕನಿಷ್ಠ ತೇವಾವಂಶವಿರುವಂತೆ ನೋಡಿಕೊಳ್ಳಬೇಕು' ಎನ್ನುತ್ತಾರೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳಾಗಿರುವ ಡಾ. ಪಿ.ಎಲ್. ಪಾಟೀಲ್ ಹಾಗೂ ಡಾ. ಚಂದ್ರಕಾಂತ ಕಾಲಿಬಾವಿ.

ಮೇವಿನ ಪೋಷಣೆ
ಬಹುತೇಕ ಧಾನ್ಯದ ಒಕ್ಕಲೆಲ್ಲ ಈಗ ಮುಗಿದಿದೆ. ಮೇವು ಸಂಗ್ರಹಿಸುವ, ಬಣವೆ ಒಟ್ಟುವ ಕಾರ್ಯ ಭರಾಟೆಯಿಂದ ಸಾಗಿದೆ. ಮೇವಿನಲ್ಲಿರುವ ಎಲ್ಲ ಮೂಲ ಗುಣಗಳನ್ನುಳಿಸಿಕೊಂಡು ಕೆಡದಂತೆ ಬಣವೆಗಳಲ್ಲಿ ಮೇವನ್ನು ಸಂಗ್ರಹಿಸುವುದೂ ಬುದ್ಧಿವಂತಿಕೆಯೇ ಸರಿ. ಸಂಗ್ರಹಿಸುವ ಮೇವು ಮಳೆ- ಗಾಳಿಗೆ ವರ್ಷಾನುಗಟ್ಟಲೆ ಕೆಡದಂತೆ ಪೋಷಿಸಬೇಕು.

ಮೇವಿನ ಪೋಷಕಾಂಶ ಪೋಲಾಗಬಾರದು. ಗೆದ್ದಲು ಹತ್ತಬಾರದು. ಇದಕ್ಕಾಗಿ ರೈತಾಪಿ ವರ್ಗದವರು ಜಾಣ್ಮೆಯಿಂದ ಹೆಜ್ಜೆ ಇಡಬೇಕು. ಫಸಲು ಮಾಗಿದ ನಂತರ ದವಸ, ಧಾನ್ಯ, ಕಾಳು, ಜೋಳ ಒಕ್ಕಲು ಮಾಡಿಕೊಂಡ ನಂತರ ಉಳಿಯುವ ಹುಲ್ಲು, ದಂಟು ತೆನೆಗಳನ್ನೇ ಒಣಮೇವನ್ನಾಗಿ ಸಂಗ್ರಹಿಸಿಕೊಂಡು ಬಳಸುವ ಸಂಪ್ರದಾಯವು ರೂಢಿಯಲ್ಲಿದೆ. ಒಣ ಹುಲ್ಲು, ಹೊಟ್ಟನ್ನು ಬಣವೆ ಹಾಕಿ ಕೆಡದಂತೆ ಸಂರಕ್ಷಿಸಿಡಬಹುದು. ಫಸಲು ಮಾಗಿದ ನಂತರ ಹೊಲ ಗದ್ದೆಗಳಲ್ಲಿ ತುಂಬಾ ದಿನ ಬಿಡಬಾರದು. ಇದರಿಂದ ಮೇವಿನ ಎಲೆ ಉದುರದಂತೆ ರಕ್ಷಿಸಬಹುದು.

ಕಟಾವು ಮಾಡಿದ ನಂತರ ಹಿಂಗಾರಿ ಜೋಳದ ಸೊಪ್ಪೆಯನ್ನು ಒಂದು ವಾರ ಹೊಲದಲ್ಲಿಯೇ ಚಿಕ್ಕ ಚಿಕ್ಕ ಇಕ್ಕಲಗಳಾಗಿ ಹಾಕಬಹುದು. ಮೇವಿನ ಪ್ರಮಾಣಕ್ಕನುಗುಣವಾಗಿ ಎತ್ತರದ ಸ್ಥಳದಲ್ಲಿ ಬಣವೆಗೊಂದು ತಳ ಪೀಠ ಮಾಡಿಕೊಳ್ಳಬೇಕು. ನೀರು ಹಿಡಿಯದಂತೆ ಅಪೇಕ್ಷಿತ ಇಳಿಜಾರು ಮಾಡಿ ಮೇಲೆ ಬಿದ್ದ ನೀರು ಜಾರಿ ಹೋಗಲು ನುಣುಪಾದ ಹುಲ್ಲಿನ ಹೊದಿಕೆಯಿಂದ ಮುಚ್ಚಬೇಕು.

ನೆತ್ತಿ ಮೇಲೆ ಬಿದ್ದ ನೀರು ಬಣವೆಯೊಳಗೆ ನುಗ್ಗಬಾರದೆಂದು ನೀರಲ್ಲಿ ಕಲಿಸಿದ ಜೋಳದ ಸುಂಕವನ್ನು ಹಾಕಬೇಕು. ಹೀಗೆ ಬಣವೆಯಲ್ಲಿ ಕಾದಿರಿಸಿದ ಹೊಟ್ಟು, ಮೇವು, ಸೊಪ್ಪೆ ವರ್ಷಗಟ್ಟಲೇ ಇಟ್ಟರೂ ಹಾಳಾಗುವುದಿಲ್ಲ. ಕೆಲವು ವೇಳೆ ದನ ತಿಂದು ಬಿಟ್ಟ ಮೇವನ್ನು ಹಾಗೆಯೇ ತಿಪ್ಪೆಗುಂಡಿಗೆ ಹಾಕುವ ಪದ್ಧತಿ ಹಳ್ಳಿ ಕಡೆ ಇದೆ. ತಿಂದು ಬಿಟ್ಟ ಮೇವನ್ನು ಮತ್ತೆ ಬಿಸಿಲಿಗೆ ಒಣಗಿಸಿ ಉಪ್ಪಿನ ದ್ರಾವಣದಿಂದ ಉಪಚರಿಸಿ ಹಾಕಿದರೆ ಅದೇ ಮೇವನ್ನು ಮತ್ತೆ ಇಷ್ಟ ಪಟ್ಟು ಮೇಯುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT